38 ಕೋಟಿ ಮೌಲ್ಯದ ವಾಹನ ಖರೀದಿ ಬಗ್ಗೆ ಕಾಂಗ್ರೆಸ್ಸಿಗೆ ಏನು ಮತ್ಸರ!!
ಅಂತೂ ಇಂತು ಏಳು ವರ್ಷ ಮಂಗಳೂರು ಮಹಾನಗರ ಪಾಲಿಕೆಯನ್ನು ಅಕ್ಷರಶ: ವೈಟ್ ಕಾಲರ್ ಲೂಟಿ ಮಾಡುತ್ತಿದ್ದ ತ್ಯಾಜ್ಯ ಸಂಗ್ರಹಣಾ ಕಂಪೆನಿಯೊಂದರ ಅವಧಿ ಮುಕ್ತಾಯವಾಗುತ್ತಿದೆ ಎನ್ನುವುದು ನಮ್ಮ ನಾಗರಿಕರಿಗೆ ಸಮಾಧಾನ ತರುವ ವಿಷಯ. ಆದರೆ ಆಂಟೋನಿ ವೇಸ್ಟ್ ಮ್ಯಾನೇಜಮೆಂಟ್ ನಿಂದ ಕೃತಾರ್ಥರಾಗುತ್ತಿದ್ದವರಿಗೆ ಮಾತ್ರ ಅದರಿಂದ ನೋವು, ಸಂಕಟ ಆಗುತ್ತಿರಬಹುದು. ಏಳು ವರ್ಷದ ಗುತ್ತಿಗೆ ಅವಧಿಗೆ ಒಪ್ಪಂದವಾಗಿದ್ದ ಕಾರಣ ಆಂಟೋನಿ ವೇಸ್ಟ್ ಕೆಲಸ ಮಾಡದಿದ್ದರೂ ಅವರನ್ನು ಕುತ್ತಿಗೆ ಹಿಡಿದು ಹೊರಗೆ ನೂಕುವಂತಿರಲಿಲ್ಲ. ಆದ್ದರಿಂದ ಅನಿವಾರ್ಯವಾಗಿ ಏಳು ವರ್ಷ ಕಾದು ಈಗ ಮುಂದಿನ ಜನವರಿಯಲ್ಲಿ ವಿಧಿವತ್ತಾಗಿ ಅದನ್ನು ಹಿಂದಕ್ಕೆ ಕಳುಹಿಸುವ ಕೆಲಸಕ್ಕೆ ಚಾಲನೆ ಸಿಕ್ಕಿದೆ. ಹಾಗಾದರೆ ಭವಿಷ್ಯದಲ್ಲಿ ಮನೆಮನೆಗಳಿಂದ ಈ ಕಸ ಸಂಗ್ರಹಣೆ ಎನ್ನುವ ಕಾನ್ಸೆಪ್ಟು ಮುಗಿಯುತ್ತಾ ಎಂದು ನಿಮಗೆ ಅನಿಸುತ್ತಾ ಇರಬಹುದು. ಹಾಗೇನಿಲ್ಲ. ಕಸ ಸಂಗ್ರಹಣೆ ಇರುತ್ತೆ, ಆದರೆ ಯಾರು ಸಂಗ್ರಹ ಮಾಡುತ್ತಾರೆ ಎನ್ನುವುದು ಈಗ ಸದ್ಯದ ಪ್ರಶ್ನೆ. ಈ ಕುರಿತು ಪಾಲಿಕೆಯಲ್ಲಿ ಸಭೆ ಕೂಡ ನಡೆದಿದೆ. ಅದರಲ್ಲಿ ವಿವಿಧ ಎರಡ್ಮೂರು ರೀತಿಯ ಯೋಜನೆಗಳ ಬಗ್ಗೆ ಚರ್ಚೆ ನಡೆದಿದೆ. ಅದರಲ್ಲಿ ಮೊದಲ ಯೋಚನೆ ಏನೆಂದರೆ ಈಗ ಆಂಟೋನಿ ವೇಸ್ಟ್ ನವರಿಗೆ ಕೊಟ್ಟಂತೆ ಪೂರ್ಣ ಪ್ರಮಾಣದಲ್ಲಿ ಯಾರಿಗಾದರೂ ಕೊಟ್ಟುಬಿಡುವುದು. ಅವರೇ ಸಂಗ್ರಹ ಮಾಡಬೇಕು, ಅವರದ್ದೇ ವಾಹನ ಅದಕ್ಕೆ ಬಳಸಬೇಕು, ಅವರದ್ದೇ ಜನರು ಅದರಲ್ಲಿ ಕಾರ್ಮಿಕರಾಗಿ ದುಡಿಯಬೇಕು. ಅವರಿಗೆ ಕೊನೆಗೆ ಬಿಲ್ ನೀಡುವುದು.
