ಬೆಂಗಳೂರಿನಲ್ಲಿ ಫ್ಲಾಟ್ಸ್ ಬಿದ್ದ ಹಾಗೆ ಇಲ್ಲೂ ಆಗುವ ಸಾಧ್ಯತೆ ಇದೆಯಾ?
ಇತ್ತೀಚೆಗೆ ಕೆಲವು ದಿನಗಳಿಂದ ಬೆಂಗಳೂರು ಮಹಾನಗರದಲ್ಲಿ ಕಟ್ಟಡಗಳು ಕುಸಿಯುತ್ತಿರುವ ದೃಶ್ಯಗಳನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದೆವೆ. ಕೆಲವು ವರ್ಷಗಳ ಹಿಂದಷ್ಟೇ ಕಟ್ಟಿದ್ದ ವಸತಿ ಸಂಕೀರ್ಣದ ಅಪಾರ್ಟ್ ಮೆಂಟಿನ ಕಟ್ಟಡವೊಂದು ಬಿರುಕು ಬಿಟ್ಟು ಈಗಲೋ ಆಗಲೋ ಎನ್ನುತ್ತಿರುವಾಗ ಅದರ ಎದುರು ನಿಂತು ಫ್ಲಾಟ್ ಖರೀದಿಸಿದ ಮಾಲೀಕರುಗಳು ಗೋಳೋ ಎಂದು ಅಳುತ್ತಿದ್ದ ದೃಶ್ಯ ಮನಕಲುಕುವಂತಿತು. ಮಧ್ಯಮ ವರ್ಗದವರು ಕಷ್ಟಪಟ್ಟು ದುಡಿದು ಮನೆಯನ್ನು ಖರೀದಿಸುವುದು ನಿಜಕ್ಕೂ ಇವತ್ತಿನ ದಿನಗಳಲ್ಲಿ ಸವಾಲಿನ ಸಂಗತಿ. ಹೀಗಿರುವಾಗ ಖರೀದಿಸಿದ ಅಪಾರ್ಟಮೆಂಟಿನ ಸಾಲವೇ ಇನ್ನು ಚುಕ್ತಾ ಆಗದೇ ಇದ್ದಾಗ ಅದು ಕಣ್ಣೇದುರೇ ಧರಾಶಾಯಿಯಾಗುವುದು ಇದೆಯಲ್ಲ, ಅದು ಅರಗಿಸಿಕೊಳ್ಳುವುದು ಕಷ್ಟ. ಅಂತಹ ಒಂದು ಘಟನೆ ಮಂಗಳೂರಿನಲ್ಲಿಯೂ ಆಗಬಹುದಾ? ನಗರ ಯೋಜನಾ ವಿಭಾಗ ಮತ್ತು ಬಿಲ್ಡರ್ಸ್ ಗಳ ನಡುವಿನ ಅಪವಿತ್ರ ಮೈತ್ರಿಯನ್ನು ನೋಡುವಾಗ ಇಲ್ಲಿ ಅಂತಹ ದಿನಗಳು ದೂರವಿಲ್ಲ ಎಂದು ಅನಿಸುತ್ತದೆ. ಹಾಗಾದರೆ ಇದನ್ನು ತಡೆಯಲು ಸಾಧ್ಯವಿದೆಯಾ?
