ಹೊಸ ಮರಳು ನೀತಿ ಯಾರನ್ನು ಮರುಳು ಮಾಡಲಿದೆ!!
ಹತ್ತು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಅಥವಾ ಹೊಯಿಗೆಗೆ ಅಂತಹ ತೊಂದರೆ ಇರಲಿಲ್ಲ. ಅದೊಂದು ವಿವಾದದ ವಿಷಯವೂ ಆಗಿರಲಿಲ್ಲ. 1500 ಕ್ಕೆ ಎರಡು ಯೂನಿಟ್ ಮರಳು ಸಿಗುತ್ತಿತ್ತು. ನಂತರ ಸಿಆರ್ ಝಡ್ ಮತ್ತು ನಾನ್ ಸಿಆರ್ ಝಡ್ ಎಂದು ಎರಡು ವಿಭಾಗಗಳು ಆದವು. ಮರಳನ್ನು ಎಲ್ಲಿಂದ ತೆಗೆಯಬೇಕು ಎನ್ನುವ ವಿಷಯದಲ್ಲಿ ನಿಯಮಗಳು ಬಂದವು. ಈ ಸರಕಾರದ ನಿಯಮಗಳು ಇವೆಯಲ್ಲ. ಅವು ಒಂದು ಸಲ ಅಲ್ಲಿಂದ ಆದೇಶ ಆಗಿ ಅದು ಅನುಷ್ಟಾನಗೊಳ್ಳಲು ಕನಿಷ್ಟ ಮೂರು ತಿಂಗಳಾದರೂ ಹಿಡಿಯುತ್ತೆ. ಇನ್ನು ನಿಯಮಗಳು ಯಾವುದೇ ಬರಲಿ, ಅದು ದಾಖಲೆಗಳಲ್ಲಿ ಮಾತ್ರ. ಈ ಗಣಿ ಮತ್ತು ಭೂಗರ್ಭ ಇಲಾಖೆಯ ಅಧಿಕಾರಿಗಳೊಂದಿಗೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ವ್ಯವಹಾರ ಚೆನ್ನಾಗಿ ಇಟ್ಟುಕೊಳ್ಳುವ ಮರಳು ಎತ್ತುವವರು ಮತ್ತು ಸಾಗಾಣಿಕೆದಾರರು ಸರಕಾರ ಯಾವ ಆದೇಶವನ್ನೇ ಹೊರಡಿಸಲಿ, ತಲೆಯನ್ನೇ ಕೆಡಿಸಿಕೊಳ್ಳುವುದಿಲ್ಲ. ಇನ್ನು ಯಾವುದೇ ಪಕ್ಷದ ಸರಕಾರವೇ ಬರಲಿ, ಈ ಅಕ್ರಮ ಮರಳು ಸಾಗಾಟದಾರರು ತುಂಬಾ ಯೋಚಿಸುವುದಿಲ್ಲ. ಅವರಿಗೆ ಎಲ್ಲಾ ಪಕ್ಷದ ಮುಖಂಡರೂ ಗೆಳೆಯರೇ ಆಗಿರುತ್ತಾರೆ. ಕಾಂಗ್ರೆಸ್ ಇದ್ದರೂ ಇವರನ್ನೇನೂ ಮಾಡಲು ಆಗುವುದಿಲ್ಲ. ಭಾರತೀಯ ಜನತಾ ಪಾರ್ಟಿಯ ಸರಕಾರ ಇದ್ದರೂ ಹಮ್ ಸಬ್ ಏಕ್ ಹೇ ಎನ್ನುವ ಪಾಲಿಸಿ ಇವರದ್ದು.
