ವಾರ್ಡು ಕಮಿಟಿಗಳೇ, ಸ್ಪೆಶಲ್ ಗ್ಯಾಂಗ್ ಹೆಸರಿನಲ್ಲಿ ಕೋಟಿ ಗುಳುಂ ಮಾಡಲು ಬಿಡಬೇಡಿ!!
ಎರಡೂವರೆ ಕೋಟಿ ರೂಪಾಯಿಗಳನ್ನು ತೆಗೆದಿರಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಈ ಮಳೆಗಾಲವೂ ಕಾರ್ಪೋರೇಟರ್ ಗಳಿಗೆ, ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸಮೃದ್ಧ ಭೋಜನ. ಮಳೆಗಾಲ ಯಾವಾಗ ಬರುತ್ತದೆ ಮತ್ತು ಯಾವಾಗ ತಿನ್ನಲು ಕುಳಿತುಕೊಳ್ಳುವುದು ಎಂದು ಇವರು ಕಾಯುತ್ತ ಕುಳಿತಿರುವಂತಿದೆ. ನಾನು ಈ ದುಂದುವೆಚ್ಚ ಮತ್ತು ಜನರ ತೆರಿಗೆಯ ಹಣ ಹೇಗೆ ಪೋಲಾಗುತ್ತದೆ ಎಂದು ಹಿಂದಿನ ಮಳೆಗಾಲದ ಸಂದರ್ಭದಲ್ಲಿಯೂ ಬರೆದಿದ್ದೆ. ಈ ಕುರಿತು ಸ್ಥಳೀಯ ವಾಹಿನಿಯಲ್ಲಿ ಕೂಡ ಮಾತನಾಡಿದ್ದೆ. ಅಗ ಕೆಲವು ಕಾರ್ಪೋರೇಟರ್ ಗಳಿಗೆ ನನ್ನ ಮೇಲೆ ಕೋಪ ಬಂದಿತ್ತು. ಆದರೆ ಯಾವ ನೈತಿಕತೆ ಇರುವ ಕಾರ್ಪೋರೇಟರ್ ಕೂಡ ನಾನು ಹೇಳಿದ್ದ ವಿಷಯದಲ್ಲಿ ಆತ್ಮಾವಲೋಕನ ಮಾಡಿಲ್ಲ. ಆದದ್ದು ಬರೀ ಆತ್ಮವಂಚನೆ ಮಾತ್ರ. ಇವರು ಈ ಬಾರಿಯ ಪಾಲಿಕೆಯ ಬಜೆಟಿನಲ್ಲಿ ಮತ್ತೆ ಎರಡೂವರೆ ಕೋಟಿ ರೂಪಾಯಿಗಳನ್ನು ಮೀಸಲಿಡುವ ಮೂಲಕ ನಾವು ಕಾಂಗ್ರೆಸ್ಸಿಗಿಂತ ಯಾವುದೇ ಭ್ರಷ್ಟಾಚಾರದಲ್ಲಿ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಒಂದು ಬಜೆಟಿನಲ್ಲಿ ಹಣ ಇಡುವ ಮೊದಲು ಅದರಲ್ಲಿ ಕಾಮಗಾರಿಯ ಹೆಸರು, ಕಾರ್ಯಸೂಚಿ ಬರೆದು ಆ ಹಣ ಯಾವ ಕೆಲಸಕ್ಕೆ ವಿನಿಯೋಗಿಸುತ್ತೀರಿ ಎಂದು ಹೇಳಬೇಕಾಗುತ್ತದೆ.
ಇವರು ದಾಖಲೆಯಲ್ಲಿ ಏನು ಬರೆಯುತ್ತಾರೆ ಎಂದರೆ ಚರಂಡಿಯಲ್ಲಿ ನೀರು ಬ್ಲಾಕ್ ಆದರೆ ಸರಿ ಮಾಡುವುದು, ಚರಂಡಿಯಲ್ಲಿ ಹೂಳು ತುಂಬಿದರೆ ಸರಿ ಮಾಡುವುದು, ರಸ್ತೆಯ ಮೇಲೆ ಮರಗಳು ಗಾಳಿ, ಮಳೆಗೆ ಬಿದ್ದರೆ ತೆಗೆದು ರಸ್ತೆ ಕ್ಲಿಯರ್ ಮಾಡುವುದು ಎಂಬಿತ್ಯಾದಿ ಸುಳ್ಳುಗಳನ್ನು ಬರೆದು ನಮ್ಮ ಕಣ್ಣಿಗೆ ಹೂಳು ತುಂಬುವ ಪ್ರಯತ್ನಮಾಡುತ್ತಾರೆ. ಅಷ್ಟಕ್ಕೂ ಪಾಲಿಕೆಯ ಅರವತ್ತು