ವಿಮಾನ,ರೈಲು,ಬಂದರು ಇರುವ ಊರಿನಲ್ಲಿ ಬಸ್ ನಿಲ್ದಾಣವೇ ಇಲ್ಲ!
ಮಾತನಾಡಿದರೆ ಮಂಗಳೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇದೆ ಎಂದು ಹೆಮ್ಮೆಯಿಂದ ಹೇಳುತ್ತೇವೆ. ಕೇಳಿದ್ರೆ ಇಲ್ಲಿಂದ ಎಲ್ಲಿ ಬೇಕಾದರೂ ರೈಲಿನ ವ್ಯವಸ್ಥೆ ಇದೆ ಎನ್ನುತ್ತೇವೆ. ಕೆಲವರಂತೂ ಅತ್ಯುತ್ತಮ ಬಂದರು ನಗರಿ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ. ವಿಮಾನ, ರೈಲು, ಹಡಗು ಮತ್ತು ರಸ್ತೆ ಸಂಪರ್ಕ ಇರುವ ದೇಶದ ಬೆರಳೆಣಿಕೆಯ ಊರುಗಳಲ್ಲಿ ಮಂಗಳೂರು ಒಂದು. ಹಾಗಂತ ಇದು ಓದಲು ಚೆಂದ, ಕೇಳಲು ಚೆಂದ. ಅಪ್ಪಿತಪ್ಪಿ ಯಾರಾದರೂ ನಿಮ್ಮ ಊರಲ್ಲಿರುವ ಬಸ್ ಸ್ಟ್ಯಾಂಡ್ ನೋಡಬೇಕು ಎಂದು ಕೇಳಿದರೆ ಮಾತ್ರ ನಮ್ಮ ಮುಖ ತೋರಿಸಿಕೊಳ್ಳಲು ಆಗದಂತಹ ಪರಿಸ್ಥಿತಿ ಇದೆ. 1996 ರ ನಂತರ ಇದು ಎಷ್ಟನೇ ನಗರಾಭಿವೃದ್ಧಿ ಸಚಿವರೋ ದೇವರಿಗೆ ಗೊತ್ತು. ಎಷ್ಟು ಜಿಲ್ಲಾ ಉಸ್ತುವಾರಿ ಸಚಿವರು ಬಂದು ಹೋದರೋ ಭಗವಂತನಿಗೆ ಗೊತ್ತು, ಎಷ್ಟು ಜಿಲ್ಲಾಧಿಕಾರಿಗಳು ಬಂದು ನೋಡಿ ಹೋದರೋ ಡಿಸಿ ಆಫೀಸಿನಲ್ಲಿರುವ ಬೋರ್ಡಿಗೆ ಗೊತ್ತು ಬಿಟ್ಟರೆ ಮಂಗಳೂರಿಗೆ ಒಂದು ಸುಸಜ್ಜಿತ ಬಸ್ ನಿಲ್ದಾಣ ಇಲ್ಲ ಎಂದು ಹೊರಗಿನವರಿಗೆ ಗೊತ್ತಿರಲಿಕ್ಕಿಲ್ಲ. ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ವಿಸ್ತರಿಸಲು ನಾವು ತೆಗೆದುಕೊಂಡ ಶ್ರಮ ಬಸ್ ಸ್ಟ್ಯಾಂಡಿಗೆ ತೋರಿಸಿಲ್ಲ. ಬಂದರಿನಲ್ಲಿ ಅಂತರಾಷ್ಟ್ರೀಯ ಕಾರ್ಗೋ ಬಂದಾಗ ಹೆಮ್ಮೆ ಪಟ್ಟ ನಮಗೆ ಬಸ್ ನಿಲ್ದಾಣ ನೆನಪಾಗಿಲ್ಲ. ರೈಲ್ವೆ ನಿಲ್ದಾಣದಲ್ಲಿ ಎಕ್ಸಿಲೇಟರ್, ಲಿಫ್ಟ್ ಹಾಕಲು ವಹಿಸಿದ ಕಾಳಜಿ ಬಸ್ ಸ್ಟ್ಯಾಂಡಿನಲ್ಲಿ ಹಾಕಿಲ್ಲ. ಯಾಕೆಂದರೆ ನಾವು ಬಸ್ ಸ್ಟ್ಯಾಂಡ್ ವಿಷಯದಲ್ಲಿ ನಾವು ಆವತ್ತಿನಿಂದ ಇವತ್ತಿನ ತನಕ ಅಂಗೈಯಲ್ಲಿ ಅರಮನೆ ನೋಡುತ್ತಿದ್ದೇವೆ ಹೊರತು ಅದನ್ನು ಬಸ್ ನಿಲ್ದಾಣವಾಗಿ ನೋಡಲೇ ಇಲ್ಲ. ಈಗ 440 ಕೋಟಿಯ ಪ್ರಾಜೆಕ್ಟ್ ಪಿಪಿಪಿ ಮಾದರಿಯಲ್ಲಿ ಮಾಡಲು ಹೋಗಿ ಯಾರೂ ಟೆಂಡರ್ ತೆಗೆದುಕೊಳ್ಳಲು ಮುಂದೆ ಬರದೇ ಇದ್ದಾಗ ಕೊನೆಗೆ ಅದನ್ನು ನೂರು ಕೋಟಿಯಲ್ಲಿ ಮಾಡುವ ಪ್ರಸ್ತಾಪಕ್ಕೆ ರಾಜ್ಯ ಸರಕಾರ ಮುಂದಾಗಿದೆ. ಅದು ಇನ್ನು ಯಾವ ಕಾಲದಲ್ಲಿ ಆಗುತ್ತೋ ಎನ್ನುವುದನ್ನು ಆ ತಾಯಿ ಮಂಗಳಾದೇವಿಯೇ ಹೇಳಬೇಕು. ನಮ್ಮ ಜನಪ್ರತಿನಿಧಿಗಳಿಗೆ ಯಾವುದಕ್ಕೆ ಎಷ್ಟು ಮತ್ತು ಹೇಗೆ ಖರ್ಚು ಮಾಡಬೇಕು ಎಂದು ಗೊತ್ತಿಲ್ಲದೇ ಇರುವುದರಿಂದ ಮತ್ತು ಇವರು ತಮಗೆ ಖುಷಿ ಬಂದಂತೆ ಮಾಡುವುದರಿಂದ ಎಲ್ಲಿ ಖರ್ಚಾಗಬೇಕಾದ ಹಣ ಎಲ್ಲಿಯೋ ಪೋಲಾಗುತ್ತಿದೆ. ಬೇಕಾದರೆ ಒಂದು ಚಿಕ್ಕ ಉದಾಹರಣೆ ಕೊಡುತ್ತೇನೆ.