ಹೀಗೆ ಒಂದು ಯೋಚನೆ ಬಂತು, ಆದರೆ ಇನ್ನೊಂದು ಪ್ಲಾನ್ ಎಂದರೆ ಪಾಲಿಕೆಯೇ ವಾಹನಗಳನ್ನು ಕೊಡುವುದು, ಪಾಲಿಕೆಯೇ ಕಾರ್ಮಿಕರನ್ನು ಇದಕ್ಕಾಗಿ ನೇಮಿಸುವುದು, ಪಾಲಿಕೆಯೇ ಗುತ್ತಿಗೆದಾರರಿಗೆ ಇದನ್ನು ನೀಡಿ ಎಲ್ಲವನ್ನು ನೋಡಿಕೊಳ್ಳುವುದು. ಈ ಎರಡರಲ್ಲಿಯೂ ಪ್ಲಸ್ ಮತ್ತು ಮೈನಸ್ ಇದೆ. ಏನೆಂದರೆ ಹಿಂದೆ ಪಾಲಿಕೆ ತನ್ನದೇ ಖರ್ಚಿನಲ್ಲಿ ಕುಂಡ್ಸೆಪ್ಪು ಅನುದಾನದಲ್ಲಿ ಡಂಪರ್ ಪ್ಲಝರ್ ಅನ್ನು ಖರೀದಿ ಮಾಡಿತ್ತು. ಅದನ್ನು ತ್ಯಾಜ್ಯ ಸಂಗ್ರಹಣೆಗೆ ಬಳಸಲಾಗುತ್ತಿತ್ತು. ಕೆಲವು ವರ್ಷಗಳ ಬಳಿಕ ಅದರ ಬಳಕೆ ಕಡಿಮೆಯಾಯಿತು. ಆ ಲಕ್ಷಾಂತರ ರೂಪಾಯಿ ಮೌಲ್ಯದ ಪ್ಲಝರ್ ಮೂಲೆಗುಂಪಾಯಿತು. ನಂತರ ಅದನ್ನು ಗುಜರಿಯವರಿಗೆ ಮಾರಲು ಮುಂದಾದರೂ ಯಾರೂ ಕೂಡ ಖರೀದಿ ಮಾಡುವುದು ಕಷ್ಟವಾಗಿತ್ತು. ಯಾಕೆಂದರೆ ಬಳಸುತ್ತಿದ್ದ ಗುತ್ತಿಗೆದಾರರಿಗೆ ಪಾಲಿಕೆ ಕೊಡುವ ಯಂತ್ರೋಪಕರಣಗಳ ಮೇಲೆ ಕಿಂಚಿತ್ ಪ್ರೀತಿ ಇರಲಿಲ್ಲ. ಅವರನ್ನು ಅದನ್ನು ರಫ್ ಆಗಿ ಬಳಸುತ್ತಿದ್ದ ಕಾರಣ ಅದರ ಬಾಳಿಕೆ ದೀರ್ಘ ಕಾಲ ಬರುತ್ತಿರಲಿಲ್ಲ. ಹಾಗೆ ನೋಡಿದರೆ ಗುತ್ತಿಗೆದಾರರು ಅವರದ್ದೇ ವಾಹನಗಳನ್ನು ಬಳಸಿದರೆ ಅದನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಯಾಕೆಂದರೆ ಅವರದ್ದೇ ವಾಹನ ಅಲ್ಲವೇ. ಈಗ ನೋಡಿ, ಏಳು ವರ್ಷಗಳ ಹಿಂದೆ ಆಂಟೋನಿ ವೇಸ್ಟ್ ನವರು ತಂದಿದ್ದ ವಾಹನಗಳು ಇವತ್ತಿಗೂ ಹಾಗೆ ಇವೆ. ಚೆನ್ನಾಗಿ ಕೆಲಸ ಮಾಡುತ್ತಿವೆ. ಅದೇ ಪಾಲಿಕೆಯ ವಾಹನಗಳಾದರೆ ಅಷ್ಟು ವರ್ಷ ಬರುವುದು ಡೌಟು.
ಇನ್ನು ತುಂಬಾ ಚೆನ್ನಾಗಿ ಬಾಳಿಕೆ ಬಂದರೆ ಅಧಿಕಾರಿಗಳಿಗೆ ಏನು ಲಾಭ ಇದೆ, ಅಲ್ವೇ? ಅವು ನಿರ್ವಹಣೆಗೆ ಎಂದು ಬಂದರೆ ಮಾತ್ರ ಅಲ್ವೇ ಲಾಭ? ಹಾಗಾದರೆ ಪಾಲಿಕೆಯ ವಾಹನಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಯಾರದ್ದು ಎನ್ನುವ ಪ್ರಶ್ನೆ ಬರುತ್ತದೆ. ಅಧಿಕಾರಿಗಳು ನೋಡುವ ಚಾನ್ಸೇ ಇಲ್ಲ. ಇನ್ನು ಆಯಾ ವಾರ್ಡಿನ ವಾಹನಗಳನ್ನು ಕನಿಷ್ಟ ಆ ವಾರ್ಡಿನ ಕಾರ್ಪೋರೇಟರ್ ಆದರೂ ನೋಡುತ್ತಾರಾ ಎನ್ನುವ ಪ್ರಶ್ನೆ ಬಂದರೆ ಅರವತ್ತು ಕಾರ್ಪೋರೇಟರ್ ಗಳಲ್ಲಿ ನಲ್ವತ್ತರಿಂದ ಐವತ್ತು ಮಂದಿಗೆ ಅವರದ್ದೇ ವಾರ್ಡಿನಲ್ಲಿ ಕಸ ಸಂಗ್ರಹಣೆ ಆಗದಿದ್ದರನೇ ಏನೂ ಬಿದ್ದು ಹೋಗಿಲ್ಲ. ಹಾಗಿರುವಾಗ ಅವರು ವಾಹನಗಳನ್ನು ಸುಸ್ಥಿತಿಯಲ್ಲಿ ಗುತ್ತಿಗೆದಾರರು ಇಟ್ಟುಕೊಂಡಿದ್ದಾರಾ ಎಂದು ನೋಡುತ್ತಾರೆ ಎನ್ನುವುದನ್ನು ಹೇಗೆ ನಿರೀಕ್ಷೆ ಇಟ್ಟುಕೊಳ್ಳುವುದು. ಇಂತಹ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಪಾಲಿಕೆ ಬಂದು ನಿಂತಿದೆ.
