ಹಿಜಾಬಿಗೆ ಹಟ ಮಾಡುವುದು ಎಂದರೆ ತಾನು ಬೆಳೆಯಲ್ಲ ಎಂದು ನಿಶ್ಚಯಿಸಿದಂತೆ!!
ಯಾವುದೇ ಒಂದು ವಿಷಯವನ್ನು ಚಿಂಗಂ ತರಹ ಎಳೆಯಲೇಬಾರದು. ಆರಂಭದಲ್ಲಿ ಒಂದಷ್ಟು ರಸ ಇರುತ್ತದೆ. ನಂತರ ಬರಿ ಸಪ್ಪೆ. ಉಡುಪಿಯ ಸರಕಾರಿ ಮಹಿಳಾ ಕಾಲೇಜಿನಲ್ಲಿ ನಾವು ಹಿಜಾಬ್ ಧರಿಸಿಯೇ ಪಾಠ ಕೇಳುತ್ತೇವೆ ಎಂದು ಹಟಕ್ಕೆ ಕುಳಿತಿರುವ ಐದಾರು ಹೆಣ್ಣುಮಕ್ಕಳು ತಾವೇನೋ ದೊಡ್ಡ ಧಾರ್ಮಿಕ ರಕ್ಷಕರು ಎಂದು ಅಂದುಕೊಂಡಿರಬಹುದು. ತಮ್ಮ ದೃಢ ನಿಲುವಿನಿಂದ “ಅಲ್ಲಾ” ಖುಷಿಯಾಗಬಹುದು ಎಂದು ಅಂದುಕೊಂಡಿರಬಹುದು. ಆದರೆ ಅವರು ಮೇಲ್ನೋಟಕ್ಕೆ ತಮ್ಮದೇ ಮತದ ಮುಂದಿನ ಪೀಳಿಗೆಯನ್ನು ಧರ್ಮದ ಅಮಲಿನಲ್ಲಿ ಹಾಕಲು ದಾರಿ ಮಾಡಿಕೊಡುತ್ತಿದ್ದಾರೆ. ಅಷ್ಟಕ್ಕೂ ಹಿಜಾಬ್ ಅಂದರೆ ಏನು? ತಮ್ಮ ಮುಖದ ಚರ್ಯೆಯನ್ನು ಮುಚ್ಚಿಕೊಳ್ಳುವುದು. ಯಾವುದಾದರೂ ಪರ ಪುರುಷ ಅದನ್ನು ನೋಡದಂತೆ ತಡೆಯುವುದು. ಹಾಗಾದರೆ ಮುಸ್ಲಿಮರ ಮುಂದಿನ ಸಂತತಿಯ ಹೆಣ್ಣುಮಕ್ಕಳು ತಾವು ಬೆಳೆಯುವುದೇ ಇಲ್ಲ ಎನ್ನುವುದನ್ನು ನಿಶ್ಚಯಿಸಿಬಿಟ್ಟಿದ್ದಾರಾ? ಯಾಕೆಂದರೆ ಮಹಿಳಾ ಕಾಲೇಜಿನಲ್ಲಿಯೇ ಈ ರೀತಿ ಇವರು ವರ್ತಿಸಿದರೆ ಮುಂದೆ ಇವರ ಎದುರು ಬ್ರಹ್ಮಾಂಡ ಬದುಕು ಬಾಕಿ ಇದೆ. ಒಂದು ವೇಳೆ ಕಲಿತ ತಕ್ಷಣ ಮದುವೆಯಾಗಿ ನಾಲ್ಕು ಮಕ್ಕಳನ್ನು ಹೆತ್ತು ನಾಲ್ಕು ಗೋಡೆಯ ಮಧ್ಯದಲ್ಲಿ ಜೀವನ ಕಳೆಯುತ್ತೇನೆ ಎಂದಾದರೆ ಅದು ಓಕೆ. ಆದರೆ ವಿಜ್ಞಾನ ತೆಗೆದುಕೊಂಡು ತಾನು ವೈದ್ಯೆಯೋ, ಇಂಜಿನಿಯರೋ ಆಗಬೇಕೆಂದು ಹೊರಟವರು ತರಗತಿಯೊಳಗೆ ಹಿಜಾಬ್ ಇಲ್ಲದೇ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ನಿರ್ಧರಿಸಿಬಿಟ್ಟರೆ ಅವಳು ಯಾವ ಸಂದೇಶವನ್ನು ಕೊಡಲು ಹೊರಟಿದ್ದಾಳೆ. ಹಾಗಾದರೆ ತರಗತಿಯಲ್ಲಿ ಎಲ್ಲಾ ಮಕ್ಕಳು ಸಮವಸ್ತ್ರವನ್ನೇ ಧರಿಸಿ ಬರಬೇಕು ಎಂದು ಯಾಕೆ ನಿರ್ಣಯ ಮಾಡಲಾಗುತ್ತದೆ, ಯಾಕೆಂದರೆ ಬಡವ, ಬಲ್ಲಿದ ಎನ್ನುವ ತಾರತಮ್ಯ ಇರಬಾರದು ಎನ್ನುವ ಕಾರಣಕ್ಕೆ. ಆದರೆ ಇದನ್ನು ಕಟ್ಟುನಿಟ್ಟಾಗಿ ಮೊದಲಿಗೆ ಜಾರಿಗೆ ತಂದದ್ದು ಖಾಸಗಿ ಶಾಲೆಯವರು. ಆರಂಭದಲ್ಲಿ ಇದು ಸರಕಾರಿ ಶಾಲೆಗಳಲ್ಲಿ ಇರಲಿಲ್ಲ. ಕಾಲೇಜುಗಳಲ್ಲಂತೂ ಸಮವಸ್ತ್ರದ ವಿಷಯವೇ ಇರಲಿಲ್ಲ. ಆದರೆ ಶಾಲೆ, ಕಾಲೇಜಿನ ಹೆಸರಿನಲ್ಲಿ ಸ್ವಚ್ಚಾಚಾರದ ಬದುಕಿಗೆ ಇಳಿಯುತ್ತಿದ್ದಾರೆ ಎಂದು ಶಿಕ್ಷಕ ವರ್ಗಕ್ಕೆ ಅನುಮಾನ ಬಂತೋ ಕನಿಷ್ಟ ಸಮವಸ್ತ್ರವನ್ನು ಧರಿಸಿ ಬರಲು ಸೂಚಿಸಿದರೆ ಅಂತಹ ವಿದ್ಯಾರ್ಥಿಗಳು ಶಾಲೆ, ಕಾಲೇಜು ಬಿಟ್ಟು ಎಲ್ಲಿ ಹೋದರೂ ಕಣ್ಣಿಗೆ ಬೀಳುತ್ತಾರೆ ಮತ್ತು ಸಹಜವಾಗಿ ಯಾವ ಶಿಕ್ಷಣ ಸಂಸ್ಥೆಯವರು ಎಂದು ಗೊತ್ತಾಗುತ್ತದೆ ಎಂದು ಆಡಳಿತ ಮಂಡಳಿಗಳಿಗೆ ಗೊತ್ತಾಯಿತು. ಆ ಬಳಿಕ ಬಡವ, ಶ್ರೀಮಂತ ಭೇದಭಾವ ಹೇಗೂ ನಾಶವಾಯಿತು, ಅದರೊಂದಿಗೆ ಮಕ್ಕಳು ಎಲ್ಲೆಲ್ಲಿಯೋ ಅನಾವಶ್ಯಕವಾಗಿ ಸುತ್ತಾಡುವುದಕ್ಕೂ ಕಡಿವಾಣ ಬಿತ್ತು. ಹಾಗಂತ ತೀರಾ ಹಿಜಾಬ್ ಧರಿಸಿಯೇ ಕ್ಲಾಸಿನೊಳಗೆ ಕುಳಿತುಕೊಳ್ಳುತ್ತೇವೆ ಎಂದು ಹೇಳುವುದು ತಮ್ಮ ಧರ್ಮದಲ್ಲಿ ಬೋಧಿಸಿದೆ ಎನ್ನುವುದಕ್ಕಿಂತ ತಾವಾಗಿಯೇ ತಮ್ಮ ಮೌಲ್ಯವನ್ನು ಇಳಿಸುತ್ತವೆ ಎಂದು ಒಪ್ಪಿಕೊಂಡಂತೆ.
