21 ವರ್ಷ ಆಗದೇ ಮದುವೆ ಆಗುವಂತಿಲ್ಲ ಎಂದ ತಕ್ಷಣ ಎಷ್ಟೋ ಮಕ್ಕಳು ನಿರಾಳರಾಗಿದ್ದಾರೆ!!
ಮದುವೆ ಎನ್ನುವುದು ಒಬ್ಬ ವ್ಯಕ್ತಿಯ ಜೀವನದ ಪ್ರಮುಖವಾದ ಕಾಲಘಟ್ಟ. ಅದನ್ನು ಗಡಿಬಿಡಿಯಲ್ಲಿ ಮಾಡಲು ಅದೇನೂ ಚನ್ನೆಮಣೆ ಆಟ ಅಲ್ಲ. ಹಿಂದಿನ ಕಾಲದಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿದ್ದವು. ಹುಡುಗಿಗೆ ಜೀವನ ಎಂದರೆ ಏನು ಎಂದು ಸರಿಯಾಗಿ ಗೊತ್ತಾಗುವ ಮೊದಲೇ ಅವಳನ್ನು ತಾಯಿ ಮನೆಯಿಂದ ಮದುವೆ ಮಾಡಿಸಿ ಗಂಡನ ಮನೆಗೆ ಕಳುಹಿಸಲಾಗುತ್ತಿತ್ತು. ಅಲ್ಲಿ ಅವಳು ಒಂದರ ಹಿಂದೆ ಒಂದು ಹೆರಿಗೆಗೆ ಒಳಗಾಗಿ ಒಂದೊಂದು ಮನೆಯಲ್ಲಿ ಎಂಟು ಒಂಭತ್ತು ಮಕ್ಕಳು ಆಗುತ್ತಿದ್ದನ್ನು ನಾವು ಕೇಳಿದ್ದೇವೆ. ನಮ್ಮದೆ ಎಷ್ಟೋ ಕುಟುಂಬಗಳಲ್ಲಿ ದೊಡ್ಡಪ್ಪ, ಚಿಕ್ಕಪ್ಪ ಎಂದು ಅನೇಕ ಕಸಿನ್ ಗಳು ಇರುವುದು ನಮಗೆ ಗೊತ್ತೆ ಇದೆ. ಆಗ ದೊಡ್ಡ ದೊಡ್ಡ ಕುಟುಂಬಗಳು ಸರ್ವೇ ಸಾಮಾನ್ಯವಾಗಿತ್ತು. ಇದರಿಂದ ಹೆಣ್ಣುಮಕ್ಕಳು ಮಾನಸಿಕವಾಗಿ, ದೈಹಿಕವಾಗಿ ಒತ್ತಡವನ್ನು ಅನುಭವಿಸುವಂತಾಗುತ್ತಿತ್ತು. ಆದರೆ ನಂತರ ಮದುವೆಗೆ ವಯಸ್ಸನ್ನು ಸರಕಾರ ನಿಗದಿಪಡಿಸಿತು. ಹುಡುಗಿಗೆ 18 ಮತ್ತು ಹುಡುಗನಿಗೆ 21 ವರ್ಷ ಪ್ರಾಯ ಆಗುವ ತನಕ ಮದುವೆ ಮಾಡಿಸುವಂತಿಲ್ಲ ಎಂದು ನಿಯಮ ತರಲಾಯಿತು. ಇದನ್ನು ಉಲ್ಲಂಘಿಸಿದರೆ ಅಂತವರಿಗೆ ಶಿಕ್ಷೆ ಕೂಡ ಇದೆ. ಆದರೆ ಸರಿಯಾಗಿ ನೋಡಿದರೆ 18 ಎನ್ನುವುದು ಕೂಡ ಒಂದು ಜವಾಬ್ದಾರಿಯನ್ನು ವಹಿಸಿಕೊಳ್ಳುವ ವಯಸ್ಸು ಅಲ್ಲವೇ ಅಲ್ಲ. ಅತ್ತ ಚಿಕ್ಕವರೂ ಅಲ್ಲದ, ಇತ್ತ ದೊಡ್ಡವರೂ ಅಲ್ಲದ ವಯಸ್ಸು ಅದು. ಈ ಸಮಯದಲ್ಲಿ ಬಹಳ ದೊಡ್ಡ ಹೊಣೆ ತೆಗೆದುಕೊಳ್ಳಲು ಮನಸ್ಸು, ದೇಹ ತಯಾರಾಗದೇ ರಾಷ್ಟ್ರದ ಎಷ್ಟೋ ರಾಜ್ಯಗಳ ಮೂಲೆಮೂಲೆಗಳಲ್ಲಿ ಹೆಣ್ಣುಮಕ್ಕಳು ನರಳುತ್ತಿರುತ್ತಾರೆ.
