ದೆಹಲಿಯಲ್ಲಿ ಸಿದ್ದುವಿಗೆ ಸಿಹಿ, ಡಿಕೆಶಿಗೆ ಕಹಿ, ಹೇಗೆ!!
ಭಾರತೀಯ ಜನತಾ ಪಾರ್ಟಿಗೆ ಹೋಲಿಸಿದರೆ ಕಾಂಗ್ರೆಸ್ ಹೈಕಮಾಂಡ್ ತುಂಬಾ ವೀಕ್ ಎನ್ನುವುದು ಈಗ ಇಡೀ ದೇಶಕ್ಕೆ ಗೊತ್ತಿರುವ ವಿಷಯ. ಆದರೆ ಯಾವಾಗ ಪಕ್ಷದೊಳಗೆ ಮುಂದಿನ ಸಿಎಂ ಯಾರಾಗಬೇಕು ಎನ್ನುವ ಗೊಂದಲ ಸೃಷ್ಟಿಯಾಯಿತೋ ಅದರ ನಂತರ ರಾಹುಲ್ ಗಾಂಧಿ(!) ತುಂಬಾ ದಿನ ತಡ ಮಾಡಲಿಲ್ಲ. ಸಿದ್ದು ಹಾಗೂ ಡಿಕೆಶಿ ಇಬ್ಬರನ್ನು ದೆಹಲಿಗೆ ಕರೆದು ಎದುರಿಗೆ ಖರ್ಗೆಯವರನ್ನು ಇಟ್ಟು ಮಾತನಾಡಿದ್ದಾರೆ. ಸದ್ಯ ಯಾರು ಮುಂದಿನ ಸಿಎಂ ಆಗಬೇಕು ಎನ್ನುತ್ತಾ ಚರ್ಚೆ ಮಾಡುವ ಸಮಯ ಇದಲ್ಲ. ನಿಮ್ಮ ನಿಮ್ಮ ಬೆಂಬಲಿಗರಿಗೆ ಹೇಳಿಬಿಡಿ, ಸದ್ಯ ರಾಜ್ಯ ಸರಕಾರದ ವೈಫಲ್ಯ, ಭ್ರಷ್ಟಾಚಾರ, ಕೊರೊನಾ, ಬೆಲೆಯೇರಿಕೆ ವಿಷಯ ಇಟ್ಟುಕೊಂಡು ಹೋರಾಟ ಮಾಡಿ. ಒಮ್ಮೆ ಅಧಿಕಾರಕ್ಕೆ ಬಂದ ನಂತರ ಯಾರು ಸಿಎಂ ಎಂದು ನಾವು ನಿರ್ಧರಿಸಿ ಹೇಳುತ್ತೇವೆ, ಅಲ್ಲಿ ತನಕ ನೋ ಸಿಎಂ ಮ್ಯಾಟರ್, ಟೀಕ್ ಹೇನಾ ಎಂದು ರಾಹುಲ್ ಹೇಳಿದ್ದಕ್ಕೆ ಖರ್ಗೆ ಹೌದೌದು ಎಂದು ತಲೆಯಾಡಿಸಿದ್ದಾರೆ.
ಆ ಬಳಿಕ ಡಿಕೆಶಿ ಹಾಗೂ ಸಿದ್ದುವನ್ನು ರಾಹುಲ್ ಗುಡ್ ಲಕ್ ಎಂದು ಹೇಳಿ ಹೊರಗೆ ಕಳುಹಿಸಿದ್ದಾರೆ. ಇಬ್ಬರೂ ಹೊರಗೆ ಹೋಗಲು ತಯಾರಾಗುತ್ತಿದ್ದಂತೆ “ಸಿದ್ಧುಜಿ, ಆಪ್ ತೋಡಾ ಅಂದರ್ ಆಯಿಯೇ, ಬಾತ್ ಕರ್ನಾ ಹೇ” ಎಂದು ರಾಹುಲ್ ಮತ್ತೆ ಸಿದ್ದುವನ್ನು ಮಾತ್ರ ಕರೆದುಕೊಂಡು ಒಳಗೆ ಕೋಣೆಗೆ ಹೋಗಿದ್ದಾರೆ. ಅಲ್ಲಿ ವೇಣುಗೋಪಾಲ್ ಜೊತೆ ಸಿದ್ದು ರಾಹುಲ್ ಅವರೊಂದಿಗೆ ಬೇರೆಯದ್ದೇ ಮಾತನಾಡಿದ್ದಾರೆ. ಆ ಕಥೆ ಏನು ಎಂದು ಡಿಕೆಶಿಗೆ ಗೊತ್ತಾಗಲೇ ಇಲ್ಲ. ಡಿಕೆಶಿ ಹೊರಗೆ ಕಾರಿಡಾರ್ ನಲ್ಲಿ ಸೋಫಾದ ಮೇಲೆ ಕುಳಿತು ಸುರ್ಜೆವಾಲಾರ ಬಳಿ ಏನು ಅವರನ್ನು ಮತ್ತೆ ಕರೆದ್ರು ಎಂದು ಕೇಳಿದ್ದಾರಂತೆ. ಆದರೆ ವಿಷಯ ಗೊತ್ತಾಗಿಲ್ಲ. ಸ್ವಲ್ಪ ಹೊತ್ತಿನ ನಂತರ ಸಿದ್ದು ಮುಖ ಊರಗಲ ಮಾಡಿಕೊಂಡು ರಾಹುಲ್ ಕೋಣೆಯಿಂದ ಹೊರಗೆ ಬಂದಿದ್ದಾರೆ. ಇಬ್ಬರೂ ಅಲ್ಲಿಂದ ಎಐಸಿಸಿ ಕಚೇರಿಗೆ ಬಂದು ಸುದ್ದಿಗೋಷ್ಟಿ ಮಾಡಿದ್ದಾರೆ. ಒಟ್ಟಿಗೆ ಖರ್ಗೆ ಮತ್ತು ಸುರ್ಜೆವಾಲ ಇಬ್ಬರೂ ಇದ್ದರು. ಆದರೆ ಸಿದ್ದುವಿಗೆ ರಾಹುಲ್ ಏನು ಹೇಳಿದ್ರು ಎನ್ನುವುದು ಕಾಂಗ್ರೆಸ್ ಪಾಳಯದಲ್ಲಿ ಈಗ ಎದ್ದಿರುವ ಪ್ರಶ್ನೆ. ಸರಿಯಾಗಿ ನೋಡಿದರೆ ಇವತ್ತಿಗೂ ಗಾಂಧಿ ಕುಟುಂಬಕ್ಕೆ ಮತ್ತು ದೆಹಲಿ ಹೈಕಮಾಂಡಿಗೆ ಸಿದ್ದು ಮೇಲೆ ಏನೋ ವಿಶೇಷ ಪ್ರೀತಿ. ತಮ್ಮನ್ನು ಕರ್ನಾಟಕದಲ್ಲಿ ಕಳೆದ ಬಾರಿ ಅಧಿಕಾರಕ್ಕೆ ತಂದ ನಾಯಕ ಎನ್ನುವುದು ಅವರು ಮರೆತಿಲ್ಲ. ಇವತ್ತಿಗೂ ಸಿದ್ದುವಿಗೆ ಶಾಸಕರ ಬೆಂಬಲ ಚೆನ್ನಾಗಿದೆ ಎಂದು ದೆಹಲಿಯಲ್ಲಿ ಕುಳಿತ ಸೋನಿಯಾ ಬಳಗಕ್ಕೆ ಗೊತ್ತಿದೆ. ಆದ್ದರಿಂದ ರಾಹುಲ್ ಮನೆಯೊಳಗೆ ಒಟ್ಟಿಗೆ ಹೋದ ಸಿದ್ದು ಮತ್ತು ಡಿಕೆಶಿ ಹೊರಬರುವಾಗ ಬೇರೆ ಬೇರೆ ಬಂದಿದ್ದಾರೆ ಅಂದರೆ ಒಳಗೆ ಸಿದ್ದುವಿಗೆ ಲಾಡು ತಿನ್ನಿಸಿಯೇ ಕಳುಹಿಸಿಕೊಡಲಾಗಿದೆ. ಅಷ್ಟಾದ ಕೂಡಲೇ ಕಾಂಗ್ರೆಸ್ ಮುಂದಿನ ಬಾರಿ ಚುನಾವಣೆಯಲ್ಲಿ ಬಹುಮತ ಪಡೆದೇ ಬಿಟ್ಟಿತ್ತು ಎಂದು ಅರ್ಥ ಅಲ್ಲ. ವಿಷಯ ಬೇರೆನೆ ಇದೆ. ಏನದು?