ಕೊಡಿಯಾಲ್ ಬೈಲಿನಲ್ಲಿ ನವಭಾರತ ವೃತ್ತ ಇದೆ. ಅಲ್ಲಿ ರಾಮಭವನ ಕಾಂಪ್ಲೆಕ್ಸಿನ ಒಂದು ಪಾಶ್ವದಲ್ಲಿ ಕಾಂಕ್ರೀಟ್ ಹಾಕುತ್ತಿದ್ದಾರೆ. ಅಲ್ಲಿ ಮೊದಲು ಕೂಡ ಕಾಂಕ್ರೀಟ್ ಇತ್ತು. ಅದು ಚೆನ್ನಾಗಿಯೇ ಇತ್ತು. ಚೆನ್ನಾಗಿರುವ ಪ್ರದೇಶದಲ್ಲಿ ಮತ್ತೆ ಚೆನ್ನಾಗಿರುವುದನ್ನು ಮಾಡುವ ಉದ್ದೇಶ ಏನು ಎಂದು ಗೊತ್ತಾಗುವುದಿಲ್ಲ. ಇಂತಹುದೇ ಐಡಿಯಾಗಳು ಎಲ್ಲ ಕಡೆ ಜಾರಿಯಲ್ಲಿವೆ. ಈ ಚರಂಡಿ ಅಥವಾ ತೋಡು ಎಂದು ಏನು ನಾವು ಕರೆಯುತ್ತೇವೆ, ಅದರ ಮೇಲೆ ಸಿಂಗಲ್ ಕಾಂಕ್ರೀಟ್ ಸ್ಲ್ಯಾಬ್ ತರಹದ್ದು ಹಾಕಿದ್ದಾರೆ. ಅಲ್ಲಲ್ಲಿ ಅದರ ಮೇಲೆ ರಂಧ್ರ ಇರುವುದರಿಂದ ಮಳೆಯ ನೀರು ಅದರ ಮೂಲಕ ತೋಡು ಸೇರುತ್ತದೆ. ತೋಡಿನಲ್ಲಿ ಹೂಳು ತುಂಬಿದರೆ ಅದನ್ನು ಮೇಲೆ ಎತ್ತುವುದು ಕಷ್ಟ. ಫೈಬರ್ ತರಹದ್ದು ಹಾಕಲಾಗುತ್ತಿದೆ. ಅದರಿಂದಲೂ ನಮ್ಮ ತೆರಿಗೆಯ ಹಣ ಪೋಲಾಗುತ್ತಿದೆ ಬಿಟ್ಟರೆ ಬೇರೆ ಏನೂ ಇಲ್ಲ. ಅದರ ಬದಲು ಇವರು ಏನು ಮಾಡಬಹುದು. ಮಂಗಳೂರಿನಲ್ಲಿ ಅನೇಕ ಟ್ರಾಫಿಕ್ ಸಿಗ್ನಲ್ ಗಳು ಅಪ್ ಗ್ರೇಡ್ ಆಗಿಲ್ಲ. ಈಗಲೂ ಹಳೆಯ ಮಾದರಿಯಲ್ಲಿಯೇ ಇವೆ. ಅದನ್ನು ಉನ್ನತೀಕರಿಸುವ ಕೆಲಸ ಆಗಬೇಕು. ಆಗ ಟ್ರಾಫಿಕ್ ಜಾಮ್ ಆಗುವುದನ್ನು ತಪ್ಪಿಸಬಹುದು. ಇನ್ನು ಒಂದು ಕಡೆ ಇವರು ರಸ್ತೆಯಷ್ಟೇ ಅಗಲದ ಫುಟ್ ಪಾತ್ ತರಹದ್ದು ಮಾಡುತ್ತಿದ್ದಾರೆ. ಇನ್ನು ಕೆಲವು ಕಡೆ ಫುಟ್ ಪಾತ್ ಗಳು ರಸ್ತೆಗೆ ಸರಿಸಮಾನಾಗಿ ಇವೆ. ಇದರಿಂದ ವಾಹನಗಳು ಸೀದಾ ಫುಟ್ ಪಾತ್ ಮೇಲೆ ಹೋಗಿ ನಿಲ್ಲುತ್ತವೆ. ವಾಹನಗಳು ನಿಲ್ಲಿಸಲು ಫುಟ್ ಪಾತ್ ಅಗಲ ಮಾಡಿದ್ದಾ ಎನ್ನುವ ಪ್ರಶ್ನೆ ಈಗ ಉದ್ಭವಿಸುತ್ತಿದೆ.