ಆದ್ದರಿಂದ ಅನಿವಾರ್ಯವಾಗಿ ಹೆಣ್ಣುಮಕ್ಕಳು ವಯಸ್ಸನ್ನು 18 ರಿಂದ 21 ವರ್ಷಕ್ಕೆ ಏರಿಸಬೇಕಾಗಿದೆ. ಇಂತಹ ಒಂದು ಹೊಸ ಕಾನೂನು ಅಗತ್ಯ ಇತ್ತು. ಇದರಿಂದ ಹೆಣ್ಣುಮಕ್ಕಳಿಗೆ ಪ್ರಯೋಜನವೇನು? ಮೇಲ್ನೋಟಕ್ಕೆ ಈ ಕಾನೂನಿನಿಂದ ನಗರ ಪ್ರದೇಶದ ಮತ್ತು ಅನುಕೂಲಸ್ಥರ ಮನೆಗಳ ಹೆಣ್ಣುಮಕ್ಕಳಿಗೆ ಅಂತಹ ಬದಲಾವಣೆ ಆಗಲ್ಲ. ಅವರು ಬೇಗ ಮದುವೆ ಆಗಲು ಒಪ್ಪುವುದಿಲ್ಲ ಮತ್ತು ಅವರನ್ನು ಒಪ್ಪಿಸಿ ಮದುವೆ ಮಾಡಿಸಲು ಅವರ ಮನೆಯವರು ಅಷ್ಟು ಸುಲಭವಾಗಿ ಮುಂದೆ ಬರಲ್ಲ. ಇರಲಿ, ಕಲಿಯಲಿ, ಒಂದಿಷ್ಟು ವರ್ಷ ಅವಳ ಇಚ್ಚೆಯಂತೆ ಬದುಕಲಿ ಎನ್ನುವ ಸ್ವಾತಂತ್ರ್ಯ ಕೊಟ್ಟಿರುತ್ತಾರೆ. ಯಾಕೆಂದರೆ ಒಬ್ಬ ಹೆಣ್ಣುಮಗಳ ಕಲಿಯುವಿಕೆ ಅಥವಾ ವಿದ್ಯಾಭ್ಯಾಸ ಮುಗಿಯುವಾಗಲೇ ಕನಿಷ್ಟ 21 ವರ್ಷ ಆಗಿಯೇ ಆಗುತ್ತದೆ. ಆ ನಂತರ ಒಂದೆರಡು ವರ್ಷ ಅವಳು ಉದ್ಯೋಗ ಮಾಡಿ ಅದರಲ್ಲಿ ಸೆಟ್ಲ್ ಆಗಿ ನಂತರ ಆರ್ಥಿಕ ಸ್ವಾವಲಂಬನೆಯ ಜೊತೆಗೆ ಮದುವೆ ಆಗುವ ನಿರ್ಧಾರ ಕೈಗೊಳ್ಳಲು ಕನಿಷ್ಟ 25 ವರ್ಷಗಳಾದರೂ ಆಗಬೇಕು. ಆ ಬಳಿಕ ಗಂಡು ನೋಡಿ ಒಂದೆರಡು ವರ್ಷದೊಳಗೆ ಮದುವೆ ಆದರೆ ಅವಳು ಕೂಡ ಮಾನಸಿಕವಾಗಿ ಮತ್ತು ದೈಹಿಕವಾಗಿ ಪ್ರಬುದ್ಧಳಾಗಿರುತ್ತಾಳೆ. ಕುಟುಂಬವನ್ನು ನಡೆಸಿಕೊಂಡು ಹೋಗುವುದು ಅವಳಿಗೆ ಗೊತ್ತಾಗಿರುತ್ತದೆ. ಆದ್ದರಿಂದಲೇ 21 ಸೂಕ್ತ ವಯಸ್ಸು ಎಂದೇ ಈಗ ನಿಶ್ಚಯವಾಗಿದೆ. ಆದರೆ 