ಎಲ್ಲವೂ ತೆರೆದಿತ್ತು, ಕಟ್ಟುನಿಟ್ಟಿನ ಕರ್ಫ್ಯೂ ಜಾರಿಯಲ್ಲಿತ್ತು!!

ಶನಿವಾರ ಬೆಳಿಗ್ಗೆ ಅನಗತ್ಯವಾಗಿ ಓಡಾಡುತ್ತಿದ್ದ 25 ವಾಹನಗಳನ್ನು ಮಂಗಳೂರು ಪೊಲೀಸರು ಸೀಝ್ ಮಾಡಿದ್ದಾರೆ. ನಂತರ ಕರ್ಫ್ಯೂ ಅವರಿಗೆ ಮರೆತು ಹೋಯಿತಾ ಎನ್ನುವುದೇ ಇವತ್ತಿನ ಸ್ಟೋರಿ. ಕೊನೆಗೂ ಕೆಲವು ತಿಂಗಳ ಬಳಿಕದ ಮೊದಲ ವಿಕೇಂಡ್ ಕರ್ಫ್ಯೂ ಮುಗಿದಿದೆ. ಬೆಂಗಳೂರಿನಲ್ಲಿ ಈ ಕರ್ಫ್ಯೂ ಶಬ್ದಕ್ಕೆ ಒಂದಿಷ್ಟು ಹತ್ತಿರದಲ್ಲಿಯೇ ವಾತಾವರಣ ಇತ್ತು. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಎನ್ನುವ ಶಬ್ದದ ಬದಲಿಗೆ ಬೇರೆ ಏನಾದರೂ ಶಬ್ದ ಇಟ್ಟರೆ ಒಳ್ಳೆಯದಿತ್ತು. ಯಾಕೆಂದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದ್ದನ್ನು ಕರ್ಫ್ಯೂ ಎಂದು ಹೇಳಿದರೆ ಆ ಶಬ್ದಕ್ಕೆ ಇರಬೇಕಾದ ಪ್ರಾಮುಖ್ಯತೆಯೇ ಹೋಗಿಬಿಡುತ್ತದೆ. ಈ ಕೊರೊನಾ ಬರುವ ಮೊದಲು ಕರ್ಫ್ಯೂ ಎನ್ನುವ ಶಬ್ದಕ್ಕೆ ಬಹಳ ದೊಡ್ಡ ಅರ್ಥ ಇತ್ತು. ಜನರಿಗೆ ಆ ಶಬ್ದದ ಬಗ್ಗೆ ತುಂಬಾ ಭಯ ಇತ್ತು. ಕರ್ಫ್ಯೂ ಹಾಕಲಾಗಿದೆ ಎಂದರೆ ಜನರು ಮನೆಯಿಂದ ಹೊರಗೆ ಬರುತ್ತಿರಲಿಲ್ಲ. ಬರುವುದಕ್ಕೆ ಯೋಚಿಸುತ್ತಲೇ ಇರಲಿಲ್ಲ. ಆದರೆ ಈಗ ಕರ್ಫ್ಯೂ ಎನ್ನುವುದು ಬಹಳ ಸಿಲ್ಲಿ ವಿಷಯ ಆಗಿದೆ. ಅಗತ್ಯ ವಸ್ತುಗಳ ಖರೀದಿಗೆ ಹೊರಗೆ ಬರಬಹುದು. ಪಾರ್ಸೆಲ್ ತೆಗೆದುಕೊಳ್ಳಲು ಹೋಟೇಲಿಗೆ ಬರಬಹುದು, ಬೀದಿಬದಿ ವ್ಯಾಪಾರ ಮಾಡಬಹುದು, ತರಕಾರಿ, ಮೀನು, ಮಾಂಸ ಖರೀದಿಗೆ ಬರಬಹುದು, ಒಳಾಂಗಣ ಆದರೆ 100 ಜನರ ಒಳಗೆ ಕಾರ್ಯಕ್ರಮ ಮಾಡಬಹುದು, ರಿಕ್ಷಾ, ಬಸ್ಸು ಓಡಾಡಬಹುದು, ರೆಸಾರ್ಟ್ ಸಹಿತ ಪ್ರವಾಸಿ ತಾಣಗಳಲ್ಲಿ ಕೋವಿಡ್ ನಿಯಮ ಪಾಲಿಸಿ ಬರಬಹುದು ಹೀಗೆ ಹತ್ತರಿಂದ ಹದಿನೈದು ವಿನಾಯಿತಿಗಳನ್ನು ನೀಡಲಾಗಿದೆ. ಕೊನೆಗೆ ಕಟ್ಟುನಿಟ್ಟಿನ ಕರ್ಫ್ಯೂ ಘೋಷಿಸಲಾಗಿದೆ ಎಂದು ಚಿಕ್ಕ ಅಕ್ಷರದಲ್ಲಿ ಬರೆದಿರಲಾಗುತ್ತದೆ.
ಹಾಗಾದರೆ ಕರ್ಫ್ಯೂವಿನ ಅರ್ಥ ಇದೆನಾ? ಆ ಶಬ್ದಕ್ಕಿರುವ ಮರ್ಯಾದೆ ಹೋಗಿದೆಯಾ? ಸರಿ ನೋಡಿದರೆ ಅದಕ್ಕಿರುವ ಘನತೆ ಹೋಗಿ ಎರಡೂವರೆ ವರ್ಷಗಳಾಗಿದೆ. ಆ ಶಬ್ದವೇ ಈಗ ಹಾಸ್ಯಾಸ್ಪದವಾಗಿದೆ. ಹಾಗಾದರೆ ನಿಜಕ್ಕೂ ಏನು ಮಾಡಬೇಕು. ಏನು ಮಾಡಬೇಕು ಎಂದು ಸರಕಾರಕ್ಕೆ ಗೊತ್ತಿಲ್ಲ, ನಾವು ಏನು ಮಾಡುವುದು ಎಂದು ಅಧಿಕಾರಿಗಳು ತಮ್ಮ ಮನಸ್ಸಿನಲ್ಲಿ ಅಂದುಕೊಳ್ಳಬಹುದು. ಹಾಗಂತ ಎಲ್ಲವನ್ನು ಬಂದ್ ಮಾಡಿದರೆ ಅರ್ಜೆಂಟಾಗಿ ತರಕಾರಿ, ಮಾಂಸ, ಮೀನು ಬೇಕಾದರೆ ಏನು ಮಾಡುವುದು ಎಂದು ಯಾರಾದರೂ ಕೇಳಿದರೆ ಉತ್ತರ ಇದೆಯಾ? ಇವತ್ತಿನ ದಿನಗಳಲ್ಲಿ ಬಹುತೇಕರ ಮನೆಯಲ್ಲಿ ಫ್ರಿಡ್ಜ್ ಇದೆ. ಇಲ್ಲದಿದ್ದರೆ ಶುಕ್ರವಾರ ತರಕಾರಿ, ಮೀನು, ಮಾಂಸ ಖರೀದಿಸಿದರೆ ಅದೇನು ಶನಿವಾರ ಬಿಸಾಡಬೇಕಾಗಿರುವುದಿಲ್ಲ. ಇನ್ನು ಒಂದು ದಿನ ಮನೆಯಲ್ಲಿ ಇದ್ದದ್ದನ್ನು ಮಾಡಿ ತಿಂದರೆ ಯಾರೂ ಸಾಯುವುದಿಲ್ಲ. ಹಾಲು ಮತ್ತು ಮೆಡಿಕಲ್ ಬಿಟ್ಟು ಬೇರೆ ಯಾವ ಅಂಗಡಿಗಳು ಓಪನ್ ಇರಬೇಕಾಗಿರುವುದಿಲ್ಲ. ಆದರೂ ಜಿನಸಿ ಅಂಗಡಿಯಿಂದ ಕಟ್ಲೇರಿ ಸ್ಟೋರ್ ತನಕ ಎಲ್ಲವೂ ಒಪನಾಗಿರುತ್ತವೆ. ಹೋಟೇಲುಗಳಲ್ಲಿ ಪಾರ್ಸೆಲ್ ಸಿಗುತ್ತದೆ ಎನ್ನುತ್ತಾರೆ, ಅಲ್ಲಿಯೇ ಪಕ್ಕದಲ್ಲಿ ತುಂಬಾ ಜನ ಗುಂಪುಗುಂಪಾಗಿ ತಿನ್ನುತ್ತಿರುತ್ತಾರೆ. ಅದರ ಬದಲು ಹಿಂದಿನ ದಿನವೇ ಬ್ರೆಡ್ ತಂದು ಇಟ್ಟರೆ ಏನು ತೊಂದರೆ ಇದೆ. ಆಟೋ, ಬಸ್ಸುಗಳು ಅಗತ್ಯ ಇದೆಯಾ? ಜನರು ಎಲ್ಲಿಯೂ ಹೋಗಲು ಇಲ್ಲದಿದ್ದರೆ ಬಸ್ಸು, ಆಟೋ ಯಾಕೆ? ಆದರೂ ಅವು ಇವೆ. ಇಷ್ಟೆಲ್ಲ ತೆರೆದಿಟ್ಟು ಕೊರೊನಾ ಓಡಿಸುವ ಬೃಹತ್ ಪ್ರಯತ್ನ ಇದೆಯಲ್ಲ, ಅದನ್ನು ಜಿಲ್ಲಾಧಿಕಾರಿಗಳು ಯಶಸ್ವಿಯಾಗಿ ಮಾಡಿದ್ದಾರೆ. ಹಾಗಾದರೆ ಎಲ್ಲವನ್ನು ಬಂದ್ ಮಾಡಲು ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಂಡರೆ ಏನಾಗುತ್ತದೆ? ಡೌಟೇ ಇಲ್ಲ. ನಮ್ಮ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ, ವಿಷ ಕೊಟ್ಟು ಸಾಯಿಸಿಬಿಡಿ, ಲೋನ್ ಕಟ್ಟಲು ಇಲ್ವಾ, ಫೀಸ್ ಕಟ್ಟಲು ಇಲ್ವಾ ಎನ್ನುವ ಚರ್ಚೆಗಳು ಶುರುವಾಗುತ್ತವೆ. ಹಾಗಿದ್ದ ಮೇಲೆ ಏನು ಮಾಡುವುದು? ಎಲ್ಲವನ್ನು ಒಪನ್ ಮಾಡಲು ಬಿಟ್ಟು ವಿಕೇಂಡ್ ಕರ್ಫ್ಯೂ ಘೋಷಿಸಿಬಿಡುವುದೇ ಜಿಲ್ಲಾಡಳಿತದ ಮುಂದಿರುವ ಏಕೈಕ ದಾರಿಯಾಗಿದೆ.
ಆ ನಿಟ್ಟಿನಲ್ಲಿ ನೋಡಿದರೆ ಮೊನ್ನೆ ಈಶ್ವರಪ್ಪ ಹೇಳಿದ್ದು ಸರಿಯಾಗಿದೆ. ಬೆಂಗಳೂರಿನಲ್ಲಿ ಕೊರೊನಾ ಸಂಖ್ಯೆ ವಿಪರೀತ ಏರಿದೆ ಎಂದು ಇಡೀ ರಾಜ್ಯಕ್ಕೆ ಏಕರೂಪದ ನಿಯಮಗಳನ್ನು ಜಾರಿಗೆ ತರುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾಕೆಂದರೆ ಬೆಂಗಳೂರಿನಲ್ಲಿ ತುಂಬಾ ಕಠಿಣವಾಗಿ ನಿಯಮಗಳು ಬೇಕು. ಅದರಲ್ಲಿ ತಪ್ಪಿಲ್ಲ. ಆದರೆ ಎಲ್ಲಾ ಜಿಲ್ಲೆಗಳಲ್ಲಿ ಅಂತಹ ಪರಿಸ್ಥಿತಿ ಇಲ್ಲ. ಅಲ್ಲೆಲ್ಲ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ತಮಗೆ ಹೇಗೆ ಸರಿ ಅನಿಸುತ್ತದೆಯೋ ಹಾಗೆ ಮಾಡಬೇಕು. ಯಾಕೆಂದರೆ ಈಗ ಮಂಗಳೂರಿನ ವಿಷಯವೇ ತೆಗೆದುಕೊಳ್ಳಿ. ಬಟ್ಟೆ, ಚಪ್ಪಲಿ, ಬಂಗಾರ, ಹಾರ್ಡ್ ವೇರ್, ಸಿಮೆಂಟ್, ಕಬ್ಬಿಣ, ಪೇಂಟ್, ಫ್ಯಾನ್ಸಿ ಇಂತಹ ಅಂಗಡಿಗಳನ್ನು ಮಾತ್ರ ಬಂದ್ ಮಾಡಿ ಉಳಿದ ಎಲ್ಲವನ್ನು ತೆರೆದರೆ ಏನು ಪ್ರಯೋಜನ. ವೈನ್ ಶಾಪ್, ಬಾರ್ ಬಂದ್ ಇವೆ. ಅದು ಸರಕಾರದ ಮುಖ್ಯ ಆದಾಯ. ಇನ್ನು ಕೈಗಾರಿಕೆ, ಕಟ್ಟಡ ನಿರ್ಮಾಣಗಳನ್ನು ಕಡಿಮೆ ಜನರನ್ನು ಇಟ್ಟು ಕೆಲಸ ಮುಂದುವರೆಸಬಹುದು ಎಂದು ಹೇಳಲಾಗಿದೆ. ಆದರೆ ಕಟ್ಟಡ ನಿರ್ಮಾಣಕ್ಕೆ, ಕೈಗಾರಿಕಾ ಘಟಕಗಳಿಗೆ ಬೇಕಾದ ವಸ್ತುಗಳನ್ನು ಮಾರುವ ಅಂಗಡಿಗಳನ್ನು ಮುಚ್ಚಲಾಗಿದೆ. ಒಂದು ವಸತಿ ಸಮುಚ್ಚಯದಲ್ಲಿ ಅಕ್ಕಪಕ್ಕದ ಮನೆಯವರಲ್ಲಿ ಒಬ್ಬನಿಗೆ ತರಕಾರಿ ವ್ಯಾಪಾರ, ಇನ್ನೊಬ್ಬನಿಗೆ ಬಟ್ಟೆಯ ಅಂಗಡಿ ಆದರೆ ಅವರ ನಡುವೆನೆ ಒಂದು ರೀತಿಯ ಶತ್ರುತ್ವ ಬೆಳೆಯಲು ಈ ಕಫ್ಯರ್ೂ ನಾಟಕವೇ ಸಾಕು. ಒಬ್ಬ ಫುಲ್ ಬ್ಯುಸಿ. ಇನ್ನೊಬ್ಬ ಖಾಲಿ ಖಾಲಿ. ಹೀಗೆ ಮಾಡುವ ಬದಲಿಗೆ ಎಲ್ಲವನ್ನು ಏಕರೂಪವಾಗಿ ನೋಡುವ ಮೂಲಕ ಎಲ್ಲರೂ ಬದುಕಬೇಕು ಎನ್ನುವ ಸಿದ್ಧಾಂತ ಅನುಸರಿಸೋಣ. ಒಂದು ವೇಳೆ ಆಗದಿದ್ದರೆ ಎಲ್ಲವನ್ನು ಬಂದ್ ಮಾಡಿ ನಿಜವಾದಕರ್ಫ್ಯೂ ಮಾಡೋಣ. ಕಟ್ಟುನಿಟ್ಟು ಮಾಡಿದರೆ ಪ್ರತಿಭಟನೆ, ಲೂಸ್ ಆಗಿಬಿಟ್ಟರೆ ಕೊರೊನಾ ಸೋಂಕಿತರ ಸಂಖ್ಯೆ 500. ಯಾವುದನ್ನು ಆಯ್ದುಕೊಳ್ಳುವುದು ನಮಗೆ ಬಿಟ್ಟಿದ್ದು!
Leave A Reply