ಕರ್ನಾಟಕ ಮುನ್ಸಿಪಲ್ ಕಾರ್ಪೋರೇಶನ್ ಆಕ್ಟ್ (ಕೆಎಂಸಿ ಆಕ್ಟ್ 1976) ಪ್ರಕಾರ ಒಂದು ನಿಗದಿತ ಜಾಗದಲ್ಲಿ ಬಿಲ್ಡರ್ ಒಬ್ಬರು ಕಟ್ಟಡ ಕಟ್ಟಲು ಅನುಮತಿ ಕೇಳಿದಾಗ ಪಾಲಿಕೆಯ ನಗರ ಯೋಜನಾ ವಿಭಾಗದವರು ಕಟ್ಟಡ ನಿರ್ಮಾಣ ಪರವಾನಿಗೆ ಪತ್ರವನ್ನು ನೀಡುತ್ತಾರೆ. ಅದರ ನಂತರ ಆ ಕಟ್ಟಡ ನಿರ್ಮಾಣವಾಗಿ ಅದು ಮಾರಾಟವಾಗುವ ತನಕ ಈ ವಿಭಾಗದ ಅಧಿಕಾರಿಗಳು ಅತ್ತ ಸುಳಿಯುವುದೇ ಇಲ್ಲ. ಬಿಲ್ಡರ್ ಗಳಿಂದ ಕಾಲಕಾಲಕ್ಕೆ ನಿರಂತರವಾಗಿ ಬರಬೇಕಾಗಿರುವ ಕವರ್ ಗಳು ಬರುತ್ತಲೇ ಇದ್ದರೆ ಇವರು ಇತ್ತ ಕಡೆಯಿಂದ ಅತ್ತ ಹೋಗುವುದಿಲ್ಲ. ಅವರು ಅತ್ತ ಕಡೆಯಿಂದ ಇತ್ತ ಬರುವುದಿಲ್ಲ. ಆದರೆ ನಿಯಮಗಳಲ್ಲಿ ಹೇಗಿದೆ ಎಂದರೆ ಗುತ್ತಿಗೆದಾರ ಕಟ್ಟಡ ನಿರ್ಮಾಣ ಶುರು ಮಾಡಿದ ದಿನ ಈ ಅಧಿಕಾರಿಗಳು ಅಲ್ಲಿ ಹೋಗಿ ಮಾರ್ಕ್ ಮಾಡಿ ಕೊಡಬೇಕು ಎನ್ನುವುದರಿಂದ ಹಿಡಿದು ಸೆಟ್ ಬ್ಯಾಕ್ ಎಷ್ಟು ಬಿಡಬೇಕು ಎನ್ನುವ ತನಕ ಎಲ್ಲವನ್ನು ಪರಿಶೀಲಿಸಿಯೇ ಬರಬೇಕಾಗುತ್ತದೆ. ಅದರ ನಂತರ ತಳಮಹಡಿಗೆ ಅಗೆಯುವಾಗ, ಫೌಂಡೇಶನ್ ಕಟ್ಟುವಾಗ, ನೆಲಮಹಡಿ ನಿರ್ಮಾಣವಾಗುವಾಗ, ಪಾರ್ಕಿಂಗ್ ಗೆ ಜಾಗ ಬಿಡುವಾಗ ಮತ್ತು ಪ್ರತಿ ಅಂತಸ್ತು ಕಟ್ಟುವಾಗಲೂ ಅಲ್ಲಿ ನಗರ ಯೋಜನಾ ಅಧಿಕಾರಿಗಳಲ್ಲಿ ಒಬ್ಬರು ಹೋಗಿ ದಾಖಲೆಗಳ ಪ್ರಕಾರ ಎಲ್ಲವೂ ನಡೆಯುತ್ತಿದೆಯಾ ಎನ್ನುವುದನ್ನು ನೋಡಿಕೊಂಡು ಬರಲೇಬೇಕು. ಕೇವಲ ನೋಡಿಕೊಂಡು ಬರುವುದಲ್ಲ, ಅಲ್ಲಿ ನೋಡಿದ್ದನ್ನು ವರದಿ ತಯಾರಿಸಿ ಪಾಲಿಕೆ ಆಯುಕ್ತರಿಗೆ ಸಲ್ಲಿಸಬೇಕು. ಅದನ್ನು ಚೆಕ್ ಲಿಸ್ಟ್ ಮಾಡುವುದು ಎಂದು ಹೇಳಲಾಗುತ್ತದೆ. ಆರಂಭದಲ್ಲಿ ಮಾರ್ಕ್ ಮಾಡುವುದರಿಂದ ಹಿಡಿದು ಅಂತಿಮ ಕಂಪ್ಲೀಷನ್ ಸರ್ಟಿಫೀಕೇಟ್ ಕೊಡುವ ತನಕ ಎಲ್ಲವೂ ನಿಯಮದಂತೆ ಇದ್ದರೆ ಮಾತ್ರ ಅದನ್ನು ಸಕ್ರಮ ಕಟ್ಟಡ ಎಂದು ಹೇಳಲಾಗುತ್ತದೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಹರೀಶ್ ಕುಮಾರ್ ಆಯುಕ್ತರಾಗಿ ಇದ್ದ ಅವಧಿಯಲ್ಲಿ ಮಾತ್ರ ಇದು ಸರಿಯಾಗಿ ನಡೆಯುತ್ತಿತ್ತು. ನಮ್ಮಲ್ಲಿ ಪ್ರಾಮಾಣಿಕ ಅಧಿಕಾರಿಗಳನ್ನು ಹೆಚ್ಚು ಕಾಲ ಉಳಿಸುವ ಸಂಪ್ರದಾಯ ಇಲ್ಲದೆ ಇರುವುದರಿಂದ ಅವರಿದ್ದ ಒಂದೂವರೆ ವರ್ಷದ ಕಾಲ ನಗರ ಯೋಜನಾ ಅಧಿಕಾರಿಗಳು ಬಾಲ ಮುದುಡಿದ ಬೆಕ್ಕಿನಂತೆ ಇದ್ದರು. ಅವರು ಇಲ್ಲಿಂದ ಹೋದ ಮೇಲೆ ನಗರ ಯೋಜನಾ ಅಧಿಕಾರಿಗಳದ್ದೇ ಕಾರುಬಾರು. ಯಾವಾಗ ಪಾಲಿಕೆ ಕಡೆಯಿಂದ ಚೆಕ್ ಲಿಸ್ಟ್ ಆಗುವುದಿಲ್ಲವೋ ಆಗ ಬಿಲ್ಡರ್ ಗಳು ಯಾಕೆ ನಿಯಮಪ್ರಕಾರ ಕಟ್ಟುತ್ತಾರೆ, ಅವರೇನು ಸತ್ಯ ಹರಿಶ್ಚಂದ್ರನ ಮೊಮ್ಮೊಕ್ಕಳಾ? ಅವರು ಅಪ್ಪಟ ವ್ಯಾಪಾರಿಗಳು. ಐದು ರೂಪಾಯಿ ಹಾಗಿ ಇಪ್ಪತ್ತು ತೆಗೆಯುವುದು ಹೇಗೆಂದು ಲೆಕ್ಕಾಚಾರ ಹಾಕುತ್ತಾ ಕೂರುವವರಿಗೆ ಚೆಕ್ ಲಿಸ್ಟ್ ಮಾಡುವವರು ಇಲ್ಲ ಎಂದ ಮೇಲೆ ಕೇಳುವುದುಂಟೇ? ಅಷ್ಟಕ್ಕೂ ಕಾಲಕಾಲಕ್ಕೆ ಪಾಲಿಕೆ ಕಡೆಯಿಂದ ಅಧಿಕಾರಿಗಳು ಚೆಕ್ ಲಿಸ್ಟ್ ಮಾಡದೇ ಇದ್ದರೆ ಏನಾಗುತ್ತದೆ? ಮೊದಲನೇಯದಾಗಿ ಈಗ ಬಿಬಿಎಂಪಿಯಲ್ಲಿ ಆದ ಹಾಗೆ ಅಪ್ಪಟ ಕಳಪೆ ಕಾಮಗಾರಿ ನಡೆದು ವಸತಿ ಸಮುಚ್ಚಯಗಳು ನಿರ್ಮಾಣವಾಗಬಹುದು. ಮೂರು ಮಹಡಿಗಳ ಕಟ್ಟಡ ರಚನೆಯಾಗುವಾಗ ಸ್ಕೆಚ್ ನಲ್ಲಿ ಇಂತಿಷ್ಟು ಅಡಿ ಆಳದಲ್ಲಿ ಫೌಂಡೇಶನ್ ಹಾಕಬೇಕು ಎನ್ನುವ ನಿಯಮ ಇದೆ. ಹೀಗಿರುವಾಗ ಮೂರು ಮಹಡಿಯ ಫೌಂಡೇಶನ್ ತೆಗೆದು ನಂತರ ಐದು ಮಹಡಿ ಕಟ್ಟಿದ್ದರೆ ಆಗ ಆ ಕಟ್ಟಡದ ತಳಪಾಯ ಭಾರವನ್ನು ತಳೆಯಲಾರದೇ ಕುಸಿದುಬಿದ್ದರೆ ಆಗ ಯಾರು ಹೊಣೆ. ಇನ್ನು ಇಷ್ಟು ಮಹಡಿಯ ಕಟ್ಟಡಕ್ಕೆ ಇಂತಿಷ್ಟೇ ಅಳತೆಯ ಸ್ಟೀಲ್, ಸಿಮೆಂಟ್ ಬಳಕೆ ಮಾಡಬೇಕು ಎನ್ನುವ ನಿಯಮ ಕೂಡ ಇದೆ. ಬಿಲ್ಡರ್ ಹಣ ಉಳಿಸಲು ಕಡಿಮೆ ಗುಣಮಟ್ಟದ, ಕಡಿಮೆ ದಪ್ಪದ ಸ್ಟೀಲ್ ಸಹಿತ ಬೇರೆ ಕಚ್ಚಾವಸ್ತುಗಳನ್ನು ಬಳಸಿ ನಂತರ ಕೆಲವೇ ವರ್ಷಗಳಲ್ಲಿ ಆ ಕಟ್ಟಡ ಬಾಯಿಬಿಟ್ಟರೆ ಆಗ ಯಾರು ಜವಾಬ್ದಾರಿ? ಬೆಂಗಳೂರಿನಲ್ಲಿ ಹೀಗೆ ಕಳಪೆ ಗುಣಮಟ್ಟದ 518 ಕಟ್ಟಡಗಳು ಇವೆ ಎನ್ನುವ ಪಟ್ಟಿಯನ್ನು ಹಿಡಿದುಕೊಂಡು ಅಧಿಕಾರಿಗಳು ಕುಳಿತುಕೊಂಡಿದ್ದಾರೆ. ನಮ್ಮಲ್ಲೂ ಇಂತಹ ಅನೇಕ ವಸತಿ ಸಮುಚ್ಚಯಗಳು ಇವೆ. ಮೂರು ಮಹಡಿ ಎಂದು ತೋರಿಸಿ ಐದು ಕಟ್ಟುವುದು, ಅದರಲ್ಲಿ ಒಂದೊಂದು ಫ್ಲಾಟನ್ನು ಯಾರಿಗೆ ಕೊಡಬೇಕೋ ಅವರಿಗೆ ಕೊಡುವುದು, ನಂತರ ಉಳಿದ್ದದ್ದನ್ನು ಕೋಟಿಗೆ ಮಾರಿ ಆರಾಮವಾಗಿರುವುದು ಇಲ್ಲೂ ಇದೆ. ಇದೆಲ್ಲವನ್ನು ನೋಡುವ ಜವಾಬ್ದಾರಿ ಈಗ ಮೇಯರ್, ಆಯುಕ್ತರ ಮುಂದೆ ಇದೆ. ಪಾರ್ಕಿಂಗ್ ನಿಂದ ಹಿಡಿದು ಹೆಚ್ಚುವರಿ ಮಹಡಿ ಕಟ್ಟುವುದನ್ನು ಸೇರಿಸಿ ಎಲ್ಲೆಲ್ಲಿ ಅನುಮಾನ ಇದೆಯೋ ಅದನ್ನು ಸರಿಪಡಿಸಿಕೊಳ್ಳಬೇಕು. ನಂತರ ಮುಂದೊಂದು ದಿನ ಹೆಚ್ಚುಕಡಿಮೆ ಆದರೆ ಆಗ ಕಾಲ ಮಿಂಚಿರುತ್ತದೆ!
Leave A Reply