800 ಕೋಟಿಗೆ ಪಾಲಿಕೆ ದಾರಿ ತೋರಿಸುವ ಮೊದಲು!!
ಆರೂವರೆ ವರ್ಷಗಳ ಹಿಂದೆ ಆಂಟೋನಿ ವೇಸ್ಟ್ ಮ್ಯಾನೇಜ್ಮೆಂಟಿನವರು ಗುತ್ತಿಗೆದಾರ ಜವಾಬ್ದಾರಿ ತೆಗೆದುಕೊಳ್ಳುವ ತನಕ ಮನೆಮನೆಗೆ ಬಂದು ತ್ಯಾಜ್ಯ ಸಂಗ್ರಹಣೆ ಎನ್ನುವ ಕಾನ್ಸೆಪ್ಟು ಇರಲಿಲ್ಲ. ಆಗ ಏನಿದ್ದರೂ ರಸ್ತೆಯ ಬದಿಯಲ್ಲಿರುವ ಮಹಾನಗರ ಪಾಲಿಕೆಯ ತೊಟ್ಟಿಗಳಿಂದ ತ್ಯಾಜ್ಯವನ್ನು ಲಾರಿಯಲ್ಲಿ ತೆಗೆದುಕೊಂಡು ಹೋಗುವುದು ಮಾತ್ರ ಇತ್ತು.ಅದನ್ನು ಮಾಡುತ್ತಿದ್ದವರು ಪಾಲಿಕೆಯ ತ್ಯಾಜ್ಯ ಸಂಗ್ರಹಣೆಯ ಗುತ್ತಿಗೆಯನ್ನು ಪಡೆದುಕೊಂಡ ಎಂಟು ಜನ ಖಾಸಗಿ ಗುತ್ತಿಗೆದಾರರು. ಅವರ ಗುತ್ತಿಗೆಯಲ್ಲಿ ರಸ್ತೆ ಗುಡಿಸುವುದು, ಕಸ ತೊಟ್ಟಿಗಳಿಂದ ಎತ್ತಿಕೊಂಡು ಹೋಗುವುದು ಬಿಟ್ಟರೆ ಬೇರೆನೂ ಇರಲಿಲ್ಲ.
ಆ ಗುತ್ತಿಗೆದಾರರು ಸ್ಥಳೀಯರೇ ಆಗಿದ್ದ ಕಾರಣ ಅವರಿಗೂ ಈ ಹಿಂದಿನ ಕಾಂಗ್ರೆಸ್ ಆಡಳಿತದಲ್ಲಿದ್ದ ಕಾರ್ಪೋರೇಟರ್ಸ್ ಹಾಗೂ ಹಿಂದಿನ ವಿಪಕ್ಷ ಭಾರತೀಯ ಜನತಾ ಪಾರ್ಟಿಯ ಮನಪಾ ಸದಸ್ಯರಿಗೂ ಸಂಬಂಧ ಚೆನ್ನಾಗಿತ್ತು. ಅಡ್ಜೆಸ್ಟ್ ಮೆಂಟಿನಲ್ಲಿ ಕೆಲಸ ನಡೆದುಕೊಂಡು ಹೋಗುತ್ತಿತ್ತು. ಅವರು ಬರಿ 20% ತ್ಯಾಜ್ಯವನ್ನು ಸಂಗ್ರಹಿಸುತ್ತಿದ್ದರೂ ಯಾರದ್ದೂ ಆಕ್ಷೇಪ ಇರಲಿಲ್ಲ. ಪಾಲಿಕೆಯ ಆಯುಕ್ತರಿಗಾಗಲಿ, ಆರೋಗ್ಯ ವಿಭಾಗದ ಅಧಿಕಾರಿಗಳಿಗಾಗಲೀ ದೂರು ಕೊಡುವುದು ಅಂತದ್ದೇನೂ ನಡೆಯುತ್ತಿರಲಿಲ್ಲ. ಎಲ್ಲಿಯ ತನಕ ಖಾಸಗಿ ಗುತ್ತಿಗೆದಾರರು ಬಿಂದಾಸ್ ಆಗಿದ್ದರು ಎಂದರೆ ಅವರು ಪಾಲಿಕೆಯ ಜೊತೆ ಅಕ್ಕಪಕ್ಕದ ಪುರಸಭೆಗಳ ತ್ಯಾಜ್ಯ ಸಂಗ್ರಹದ ಗುತ್ತಿಗೆಯನ್ನು ಕೂಡ ವಹಿಸಿಕೊಂಡಿದ್ದರು. ಅಲ್ಲಿಂದ ಕಸ ತಂದು ಇವರು ಇಲ್ಲಿ ಪಚ್ಚನಾಡಿಯಲ್ಲಿ ಸುರಿಯುತ್ತಿದ್ದರು. ಒಟ್ಟಿನಲ್ಲಿ ಈ ಖಾಸಗಿಯವರ ಅಂಧ ದರ್ಭಾರ್ ನಿರಂತರವಾಗಿ ನಡೆಯುತ್ತಿತ್ತು. ಇದೆಲ್ಲವೂ ಆಗಿನ ಪಾಲಿಕೆಯ ಕಾಂಗ್ರೆಸ್ ಆಡಳಿತಕ್ಕೆ ಗೊತ್ತಿಲ್ಲದ ವಿಷಯಗಳೇನಾಗಿರಲಿಲ್ಲ. ಕೆಲವು ಸಮಯದ ನಂತರ ತೊಟ್ಟಿಗಳಿದ್ದ ಸ್ಥಳದಲ್ಲಿ ಅಡ್ಡ ಮಲಗಿಸಿದ ಕಬ್ಬಿಣದ ಬೃಹತ್ ಕಪಾಟುಗಳಂತಿರುವ ಡಂಪ್ಲರ್ ಪ್ಲಾಝರ್ ಗಳು ಬಂದವು. ಬಾಗಿಲಿನ ಒಳಗೆ ಜನರು ಕಸ ತಂದು ಹಾಕಬೇಕಾಗಿತ್ತು. ನಂತರ ಆ ಡಂಪ್ಲರ್ ಗಳನ್ನು ತೆಗೆದುಕೊಂಡು ಹೋಗಲು ಅದರದ್ದೇ ಆಗಿರುವ ವಿಶಿಷ್ಟ ಶೈಲಿಯ ಲಾರಿಗಳು ಬರುತ್ತಿದ್ದವು. ಒಂದು ಸಲಕ್ಕೆ ಎರಡು ಡಂಪ್ಲರ್ ಗಳನ್ನು ತೆಗೆದುಕೊಂಡು ಹೋಗುವ ಲಾರಿಗಳು ಪಾಲಿಕೆಯಲ್ಲಿ ಒಟ್ಟು 26 ಇದ್ದವು. ಅದರಂತೆ 180 ಡಂಪ್ಲರ್ ಫ್ಲಾಜರ್ ಗಳು ಇದ್ದವು. ಹಾಗಂತ ಇದೆಲ್ಲವೂ ಈ ಖಾಸಗಿ ಗುತ್ತಿಗೆದಾರರದ್ದು ಸ್ವಂತ ಎಂದುಕೊಳ್ಳಬೇಕಾಗಿಲ್ಲ. ಅದೆಲ್ಲವನ್ನು ಖರೀದಿಸಿ ಪಾಲಿಕೆಗೆ ಕೊಟ್ಟಿದ್ದು ಎಡಿಬಿ. ಏಶಿಯನ್ ಡೆಪಲಪ್ ಮೆಂಟ್ ಬ್ಯಾಂಕಿನವರು ಕೊಡಿಸಿದ್ದ ಈ ಉಪಕರಣಗಳು, ಲಾರಿಗಳು, ಯಂತ್ರಗಳಿಗೆ ಸಣ್ಣಪುಟ್ಟ ರಿಪೇರಿ ಇದ್ದರೆ ಅದನ್ನು ಗುತ್ತಿಗೆದಾರರೇ ಮಾಡಿಸಿಕೊಳ್ಳಬೇಕಾಗಿತ್ತು. ದೊಡ್ಡ ದೊಡ್ಡ ಮಟ್ಟದ ರಿಪೇರಿ ಇದ್ದರೆ ಪಾಲಿಕೆ ಮಾಡಿಸಿ ಕೊಡುತ್ತಿತ್ತು. ಆದರೆ ವಿಷಯ ಏನೆಂದರೆ ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆಯಂತೆ ಆ ಲಾರಿ, ಡಂಪ್ಲರ್ ಗಳನ್ನು ರಫ್ ಯೂಸ್ ಮಾಡಿದ ಪರಿಣಾಮ ನಂತರ ಅದನ್ನು ಗುಜರಿಯವರು ಕೂಡ ಉತ್ತಮ ಬೆಲೆ ಕೊಟ್ಟು ಖರೀದಿಸಲು ಹಿಂದೆ ಮುಂದೆ ನೋಡುವ ಪರಿಸ್ಥಿತಿ ಬಂದಿತ್ತು.
ಇವರ ಅದೃಷ್ಟಕ್ಕೆ ಕೇಂದ್ರದಲ್ಲಿ ನರೇಂದ್ರ ಮೋದಿಜಿಯವರ ಎರಡನೇ ಇನ್ಸಿಂಗ್ಸ್ ಆರಂಭವಾಗಿತ್ತು. ಮೋದಿಯವರ ಮುಖ ತೋರಿಸಿ ಗೆದ್ದಂತಹ ಪಾಲಿಕೆಯ 44 ಬಿಜೆಪಿಗರು ಸ್ವಚ್ಚ ಭಾರತವನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದರೋ, ಇಲ್ವೋ ಮೋದಿ ಮಾತ್ರ ದೇಶದ ಮೂಲೆ ಮೂಲೆಯಲ್ಲಿಯೂ ಭಾರತ ಸ್ವಚ್ಚ ಆಗಬೇಕೆಂಬ ಗುರಿ ಇಟ್ಟುಕೊಂಡು ಅನುದಾನವನ್ನು ನೀಡುತ್ತಾ ಬಂದಿದ್ದಾರೆ. ಅದರಂತೆ ಈ ಬಾರಿ ಪಾಲಿಕೆಗೆ 800 ಕೋಟಿ ರೂಪಾಯಿ ಸ್ವಚ್ಚ ಭಾರತಕ್ಕಾಗಿಯೇ ಹಣ ಬಂದಿದೆ. ಅದಕ್ಕೆ ಸರಿಯಾಗಿ ಪಾಲಿಕೆಯ ಒಳಗೆ ಕಾಂಗ್ರೆಸ್ ಮತ್ತು ಬಿಜೆಪಿ ಭಾಯ್ ಭಾಯ್ ಎನ್ನುವಂತೆ ಇವರೆಲ್ಲರೂ ಒಟ್ಟಾಗಿದ್ದಾರೆ. ತಮ್ಮ ಹಳೆ ಖಾಸಗಿ ಗುತ್ತಿಗೆದಾರರುಗಳನ್ನು ಹಿಂಬಾಗಿಲಿನ ಮೂಲಕ ಒಳಗೆ ಕರೆಸಲು
ಸದ್ದಿಲ್ಲದೆ ಪ್ರಯತ್ನ ನಡೆಯುತ್ತಿದೆ. ಅದಕ್ಕಾಗಿ ಲೋಕಲ್ ಟೆಂಡರ್ ಕರೆಸುವ ಪ್ರಯತ್ನ ನಡೆಯುತ್ತಿದೆ. ಕೇಂದ್ರ ಸರಕಾರದ ಮಾನದಂಡವನ್ನೇ ಅನುಸರಿಸುವುದಾದರೆ ಈ ಖಾಸಗಿ ಗುತ್ತಿಗೆದಾರರು ಅದರ ಒಳಗೆ ಬರಲು ಸಾಧ್ಯವೇ ಇಲ್ಲ. ಅದಕ್ಕಾಗಿ ಪಾಲಿಕೆ ಏನು ಮಾಡಿದೆ ಎಂದರೆ ಹೇಗೂ 800 ಕೋಟಿ ಇದೆಯಲ್ಲ, ಆ ಹಣದಲ್ಲಿ ತ್ಯಾಜ್ಯ ಸಂಗ್ರಹ ವಾಹನಗಳನ್ನು ಖರೀದಿಸಿ ಅದನ್ನು ಸ್ಥಳೀಯ ಗುತ್ತಿಗೆದಾರರಿಗೆ ಕೊಡುವುದು ಎನ್ನುವ ಮಾತುಕತೆ ನಡೆಯುತ್ತಿದೆ. ಇದು ನಮ್ಮ ಮಂಗಳೂರು ಬೆಂಕಿಯಿಂದ ಬಾಣಲೆಗೆ ಬೀಳುವಂತಹ ಪರಿಸ್ಥಿತಿಗೆ ತಂದು ನಿಲ್ಲಿಸಲಿದೆ. ಸದ್ಯ ಆಂಟೋನಿಯವರು ಮನೆಮನೆಯಿಂದ ಕಸ ಸಂಗ್ರಹ ಮಾಡುತ್ತಿರುವುದರಲ್ಲಿ ನೂರಕ್ಕೆ 95 ಶೇಕಡಾದಷ್ಟು ಓಕೆ.