ಇನ್ನು ಎಷ್ಟೋ ಹೆಣ್ಣುಮಕ್ಕಳು ಕ್ರೈಸ್ತ ಶಾಲೆಗಳಿಗೆ ಹೋಗುವಾಗ ಅಲ್ಲಿ ಕುಂಕುಮ, ಬಳೆ, ಹೂ ಮುಡಿಯಬಾರದು ಎಂದು ಹೇಳಿರುವುದನ್ನು ಅಲ್ಲಿ ಕಲಿಯುವಷ್ಟು ಸಮಯವೂ ಚಾಚು ತಪ್ಪದೇ ಪಾಲಿಸಿದ್ದಾರೆ. ಹಾಗಂತ ಎಲ್ಲಿಯೂ ನಾನು ದೊಡ್ಡ ಬಿಂದಿ ಇಟ್ಟು, ಮೊಳದಷ್ಟು ಹೂ ಮುಡಿದು, ಕೈ ತುಂಬಾ ಬಳೆ ಧರಿಸಿಯೇ ಕ್ಲಾಸಿಗೆ ಬರುತ್ತೇನೆ ಎಂದು ಯಾವ ಹಿಂದೂ ಹೆಣ್ಣುಮಗಳು ಕೂಡ ಕ್ರೈಸ್ತ ಶಾಲೆಗಳಲ್ಲಿ ಹಟಕ್ಕೆ ಕುಳಿತಿಲ್ಲ. ಹಾಗಾದ್ರೆ ಅದು ನಮ್ಮ ಸಂಸ್ಕೃತಿ ಅಲ್ವಾ? ಅದು ನಮ್ಮ ಸಂಸ್ಕೃತಿ. ಅದರಲ್ಲಿ ಎರಡು ಮಾತಿಲ್ಲ. ಆದರೆ ನಾವು ಸಂಸ್ಕೃತಿಯನ್ನು ಮನೆಯಿಂದ ಕಾಲೇಜಿನ ಗೇಟು ದಾಟಿ ಕ್ಲಾಸ್ ರೂಂನೊಳಗೆ ತಂದಿಲ್ಲ. ಹಾಗಂತ ಕುಂಕುಮ, ಹೂ, ಬಳೆ ತೊಡಬೇಡಿ ಎಂದು ಕ್ರೈಸ್ತ ಸಂಸ್ಥೆಗಳು ಆದೇಶ ನೀಡಿರುವ ಹಿಂದೆ ಯಾವ ಉದ್ದೇಶ ಇತ್ತೋ. ಆದರೆ ನಮ್ಮ ಹೆಣ್ಣುಮಕ್ಕಳು ಮತಾಂತರ ಆಗಿಲ್ಲ. ಆವತ್ತು ಹೂ, ಕುಂಕುಮಕ್ಕೆ ಅವಕಾಶ ಸಿಗದೇ ಇದ್ದ ಕೋಪಕ್ಕೋ ಏನೋ ನಂತರ ಅದನ್ನು ಹೆಚ್ಚಾಗಿ ಒಪ್ಪಿಕೊಂಡು ಮಯ್ಯಿ ತೀರಿಸಿದ್ದಾರೆ. ತರಗತಿಯೊಳಗೆ ಹಿಜಾಬ್ ಧರಿಸದೇ ಇದ್ದರೆ ಆ ಹೆಣ್ಣು ಮಕ್ಕಳು ಕಳೆದುಕೊಳ್ಳುವುದು ಏನಿಲ್ಲ. ಅಷ್ಟಕ್ಕೂ ಇದೇನು ತಾಲಿಬಾನ್ ಆಡಳಿತವಲ್ಲ. ಒಂದು