ಫ್ಲೆಕ್ಸ್ ತೆಗೆಯುವ ಹಣ ಫ್ರೇಮ್ ಹಾಕಿದವರಿಂದಲೇ ದಂಡ ಕಕ್ಕಿಸಿ!!
ನಮ್ಮ ರಾಜ್ಯದಲ್ಲಿ ಉಚ್ಚ ನ್ಯಾಯಾಲಯ ಫ್ಲೆಕ್ಸ್ ನಿಷೇಧಿಸಿ ಎಷ್ಟೋ ಕಾಲವಾಗಿದೆ. ಎಲ್ಲಿಯ ತನಕ ಅಂದರೆ ಈ ಫ್ಲೆಕ್ಸ್ ತಯಾರಿಸಲು ಉಪಯೋಗಿಸುವ ಕಚ್ಚಾವಸ್ತುಗಳು ಇದೆಯಲ್ಲ, ಅವೆಲ್ಲ ನಮ್ಮ ರಾಜ್ಯದಲ್ಲಿ ನಿಷೇಧಿತ ಉತ್ಪನ್ನಗಳು. ಅವುಗಳನ್ನು ಬಳಸಿ ಫ್ಲೆಕ್ಸ್ ತಯಾರಿಸುವುದೇ ತಪ್ಪು. ಹಾಗಿರುವಾಗ ಈ ಫ್ಲೆಕ್ಸ್ ಗಳನ್ನು ರಾಜಾರೋಷವಾಗಿ ನಗರದ ಅನೇಕ ಕಡೆಗಳಲ್ಲಿ ಹಾಕುವುದು ಇನ್ನು ಕೂಡ ದೊಡ್ಡ ತಪ್ಪು. ಫ್ಲೆಕ್ಸ್ ಗಳನ್ನು ನಿಷೇಧಿಸಿರುವ ನಿಯಮಗಳನ್ನು ಅನುಷ್ಟಾನಕ್ಕೆ ತರುವುದು ಸ್ಥಳೀಯಾಡಳಿತ ಸಂಸ್ಥೆಗಳು. ನಮ್ಮಲ್ಲಿ ಅದು ಮಂಗಳೂರು ಮಹಾನಗರ ಪಾಲಿಕೆ. ಆದರೆ ಎಲ್ಲಿಯ ತನಕ ಅಂದರೆ ನಮ್ಮ ಪಾಲಿಕೆಯ ಕಟ್ಟಡ ಇರುವ ಲಾಲ್ ಭಾಗಿನಲ್ಲಿಯೇ ಅನೇಕ ಫ್ಲೆಕ್ಸ್ ಗಳು ರಾರಾಜಿಸುತ್ತಿವೆ. ಕಳೆದ ವಾರ ಒಂದು ಘಟನೆ ನಡೆಯಿತು. ಈ ನಿಷೇಧಿತ ಫ್ಲೆಕ್ಸ್ ಗಳನ್ನು ತೆಗೆಸಬೇಕು ಎಂದು ನಾಗರಿಕರಿಂದ ದೂರುಗಳು ಬಂದ ಹಿನ್ನಲೆಯಲ್ಲಿ ಪಾಲಿಕೆಯ ಕಮೀಷನರ್ ಒಂದು ಆದೇಶ ಹೊರಡಿಸಿ ಎಲ್ಲಾ ಫ್ಲೆಕ್ಸ್ ಗಳನ್ನು ತೆಗೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಆದೇಶದ ಮೇರೆಗೆ ಕಂದಾಯ ಅಧಿಕಾರಿ ಪ್ರವೀಣಚಂದ್ರ ಅವರು ಸುಮಾರು 37 ಫ್ಲೆಕ್ಸ್ ಗಳನ್ನು ತೆರವುಗೊಳಿಸಿದರು. ನಿಜಕ್ಕೂ ಪಾಲಿಕೆಯ ಕಮೀಷನರ್ ಹಾಗೂ ಅವರ ಕೈಕೆಳಗಿನ ಅಧಿಕಾರಿಗಳನ್ನು ಮೆಚ್ಚಲೇಬೇಕು. ಆದರೆ ನಂತರ ಏನಾಯಿತು ಎನ್ನುವುದು ಇವತ್ತಿನ ವಿಷಯ.
