ಸಲ್ಮಾನ್ ಅಂಗರಕ್ಷಕನಿಗೆ ಆದ ಗತಿ ಸಮೀರ್ ಅವರಿಗೆ ಆಗದಿರಲಿ!!
ನೀವು ಹಿಂದಿಯಲ್ಲಿ ಮೇಡಂ ಚೀಫ್ ಮಿನಿಸ್ಟರ್ ಎನ್ನುವ ಸಿನೆಮಾ ನೋಡಿದರೆ ನಿಮಗೆ ಅದರ ಕ್ಲೈಮ್ಯಾಕ್ಸ್ ದಂಗುಬಡಿಯುತ್ತದೆ. ಒಬ್ಬ ಸದೃಢ ಗಂಡಸಿಗೆ ನಿಧಾನಗತಿಯ ವಿಷವನ್ನು ಆಹಾರದಲ್ಲಿ ನಿತ್ಯ ನೀಡುತ್ತಾ ಕೆಲವು ವರ್ಷಗಳಲ್ಲಿ ಅವನನ್ನು ಜೀವಂತ ಶವದಂತೆ ಮಾಡಲಾಗುತ್ತದೆ. ಅಂತದ್ದೇ ಅಧ್ಯಾಯ ಸಲ್ಮಾನ್ ಖಾನ್ ಅಂಗರಕ್ಷಕನ ವಿಷಯದಲ್ಲಿಯೂ ಆಯಿತಾ ಎಂದು ಅನಿಸುತ್ತದೆ. ಹದಿನಾಲ್ಕು ವರ್ಷಗಳ ಹಿಂದೆ ಬಾಲಿವುಡ್ ನ ಎಲಿಜಬೆಲ್ ಬ್ಯಾಚುಲರ್ ಸಲ್ಮಾನ್ ಖಾನ್ ನನ್ನು ಎದುರು ಹಾಕಿಕೊಂಡದ್ದಕ್ಕೆ ರವೀಂದ್ರ ಪಾಟೀಲ್ ಅವರಿಗೆ ಆದ ಗತಿ ಸಮೀರ್ ಅವರಿಗೆ ಆಗದಿದ್ದರೆ ಸಾಕು ಎನ್ನುವುದು ನನ್ನ ಹಾರೈಕೆ. ಅಷ್ಟಕ್ಕೂ ರವೀಂದ್ರ ಪಾಟೀಲ್ ಅವರಿಗೆ ಆದದ್ದು ಏನು?
ಅದು ಮುಂಬೈ. ಸೆಪ್ಟೆಂಬರ್ ತಿಂಗಳು. 2002 ನೇ ಇಸವಿ. ಸಲ್ಮಾನ್ ಖಾನ್ ಕಂಠಪೂರ್ತಿ ಕುಡಿದು ಫೈವ್ ಸ್ಟಾರ್ ಹೋಟೇಲಿನಿಂದ ಹೊರಗೆ ಬರುತ್ತಾರೆ. ಚಾಲಕನಿಂದ ಕಾರಿನ ಕೀಯನ್ನು ಕಸಿದುಕೊಂಡು ತಾವೇ ಎಸ್ ಯುವಿ ಕಾರಿನ ಸ್ಟೇರಿಂಗ್ ನಲ್ಲಿ ಕುಳಿತುಕೊಳ್ಳುತ್ತಾರೆ. ಆಗ ಅವರ ಪಕ್ಕದಲ್ಲಿ ಕುಳಿತವರು ಪಾಟೀಲ್. ಪಾಟೀಲ್ ಯಾಕೆ ಅವರ ಪಕ್ಕದಲ್ಲಿ ಇದ್ದರು ಎಂದರೆ ಅವರನ್ನು ಮುಂಬೈ ಕ್ರೈಂ ಬ್ರಾಂಚ್ ಖಾನ್ ಸೆಕ್ಯೂರಿಟಿಗೆ ಸರಕಾರದ ಕಡೆಯಿಂದ ನೇಮಿಸಿತ್ತು. ಅಷ್ಟಕ್ಕೂ ರವೀಂದ್ರ ಪಾಟೀಲ್ ಒಬ್ಬರು ಕಾನ್ಸಟೇಬಲ್. 1997-98 ರಲ್ಲಿ ಮುಂಬೈ ಪೊಲೀಸ್ ಇಲಾಖೆಗೆ ಸೇರಿರುತ್ತಾರೆ. ಅದೇ ಸಮಯಕ್ಕೆ ಸಲ್ಮಾನ್ ತಮಗೆ ಮುಂಬೈ ಭೂಗತ ಲೋಕದಿಂದ ಬೆದರಿಕೆ ಕರೆಗಳು ಬರುತ್ತಿವೆ. ಒಬ್ಬರು ಪೊಲೀಸರನ್ನು ಭದ್ರತೆಗೆ ಕೊಡಿ ಎಂದು ಕೇಳಿಕೊಂಡಿರುತ್ತಾರೆ. ಆಗ ಖಾನ್ ಭದ್ರತೆಗೆ ನೇಮಕವಾದವರೇ ರವೀಂದ್ರ ಪಾಟೀಲ್. ಪಾಟೀಲ್ ಸಲ್ಮಾನ್ ಜೊತೆ ಚೆನ್ನಾಗಿಯೇ ಡ್ಯೂಟಿ ಮಾಡಿಕೊಂಡಿದ್ದರು. ಸಲ್ಮಾನ್ ಕೂಡ ರವೀಂದ್ರ ಅವರನ್ನು ಉತ್ತಮವಾಗಿ ನಡೆಸಿಕೊಂಡಿದ್ದರು. ಆದರೆ 2002 ಸೆಪ್ಟೆಂಬರ್ ನ ಆ ಕರಾಳ ರಾತ್ರಿ ಮಾತ್ರ ಬಾಂದ್ರಾದ ಬೀದಿಯಲ್ಲಿ ಫುಟ್ ಪಾತ್ ಮೇಲೆ ಮಲಗಿದ್ದ ಆ ಐದು ಮಂದಿಗೆ ಮಾತ್ರವಲ್ಲ ಪಾಟೀಲ್ ಪಾಲಿಗೂ ಕರಾಳ ರಾತ್ರಿಯಾಗಿತ್ತು. ಖಾನ್ ಕುಡಿದ ಮತ್ತಿನಲ್ಲಿ ನುಗ್ಗಿಸಿದ ವಾಹನ ಆ ಫುಟ್ ಪಾತ್ ಮೇಲೆ ಚಲಿಸಿದ ರಭಸಕ್ಕೆ ಒಬ್ಬ ಇಹಲೋಕ ತ್ಯಜಿಸಿ, ನಾಲ್ಕು ಮಂದಿ ಗಂಭೀರ ಗಾಯಗೊಂಡರು. ಆದರೆ ಅಬ್ಬೇಪಾರಿಗಳು, ರಸ್ತೆಯ ಬದಿ ಮಲಗುವವರು. ಸಲ್ಮಾನ್ ಖಾನ್ ಅವರಂತಹ ಪ್ರಭಾವಿಯನ್ನು ಎದುರುಹಾಕಿಕೊಳ್ಳಲು ಸಾಧ್ಯವೇ. ಸಾಧ್ಯವೇ ಇರಲಿಲ್ಲ. ಆದರೆ ಸತ್ಯ, ನ್ಯಾಯ, ನಿಷ್ಟೆಯನ್ನು ಬೆನ್ನಿಗೆ ಅಂಟಿಸಿಕೊಂಡೇ ಪೊಲೀಸ್ ಇಲಾಖೆಗೆ ಸೇರಿದ್ದ ಪಾಟೀಲ್ ಮಾತ್ರ ಖಾನ್ ಪಕ್ಕದಲ್ಲಿ ತಾನೇ ಇದ್ದದ್ದು ಮತ್ತು ಸಲ್ಮಾನ್ ಸ್ವತ: ವಾಹನ ಚಲಾಯಿಸಿ ದುರ್ಘಟನೆಗೆ ಕಾರಣವಾಗಿರುವುದನ್ನು ಪೊಲೀಸ್ ಠಾಣೆಯಲ್ಲಿ ಹಾಗೂ ನ್ಯಾಯಾಲಯದಲ್ಲಿ ಹೇಳಿಬಿಟ್ಟರು. ಅದು ಸಲ್ಮಾನಿಗೆ ಜೈಲಿನಲ್ಲಿ ವರ್ಷಗಟ್ಟಲೆ ಕುಳ್ಳಿರಿಸಲು ಸಾಕಾಗುವಷ್ಟು ದಾಖಲೆಯಾಗಿತ್ತು. ನಿಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದುಕೊಳ್ಳಿ ಎಂದು ಪಾಟೀಲ್ ಮೇಲೆ ನಿರಂತರ ಒತ್ತಡ ಎಲ್ಲಾ ಕಡೆಗಳಿಂದಲೂ ಬಂತು. ಪಾಟೀಲ್ ಸತ್ಯದ ಪರವಾಗಿ ನಿಂತಿದ್ದರು.