ಪಾಲಿಕೆಯೇ ವಾಹನಗಳನ್ನು ಖರೀದಿಸಿ ಗುತ್ತಿಗೆದಾರರಿಗೆ ನೀಡುವುದು ಎನ್ನುವ ಎರಡನೇ ಐಡಿಯಾಕ್ಕೆ ಪಾಲಿಕೆಯ ಅನಧಿಕೃತ ವಿಪಕ್ಷ ಕಾಂಗ್ರೆಸ್ ವಿರೋಧ ಇದೆ. ಯಾಕೆಂದರೆ ವಾಹನಗಳ ಖರೀದಿ ಎಂದರೆ ಅದು 38 ಕೋಟಿ ರೂಪಾಯಿಗಳ ಬೃಹತ್ ಯೋಜನೆ. 38 ಕೋಟಿ ರೂಪಾಯಿಗಳಲ್ಲಿ ಹತ್ತು ಶೇಕಡಾ ಕಮೀಷನ್ ಎಂದರೆ ಹತ್ತಿರ ಮೂರುವರೆ ಕೋಟಿ ರೂಪಾಯಿಯ ವ್ಯವಹಾರ. ಅದರಲ್ಲಿ ಯಾರಿಗೆಲ್ಲ ಪಾಲಿದೆ ಎಂದು ಕಲ್ಪಿಸಿಕೊಳ್ಳುತ್ತಲೇ ಮತ್ಸರದಿಂದ ಕಾಂಗ್ರೆಸ್ ನಾವು ಪಾಲಿಕೆ ಕಡೆಯಿಂದ ವಾಹನ ಖರೀದಿ ಮಾಡುವುದು ಬೇಡಾ ಎಂದು ಹೇಳುತ್ತಿದೆ. ಹಿಂದೆ ಇವರಿಗೆ ಯಾವುದರಲ್ಲಿ ಕಮೀಷನ್ ಎಷ್ಟು, ಹೇಗೆ ಸಿಗುತ್ತದೆ ಎಂದು ಚೆನ್ನಾಗಿ ಮೇಯ್ದು ಗೊತ್ತಿರುವುದರಿಂದ ಎಲ್ಲರೂ ಹೀಗೆ ಅಂದುಕೊಂಡು ಬಿಟ್ಟಿದ್ದಾರೆ. ಅದೇನೆ ಇರಲಿ, ಈಗ ಈ ಬಗ್ಗೆ ಸರಿಯಾದ ನಿರ್ಧಾರ ಪಾಲಿಕೆ ತೆಗೆದುಕೊಳ್ಳಬೇಕಾದರೆ ತಾವೇ ಕುಳಿತು ಯೋಚಿಸಿ ಕಾಫಿ, ಅಂಬಡೆ ತಿಂದು ಹೋಗುವುದಕ್ಕಿಂತ ಈ ಕುರಿತು ಸಲಹೆ ಕೊಡಲು ಸಿದ್ಧರಿರುವ ಎನ್ ಜಿಒಗಳನ್ನು, ಹಿರಿಯ ಇಂಜಿನಿಯರ್ ಗಳನ್ನು, ಅನುಭವಿ ನಿವೃತ್ತ ಅಧಿಕಾರಿಗಳನ್ನು, ವೈದ್ಯರನ್ನು ಕರೆದು ಸಮಿತಿ ತರಹ ಮಾಡಿ ಅವರ ಆಲೋಚನೆಗಳನ್ನು ಬಳಸಿಕೊಳ್ಳಬೇಕು. ಇದಕ್ಕೆ ಶಾಸಕರುಗಳು ನೇತೃತ್ವ ವಹಿಸಬೇಕು. ಆಗ ಒಂದು ಒಳ್ಳೆಯ ಚಿಂತನೆ ಹೊರಹೊಮ್ಮಲೂ ಬಹುದು. ನೋಡೋಣ. ಮುಂದೆ ಇವರು ಹೇಗೆ, ಏನು ಮಾಡುತ್ತಾರೆ, ಎನ್ನುವುದನ್ನು!!
Leave A Reply