ಕಡತ ವಿಲೇವಾರಿಯನ್ನು ಜನಸ್ಪಂದನಾ ರೀತಿಯಲ್ಲಿ ಬದಲಾಯಿಸಿದರೆ ಮಾತ್ರ ಲಾಭ!!
ಒಂದು ಉತ್ತಮ ಕಾರ್ಯಕ್ರಮ, ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾದರೆ ಅದರಿಂದ ನಾಗರಿಕರಿಗೆ ಯಾವುದೇ ರೀತಿಯ ಪ್ರಯೋಜನ ಇಲ್ಲ. ಅದರ ಬದಲಿಗೆ ಅದನ್ನು ಶಿಸ್ತುಬದ್ಧವಾಗಿ ಮಾಡಿದರೆ ಅದರಿಂದ ಜನರಿಗೆ ಅನುಕೂಲವಾದರೆ ಲಾಭವಾಗುವುದು ಭಾರತೀಯ ಜನತಾ ಪಾರ್ಟಿಗೆ. ಎಷ್ಟೋ ನಾಗರಿಕರ ಕೆಲಸಕಾರ್ಯಗಳು ಸರಕಾರಿ ಇಲಾಖೆಯಲ್ಲಿ ಆಗದೇ ಹಲವು ವರ್ಷಗಳಿಂ ಹಾಗೆ ಬಾಕಿ ಉಳಿದು ಬಂದಿರುತ್ತವೆ. ಅದು ಬಾಕಿಯಾಗಿ ಉಳಿಯಲು ಅನೇಕ ಕಾರಣಗಳಿರಬಹುದು. ಹೆಚ್ಚಿನ ಸಂದರ್ಭದಲ್ಲಿ ಅವು ಸಣ್ಣಪುಟ್ಟ ಕಾರಣಗಳಿಗಾಗಿ ಬಾಕಿ ಉಳಿದಿರುತ್ತವೆ. ಇನ್ನು ಕೆಲವು ಸರಕಾರದ ನಿಯಮಗಳು, ಸಾಫ್ಟ್ ವೇರ್, ಸಿಬ್ಬದಿಗಳ ನಿರುತ್ಸಾಹದಿಂದ ಬಾಕಿ ಉಳಿದಿರುತ್ತವೆ. ಇದರಿಂದ ಸಂಕಷ್ಟಪಡುವ ಮಧ್ಯಮ ವರ್ಗ ಕಡತಗಳು ತಕ್ಷಣ ವಿಲೇವಾರಿ ಆದರೆ ಅದನ್ನು ಮಾಡಿಕೊಟ್ಟ ಸರಕಾರಕ್ಕೆ ಸಾಯುವ ತನಕ ಆ ನಾಗರಿಕರು ಚಿರ ಋಣಿಯಾಗಿರುತ್ತದೆ. ಆ ನಿಟ್ಟಿನಲ್ಲಿ ಸುನೀಲ್ ಕುಮಾರ್ ತೆಗೆದುಕೊಂಡ ಕ್ರಮ ಒಳ್ಳೆಯದು. ಇದು ಹೊಸ ಕಾನ್ಸೆಟ್ಟು ಅಲ್ಲದಿರಬಹುದು. ಆದರೆ ಸಚಿವರು ಖಡಕ್ ಆಗಿರುವುದರಿಂದ ಹಿಡಿದ ಕೆಲಸವನ್ನು ದಡ ಸೇರಿಸಿದ ಹಿನ್ನಲೆ ಇರುವುದರಿಂದ ಇದಕ್ಕೂ ಒಂದು ತಾರ್ಕಿಕ ಅಂತ್ಯ ತೋರಿಸುತ್ತಾರೆ ಎನ್ನುವ ವಿಶ್ವಾಸ ಇದೆ. ಆದರೆ ಮೊನ್ನೆ ಮಂಗಳೂರಿನಲ್ಲಿ ಆದದ್ದನ್ನು ನೋಡಿದಾಗ ಮಾತ್ರ ನಿರಾಸೆ ಆಗಿರುವುದು ನಿಜ. ಇತ್ತೀಚೆಗೆ ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಚೇರಿಯ ನೇತ್ರಾವತಿ ಸಭಾಂಗಣದಲ್ಲಿ ಕಡತ ವಿಲೇವಾರಿ ಸಪ್ತಾಹದ ಚಾಲನಾ ಕಾರ್ಯಕ್ರಮದ ಆಯೋಜನೆ ಮಾಡಲಾಗಿತ್ತು. ಅದರ ಉದ್ಘಾಟನೆಗೆ ಕಂದಾಯ ಸಚಿವ ಅಶೋಕ ಬಂದಿದ್ದರು. ನನ್ನನ್ನು ಸೇರಿಸಿ ಕೆಲವು ಆಯ್ದ ನಾಗರಿಕರನ್ನು ಜನರ ಪರ ಮಾತನಾಡಲು ಕರೆಸಲಾಗಿತ್ತು. ನಾನು ಒಂದಿಷ್ಟು ತಯಾರಿ ಮಾಡಿಕೊಂಡು ಸಮಯಕ್ಕೆ ಸರಿಯಾಗಿ ಹೋಗಿದ್ದೆ. 9 ಗಂಟೆಗೆ ಅಶೋಕ್ ಬರುತ್ತಾರೆ ಎಂದು ಇತ್ತು. 