ಡಿಸೀಲಿಗೆ 17 ರೂಪಾಯಿ ಇಳಿಯಿತು, ಬಸ್ಸಿಗೆ ಇಳಿಯುವುದು ಯಾವಾಗ?
ಮೋದಿ ಪ್ರಧಾನಿಯಾಗಿದ್ದಾಗ ಅದೇನು ಮಾಡಿದರೂ ಒಂದು ಮೈಲಿಗಲ್ಲಾಗುತ್ತದೆ ಎನ್ನುವುದು ಮತ್ತೆ ಸಾಬೀತಾಗಿದೆ. ಪೆಟ್ರೋಲ್ ಬೆಲೆ ಲೀಟರಿಗೆ 112 ರೂಪಾಯಿ ಹೋಯಿತು. ಅದು ಕೂಡ ಒಂದು ದಾಖಲೆ. ಡಿಸೀಲ್ ಬೆಲೆ 100 ಆಯಿತು. ಅದು ಕೂಡ ಮೈಲಿಗಲ್ಲು. ಈಗ ಸಡನ್ನಾಗಿ ಪೆಟ್ರೋಲಿಗೆ 12 ರೂಪಾಯಿ ಮತ್ತು ಡಿಸೀಲಿಗೆ 17 ರೂಪಾಯಿ ಇಳಿಸಲಾಯಿತು. ಅದು ಕೂಡ ಸೋಜಿಗವೇ. ಉತ್ತರ ಪ್ರದೇಶ ಚುನಾವಣೆ ಕೂಗಳತೆಯ ದೂರದಲ್ಲಿ ಇರುವುದರಿಂದ ಹೀಗೆ ಮಾಡಿದ್ದಾರೆ ಎಂದು ವಿಪಕ್ಷ ಕಾಂಗ್ರೆಸ್ ಮತ್ತು ಅದರ ಕಸಿನ್ಸ್ ಗಳು ಬೊಬ್ಬೆ ಹಾಕುತ್ತಿದ್ದರೂ ಪರೋಕ್ಷವಾಗಿ ಮೋದಿ ದಾಖಲೆಯ ಪ್ರಮಾಣದಲ್ಲಿ ದರ ಇಳಿಸಿರುವುದಕ್ಕೆ ಇದೇ ವಿಪಕ್ಷಗಳು ಪರೋಕ್ಷವಾಗಿ ಪ್ರಚಾರ ಕೊಡುತ್ತಿರುವುದು ಕೂಡ ಹೌದು. ಅಷ್ಟಕ್ಕೂ ಕೇಂದ್ರ 5 ರೂಪಾಯಿ ಪೆಟ್ರೋಲಿಗೆ ಮತ್ತು ಹತ್ತು ರೂಪಾಯಿ ಡಿಸೀಲಿಗೆ ಇಳಿಸಿದ ಕಾರಣ ಭಾರತೀಯ ಜನತಾ ಪಾರ್ಟಿಯ ಆಳ್ವಿಕೆ ಇರುವ ರಾಜ್ಯಗಳು ಮೇಲಿನಿಂದ ಬಂದ ಸೂಚನೆಯಂತೆ ಎರಡರ ಮೇಲೆಯೂ ತಲಾ 7 ರೂಪಾಯಿಯನ್ನು ಇಳಿಸಿವೆ. ಈ ಮೂಲಕ ಒಮ್ಮೆಲ್ಲೆ ಡಿಸೀಲ್ ಮೇಲೆ 17 ರೂಪಾಯಿ ಕಡಿಮೆಯಾಗಿರುವುದರಿಂದ ಸಾಗಾಣಿಕಾದಾರರು ನಿಟ್ಟುಸಿರುಬಿಡುವಂತಾಗಿದೆ. ಇದರಿಂದ ನೇರವಾಗಿ ಸಾರಿಗೆ ಉದ್ಯಮದಲ್ಲಿ ಇರುವವರಿಗೆ ಹೆಚ್ಚು ಲಾಭವಾಗುತ್ತದೆಯಾದರೂ ಅದರ ಪ್ರಯೋಜನವನ್ನು ಅವರು ಗ್ರಾಹಕರಿಗೆ ವರ್ಗಾಯಿಸುತ್ತಾರೋ ಎನ್ನುವುದನ್ನು ನೋಡಬೇಕು. ಈಗ ಉದಾಹರಣೆಗೆ ಡಿಸೀಲ್ ಮೇಲೆ 17 ರೂಪಾಯಿ ಇಳಿದಿದೆ. ಯಾವ ಬಸ್ಸಿನವರು ಟಿಕೆಟ್ ದರ ಇಳಿಸುತ್ತಾರೆ ನೋಡೋಣ. ಮಾತನಾಡಿದರೆ ಅದಕ್ಕೆ ಹೆಚ್ಚಾಗಿದೆ, ಇದಕ್ಕೆ ಹೆಚ್ಚಾಗಿದೆ ಎನ್ನುತ್ತಾರೆ ವಿನ: ತಮಗೆ ಇದರಿಂದ ಸಾಕಷ್ಟು ಹಣ ಉಳಿತಾಯವಾಗಿ ಅದನ್ನು ಪ್ರಯಾಣಿಕರಿಗೆ ಲಾಭವಾಗುವಂತೆ ಮಾಡುತ್ತೇವೆ ಎಂದು ಯಾವ ಬಸ್ ಅಸೋಸಿಯೇಶನ್ ನವರು ಕೂಡ ಹೇಳುವುದಿಲ್ಲ. ಇನ್ನು ಹಾಲಿಗೆ ಲೀಟರಿಗೆ ಒಂದು ರೂಪಾಯಿ ಹೆಚ್ಚಾದರೆ ಒಂದು ಗ್ಲಾಸ್ ಕಾಫಿಗೆ ಎರಡು ರೂಪಾಯಿ ಹೆಚ್ಚಳ ಮಾಡುವ ಹೋಟೇಲಿನವರು ಇಲ್ಲಿ ಏನಾದರೂ ಕಡಿಮೆ ಮಾಡುತ್ತಾರಾ? ತರಕಾರಿ, ಮಾಂಸ, ಮೊಟ್ಟೆ, ದವಸಧಾನ್ಯಗಳು, ಅಕ್ಕಿ ಸಹಿತ ಏರಿರುವ ಯಾವ ಆಹಾರ ಪದಾರ್ಥದ ಬೆಲೆ ಈಗ ಕಡಿಮೆಯಾಗುತ್ತದೆ ಎಂದು ಹೇಳಿ ನೋಡೋಣ. ಇಲ್ಲ, ಏನಾದರೂ ಉಪಯೋಗವಾಗುವುದಾದರೆ ತನ್ನ ಬೈಕಿಗೆ ನಿತ್ಯ ನೂರು ರೂಪಾಯಿ ಪೆಟ್ರೋಲ್ ಹಾಕಿ ಗಾಡಿ ಓಡಿಸುತ್ತಿದ್ದ ಮಧ್ಯಮ ವರ್ಗದ ಉದ್ಯೋಗಿಗೆ ಎರಡು ದಿನ ಬರುತ್ತಿದ್ದ ಪೆಟ್ರೋಲ್ ಈಗ ಎರಡೂವರೆ ದಿನ ಬರುತ್ತದೆ. ಅಷ್ಟೇ. ಆದರೆ ಇಳಿದ ಪೆಟ್ರೋಲ್, ಡಿಸೀಲ್ ದರ ಜನಸಾಮಾನ್ಯರಿಗೆ ಪ್ರಯೋಜನವಾಗಬೇಕಾದರೆ ಏರಿರುವಾಗ ಏರಿಸಿದವರು ಈಗ ಇಳಿದಾಗಲೂ ಇಳಿಸಬೇಕು.