ಕೇರಳದಲ್ಲಿ ಮರಳು ಎತ್ತುವುದು ಬ್ಯಾನ್ ಆಗಿದ್ದ ಸಂದರ್ಭ. ಅಲ್ಲಿ ನೇವಲ್ ಡಾಕ್ ನಿರ್ಮಾಣವಾಗಿತ್ತು. ಆಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಲೆಮಾರ್ ಉಸ್ತುವಾರಿ ಸಚಿವರಾಗಿದ್ದರು. ಇಲ್ಲಿಂದ ಜಿಲ್ಲಾಧಿಕಾರಿಗಳ ಮೂಲಕ ವಿಶೇಷ ಅನುಮತಿ ಪತ್ರ ಮಾಡಿಸಿ ರೈಲಿನಲ್ಲಿ ಜಾತ್ರೆಯಂತೆ ಮರಳನ್ನು ರಫ್ತು ಮಾಡಲಾಯಿತು. ಇದೇ ಸಮಯದಲ್ಲಿ ಬೆಂಗಳೂರಿನಲ್ಲಿ ನಿರ್ಮಾಣ ಕಾಮಗಾರಿಗಳ ಬೂಮ್ ಶುರುವಾಗಿತ್ತು. ಅಲ್ಲಿಯೂ ಮರಳಿನ ಸಮಸ್ಯೆ ತಲೆದೋರಿತ್ತು. ಇಲ್ಲಿಂದಲೇ ಮರಳು ಆ ಯಮಗಾತ್ರದ ಲಾರಿಯಲ್ಲಿ ಹೋಗಲು ಶುರುವಾಯಿತು. ಮೇಲಿನವರ ಆರ್ಶೀವಾದ ಇದ್ದರೆ ಯಾವ ಪೊಲೀಸಿನವರು ತಾನೆ ಲಾರಿಯಲ್ಲಿ ಹತ್ತು ಟನ್ ಇದೆಯಾ, ಮೂವತ್ತು ಟನ್ ಇದೆಯಾ ಎಂದು ನೋಡುವಂತಹ ಧೈರ್ಯ ಮಾಡುತ್ತಾನೆ. ಈ ಪ್ರಕಾರವಾಗಿ ಜಿಲ್ಲೆಯ ಮರಳನ್ನು ಅಕ್ಷರಶ: ಲೂಟಿ ಮಾಡಲಾಗಿತ್ತು. ಮರಳು ನಿಧಾನವಾಗಿ ಬಂಗಾರವಾಗಲು ಶುರುವಾದದ್ದೇ ಆವಾಗಿನಿಂದ. ಸಾಮಾನ್ಯವಾಗಿ ಒಬ್ಬರು ಮರಳು ಸಾಗಾಟದಾರರಿಗೆ ದಿನಕ್ಕೆ ಒಂದು ಪರ್ಮಿಟ್ ನಂತೆ ತಿಂಗಳಿಗೆ ಮೂವತ್ತು ಪರ್ಮಿಟ್ ಮಾತ್ರ ಮರಳು ತೆಗೆಯಲು ಅನುಮತಿ ಇರುತ್ತಿತ್ತು. ಆದರೆ ದಾಖಲೆಯನ್ನು ಯಾವ ಅಧಿಕಾರಿ ತಾನೆ ಕಣ್ಣು ಬಿಟ್ಟು ನೋಡುತ್ತಾನೆ. ಆತ ನೋಡುವುದು ಗಾಂಧಿ ನೋಟು ಎಷ್ಟಿದೆ ಎನ್ನುವುದು ಮಾತ್ರ ತಾನೆ. ಹಾಗೆ ತಿಂಗಳಿಗೆ ಮೂವತ್ತು ಪರ್ಮಿಟ್ ಇರುವವರು ಮುನ್ನೂರು ಪರ್ಮಿಟಿನ ಲೋಡ್ ಎತ್ತಿದ್ದರೆ ನದಿಯ ಒಡಲು ಏನಾಗಬೇಡಾ. ಎಲ್ಲಾ ಕಡೆಯಿಂದ ಎತ್ತಿದ್ದ ಮರಳು ನಮ್ಮ ಜಿಲ್ಲೆಯವರಿಗೆ ಸಿಗುತ್ತಿತ್ತಾ ಎಂದು ನೋಡಿದರೆ ದೀಪದ ಕೆಳಗೆ ಕತ್ತಲು ಎನ್ನುವಂತೆ ಊರಿನವರಿಗೆ ಮಾರಿದರೆ ಏನು ಮಹಾ ಸಿಗುವುದು. ರಾಜಧಾನಿಗೆ, ಪಕ್ಕದ ರಾಜ್ಯಕ್ಕೆ ಮಾರಿದರೆ ಕೈತುಂಬಾ ಸಿಗುವುದು ಎಂದು ಗೊತ್ತಿರುವುದರಿಂದ ಇಲ್ಲಿನವರಿಗೆ ಮರಳು ಗಗನಕುಸುಮವಾಯಿತು. ಇದರಿಂದ ನಿಜಕ್ಕೂ ಸಂಕಟಪಟ್ಟಿರುವುದು ಯಾರು ಎಂದರೆ ಅದೇ ಮಧ್ಯಮವರ್ಗದ ಜನ. ಯಾರು ಸರಕಾರಿ ಜಾಗದಲ್ಲಿ ವಾಸಿಸುತ್ತಾ ಕಷ್ಟದಲ್ಲಿ ಹಕ್ಕುಪತ್ರ ಸಿಕ್ಕಿ ಮನೆಕಟ್ಟಲು ಯೋಜನೆ ಹಾಕುತ್ತಿದ್ದ, ಆಶ್ರಯ ಯೋಜನೆಯಲ್ಲಿ ಮನೆ ಕಟ್ಟಬೇಕು ಎಂದು ಲೆಕ್ಕ ಹಾಕುತ್ತಿದ್ದ, ತಂದೆಯ ಪಾಲಿನ ಚಿಕ್ಕ ಜಾಗ ದೊರಕಿ ಸಣ್ಣ ಮನೆಕಟ್ಟಬೇಕೆಂದು ಗುರಿ ಹೊಂದಿದ ಕೆಳ ಮಧ್ಯಮ ವರ್ಗದ ಕುಟುಂಬಗಳು ಈ ಬೆಲೆಯೇರಿಕೆಯಿಂದ ತತ್ತರಿಸಿಹೋಗಿದ್ದರು. ಯಾವಾಗ ಇದೆಲ್ಲ ಜನಾಕ್ರೋಶವಾಗಿ ಪರಿವರ್ತನೆಯಾಯಿತೋ ಜನಪ್ರತಿನಿಧಿಗಳು ಎಚ್ಚರಗೊಂಡರು. ನಿಯಮದಲ್ಲಿ ಬದಲಾವಣೆ ತರಲಾಯಿತು.
ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಮರಳುದಿಬ್ಬವನ್ನು ಗುರುತಿಸಿ ಅಲ್ಲಿಯೇ ಮರಳು ತೆಗೆಯಬೇಕು ಎನ್ನುವ ನಿಯಮದಂತೆ ಗುತ್ತಿಗೆಯನ್ನು ನೀಡಲಾಯಿತು. ಗುತ್ತಿಗೆದಾರರಿಗೆ ಮೂವತ್ತು ಪರ್ಮಿಟ್ ಎಂದು ಇದ್ದರೂ ಅವರು ತೆಗೆಯುವುದಕ್ಕೆ ಲೆಕ್ಕವೇ ಇರುವುದಿಲ್ಲ. ಇದರಿಂದ ಸರಕಾರದ ಬೊಕ್ಕಸಕ್ಕೆ ಬರಬೇಕಾದ ರಾಯಧನ ಕೂಡ ಬರುವುದಿಲ್ಲ. ಈಗ ಹೀಗೆ ಮರಳುದಿಬ್ಬದ ಗುತ್ತಿಗೆಯನ್ನು 80 ಜನರಿಗೆ ನೀಡಲಾಗಿದೆ. ಇಬ್ರಾಹಿಂ ಅವರು ಇಲ್ಲಿ ಡಿಸಿಯಾಗಿದ್ದಾಗ ಕಡ್ಲೆಪುರಿಯಂತೆ 171 ಜನರಿಗೆ ಪರ್ಮಿಟ್ ಹಂಚಿದ್ದರು. ಇದರಲ್ಲಿ ಆಗಿನ ಕಾಂಗ್ರೆಸ್ ಸರಕಾರದ ಘಟಾನುಘಟಿ ನಾಯಕರ ಹಿಂಬಾಲಕರಿಂದ ಹಿಡಿದು ಪತ್ರಕರ್ತರೂ ಇದ್ದರು. ಇನ್ನು ಯಾವುದೇ ಸೇತುವೆಯ ಸಾವಿರ ಮೀಟರ್ ಪರಿಧಿಯಲ್ಲಿ ಮರಳುಗಾರಿಕೆ ಮಾಡುವಂತಿಲ್ಲ ಎನ್ನುವ ನಿಯಮ ಭೂಗರ್ಭ ಇಲಾಖೆಯಲ್ಲಿದೆ. ಆದರೆ ಅದೇ ಇಲಾಖೆಯವರನ್ನು ಚೆನ್ನಾಗಿ ಇಟ್ಟುಕೊಂಡರೆ ಯಾವ ಮೀಟರ್ ಯಾರು ನೋಡುತ್ತಾರೆ. ಅದಕ್ಕೆ ಸಾಕ್ಷಿಯಾಗಿ ಗುರುಪುರದ ಹಿಂದಿನ ಸೇತುವೆಯ ಅಡಿಯಲ್ಲಿ ಮರಳುಗಾರಿಕೆ ಮಾಡಿದ್ದರಿಂದ ಅದು ಜೀವ ಬಿಡುವ ಪರಿಸ್ಥಿತಿ ಉಂಟಾಗಿತ್ತು. ಒಟ್ಟಿನಲ್ಲಿ ಸದ್ಯ ರಾಜ್ಯ ಸರಕಾರ ಹೊಸ ಮರಳು ನೀತಿಯನ್ನು ಜಾರಿಗೆ ತರಲು ಹೊರಟಿದೆ. ಆದರೆ ಬಲ್ಲವರ ಪ್ರಕಾರ ನಿಯಮ ಪತ್ರಿಕೆಯಲ್ಲಿ ಬಂದಷ್ಟು ಸುಲಭ ಇಲ್ಲ. ಲಿಖಿತ ನೋಟಿಫೀಕೆಶನ್ ನೋಡಬೇಕು. ಯಾವ ರೀತಿಯ ನಿಯಮ ಎಷ್ಟು ಫಲಾನುಭವಿಗಳಿಗೆ ಲಾಭ ತರಲಿದೆ ಎಂದು ಗೊತ್ತಾಗಲಿದೆ!
Leave A Reply