ವೇಳೆ ಹಿಜಾಬ್ ಧರಿಸಿಯೇ ಪಾಠ ಕೇಳುತ್ತಿರಿ ಎಂದಾದರೆ ಅಂತಹ ನಿಯಮ ಒಪ್ಪುವ ಕಾಲೇಜುಗಳನ್ನೇ ಆಯ್ಕೆ ಮಾಡಿ. ಈ ವಿಷಯದಲ್ಲಿ ಪೋಷಕರು ಕೂಡ ತಮ್ಮ ಮಕ್ಕಳಿಗೆ ಬುದ್ಧಿ ಹೇಳಬೇಕು. ಇಲ್ಲಿ ಧರ್ಮದ ರಕ್ಷಣೆ ಮಾಡುವಂತದ್ದು ಏನೂ ಇಲ್ಲ. ಚೆನ್ನಾಗಿ ಕಲಿತು ಬನ್ನಿ ಎಂದು ಕಳುಹಿಸಬೇಕೆ ವಿನ: ಹೋದ ಕಡೆ ಎಲ್ಲ ನಿಯಮ ವಿರೋಧಿಸಿ ಎಂದು ಹೇಳಿ ಕಳುಹಿಸಬಾರದು. ಇವರು ಹಿಜಾಬ್ ಧರಿಸಿದರೆ ನಾವು ಕೇಸರಿ ಶಾಲು ಧರಿಸುತ್ತೇವೆ ಎಂದು ಕೇಸರಿ ಸಂಘಟನೆಗಳು ಹೇಳಿದ್ದಕ್ಕೆ ಕೇಸರಿ ಹಿಂದಿನಿಂದ ಇಲ್ಲ, ಹಿಜಾಬ್ ಪುರಾತನವಾದದು ಎನ್ನುವುದು ಮುಸ್ಲಿಮರಲ್ಲಿ ಕೆಲವರ ವಾದ. ವಿಷಯ ಏನೆಂದರೆ ಈ ದೇಶದಲ್ಲಿ ಸನಾತನ ಸಂಸ್ಕೃತಿಯೇ ಪ್ರಾಚೀನವಾದುದು. ಅದರಲ್ಲಿ ಕೇಸರಿ ಅಗ್ರಮಾನ್ಯವಾಗಿತ್ತು. ಹಿಜಾಬ್ ಏನಿದ್ದರೂ ಮೊಗಲರು ಬಂದ ನಂತರ ಇಲ್ಲಿ ಬಂದಿರುವುದು. ಆಗ ಬುರ್ಖಾ ಅನಿವಾರ್ಯ ಇದ್ದಿರಬಹುದು. ಈಗ ಕಾಲ ಬದಲಾಗಿದೆ. ಮುಸ್ಲಿಂ ಹೆಣ್ಣುಮಕ್ಕಳು ಕೂಡ ಬುರ್ಖಾ ಧರಿಸದೇ ಓಡಾಡುವ ವಾತಾವರಣ ಖಂಡಿತವಾಗಿಯೂ ಈ ದೇಶದಲ್ಲಿ ಇದೆ. ಅಷ್ಟಿದ್ದೂ ಹಿಜಾಬ್ ಪುರಾತನವಾದದು ಎಂದು ನೀವು ಹೇಳಿದರೆ ನೀವು ಮೊಗಲರ ನೇರ ಸಂತಾನ ಎಂದೇ ಅಂದುಕೊಳ್ಳಬೇಕಾಗುತ್ತದೆ!
Leave A Reply