9.30 ಕ್ಕೆ ಬಂದ್ರು. ಅದೇ ದಿವಸ 10 ಗಂಟೆಗೆ ಅವರಿಗೆ ಕಾರ್ಕಳದಲ್ಲಿ ಕೂಡ ಕಂದಾಯ ಸವಲತ್ತುಗಳ ವಿತರಣಾ ಕಾರ್ಯಕ್ರಮವನ್ನು ಅಲ್ಲಿನ ಶಾಸಕ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಅವರು ಇಟ್ಟುಕೊಂಡಿದ್ದರು. ಅದೇ ಗಡಿಬಿಡಿಯಲ್ಲಿ ಅಶೋಕ್ ಕಾರ್ಯಕ್ರಮ ಉದ್ಘಾಟಿಸಿದರು. ಅಲ್ಲಿಯೇ ಶಿಶು ಕಲ್ಯಾಣ ಕೇಂದ್ರ ಎಂದು ಉದ್ಘಾಟಿಸಿದರು. ಐದು ಮಂದಿಗೆ ಸಾಂಕೇತಿಕವಾಗಿ ಪತ್ರ ಹಂಚಿದರು. ಒಳ್ಳೆಯ ಯೋಜನೆ, ಇದನ್ನು ರಾಜ್ಯ ಮಟ್ಟದಲ್ಲಿ ಅನುಷ್ಟಾನಗೊಳಿಸುತ್ತೇವೆ ಎಂದರು. ಅಲ್ಲಿಂದ ಸೀದಾ ಕಾರ್ಕಳದ ಕಡೆ ಹೋದರು. ಇದು ಒಳ್ಳೆಯ ಯೋಜನೆ ಎನ್ನುವುದು ಎಲ್ಲರಿಗೂ ಗೊತ್ತೆ ಇದೆ. ಆದರೆ ಇದನ್ನು ಹೀಗೆ ನಾಲ್ಕು ಫೋಟೋಗಳಿಗಾಗಿ ಉದ್ಘಾಟನೆ ಮಾಡಿದರೆ ಅದರಿಂದ ಏನೂ ಬದಲಾವಣೆ ಆಗುವುದಿಲ್ಲ. ಒಂದು ಗಂಟೆಯೊಳಗೆ ಎಲ್ಲವನ್ನು ಮುಗಿಸುವ ಧಾವಂತ ಇದ್ದರೆ ಜನರ ಸಮಸ್ಯೆಗಳು ತಿಳಿಯುವುದು ಹೇಗೆ? ಇಷ್ಟು ಅರ್ಜೆಂಟಲ್ಲಿ ಯಾಕೆ ಒಂದು ಪ್ರಮುಖ ಕಾರ್ಯಕ್ರಮ ಇಟ್ಟುಕೊಳ್ಳಬೇಕಿತ್ತು. ಯಾಕೆಂದರೆ ಸಚಿವರು ಶಾಂತಚಿತ್ತದಿಂದ ಸಮಸ್ಯೆಗಳನ್ನು ಕೇಳಲು ಕುಳಿತುಕೊಂಡರೆ ಮಾತ್ರ ನಮ್ಮ ಸಂಕಷ್ಟ ತಿಳಿಯುತ್ತದೆ. ತಳಮಟ್ಟದಲ್ಲಿ ಜನಸಾಮಾನ್ಯರು ಅನುಭವಿಸುವ ತೊಂದರೆ ಸಚಿವರಿಗೆ ಗೊತ್ತಾಗಬೇಕಿತ್ತು. ಸಚಿವರುಗಳಿಗೆ ಕಡತ ವಿಲೇವಾರಿಯ ಸವಾಲು ಗೊತ್ತಾಗಬೇಕು. ಒಬ್ಬ ನಾಗರಿಕ ತಮ್ಮ ಕೆಲಸ ಇಷ್ಟು ಸಮಯದಿಂದ ಆಗಲಿಲ್ಲ ಎಂದು ಅರ್ಜಿ ಬರೆದು ಅದನ್ನು ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿ ನಂತರ ಅಲ್ಲಿಗೆ ದೂರು ನೀಡಿ ಹಿಂಬರಹದ ಲಿಖಿತ ದಾಖಲೆಯನ್ನು ತಂದು ಅಲ್ಲಿ ಮಾತನಾಡಿದರೆ ಆಗ ಅಂತಹ ಸಮಸ್ಯೆಗಳನ್ನು ಅಲ್ಲಿಯೇ ಪರಿಹರಿಸಲಾಗುತ್ತದೆ. ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಅವರು 8000 ಕಡತಗಳು ವಿಲೇವಾರಿಯಾಗಲು ಬಾಕಿ ಇದೆ ಎಂದು ಹೇಳಿದ್ದಾರೆ. ಅದನ್ನು ಅವರು ಕ್ರಾಸ್ ಚೆಕ್ ಮಾಡಬೇಕು. ಯಾಕೆಂದರೆ ಅಧಿಕಾರಿಗಳು ಹೇಳುವ ಮಾಹಿತಿಗಳಿಗೂ, ವಾಸ್ತವಕ್ಕೂ ಸಾಕಷ್ಟು ವ್ಯತ್ಯಾಸ ಇರುತ್ತದೆ. ನಮ್ಮ ಕರ್ನಾಟಕದಲ್ಲಿ ಸಿಎಂ ಪ್ರಧಾನ ಕಾರ್ಯದರ್ಶಿಯವರನ್ನು ಸೇರಿಸಿ ಸುಮಾರು 80 ಅಧಿಕಾರಿಗಳ ವಿರುದ್ಧ ಅಕ್ರಮ, ದುರ್ನಡತೆ ಸಹಿತ ವಿವಿಧ ಪ್ರಕರಣಗಳಲ್ಲಿ ತನಿಖೆ ಬಾಕಿಯಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಧಿಕಾರಿಗಳ ವಿರುದ್ಧ ಇಲಾಖಾವಾರು ತನಿಖೆ, ವಿಚಾರಣೆಯೇ ಬಾಕಿ ಇರುವಾಗ ಜನಸಾಮಾನ್ಯರ ಸಾವಿರಗಟ್ಟಲೆ ಕಡತಗಳು ಶೀಘ್ರದಲ್ಲಿ ಇತ್ಯರ್ಥವಾಗಬೇಕಾದರೆ ಅದಕ್ಕೆ ಶಿಸ್ತುಬದ್ಧ ಪ್ಲಾನ್ ಬೇಕು. ಆದ್ದರಿಂದ ಈಗ ಸಚಿವರು ವಾಸ್ತವವಾಗಿ ಏನು ಮಾಡಬೇಕು ಎನ್ನುವುದನ್ನು ನೋಡೋಣ. ಯಡ್ಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಜನಸ್ಪಂದನಾ ಸಭೆ ಎಂದು ಪ್ರತಿ ಜಿಲ್ಲೆಯಲ್ಲಿಯೂ ನಡೆಸಲಾಗುತ್ತಿತ್ತು. ಅದನ್ನು ಈಗ ಮತ್ತೆ ಆರಂಭಿಸಬಹುದು. ಅದರ ಹೆಸರು ಬೇಕಾದರೆ ಏನಾದರೂ ಇಡಿ, ಆದರೆ ಅದನ್ನು ಮತ್ತೆ ಶುರು ಮಾಡಬೇಕು. ಈಗ ಮೂರು ತಿಂಗಳಿಗೊಮ್ಮೆ ಮಾಡಲು ರಾಜ್ಯ ಸರಕಾರದ ಮುಂದೆ ತುಂಬಾ ಸಮಯವಿಲ್ಲ. ಒಂದು ವರ್ಷದ ಬಳಿಕ ಚುನಾವಣೆ ಇದೆ. ಆದ್ದರಿಂದ ಪ್ರತಿ ತಿಂಗಳಿಗೆ ಒಮ್ಮೆ ಮಾಡಬೇಕು. ಬೇಕಾದರೆ ಆಯಾ ಜಿಲ್ಲೆಯ ಪುರಭವನದಲ್ಲಿಯೇ ಮಾಡಬಹುದು. ವೇದಿಕೆಯಲ್ಲಿ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಸಹಾಯಕ ಕಮೀಷನರ್, ಪಾಲಿಕೆ ಕಮೀಷನರ್, ತಹಶೀಲ್ದಾರ್, ಪೊಲೀಸ್ ವರಿಷ್ಟಾಧಿಕಾರಿ, ಪೊಲೀಸ್ ಕಮೀಷನರ್, ಮೇಯರ್, ಶಾಸಕರು ಕುಳಿತುಕೊಂಡು ಜನರ ಅಹವಾಲುಗಳನ್ನು ಸ್ವೀಕರಿಸಿ ಅಲ್ಲಿಯೇ ಪರಿಹಾರ ನೀಡಿದರೆ ಸುಮಾರು 80% ಸಮಸ್ಯೆಗಳಿಗೆ ಪರಿಹಾರ ಸಿಗುವುದು ಕಷ್ಟವೇನಲ್ಲ. ಇದರಿಂದ ನಿಜವಾದ ಅರ್ಥದಲ್ಲಿ ಜನಸಾಮಾನ್ಯರಿಗೆ ಲಾಭವಾಗುತ್ತೆ. ಅದನ್ನು ಈಗಿನ ರಾಜ್ಯ ಸರಕಾರ ಮಾಡುತ್ತಾ ಎನ್ನುವುದನ್ನು ಕಾದು ನೋಡಬೇಕು. ಅದು ಬಿಟ್ಟು ಬಜರಂಗದಳದ ಕಾರ್ಯಕರ್ತ ಹರ್ಷ ಎನ್ನುವ ಯುವಕ ಹತ್ಯೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಬಿಜೆಪಿಗೆ ವಿಷಯ ಬೇರೆ ಸಿಕ್ಕಿತು ಎಂದು ಅಂದುಕೊಳ್ಳಬೇಕಾ?
Leave A Reply