ಪ್ರವೀಣ್ ಚಂದ್ರ ಅವರಿಗೆ ಒಂದು ಫೋನ್ ಕರೆ ಬರುತ್ತದೆ. ನಿಮಗೆ ತೆಗೆಯಲು ಯಾರು ಹೇಳಿದರು? ಕಂದಾಯ ಅಧಿಕಾರಿ ಹೇಳುತ್ತಾರೆ “ನನಗೆ ಕಮೀಷನರ್ ಆದೇಶ ಇದೆ” ಅದಕ್ಕೆ ಅತ್ತ ಕಡೆಯಿಂದ ಕರೆ ಮಾಡಿದ ವ್ಯಕ್ತಿ ಹೇಳುತ್ತಾರೆ ” ನೀವು ಆ ಫ್ಲೆಕ್ಸಗಳ ಫ್ರೇಮ್ ಹಿಂದಕ್ಕೆ ಕೊಡಬೇಕು” ಇಲ್ಲಿ ನಿಮಗೆ ಒಂದು ವಿಷಯ ಗೊತ್ತಿದೆ ಎಂದು ಅಂದುಕೊಂಡಿದ್ದೇನೆ. ಅದೇನೆಂದರೆ ಒಂದು ಫ್ಲೆಕ್ಸ್ ಹಾಕಿಸಲು ಒಬ್ಬ ವ್ಯಕ್ತಿ ಅಥವಾ ಸಂಘಸಂಸ್ಥೆ ಒಂದು ಜಾಹೀರಾತು ಕಂಪೆನಿಗೆ ನೀಡಿದರೆ ಅಥವಾ ಫ್ಲೆಕ್ಸ್ ಹಾಕುವವರ ಬಳಿ ಹೇಳಿದರೆ ಅವರು ಫ್ಲೆಕ್ಸ್ ಡಿಸೈನ್ ಮಾಡಿ ಅದನ್ನು ಎಷ್ಟು ದೊಡ್ಡದು ಬೇಕೋ ಅಷ್ಟು ದೊಡ್ಡ ಅಳತೆಗೆ ನಿಷೇಧಿತ ಪ್ಲಾಸ್ಟಿಕ್ ನಲ್ಲಿ ಅಥವಾ ಅಪರೂಪಕ್ಕೆ ಬಟ್ಟೆಯಲ್ಲಿ ಮಾಡಿ ಅದನ್ನು ಎಲ್ಲಿ ನಿಲ್ಲಿಸಬೇಕೋ ಅಲ್ಲಿ ಒಂದು ಫ್ರೇಮ್ ಹಾಕಿಸಿ ನಿಲ್ಲಿಸುತ್ತಾರೆ. ಎಷ್ಟು ದಿನಕ್ಕೆ ನಿಲ್ಲಿಸುವ ಒಪ್ಪಂದ ಆಗಿದೆಯೋ ಅಷ್ಟು ದಿನ ನಿಲ್ಲಿಸಿ ನಂತರ ಅದನ್ನು ಯಾರು ಹಾಕಿದ್ದಾರೋ ಅವರು ಫ್ರೇಮ್ ಮರುಬಳಕೆಗೆ ತೆಗೆದುಕೊಂಡು ಹೋಗುತ್ತಾರೆ ಅಥವಾ ಆ ಫ್ರೇಮ್ ಮೇಲೆ ಇದ್ದ ಹಳೆಯ ಫ್ಲೆಕ್ಸ್ ತೆಗೆದು ತಮ್ಮ ಬೇರೆ ಜಾಹೀರಾತನ್ನು ಕೂಡ ಹಾಕುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಫ್ರೇಮ್ ಒಮ್ಮೆ ಮಾಡಿದರೆ ಅನೇಕ ಬಾರಿ ಉಪಯೋಗಿಸಲ್ಪಡುತ್ತದೆ. ಅದನ್ನು ಯಾವ ಫ್ಲೆಕ್ಸ್ ತಯಾರಿಸುವ ಅಥವಾ ಹಾಕಲು ಒಪ್ಪಂದ ಮಾಡಿಕೊಂಡಿರುವ ಅಂಗಡಿಯವರು ಬಿಟ್ಟು ಹೋಗುವುದಿಲ್ಲ ಅಥವಾ ನಿರ್ಲಕ್ಷ್ಯ ಮಾಡುವುದಿಲ್ಲ. ಆದರೆ ಮೊನ್ನೆ ಫ್ಲೆಕ್ಸ್ ತೆಗೆಯುವಾಗ ಅದರ ಫ್ರೇಮ್ಸ್ ಕೂಡ ಅಷ್ಟೇ ಸಂಖ್ಯೆಯಲ್ಲಿ ತೆಗೆಯಲಾಗಿದೆ ಮತ್ತು ಪಾಲಿಕೆಯ ಕಟ್ಟಡದ ಹಿಂದೆ ತಂದು ರಾಶಿ ಹಾಕಲಾಗಿದೆ. ಯಾವಾಗ ಅತ್ತ ಕಡೆಯಿಂದ ಕರೆ ಮಾಡಿದ ವ್ಯಕ್ತಿ ಫ್ರೇಮ್ ಕೊಡಲೇಬೇಕು ಎಂದು ಹಟ ಹಿಡಿದರೂ ಅಧಿಕಾರಿ ಪ್ರವೀಣ್ ಚಂದ್ರ ಅವರು ಅದಕ್ಕೆ ನಿರಾಕರಿಸಿದ್ದಾರೆ. ಯಾಕೆಂದರೆ ಪಾಲಿಕೆ ಒಮ್ಮೆ ಯಾವುದೇ ವಸ್ತುವನ್ನು ಸೀಝ್ ಮಾಡಿದ ನಂತರ ಯಾಕೆ ಕೊಡಬೇಕು? ನಂತರ ಮೇಲೆಯಿಂದ ಇವರಿಗೆ ಒತ್ತಡ ಬಂದಿದೆ. ಸಹಾಯಕ ಕಂದಾಯ ಆಯುಕ್ತರು ಕರೆ ಮಾಡಿ ಆ ಫ್ರೇಮ್ ಹಾಕಿದವರು ಬರುತ್ತಾರೆ, ಅವರ ಫ್ರೇಮ್ಸ್ ಕೊಡಿಸುವ ವ್ಯವಸ್ಥೆ ಮಾಡಿ ಎನ್ನುತ್ತಾರೆ. ಸರಿ, ಮೇಲಾಧಿಕಾರಿಯವರೇ ಒತ್ತಡ ಹಾಕಿದ ನಂತರ ಸುಮ್ಮನೆ ಎದುರು ಹಾಕಲು ಆಗುತ್ತದೆಯೇ? ಇವರು ಆಯಿತು ಎಂದಿದ್ದಾರೆ. ಆದರೆ ಆ ದಿನ ಸಂಜೆ ತನಕ ಯಾರೂ ಫ್ರೇಮ್ ನಮ್ಮದು, ತೆಗೆದುಕೊಂಡು ಹೋಗಬಹುದೇ ಎಂದು ವಿನಂತಿ(!) ಮಾಡಲು ಬರಲೇ ಇಲ್ಲ. ಆದರೆ ಮರುದಿನ ನೋಡಿದಾಗ ಯಾವ ಏರಿಯಾದಲ್ಲಿ ಈ ಸೀಝ್ ಮಾಡಿದ ಫ್ಲೆಕ್ಸ್ ಮತ್ತು ಅದರ ಫ್ರೇಮ್ಸ್ ಗಳನ್ನು ರಾಶಿ ಹಾಕಲಾಗಿದೆಯೋ ಅಲ್ಲಿ ಮೂರು ಫ್ರೇಮ್ ಗಳನ್ನು ಬಿಟ್ಟು ಉಳಿದ ಎಲ್ಲವೂಗಳನ್ನು ಬಾಚಿಕೊಂಡು ತೆಗೆದುಕೊಂಡು ಹೋಗಲಾಗಿದೆ. ಹಾಗಾದರೆ ರಾತ್ರೋ ರಾತ್ರಿ ಯಾರು ಇಷ್ಟು ಸುಲಭವಾಗಿ ಗುಂಡಾಂತರ ಮಾಡಿಕೊಂಡು ಹೋಗಿರುವುದು ಎನ್ನುವ ಪ್ರಶ್ನೆ ಮೂಡುತ್ತದೆ? ಹಾಗಾದರೆ ಸೆಕ್ಯೂರಿಟಿಯವರು ಕೊಟ್ಟರೆ ಅದು ಕೂಡ ತಪ್ಪು. ಯಾಕೆಂದರೆ ಒಂದು ಕೆಲಸ ಮಾಡಬೇಡಿ ಎಂದು ನ್ಯಾಯಾಲಯದ ಆದೇಶ ಇದ್ದರೂ ಅದನ್ನು ಮಾಡಿದರೆ ಅದು ಅಪರಾಧ. ಆ ಅಪರಾಧ ಮಾಡಿದ ನಂತರ ಅವರಿಗೆ ಶಿಕ್ಷೆಯ ರೂಪ ಎನ್ನುವಂತೆ ಫ್ರೇಮ್ ವಶಪಡಿಸಿಕೊಂಡಿರುವುದು ಒಂದು ಕಥೆಯಾದರೆ ಅವರು ಮೇಲಿನಿಂದ ಶಿಫಾರಸ್ಸು ತಂದು ಅದನ್ನು ಬಿಡಿಸಿಕೊಂಡು ಹೋಗುವುದು ಇನ್ನೊಂದು ತಪ್ಪು. ಅಷ್ಟಕ್ಕೂ ನಾನು ಹೇಳುವುದೇನೆಂದರೆ ಈ ಫ್ಲೆಕ್ಸ್ ಎಲ್ಲಿಂದ ತರಲಾಗಿದೆಯೋ ಅಲ್ಲಿಯೇ ಅದು ಯಾರದ್ದು, ಯಾವ ಸಂಸ್ಥೆಯದ್ದು ಎಂದು ಗೊತ್ತಾಗುತ್ತದೆ, ಅಂತವರಿಗೆ ಒಂದೊಂದು ಫ್ಲೆಕ್ಸಿಗೆ ಇಂತಿಷ್ಟು ಎಂದು ದಂಡ ಹಾಕಿ ಅವರಿಂದ ಹಣ ಕಕ್ಕಿಸಬೇಕು. ಅಲ್ಲಿ ಅವರು ಹಣ ಕಟ್ಟದಿದ್ದರೆ ಅವರ ಫ್ರೇಮ್ಸ್ ಮರಳಿಸಬಾರದು. ಲಾಭ ಮಾಡುವುದು ಅವರು, ಅದನ್ನು ತೆಗೆಸಲು ನಮ್ಮ ತೆರಿಗೆಯ ಹಣ ಯಾಕೆ ಖರ್ಚು ಮಾಡಬೇಕು. ಪಾಲಿಕೆಯಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ವಾ.
Leave A Reply