ವಾರ್ಡುಗಳಲ್ಲಿ ಅರವತ್ತು ಗ್ಯಾಂಗುಗಳ ಅವಶ್ಯಕತೆ ಇದೆಯಾ ಎಂದು ನೀವು ಕೇಳಿದರೆ ನನ್ನ ಉತ್ತರ ಯಾವ ಕುರುಡನಿಗೂ ಇದು ಸುಳ್ಳು ಲೆಕ್ಕ ಸೃಷ್ಟಿಸಿ ಹಣ ಹೊಡೆಯಲು ಇವರು ಮಾಡಿದ ಷಡ್ಯಂತ್ರ ಎಂದು ಗೊತ್ತಾಗುತ್ತದೆ. ಹತ್ತು ವರ್ಷಗಳ ಹಿಂದೆ ಮಳೆಗಾಲದಲ್ಲಿ ಇಪ್ಪತ್ತು ವಾರ್ಡುಗಳಿಗೆ ತಲಾ ಒಂದರಂತೆ ಮೂರು ಸ್ಪೆಶಲ್ ಗ್ಯಾಂಗುಗಳು ಇದ್ದವು. ಮಂಗಳೂರು ನಗರ ದಕ್ಷಿಣಕ್ಕೆ ಎರಡು ಮತ್ತು ಮಂಗಳೂರು ನಗರ ಉತ್ತರಕ್ಕೆ ಒಂದು ಗ್ಯಾಂಗು ಕಾರ್ಯಾಚರಿಸುತ್ತಿತ್ತು. ಆಗಲೂ ಅಪರೂಪಕ್ಕೆ ಮರಗಳು ಬೀಳುತ್ತಿದ್ದವು. ಇಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ ಮರ ಬಿದ್ದರೆ ಪಾಲಿಕೆಯ ಕಡೆಯಿಂದ ತೆಗೆಯಲಾಗುತ್ತಿತ್ತು. ನಂತರ ಈ ಜವಾಬ್ದಾರಿಯನ್ನು ಅರಣ್ಯ ಇಲಾಖೆಗೆ ನೀಡಲಾಯಿತು. ಅವರ ಬಳಿ ಆಧುನಿಕ ಯಂತ್ರ ಇರುವುದರಿಂದ ಅದರಿಂದ ಮರ ತುಂಡು ಮಾಡಿ ಸಾಗಿಸಲು ವ್ಯವಸ್ಥೆ ಇತ್ತು. ಹಾಗಿದ್ದ ಮೇಲೆ ಈ ಸ್ಪೆಶಲ್ ಗ್ಯಾಂಗುಗಳ ಅಗತ್ಯ ಬೀಳುತ್ತಿರಲಿಲ್ಲ. ಈಗಲೂ ಹೆಚ್ಚು ಕಡಿಮೆ ಹೀಗೆ ಆಗುವುದು. ಯಾವ ಕೆಲಸಕ್ಕೆ ಈ ಗ್ಯಾಂಗುಗಳು ರಚನೆಯಾಗುತ್ತವೆಯೋ ಅದರ ಹತ್ತು ಶೇಕಡಾ ಕೆಲಸವನ್ನು ಕೂಡ ಅವು ಮಾಡುವುದಿಲ್ಲ. ಉದಾಹರಣೆಗೆ ಈ ರಸ್ತೆ ಅಗೆದು ಅದರ ಡೆಬ್ರಿಸ್ ರಸ್ತೆ ಪಕ್ಕ ಹಾಕಿ ಮಳೆಗಾಲದ ನೀರು ಹರಿದು ಹೋಗಲು ತೊಂದರೆಯಾಗಿದೆ ಎಂದು ಪಾಲಿಕೆಗೆ ದೂರು ಕೊಟ್ಟರೂ ನೀವು ನಿಮ್ಮ ಕಾರ್ಪೋರೇಟರ್ ಗೆ ಹೇಳಿ ಎನ್ನುತ್ತಾರೆ. ಅವರು ಅದನ್ನು ತೆಗೆಯುವುದು ಬಿಡಿ, ಆ ಕಡೆ ಬರುವುದು ಕೂಡ ಇಲ್ಲ. ಯಾವಾಗ ಒಬ್ಬ ವ್ಯಕ್ತಿ ಕಾರ್ಪೋರೇಟರ್ ಆಗುತ್ತಾರೋ ಅವರಿಗೆ ಅಭಿವೃದ್ಧಿ ಕೆಲಸಗಳಿಗಿಂತ ಹೇಗೆ ಹಣ ಮಾಡುವುದು ಎನ್ನುವ ಕೋಚಿಂಗ್ ಈ ಅಧಿಕಾರಿಗಳು ಮತ್ತು ಗುತ್ತಿಗೆದಾರರು ನೀಡಿ ಅವರನ್ನು ಅರ್ಧ ಹಾಳು ಮಾಡುತ್ತಾರೆ. ಉಳಿದ ಅರ್ಧ ಅವನು ಅನುಭವ ಆಗುತ್ತಿದ್ದಂತೆ ಹಾಳಾಗುತ್ತಾ ಹೋಗುತ್ತಾನೆ.