ಹಾಗಂತ ಇಲ್ಲಿ ಮೋದಿಯವರ ಮುಂದಿರುವ ಸವಾಲು ಕಡಿಮೆಯಾಗಲಿಲ್ಲ. ಇಲ್ಲಿಯ ತನಕ ಬ್ಯಾರಲ್ ಗೆ ದರ ಕಡಿಮೆ ಇತ್ತು. ಕೇಂದ್ರ ಮತ್ತು ರಾಜ್ಯದ ತೆರಿಗೆ ಹೆಚ್ಚಾಗಿತ್ತು. ಅದರಿಂದ ರಾಜಸ್ವ ದಂಡಿಯಾಗಿ ತಿಜೋರಿಗೆ ಹರಿದು ಬರುತ್ತಿತ್ತು. ಅದರಿಂದ ಕೊರೊನಾ ಲಸಿಕೆಯಿಂದ ಹಿಡಿದು ರಕ್ಷಣಾ ವೆಚ್ಚದ ತನಕ ಮೋದಿಯವರು ಪ್ರತಿಯೊಂದಕ್ಕೂ ಹೇರಳವಾದ ಅನುದಾನವನ್ನು ನಿಗದಿಗೊಳಿಸಿದರು. ಈಗ ಎಲ್ಲವೂ ಒಂದು ಹಂತದಲ್ಲಿ ಬಂದು ನಿಂತಿದೆ. ಇನ್ನು ಕೆಲವು ಕಾಲ ಮೋದಿಯವರು ಇದನ್ನು ಸರಿದೂಗಿಸಿಕೊಂಡು ಹೋದರೆ ಸಾಕಾಗುತ್ತದೆ ಎಂದು ಆರ್ಥಿಕ ಸಲಹೆಗಾರರು ಹೇಳಿರಬಹುದಾದರಿಂದ ಈಗ ದರ ಕಡಿಮೆಯಾಗಿದೆ. ಅದಕ್ಕೂ ಉತ್ತರ ಪ್ರದೇಶಕ್ಕೂ ತಾಳೆ ಹಾಕಲು ಸಾಧ್ಯವಿಲ್ಲ. ಯಾಕೆಂದರೆ ನಮ್ಮ ದೇಶದಲ್ಲಿ ಯಾವ ವರ್ಷವೇ ತೆಗೆದುಕೊಳ್ಳಿ. ವರ್ಷದಲ್ಲಿ ಕನಿಷ್ಟ 2 ರಾಜ್ಯಗಳ ಚುನಾವಣೆಗಳು ನಿಗದಿಯಾಗಿಯೇ ಇರುತ್ತವೆ. ಇನ್ನು ಚುನಾವಣೆ ಹತ್ತಿರ ಬರುತ್ತಿದೆ ಎಂದು ಯಾವುದೇ ಸರಕಾರ ಜನರನ್ನು ಭ್ರಮೆಯಲ್ಲಿ ಇಡಲು ಹೀಗೆ ದರ ಕಡಿಮೆ ಮಾಡಲು ಹೋದರೆ ಜನ ಅದನ್ನು ನಂಬುವುದಿಲ್ಲ. ಚುನಾವಣೆಯ ಹೊಸ್ತಿಲಲ್ಲಿ ನೀವು ಏನಾದರೂ ಜನಪರ ಯೋಜನೆ ಜಾರಿಗೆ ತರಲು ಹೊರಟರೆ ಅದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಇನ್ನು ಗೋವಾದಂತಹ ರಾಜ್ಯಗಳಲ್ಲಿ ಈಗಲೇ ಪೆಟ್ರೋಲ್, ಡಿಸೀಲ್ ದರ ಕಡಿಮೆನೆ ಇದೆ.