18 ಇದ್ರೆ ಏನಾಗುತ್ತದೆ? ಗ್ರಾಮೀಣ ಪ್ರದೇಶದಲ್ಲಿ ಪೋಷಕರು ತಮ್ಮ ಹೆಗಲ ಮೇಲಿನ ಭಾರ ಇಳಿಸಲು ಹೆಣ್ಣುಮಕ್ಕಳಿಗೆ 18 ವರ್ಷ ತುಂಬಿದ ತಕ್ಷಣ ಮದುವೆ ಮಾಡಿಬಿಡುತ್ತಾರೆ. ಹೆಚ್ಚಿನ ಶಿಕ್ಷಣ ಬೇಕಾದರೆ ಮದುವೆಯ ನಂತರ ಬೇಕಾದರೆ ಗಂಡನ ಮನೆಯಲ್ಲಿ ಮಾಡಿಕೊಳ್ಳಲಿ ಎನ್ನುವ ಮನಸ್ಥಿತಿ ಹೆಣ್ಣಿನ ಪೋಷಕರಲ್ಲಿ ಇರುತ್ತದೆ. ಆದರೆ ಇದು ಆಗುತ್ತಾ? ಇಲ್ಲ. ಒಮ್ಮೆ ಮದುವೆಯ ನಂತರ ಹುಡುಗಿ ಗಂಡನ, ಅತ್ತೆ, ಮಾವನ ಸೇವೆ, ಮೈದುನ, ನಾದಿನಿಯ ಚಾಕರಿಯಲ್ಲಿ ಕಳೆದು, ವರ್ಷದೊಳಗೆ ಮಗುವಾದರೆ ಅದರ ಲಾಲನೆ, ಪಾಲನೆಯಲ್ಲಿ ಬದುಕನ್ನು ಮುಗಿಸಿಬಿಡಬೇಕಾಗುತ್ತದೆ.
.ದೇಶದ 60% ಹೆಣ್ಣುಮಕ್ಕಳು ಹೀಗೆ ತಮ್ಮ ಬದುಕನ್ನು ಅರೆಬೆಂದ ಆಸೆಯಲ್ಲಿ ಕಳೆದು ಬಿಡುತ್ತಾರೆ. ವಯಸ್ಸಿನ ಏರಿಕೆಯಿಂದ ಅಂತಹ ಎಲ್ಲಾ ಹೆಣ್ಣುಮಕ್ಕಳು ಒಮ್ಮೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಆದರೆ ಈಗ ಇದಕ್ಕೂ ವಿರೋಧ ಕಂಡುಬರುತ್ತಿದೆ. 21 ವರ್ಷ ತುಂಬಾ ಲೇಟ್ ಆಯಿತು ಎನ್ನುವುದು ಕೆಲವರ ಅಂಬೋಣ. ಯಾಕೆ ಲೇಟು ಎನ್ನುವುದಕ್ಕೆ ಸೂಕ್ತವಾದ ಉತ್ತರ ಇಲ್ಲ. ಇನ್ನು ಈ ಏರಿಕೆ ಯಾವುದೇ ಒಂದು ಧರ್ಮ ಅಥವಾ ಪ್ರಾಂತ್ಯಕ್ಕೆ ಸೀಮಿತವಾಗಿಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತರ ಸಹಿತ ಎಲ್ಲಾ ಧರ್ಮದಲ್ಲಿರುವ ಹೆಣ್ಣುಮಕ್ಕಳಿಗೆ ಇದರ ಲಾಭ ಸಿಗಲಿದೆ. ಇನ್ನು ಹೆಣ್ಣುಮಕ್ಕಳಿಗೂ 18 ತುಂಬಲು ಎರಡು ವರ್ಷಗಳು ಇರುವಾಗಲೇ ಗಂಡು ಹುಡುಕುವ ಪೋಷಕರು ” ಯಾವಾಗ ಮದುವೆ ಆಗ್ತೀಯಾ?” ಎಂದು ಕೇಳುವುದು ಅದಕ್ಕೆ ಹೆಣ್ಣುಮಕ್ಕಳು ಸಪ್ಪೆ ಮುಖ ಹಾಕುವುದು ತಪ್ಪುತ್ತದೆ. ಇನ್ನು ಇದರಿಂದ ಪರೋಕ್ಷವಾಗಿ ಜನಸಂಖ್ಯಾ ನಿಯಂತ್ರಣಕ್ಕೆ ಅಂಕುಶ ಬೀಳುತ್ತದೆ. ಯಾಕೆಂದರೆ ಒಂದು ಹೆಣ್ಣು ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸ್ವಾವಲಂಬಿಯಾಗಿರುತ್ತಾಳೆ. ಇನ್ನೊಂದು ಅವಳಿಗೆ ಮಗು ಹೇರುವುದು ಮಾತ್ರ ಜೀವನದ ಸವಾಲಾಗಿರುವುದಿಲ್ಲ. ಇದರಿಂದ ಜನಸಂಖ್ಯೆ ಕಡಿಮೆಯಾಗುತ್ತದೆ. ಇದು ದೇಶದ ಬೆಳವಣಿಗೆಗೂ ಒಳ್ಳೆಯದು. ಆದರೆ ಕೆಲವರು ಹೀಗೆ ಆದರೆ ಈ ದೇಶ ಮುಂದಿನ ಮೂರ್ನಾಕು ದಶಕಗಳ ಬಳಿಕ ವಯಸ್ಕರ ದೇಶ ಆಗುತ್ತದೆ. ಯುವಜನಸಂಖ್ಯೆ ಕಡಿಮೆಯಾಗುತ್ತದೆ ಎಂದು ಹೇಳುತ್ತಿದ್ದಾರೆ. ಈ ಮೂಲಕ ಆತಂಕ ಹರಡಿಸುವವರು ಇದ್ದಾರೆ. ಆದರೆ ಬೇಗ ಮದುವೆ ಆಗಿ ಮಕ್ಕಳನ್ನು ಹೇರಿದರೆ ಗ್ರಾಮೀಣ ಪ್ರದೇಶದಲ್ಲಿ ಅಪೌಷ್ಟಿಕತೆ, ಮೂಲಭೂತ ಸೌಕರ್ಯಗಳ ಕೊರತೆಯಿಂದ ಪುಟ್ಟ ಮಕ್ಕಳು ನರಳುತ್ತಿರುತ್ತಾರೆ. ಇದನ್ನೆಲ್ಲ ತಪ್ಪಿಸಬೇಕಾದರೆ ಹೆಣ್ಣುಮಕ್ಕಳ ವಯಸ್ಸು ಜಾಸ್ತಿ ಆಗಲೇಬೇಕು. ಆ ನಿಟ್ಟಿನಲ್ಲಿ ಪ್ರಯತ್ನ ಪಟ್ಟಿರುವ ಕೇಂದ್ರ ಸರಕಾರಕ್ಕೆ ಅಭಿನಂದನೆಗಳು..
Leave A Reply