ಇನ್ನೇನೂ ಕೋರ್ಟಿನಲ್ಲಿ ವಿಚಾರಣೆ ಆರಂಭವಾಗಬೇಕು, ಅಷ್ಟಾಗುವಾಗ ಪಾಟೀಲ್ ಕಣ್ಮರೆಯಾಗಿಬಿಟ್ಟರು. ಯಾವ ನೋಟಿಸಿಗೂ ಅವರು ಉತ್ತರ ಕೊಡಲಿಲ್ಲ, ನ್ಯಾಯಾಲಯಕ್ಕೆ ಹಾಜರಾಗಲೇ ಇಲ್ಲ. ಇದರಿಂದ ನ್ಯಾಯಾಲಯ ಅವರನ್ನು ಬಂಧಿಸಿ ತನ್ನಿ ಎಂದು ಮುಂಬೈ ಪೊಲೀಸರಿಗೆ ಸೂಚನೆ ನೀಡಿತು. 2006 ರಲ್ಲಿ ರವೀಂದ್ರ ಪಾಟೀಲರನ್ನು ಬಂಧಿಸಿದ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ವರ್ಷಗಟ್ಟಲೆ ನ್ಯಾಯಾಲಯಕ್ಕೆ ಹಾಜರಾಗದೇ ತಲೆತಪ್ಪಿಸಿಕೊಂಡು ನ್ಯಾಯಾಲಯವನ್ನು ದಾರಿತಪ್ಪಿಸಿದ ಕಾರಣಕ್ಕೆ ಪಾಟೀಲರಿಗೆ ಛೀಮಾರಿ ಹಾಕಿದ ನ್ಯಾಯಾಲಯದ ಆದೇಶದಂತೆ ರವೀಂದ್ರ ಪಾಟೀಲರನ್ನು ಕೆಲಸದಿಂದ ತೆಗೆಯಲಾಯಿತು. ಅವರನ್ನು ಕುಟುಂಬದವರು ಕೂಡ ಹತ್ತಿರ ಸೇರಿಸಿಕೊಳ್ಳಲು ಒಪ್ಪಲಿಲ್ಲ. ಕುಟುಂಬಕ್ಕೆ ಯಾವ ಒತ್ತಡವಿತ್ತೋ. ಒಟ್ಟಿನಲ್ಲಿ ರವೀಂದ್ರ ಪಾಟೀಲ್ ಅಕ್ಷರಶ: ಬೀದಿಗೆ ಬಿದ್ದರು. ಕೆಲಸ ಇಲ್ಲ. ಮನೆ ಇಲ್ಲ. ಅವರು ಎಲ್ಲಿ ಹೋದರೂ ಅವರಿಗೆ ಬೇರೆ ಕೆಲಸ ಸಿಗದಂತೆ ನೋಡಿಕೊಳ್ಳಲಾಯಿತು. ಹೀಗೆ ಒಮ್ಮೆ ರಸ್ತೆಯಲ್ಲಿ ಬಿದ್ದಿದ್ದ ಪಾಟೀಲರನ್ನು ಅವರ ಹಿಂದಿನ ಸಹೋದ್ಯೋಗಿ ಆಸ್ಪತ್ರೆಗೆ ಸೇರಿಸಿ ಕೈತೊಳೆದುಕೊಂಡು ಬಿಟ್ಟರು. ಪರೀಕ್ಷಿಸಿದ ವೈದ್ಯರು ಪಾಟೀಲರಿಗೆ ಡಿಬಿ ಕಾಯಿಲೆ ಅಂಟಿರುವ ವಿಷಯ ಪತ್ತೆ ಹಚ್ಚಿದರು. ಅಗಸ್ಟ್ 2007 ರಲ್ಲಿ ಸರಕಾರಿ ಆಸ್ಪತ್ರೆಗೆ ಸೇರಿದ ಪಾಟೀಲ್ ಅದೇ ವರ್ಷ ನವೆಂಬರ್ ನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸತ್ತೆ ಹೋದರು. 2015 ರಲ್ಲಿ ಆ ಪ್ರಕರಣ ಮುಕ್ತಾಯವಾಗಿ ಒಬ್ಬ ಕಾನ್ಸಟೇಬಲ್ ಹೇಳಿಕೆಯ ಆಧಾರದಲ್ಲಿ ಸಲ್ಮಾನ್ ಖಾನ್ ದೋಷಿ ಎಂದು ಹೇಳಲು ಆಗುವುದಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿತ್ತು. 1998 ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಯುವಕನೊಬ್ಬ 2007 ರಲ್ಲಿ ಇಹಲೋಕವನ್ನೇ ಬಿಟ್ಟು ಹೊರಟುಹೋದ.