ಪ್ರತಿ ವಾರ್ಡಿಗೆ ತಿಂಗಳಿಗೆ ಒಂದೂ ಕಾಲು ಲಕ್ಷದಂತೆ ಎರಡು ತಿಂಗಳು ಅರವತ್ತು ವಾರ್ಡಿಗೆ ಆಗುವ ಕೋಟಿಗಳು ಯಾರಿಗೆ ಬೇಡಾ ಹೇಳಿ. ಹಾಗಂತ ಇದು ಐದು ಬಾರಿ ಗೆದ್ದಿರುವ ಪ್ರೇಮಾನಂದ ಶೆಟ್ಟಿಯವರಿಗೆ ಗೊತ್ತಿಲ್ಲ ಎಂದಲ್ಲ. ಬಹುಶ: ಪಾಲಿಕೆ ಕಮೀಷನರ್ ಅವರಿಗೆ ಅಷ್ಟು ಅನುಭವ ಇರಲಿಕ್ಕಿಲ್ಲ. ಆದರೆ ಅವರಿಗೂ ಮನವಿ ಕೊಟ್ಟು ಈ ದುಂದುವೆಚ್ಚದ ಬಗ್ಗೆ ಗಮನ ಸೆಳೆಯಲಾಗಿದೆ. ಆದರೂ ಈ ಬಾರಿಯ ಬಜೆಟಿನಲ್ಲಿ ಹಣ ಇಟ್ಟು ಎಲ್ಲರೂ ಬಕಪಕ್ಷಿಯಂತೆ ಕಾಯುತ್ತಾ ಕುಳಿತಿದ್ದಾರೆ. ಆದರೆ ಈ ಹಣವನ್ನು ಸರಿಯಾಗಿ ವಿನಿಯೋಗಿಸುವುದೇ ಆಗಿದ್ದರೆ ಪಾಲಿಕೆಯ ಕಾಮಗಾರಿಗಳನ್ನು ಮುಗಿಸಿ ತಮಗೆ ಬರಬೇಕಿದ್ದ ಇನ್ನು 40 ಕೋಟಿ ಹಣ ಯಾವಾಗ ಬರುತ್ತದೆ ಎಂದು ಕಾಯುತ್ತಿರುವ ಗುತ್ತಿಗೆದಾರರಿಗೆ ಕೊಡಬಹುದಿತ್ತು. ಅದೇನೆ ಇರಲಿ, ಈ ಬಾರಿ ಪ್ರತಿ ವಾರ್ಡಿನಲ್ಲಿ ವಾರ್ಡ್ ಕಮಿಟಿ ಇದೆ. ಅವರು ತಮ್ಮ ವಾರ್ಡುಗಳ ಕಾರ್ಪೋರೇಟರ್ ಅವರಿಂದ ತಮ್ಮ ವಾರ್ಡಿನ ಸ್ಪೆಶಲ್ ಗ್ಯಾಂಗುಗಳ ಗುತ್ತಿಗೆದಾರರ ನಂಬ್ರ ತೆಗೆದುಕೊಳ್ಳಿ. ಫೋನ್ ಮಾಡಿ ಎಲ್ಲಿ ಸ್ಪೆಶಲ್ ಗ್ಯಾಂಗ್ ಎಂದು ಕೇಳಿ. ಕಾರ್ಪೋರೇಟರ್ ಮತ್ತು ಗುತ್ತಿಗೆದಾರರು ವಾಸ್ತವದಲ್ಲಿ ಅಸ್ತಿತ್ವದಲ್ಲಿಯೇ ಇರದ ಗ್ಯಾಂಗು ಹೆಸರಲ್ಲಿ ಬಿಲ್ ಮಾಡಿ ಹಣ ತಿನ್ನಲು ಬಿಡಬೇಡಿ. ವಾಸ್ತವದಲ್ಲಿ ಐದಾರು ವಾರ್ಡುಗಳಿಗೆ ಒಂದು ಗ್ಯಾಂಗು ಹಾಕಿ ಆರೇಳು ವಾರ್ಡುಗಳ ಬಿಲ್ ಪ್ರತ್ಯೇಕ ಮಾಡಿ ಹಣ ನುಂಗುವ ಸ್ಕೆಚ್ ಪ್ರತಿ ವರ್ಷ ನಡೆಯುತ್ತದೆ. ವಾರ್ಡ್ ಕಮಿಟಿಯಿಂದ ಈ ಬಾರಿ ಇವರು ಹಣ ಹೊಡೆಯುವುದನ್ನು ನಿಲ್ಲಿಸಬೇಕು. ಆ ನಿಟ್ಟಿನಲ್ಲಿ ವಾರ್ಡ್ ಕಮಿಟಿಗಳ ಮುಂದೆ ಮೊದಲ ಮಳೆಗಾಲ ಈ ಬಾರಿ ಆರಂಭವಾಗಲಿದೆ. ಹಣ ಹೊಡೆದು ತೇಗುವವರಿಗೆ ಇದು ಭ್ರಷ್ಟಾಚಾರದ ಕೊನೆಯ ಮಳೆಗಾಲವಾಗಲಿ ಎಂದು ನಿರೀಕ್ಷೆ.
Leave A Reply