ಇನ್ನು ಅಂಬಾನಿ, ಅದಾನಿಗಳಿಗಾಗಿ ಮೋದಿ ಹೇಗೆ ಬೇಕಾದರೂ ಹಾಗೆ ನಿಯಮಗಳನ್ನು ಬದಲಿ ಮಾಡುತ್ತಾರೆ ಎಂದು ಕಾಂಗ್ರೆಸ್ ಆಗಾಗ ಆರೋಪ ಮಾಡುತ್ತಿದೆ. ಅಂಬಾನಿ, ಅದಾನಿ ಕಾಂಗ್ರೆಸ್ ಸರಕಾರ ಇರುವಾಗಲೇ ಹುಟ್ಟಿಕೊಂಡವರು. ಅವರೇನು ಮೋದಿ ಬಂದ ನಂತರ ಸಂಸತ್ತನ್ನು ನೋಡಿದವರಲ್ಲ. ಧೀರುಬಾಯಿ ಅಂಬಾನಿಯವರು ಇಂದಿರಾ ಗಾಂಧಿಯವರ ಜೊತೆ ಕುಳಿತು ಕಾಫಿ ಕುಡಿಯುವಷ್ಟು ಪ್ರಭಾವಿಗಳು. ಈಗ ಅವರ ಮಗ ಮೋದಿಯವರ ಜೊತೆ ಚೆನ್ನಾಗಿದ್ದಾರೆ. ಇನ್ನು ಉದ್ಯಮಿಗಳನ್ನು ಕಳ್ಳರಂತೆ ನೋಡಬಾರದು, ಅವರು ಸರಿಯಾಗಿ ತೆರಿಗೆ ಪಾವತಿ ಮಾಡುವುದರಿಂದಲೇ ದೇಶಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಮೋದಿ ಅಂದುಕೊಂಡಿದ್ದಾರೆ. ಅದಕ್ಕಾಗಿ ಉದ್ಯಮಿಗಳಿಗೆ ಬೇಕಾದ ಹಾಗೆ ವ್ಯವಸ್ಥೆ ಮಾಡಿ ದೇಶಕ್ಕೆ ಆದಾಯ ಹರಿದುಬರುವಂತೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಇದ್ದಾಗ ಉದ್ಯಮಿಗಳನ್ನು ವೈಯಕ್ತಿಕವಾಗಿ ಹುರಿದು ಮುಕ್ಕಲಾಗುತ್ತಿತ್ತು. ಈಗ ಉದ್ಯಮಿಗಳಿಗೆ ಬೆಳೆಯಲು, ಉದ್ಯೋಗಾವಕಾಶ ಸೃಷ್ಟಿಸಲು ಮೋದಿ ರತ್ನಗಂಬಳಿ ಹಾಸುತ್ತಿರಬಹುದು. ಹಿಂದೆ ಉದ್ಯಮಿಗಳು ಇಲ್ಲಿನ ಬ್ಯಾಂಕುಗಳನ್ನು ಮುಳುಗಿಸಿ ಓಡಿ ಹೋಗುತ್ತಿದ್ದರು. ಈಗ ಉದ್ಯಮಿಗಳು ಇಲ್ಲಿಯೇ ಉದ್ಯಮ ಪ್ರಾರಂಭಿಸಲು ಹಾತೊರೆಯುತ್ತಾರೆ. ಇದು ಬದಲಾದ ಭಾರತವಾಗಿದೆ. ಕೊನೆಯದಾಗಿ ಭಾಜಪಾ ಆಳ್ವಿಕೆ ಇರುವ ರಾಜ್ಯಗಳಲ್ಲಿ ತಮ್ಮ ಪಾಲಿನ ತಲಾ ಏಳು ರೂಪಾಯಿಗಳನ್ನು ಅಲ್ಲಿನ ಮುಖ್ಯಮಂತ್ರಿಗಳು ಇಳಿಸಿದ್ದಾರೆ. ಈಗ ಕಾಂಗ್ರೆಸ್ ಆಳ್ವಿಕೆ ಇರುವ ರಾಜ್ಯಗಳ ಸರದಿ. ಬಿಜೆಪಿಯವರು ಏಳೇಳು ರೂಪಾಯಿ ಕಡಿಮೆ ಮಾಡಿದ್ದಾರಾ ಹಾಗಾದರೆ ನಾವು ಒಂಭತ್ತು ರೂಪಾಯಿ ಕಡಿಮೆ ಮಾಡುತ್ತೇವೆ ಎಂದು ಮಾಡಿ ತೋರಿಸಲಿ. ನಿಮ್ಮ ಪಕ್ಷಗಳ ಒಳಜಗಳ ಜನರಿಗೆ ಉಪಯೋಗವಾಗಲಿ!
Leave A Reply