ಆದ್ದರಿಂದ ರಸ್ತೆ ಕಾಂಕ್ರೀಟಿಕರಣಗೊಳಿಸುವುದು ಮತ್ತು ಉತ್ತಮವಾಗಿರುವ ರಸ್ತೆಯನ್ನೇ ಅಗೆದು ಮತ್ತೆ ಕಾಂಕ್ರೀಟಿಕರಣಗೊಳಿಸುವುದೇ ಸ್ಮಾರ್ಟ್ ಸಿಟಿ ಎಂದು ಪ್ರಧಾನಿ ಮೋದಿಯವರು ಮೊದಲೇ ಹೇಳಿದಿದ್ದರೆ ನಾವು ಸ್ಮಾರ್ಟ್ ಸಿಟಿ ನಮ್ಮ ಊರಿಗೆ ಘೋಷಣೆ ಆದಾಗ ಅಷ್ಟು ಖುಷಿ ಪಡುವ ಅಗತ್ಯ ಇರಲಿಲ್ಲ. ಇವರು ಒಂದು ಕಡೆ ಕಾಂಕ್ರೀಟ್ ರಸ್ತೆ ಮಾಡಿ ಹೋಗುತ್ತಾರೆ. ಕೆಲವು ಸಮಯದ ನಂತರ ಇನ್ನೊಂದು ವಿಭಾಗದವರು ಬಂದು ಅದನ್ನು ಅಗೆದು ಕಾಂಕ್ರೀಟ್ ಡೆಬ್ರಿಸ್ ಅನ್ನು ಅಲ್ಲಿಯೇ ತಿಂಗಳುಗಟ್ಟಲೆ ಬಿಟ್ಟು ಹೋಗುತ್ತಾರೆ. ಅದರಿಂದ ಆ ರಸ್ತೆಯೀಡಿ ಧೂಳಿನ ಮಯ ಆಗುತ್ತದೆ. ನಾವು ರಸ್ತೆ ಪಕ್ಕ ಮನೆ ಇದ್ದವರು ನಿತ್ಯ ಪೈಪಿನ ಮೂಲಕ ನಮ್ಮ ಮನೆಯ ಗೇಟಿನ ಎದುರು ನೀರು ಬಿಟ್ಟು ಧೂಳು ಮನೆಯ ಒಳಗೆ ಬರದಂತೆ ತಡೆಯಬೇಕು. ಇದು ನಮ್ಮ ಕರ್ಮ. ಇದೇ ಸ್ಮಾರ್ಟ್ ಸಿಟಿ ಎಂದು ಮೊದಲೇ ಗೊತ್ತಿದ್ದರೆ ಬೇಡಾ ನಾವು ಈಗ ಹೇಗೆ ಇದ್ದೇವೋ ಅದೇ ಓಕೆ ಎಂದು ಸುಮ್ಮನೆ ಇರುತ್ತಿದ್ದೇವು. ಇವರು ನಮಗೆ ಸ್ಮಾರ್ಟ್ ಸಿಟಿಯ ಹೆಸರಿನಲ್ಲಿ ಅಗತ್ಯವಿಲ್ಲದ ಗಡಿಯಾರದ ಗೋಪುರದಿಂದ ಹಿಡಿದು ಉತ್ತಮ ರಸ್ತೆ ಅಗೆಯುವುದು, ಫುಟ್ ಪಾತ್ ಅಗಲ ಮಾಡಿ ವಾಹನಗಳಿಗೆ ಪಾರ್ಕಿಂಗ್ ಕೊಡುವುದೇ ಸ್ಮಾರ್ಟ್ ಸಿಟಿ ಎಂದು ಮೊದಲೇ ಹೇಳಬಹುದಿತ್ತಲ್ಲ. ಪಾಪ, ಮೋದಿಯವರಾದರೂ ಏನು ಮಾಡಿಯಾರು? ಎಲ್ಲವನ್ನು ಅವರೇ ನೋಡಬೇಕು ಮತ್ತು ಚುನಾವಣೆಗೂ ಗೆಲ್ಲಿಸಲು ಅವರೇ ಬರಬೇಕು ಎಂದು ನಮ್ಮ ಜನಪ್ರತಿನಿಧಿಗಳು ಅಂದುಕೊಂಡಂತೆ ಕಾಣುತ್ತದೆ. ಇಷ್ಟಾದರೂ ನಾವು ಮೋದಿಗೆ ವೋಟ್ ಹಾಕುತ್ತೇವಲ್ಲ, ಮೋದಿ ದೇವರೇ ಇರಬೇಕು!
Leave A Reply