ಈಗ ಸಮೀರ್ ವಾಖಂಡೆಯವರು ಒಂದು ಕಡೆ ಬಾಲಿವುಡ್ ಸುಲ್ತಾನನ ಕುಟುಂಬವನ್ನು, ಇನ್ನೊಂದೆಡೆ ಮಹಾರಾಷ್ಟ್ರ ಸರಕಾರವನ್ನು ಎದುರು ಹಾಕಿಕೊಂಡಿದ್ದಾರೆ. ರಾಜ್ಯ ಸರಕಾರದ ಅಧೀನದಲ್ಲಿರುವ ಪೊಲೀಸ್ ಇಲಾಖೆ ಸಹಜವಾಗಿ ಅವರ ಸಚಿವರಾದ ನವಾಬ್ ಮಲೀಕ್ ಅವರ ಮಾತನ್ನು ಕೇಳುತ್ತದೆ. ನವಾಬ್ ಈಗಾಗಲೇ ಸಮೀರ್ ಮೊದಲ ಪತ್ನಿಯ ತಂದೆಯನ್ನು ಹುಡುಕಿ ತಂದು “ಸಮೀರ್ ಹಿಂದೂ ಎಂದು ಗೊತ್ತಿರಲಿಲ್ಲ, ಮುಸ್ಲಿಂ ಎಂದುಕೊಂಡು ಮಗಳನ್ನು ಮದುವೆ ಮಾಡಿಕೊಟ್ಟಿದ್ದೆ” ಎಂದು ಹೇಳಿಸಿದ್ದಾರೆ. ಆ ಮದುವೆ ಮಾಡಿಸಿದ ಮೌಲ್ವಿ ಕೂಡ ಹಾಗೆ ಹೇಳಿದ್ದಾರೆ. ನವಾಬ್ ತಮ್ಮ ಗುರಿ ಸಮೀರ್ ಜೈಲಿನಲ್ಲಿ ಕೊಳೆಯುವುದು ಎಂದಿದ್ದಾರೆ. ಶಾರುಖ್ ಖಾನ್ ಕೂಡ ಹಾಗೆ ನಿರ್ಧರಿಸಿದ್ದಲ್ಲಿ ಸಮೀರ್ ಬೆನ್ನಿಗೆ ನಿಲ್ಲುವುದು ಯಾರು? ಸಮೀರ್ ವಾಂಖೆಡೆಯವರು ಈಗ ಅಕ್ಷರಶ: ಚಕ್ರವ್ಯೂಹದಲ್ಲಿ ಅಭಿಮನ್ಯುವಿನಂತೆ ಏಕಾಂಗಿಯಾಗಿ ಕೌರವರ ವಿರುದ್ಧ ಹೋರಾಡುತ್ತಿರುವ ಈ ಹಂತದಲ್ಲಿ ಅವರ ಭವಿಷ್ಯ ಒಡೆದ ಗಾಜಿನ ಚೂರುಗಳ ಮೇಲೆ ನಡೆದು ಗುರಿ ಸೇರುವಂತೆ ಆದರೂ ಆಶ್ಚರ್ಯವಿಲ್ಲ. ರವೀಂದ್ರ ಪಾಟೀಲ್ ಯಾಕೋ ನೆನಪಾದದ್ದು ಇದೇ ಕಾರಣಕ್ಕೆ!
Leave A Reply