ಮುಂದಿನ ತಿಂಗಳು ಬಿಜೆಪಿ ಹೈಕಮಾಂಡ್ ಯಡ್ಡಿ ಜೊತೆ ಹೇಗೆ ವರ್ತಿಸುತ್ತದೆ ಎನ್ನುವುದಕ್ಕಿಂತ ಈಗ ವಲಸೆ ಬಂದು ಸಚಿವರಾಗಿದ್ದಾರಲ್ಲ, ಅವರು ಕೂಡ ಒಂದು ರೀತಿ ಯಡ್ಡಿ ದತ್ತು ಮಕ್ಕಳು ಇದ್ದ ಹಾಗೆ. ಅವರನ್ನು ಕೂಡ ಮುಂದಿನ ದಿನಗಳಲ್ಲಿ ಬರುವ ಹೊಸ ಸಿಎಂ ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವುದು ಮುಖ್ಯ ವಿಷಯ. ಯಡ್ಡಿ ಇಳಿಯುತ್ತಾರೆ ಎಂದ ಕೂಡಲೇ ಮೊದಲು ಪತರಗುಟ್ಟಿದ್ದು ಅದೇ ವಲಸೆ ಸಚಿವರು. ಅವರಿಗೆ ಯಡ್ಡಿಯೇ ತಂದೆ, ತಾಯಿ. ಹೊಸದಾಗಿ ಯಾರಾದರೂ ಸಿಎಂ ಆದರೆ ಅವರಿಗೆ ಇವರ ಹಂಗು ಇಲ್ಲ. ಒಂದು ವೇಳೆ ಇವರನ್ನು ನಿರ್ಲಕ್ಷ್ಯ ಮಾಡಿದರೆ ಸಂಶಯವೇ ಬೇಡಾ, ಮುಂದಿನ ಚುನಾವಣೆ ಹೊತ್ತಿನಲ್ಲಿ ಅವರು ಸಿದ್ದು ಮನೆಬಾಗಿಲಲ್ಲಿ ಹೋಗಿ ನಿಂತಿರುತ್ತಾರೆ. ಇವತ್ತಿಗೂ ಸಿದ್ದುವಿಗೆ ಎಲ್ಲಾ ಜಾತಿ, ಧರ್ಮದವರ ಪ್ರೀತಿ ಸಿಕ್ಕಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ನಂಬಿದೆ. ಒಂದು ವೇಳೆ ನಿಜಕ್ಕೂ ಯಡ್ಡಿಯನ್ನು ಇಳಿಸಿದರೆ ಲಿಂಗಾಯಿತರ ಮತಬ್ಯಾಂಕನ್ನು ತಮ್ಮೆಡೆಗೆ ಸೆಳೆಯಲು ಏನು ಮಾಡಬೇಕು ಎನ್ನುವುದನ್ನು ಕೂಡ ಸಿದ್ದು ರಾಹುಲ್ ಜೊತೆ ಸಮಾಲೋಚನೆ ಮಾಡಿದ್ದಾರೆ.
ಮುಂದೆ ಹೇಗೋ ಯಡ್ಡಿ ಎಲ್ಲಿಯಾದರೂ ರಾಜ್ಯಪಾಲರಾದರೆ ಅವರು ಚುನಾವಣಾ ಪ್ರಚಾರಕ್ಕೆ ಬರುವುದಿಲ್ಲ. ಆಗ ಲಿಂಗಾಯತರಿಗೆ ಅನಭಿಷೆಕ್ತ ನಾಯಕ ಎಂದು ಯಾರೂ ಇರುವುದಿಲ್ಲ. ಕಾಂಗ್ರೆಸ್ ನಿಂದ ರಾಜ್ಯ ಅಧ್ಯಕ್ಷರನ್ನಾಗಿ ಯಾರನ್ನಾದರೂ ಲಿಂಗಾಯಿತ ಮುಖಂಡರನ್ನು ಮಾಡಿದರೆ ಅದರಿಂದ ಪಕ್ಷಕ್ಕೆ ಲಾಭ ಇದೆ. ಒಕ್ಕಲಿಗರಾಗಿ ಡಿಕೆಶಿ ಇದ್ದಾರೆ, ಕುರುಬರಿಗೆ ತಾನಿದ್ದೇನೆ, ಲಿಂಗಾಯಿತರಿಗೆ ಎಂಬಿ ಪಾಟೀಲ್ ಅಂತವರನ್ನು ನಾಯಕ ಮಾಡಿದರೆ ಚುನಾವಣೆ ಸುಲಭ, ದಲಿತರಿಗೆ ಖರ್ಗೆ ಇದ್ದೇ ಇದ್ದಾರೆ ಎಂದು ಸಿದ್ದು ರಾಹುಲ್ ಕಿವಿಯಲ್ಲಿ ಹೇಳಿದ್ದಾರೆ. ಆದರೆ ಮನೆಯೊಳಗೆ ಟಿವಿ ಹಾಕಿದ ತಕ್ಷಣ “ಇಷ್ಟು ಸ್ವಾಮಿಗಳು ಎಲ್ಲಿಂದ ಬಂದರು, ಇವರ ಬೆಂಬಲ ಎಲ್ಲ ಯಡ್ಡಿಗಾ” ಎಂದು ರಾಹುಲ್ ಕೇಳಿದ್ದಕ್ಕೆ ಸಿದ್ದು ಈ ಸ್ವಾಮಿಗಳು ಬಂದು ಯಡ್ಡಿಯನ್ನು ಭೇಟಿ ಮಾಡುವುದರಿಂದ ಯಡ್ಡಿ ತುಂಬಾ ಸ್ಟ್ರಾಂಗ್ ಎಂದು ಬಿಜೆಪಿ ಹೈಕಮಾಂಡಿಗೆ ಅನಿಸಬಹುದು. ಅದಕ್ಕಾಗಿ ಒಂದಿಷ್ಟು ತಿಂಗಳು ಅವರನ್ನೇ ಉಳಿಸಲೂಬಹುದು. ಆದರೆ ಆನೆ ಇದ್ದರೂ ಲಕ್ಷ, ಸತ್ತರೂ ಲಕ್ಷ ಎನ್ನುವಂತೆ ಯಡ್ಡಿ ಇದ್ದರೂ ನಮಗೆ ಭ್ರಷ್ಟಾಚಾರದ ವಿಷಯದಲ್ಲಿ ಅವರ ವಿರುದ್ಧ ಮಾತನಾಡಿ ಅವರನ್ನು ಗೋಳು ಹೊಯ್ಯಬಹುದು. ಅವರನ್ನು ಇಳಿಸಿದರೂ ಲಿಂಗಾಯತರಿಗೆ ಅನ್ಯಾಯ ಮಾಡಿದ್ರು ಎಂದು ರಾಜಕೀಯ ಮಾಡಬಹುದು ಎಂದು ಹೇಳಿ ನಕ್ಕರಂತೆ. ಆದರೆ ಈ ಡಿಕೆಶಿ ಇದೇ ಯಡ್ಡಿಯೊಡನೆ ಚೆನ್ನಾಗಿದ್ದಾರೆ, ಅದರಿಂದಲೇ ನಮಗೆ ಸಮಸ್ಯೆ ಆಗಿರುವುದು, ಇವರು ಯಡ್ಡಿ ವಿರುದ್ಧ ಏನೂ ಮಾತನಾಡಲ್ಲ ಎಂದು ಸಿದ್ದು ಕೊನೆಗೆ ಹೇಳಿದರಂತೆ. ಆಗ ರಾಹುಲ್ “ಅದಕ್ಕಾಗಿಯೇ ನಿಮ್ಮನ್ನು ಬೇರೆ ಕರೆದು ಮಾತನಾಡಿದ್ದು, ಇನ್ನು ಹೋಗಿ ಬನ್ನಿ” ಎಂದು ನಕ್ಕು ಬಾಗಿಲು ಹಾಕಿದರಂತೆ. ಅಲ್ಲಿಗೆ ಸಿದ್ದು, ಡಿಕೆಶಿ ದೆಹಲಿ ಪ್ರವಾಸ ಮುಗಿಯಿತು. ಇಲ್ಲಿಯ ತನಕ ವಿಶೇಷ ಉತ್ಸಾಹದಲ್ಲಿದ್ದ ಡಿಕೆಶಿ ಹಿಂತಿರುಗುವಾಗ ಗಂಟುಮುಖ ಹಾಕಿದ್ದು ಮಾತ್ರ ಬೆಂಗಳೂರಿನಲ್ಲಿ ಯಾರಿಗೂ ಗೊತ್ತಾಗಿಲ್ಲ!!
Leave A Reply