ಮಂಗಳೂರಿನಲ್ಲಿ ಏಕಮುಖ ರಸ್ತೆ ಮಾಡಿದ ಮೂರ್ಖರು ಯಾರು?
ನಮ್ಮಲ್ಲಿ ಸ್ಮಾರ್ಟ್ ಸಿಟಿ ಫಂಡ್ ಇದೆ ಎನ್ನುವ ಒಂದೇ ಕಾರಣಕ್ಕೆ ನಾವು ಯಾವುದನ್ನು ಬೇಕಾದರೂ ಒಡೆಯುತ್ತೇವೆ ಮತ್ತು ಯಾವುದನ್ನು ಬೇಕಾದರೂ ನಮಗೆ ಮನಸ್ಸಿಗೆ ಬಂದಂತೆ ಕಟ್ಟುತ್ತೇವೆ ಮತ್ತು ಅದರಲ್ಲಿ ಏನಾದರೂ ತಪ್ಪಾಗಿದ್ದರೆ ಅದನ್ನು ಪ್ರಾಯೋಗಿಕ ಎನ್ನುತ್ತೇವೆ ಎಂದು ನಾವು ಮೊದಲೇ ನಿರ್ಧಾರ ಮಾಡಿಕೊಂಡಿದ್ದರೆ ಏನೂ ಮಾಡಲು ಸಾಧ್ಯವಿಲ್ಲ. ಅಂತಹ ಒಂದು ಉತ್ತರವನ್ನು ಹೇಳಲು ಈಗಾಗಲೇ ಬಾಯಿಪಾಠ ಮಾಡಿಕೊಂಡಿರುವ ಮಂಗಳೂರಿನ ಪ್ರಥಮ ಪ್ರಜೆಯಿಂದ ಏನು ತಾನೆ ನಿರೀಕ್ಷೆ ಮಾಡಲು ಸಾಧ್ಯ. ನೀವು ಮಂಗಳೂರಿನ ಒಳಗೆ ಇತ್ತೀಚೆಗೆ ಬಂದಿರುವವರಾದರೆ ಅಪ್ಪಟ ಹೃದಯಭಾಗವಾದ ಗಡಿಯಾರ ಗೋಪುರದ ಸುತ್ತಮುತ್ತಲಿನ ಟಾಫ್ರಿಕ್ ಜಾಮ್ ಮತ್ತು ಅದಕ್ಕಿಂತಲೂ ವಿಶೇಷವಾಗಿ ಕುದ್ಮುಲ್ ರಂಗರಾವ್ ಪುರಭವನದ ಎರಡು ಕಡೆಯ ರಸ್ತೆಗಳು ಕೂಡ ಏಕಕಾಲದಲ್ಲಿ ಏಕಮುಖ ಮಾಡಿರುವ ಬಗ್ಗೆ ಆಶ್ಚರ್ಯ ಆಗಿರಬಹುದು. ಹಿಂದೆ ರಾವ್ ಅಂಡ್ ರಾವ್ ವೃತ್ತದಿಂದ ಗಡಿಯಾರ ಗೋಪುರದ ತನಕದ ರಸ್ತೆ ಮಾತ್ರ ಏಕಮುಖವಾಗಿತ್ತು. ಈಗ ಗಡಿಯಾರ ಗೋಪುರದಿಂದ ಎಬಿ ಶೆಟ್ಟಿ ವೃತ್ತ ಮತ್ತು ಅಲ್ಲಿಂದ ಹ್ಯಾಮಿಲ್ಟನ್ ಸರ್ಕಲ್ ಮತ್ತು ಅಲ್ಲಿಂದ ರಾವ್ ಅಂಡ್ ರಾವ್ ಸರ್ಕಲ್ ಮತ್ತು ಅಲ್ಲಿಂದ ಮತ್ತೆ ಗಡಿಯಾರ ಗೋಪುರದ ತನಕ ಏಕಮುಖ ರಸ್ತೆಯನ್ನಾಗಿ ಮಾಡಲಾಗಿದೆ. ಇದು ಅಗತ್ಯ ಇದೆಯಾ ಎನ್ನುವುದೇ ಮೊದಲ ಪ್ರಶ್ನೆ.
ಯಾಕೆಂದರೆ ಗಡಿಯಾರ ಗೋಪುರದಿಂದ ಎಬಿ ಶೆಟ್ಟಿ ವೃತ್ತದ ತನಕ ನೂರು ವಾಹನಗಳು ಒಂದು ಗಂಟೆ ಅವಧಿಯಲ್ಲಿ ಹೋದರೆ ಅತ್ತಲಿಂದ ಇತ್ತ ಬರುತ್ತಿದ್ದದ್ದು ಕೇವಲ 25 ವಾಹನಗಳು ಮಾತ್ರ. ಅಂದರೆ ಕಾಲು ಶೇಕಡಾ ವಾಹನಗಳು ಹೋಗುತ್ತಿದ್ದ ರಸ್ತೆಯನ್ನು ಏಕಮುಖ ಮಾಡಿ ಇವರು ಸಾಧಿಸುತ್ತಿರುವುದಾದರೂ ಏನು ಎನ್ನುವ ಪ್ರಶ್ನೆ ಮೂಡುತ್ತದೆ. ಅಷ್ಟಕ್ಕೂ ಇದನ್ನು ಪಾಲಿಕೆ ಯಾರಿಗಾದರೂ ಹೇಳಿಕೇಳಿ ಮಾಡಿದೆಯಾ ಎನ್ನುವ ಪ್ರಶ್ನೆ ಬಂದರೆ ಸ್ಪಷ್ಟವಾಗಿ ಇಲ್ಲ ಎಂದೇ ಹೇಳಬಹುದು. ಯಾವುದೇ ಒಂದು ರಸ್ತೆಯನ್ನು ಏಕಮುಖ ಮಾಡಬೇಕಾದರೆ ಅಥವಾ ಎಲ್ಲಿಯಾದರೂ ಪಾರ್ಕಿಂಗ್ ಅಥವಾ ನೋಪಾರ್ಕಿಂಗ್ ಮಾಡಬೇಕಾದರೆ ಅದನ್ನು ಪಾಲಿಕೆಯ ಪರಿಷತ್ ಸಭೆಯಲ್ಲಿ ಇಟ್ಟು ನಂತರ ಅಲ್ಲಿ ಅನುಮೋದನೆಗೊಂಡದ್ದನ್ನು ಅನುಷ್ಠಾನಕ್ಕೆ ತರಬೇಕು. ಇದೇ ಸಮಯದಲ್ಲಿ ಈ ವಿಷಯದ ಬಗ್ಗೆ ಪೊಲೀಸ್ ಕಮೀಷನರೇಟ್ ಕಚೇರಿಯಿಂದ ನೋ ಓಬ್ಜೆಕ್ಷನ್ ಪ್ರಮಾಣಪತ್ರವನ್ನು ಕೂಡ ಪಡೆಯಬೇಕು. ಅದಕ್ಕಿಂತ ಮೊದಲು ಹಿರಿಯ ಟ್ರಾಫಿಕ್ ಪೊಲೀಸ್ ಅಧಿಕಾರಿಗಳೊಡನೆ ಪಾಲಿಕೆಯಲ್ಲಿ ಮೇಯರ್ ಸಮಾಲೋಚನೆ ಮಾಡಬೇಕು. ಇದೇನೂ ಮಾಡದೇ ಏಕಮುಖ ರಸ್ತೆ, ದ್ವಿಮುಖ ರಸ್ತೆ ಎಂದು ಬದಲಾಯಿಸಲು ಅದೇನೂ ಮೇಯರ್ ಮನೆಯೊಳಗೆ ಇವತ್ತು ಸೋಫಾವನ್ನು ಇತ್ತ ಇಡೋಣ, ಮುಂದಿನ ವಾರ ವಾಸ್ತು ನೋಡಿ ಆ ಕಡೆ ಗೋಡೆಗೆ ಒರಗಿಸಿ ಇಡೋಣ ಎಂದು ಅಂದುಕೊಂಡ ಹಾಗೆ ಅಲ್ಲ.
ಯಾವುದೇ ಒಂದು ರಸ್ತೆಯನ್ನು ಏಕಮುಖ ಮಾಡುವ ಮೊದಲು ಅದರಿಂದ ಆಗುವ ಲಾಭಗಳ ಬಗ್ಗೆ ಚಿಂತನೆ ಕೂಡ ನಡೆಸಬೇಕು. ಅದಕ್ಕಾಗಿ ಸರ್ವೆ ಕೂಡ ಮಾಡಬೇಕು. ಇಂತಿಂತಹ ಸಮಯದಲ್ಲಿ ಈ ರಸ್ತೆಯಲ್ಲಿ ಎಷ್ಟು ವಾಹನಗಳು ಹೋಗುತ್ತವೆ ಮತ್ತು ಎಷ್ಟು ವಾಹನಗಳು ಬರುತ್ತವೆ ಎನ್ನುವುದರ ವರದಿ ತರಿಸಿಕೊಳ್ಳಬೇಕು. ಈಗ ನೋಡಿದರೆ ಪಾಂಡೇಶ್ವರ, ಮಂಗಳಾದೇವಿ, ಹೊಯಿಗೆಬಜಾರಿನ ಪ್ರದೇಶದ ನಾಗರಿಕರು ವಾಹನವನ್ನು ತೆಗೆದುಕೊಂಡು ಪುರಭವನದ ಬಳಿ ಬರಬೇಕಾದರೆ ಎರಡು ಕಿಲೋ ಮೀಟರ್ ಸುತ್ತು ಹಾಕಿ ಬರಬೇಕು. ಆಗ ಪೆಟ್ರೋಲ್, ಡಿಸೀಲ್ ಅನ್ಯಾಯವಾಗಿ ವ್ಯರ್ಥವಾಗುತ್ತದೆ. ಈಗಲೇ ಪೆಟ್ರೋಲ್, ಡಿಸೀಲ್ ಲೀಟರ್ ದರ ಎಷ್ಟಾಗಿದೆ ಎನ್ನುವುದನ್ನು ನಾವು ಮತ್ತೆ ಹೇಳಬೇಕಾಗಿಲ್ಲ. ಹಾಗಿರುವಾಗ ನೇರವಾಗಿ ಬಾಯಿಗೆ ಹಾಕುವುದನ್ನು ಸುತ್ತು ಬಳಸಿ ಬಾಯಿಗೆ ಹಾಕಲು ಹೋಗುವುದಾದರೂ ಯಾಕೆ? ಪರಿಷತ್ ಸಭೆಯಲ್ಲಿ ಇಡದೇ, ಡಿಸಿ ನೋಟಿಫೀಕೇಶನ್ ಆಗದೇ ಏಕಾಏಕಿ ಹೀಗೆ ಮಾಡದೇ ಇದ್ದರೆ ಇವರನ್ನು ಮೂರ್ಖರು ಎಂದು ಕರೆಯದೇ ಎರಡು ದಶಕಗಳ ಅನುಭವ ಇರುವ ಅತೀ ಬುದ್ಧಿವಂತರು ಎನ್ನಲಾಗುತ್ತದೆಯಾ? ಇಷ್ಟೆಲ್ಲ ತಪ್ಪು ಆದ ನಂತರ ಕೇಳಿದರೆ ಅದು ಪ್ರಾಯೋಗಿಕ ಎಂದು ಹೇಳಿದರೆ ನಡೆಯುತ್ತದೆಯಾ? ನಾಳೆ ಇವರ ಇಂತಹ ಕಿರಿಕಿರಿಯಾಗಿ ಜನ ಇವರ ಸಹವಾಸವೇ ಬೇಡಾ ಎಂದು ಬೇರೆಯವರಿಗೆ ಮತ ಹಾಕಿ ಕೇವಲ ಪ್ರಾಯೋಗಿಕ, ಐದು ವರ್ಷ ಅವರಿಗೆ ಕೊಟ್ಟು ನೋಡೋಣ ಎಂದು ಹೇಳಿದರೆ ಇವರಿಗೆ ಹೇಗೆ ಆಗುತ್ತದೆ? ಒಂದು ವೇಳೆ ಪ್ರಾಯೋಗಿಕವೇ ಆದರೆ ಡಿವೈಡರ್ ಗಳನ್ನು ಯಾಕೆ ಒಡೆದು ಹಾಕಬೇಕು? ಯಾರಾದರೂ ಪ್ರಯೋಗ ಮಾಡಲು ಕೆಡವಿ ಹಾಕಿದರೆ ನಂತರ ಪ್ರಯೋಗ ತಪ್ಪಾದರೆ ಮತ್ತೆ ನಿರ್ಮಾಣ ಮಾಡಲು ಹಣ ವೇಸ್ಟ್ ಆಗುತ್ತದೆ ಎಂದು ಅಷ್ಟು ಕೂಡ ಕಾಮನ್ ಸೆನ್ಸ್ ಇಲ್ಲವೇ? ಜನರ ತೆರಿಗೆಯ ಹಣ ಎನ್ನುವ ಸ್ಮಾರ್ಟ್ ಸಿಟಿ ಫಂಡ್ ಇದೆ ಎನ್ನುವ ಕಾರಣಕ್ಕೆ ಹೀಗೆ ಬೇಕಾದ ಹಾಗೆ ಪೋಲು ಮಾಡಲು ನಿಮಗೆ ಅವಕಾಶ ಕೊಟ್ಟವರು ಯಾರು? ನಿಮಗೆ ಸಿಕ್ಕಾಪಟ್ಟೆ ಅನುಭವ ಇರಬಹುದು. ಆದರೆ ಇಂತಹ ವಿಷಯ ಬಂದಾಗ ಕೆಲವು ಅನುಭವಿ ನಾಗರಿಕರನ್ನು ಕೂಡ ಕರೆದು ಅಭಿಪ್ರಾಯ ಕೇಳಬೇಕು. ಕಮೀಷನರ್ ಹೊಸಬರು, ಅನುಭವ ಕಡಿಮೆ ಎನ್ನಬಹುದು. ಆದರೆ ಮೇಯರ್ ಮತ್ತು ಶಾಸಕರು ಇಂತಹ ವಿಷಯದಲ್ಲಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡರೆ ಮುಂದೆ ಕಷ್ಟವಾಗಲಿದೆ. ಏನು ಕಷ್ಟವಾಗಲಿದೆ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಅವರಿಗೆ ಗೊತ್ತಾಗುತ್ತೆ. ಯಾಕೆಂದರೆ ಇದು ಮಂಗಳೂರು ನಗರ ಮತ್ತು ಇಲ್ಲಿನ ಜನರಿಗೆ ತಾಳ್ಮೆ ಕಡಿಮೆ. ಪ್ರತಿಭಟನೆ ಮಾಡಲು ಬೀದಿಗೆ ಇಳಿಯುವುದಿಲ್ಲ ಎನ್ನುವುದನ್ನು ಬಿಟ್ಟರೆ ಬೇರೆ ರೀತಿಯಲ್ಲಿ ತುಂಬಾ ಬುದ್ಧಿವಂತರಾಗಿದ್ದಾರೆ!!
Leave A Reply