ಆದರೆ ಒಂದು ಮೀಟರ್ ಅಗಲದ ತೋಡುಗಳಿಂದ ಹೂಳು ತೆಗೆಯಲ್ಲ, ರಸ್ತೆಗಳನ್ನು ಕಂಡಿಷನ್ ನಲ್ಲಿ ಇದ್ದಂತೆ ಗುಡಿಸಲ್ಲ ಎನ್ನುವುದು ಬಿಟ್ಟರೆ ಮನೆಮನೆ ಕಸ ಸಂಗ್ರಹ ಪರವಾಗಿಲ್ಲ. ಆದರೆ ಯಾವುದೇ ಕಾರ್ಪೋರೇಟರ್ ಯಾಕೆ ಮಾತನಾಡುವುದಿಲ್ಲ ಎಂದರೆ ಆಂಟೋನಿಯವರ ಎಂಜಿಲು ಹಣ ಕವರ್ ನಲ್ಲಿ ಬರುವುದು ಮತ್ತು ಆಂಟೋನಿಯವರು ಕ್ಲೀನ್ ಮಾಡದೇ ಇರುವುದರಿಂದ ಅದಕ್ಕಾಗಿ ಗ್ಯಾಂಗ್ ರಚಿಸಬೇಕಾದ ಅನಿವಾರ್ಯತೆ ಬರುತ್ತದೆ. ಅದರಿಂದ ಅಲ್ಲಿಯೂ ಹಣ ಹೊಡೆಯಬಹುದು. ಅದಕ್ಕಾಗಿ ಯಾರೂ ಮಾತನಾಡುವುದಿಲ್ಲ. ಈ 800 ಕೋಟಿ ರೂಪಾಯಿಗಳಿಗೆ ಒಂದು ದಾರಿ ತೋರಿಸಲು ಈಗಾಗಲೇ ಎತ್ತಂಗಡಿಯಾಗಿರುವ ಪರಿಸರ ಅಭಿಯಂತರ ಶಬರೀಶ್ ರೈಯನ್ನು ಕೂಡ ಮತ್ತೆ ಪಾಲಿಕೆಗೆ ಕರೆಸಲಾಗಿದೆ. ಅವರು ಯೋಜನಾ ವರದಿಯನ್ನು ಸಿದ್ಧಪಡಿಸುತ್ತಿದ್ದಾರೆ. ಒಟ್ಟಿನಲ್ಲಿ 800 ಕೋಟಿ ರೂಪಾಯಿಗೆ ಇವರು ನಾಮ ಹಾಕುವ ಸಿದ್ಧತೆಯಲ್ಲಿದ್ದಾರೆ. ಈಗ ಸರಿಯಾದ ಸಮಯದಲ್ಲಿ ಪಾಲಿಕೆ ವ್ಯಾಪ್ತಿಯ ಇಬ್ಬರು ಶಾಸಕರು ಮತ್ತು ಪಾಲಿಕೆಯ ಅತೀ ಜಾಣ ಮೇಯರ್ ಎಚ್ಚೆತ್ತುಕೊಳ್ಳದಿದ್ದರೆ ಜನರು ಬೀದಿ ಬೀದಿಗಳಲ್ಲಿ ಇವರನ್ನು ನಿಲ್ಲಿಸಿ ಪ್ರಶ್ನಿಸುವ ಕಾಲ ಬರಲಿದೆ. ಹಾಗಿದ್ದರೆ ಇವರು ಏನು ಮಾಡಬೇಕು? ಆ 800 ಕೋಟಿ ರೂಪಾಯಿ ಸೂಕ್ತವಾಗಿ ವಿನಿಯೋಗಿಸುವುದು ಹೇಗೆ? ಅದನ್ನು ನಾಳೆ ವಿವರಿಸುತ್ತೇನೆ!
Leave A Reply