• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸಂಬಳ, ಭತ್ಯೆ ಏರಿಸುವಾಗ ಎಷ್ಟು ಶಾಂತವಾಗಿತ್ತು ವಿಧಾನಸಭೆ!!

Hanumantha Kamath Posted On March 2, 2022


  • Share On Facebook
  • Tweet It

ಇವರು ಅಧಿವೇಶನ ಸರಿಯಾಗಿ ನಡೆಯಲು ಬಿಡುವುದಿಲ್ಲ. ರಾಜ್ಯದ ಅಭಿವೃದ್ಧಿಯನ್ನು ಚರ್ಚೆ ಮಾಡುವುದಿಲ್ಲ. ಧ್ವಜ, ಹಿಜಾಬ್, ಹತ್ಯೆಗಳಲ್ಲಿಯೇ ರಾಜ್ಯ ಚುನಾವಣೆಯತ್ತ ಹೋಗುತ್ತಿದೆ. ಅದಕ್ಕೆ ಸರಿಯಾಗಿ ಇವರು ತಮ್ಮ ಸಂಬಳವನ್ನು ಹೆಚ್ಚಿಸಿಕೊಂಡಿದ್ದಾರೆ. ಅದರೊಂದಿಗೆ ವಿವಿಧ ಭತ್ಯೆಗಳನ್ನು ಕೂಡ ಏರಿಸಿಕೊಂಡಿದ್ದಾರೆ. ಅದಕ್ಕೆ ಯಾವುದೇ ಆಕ್ಷೇಪ, ವಿರೋಧವನ್ನು ಸದನದಲ್ಲಿ ಯಾರೂ ಮಾಡದೇ ಸಂಬಳ ಏರಿಕೆಯನ್ನು ಸುಗಮವಾಗಿ ಮಾಡಿಕೊಂಡಿದ್ದಾರೆ. ಅಲ್ಲಿಗೆ ರಾಜಕೀಯ ಎನ್ನುವುದು ಸಮಾಜಸೇವೆ ಆಗದೇ ಅದು ಕೂಡ ಒಂದು ಉದ್ಯೋಗ ಎನ್ನುವುದು ರಾಜಕಾರಣಿಗಳು ಸಾಬೀತುಪಡಿಸಿದ್ದಾರೆ. ಇವರಿಗೆ ರಾಜ್ಯದ ಅಭಿವೃದ್ಧಿಗಿಂತ ಸ್ವಅಭಿವೃದ್ಧಿಯೇ ಮುಖ್ಯ ಎನ್ನುವುದನ್ನು ನಾಚಿಕೆ ಇಲ್ಲದೇ ಮಾಡಿತೋರಿಸಿದ್ದಾರೆ. ಅದೇ ಅತಿಥಿ ಶಿಕ್ಷಕರ ಸಂಬಳ, ಅಂಗನವಾಡಿ ಕಾರ್ಯಕರ್ತೆಯರ ಸಂಬಳ, ಸರಕಾರಿ ಆಸ್ಪತ್ರೆಯ ದಾದಿಯರ ಸಂಬಳ, ಸರಕಾರಿ ಗ್ರಂಥಾಲಯದ ಸಿಬ್ಬಂದಿಗಳ ಸಂಬಳ ಹೆಚ್ಚಳದ ಹಲವು ವಿಷಯ ಬಂದಾಗ ಇವರು ಮೂರು ದಿನ ಸದನದಲ್ಲಿ ಚರ್ಚೆ ಮಾಡುತ್ತಾರೆ. ಮತ್ತೆ ಸಂಬಳ ಜಾಸ್ತಿ ಕೂಡ ಆಗುತ್ತೋ ಇಲ್ವೋ ಎನ್ನುವುದು ಹೇಳಲು ಆಗುವುದಿಲ್ಲ. ಅಲ್ಲಿ ಉಡುಪಿಯಲ್ಲಿ ಆಸ್ಪತ್ರೆಯೊಂದರ ಸಿಬ್ಬಂದಿಗಳ ಸಂಬಳ ಮತ್ತು ಭತ್ಯೆಗಳು ಸರಿಯಾಗಿ ಸಿಗದೇ ಅವರು ಖಾಲಿ ಕೊಡಪಾನ, ಅಡುಗೆ ಪಾತ್ರೆಗಳನ್ನು ಮುಂದಿಟ್ಟು ಮೂರು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಅವರಿಗೆ ಇನ್ನು ನ್ಯಾಯ ಸಿಕ್ಕಿಲ್ಲ. ಇನ್ನು ಮಹಾನಗರ ಪಾಲಿಕೆಯಲ್ಲಿ ಒಳಚರಂಡಿ, ತ್ಯಾಜ್ಯ ಸಹಿತ ಹೊರಗುತ್ತಿಗೆಯಲ್ಲಿ ಕೆಲಸ ಮಾಡುವವರನ್ನು ಪರ್ಮನೆಂಟ್ ಮಾಡಬೇಕು ಎಂದು ಹೈಕೋರ್ಟ್ ಹೇಳಿದೆ. ಇವರು ಮಾಡುವುದಿಲ್ಲ. ಅವರನ್ನು ಹೊರಗುತ್ತಿಗೆಯ ಮೇಲೆ ದುಡಿಸಲಾಗುತ್ತದೆ ಮತ್ತು ಗುತ್ತಿಗೆದಾರ ಸರಕಾರದಿಂದ ಕನಿಷ್ಟ ವೇತನ ಏನು ಅವನ ಬಿಲ್ ನಲ್ಲಿ ಸಿಗುತ್ತದೆ, ಅದನ್ನು ಕೆಲಸದವರಿಗೆ ಕೊಡುವುದಿಲ್ಲ. ರಾಜ್ಯದಲ್ಲಿ ಬೇರೆ ಕಾರ್ಮಿಕರ ಪರಿಸ್ಥಿತಿ ಕೂಡ ಭಿನ್ನವಾಗಿಲ್ಲ. ಸರಕಾರ ನಿಗದಿಪಡಿಸಿದ ಕನಿಷ್ಟ ವೇತನ ಕೂಡ ಅನೇಕ ಕಡೆ ಸಿಗುವುದಿಲ್ಲ. ಹಾಗಿರುವಾಗ ರಾಜ್ಯ ಸರಕಾರ ಯಾವುದೇ ಮಾನ, ಮರ್ಯಾದೆ ಇಲ್ಲದೆ ಜನಪ್ರತಿನಿಧಿಗಳ ಸಂಬಳವನ್ನು ಏರಿಸಿರುವುದನ್ನು ನೋಡಿದಾಗ ಇವರಿಗೆ ಕನಿಷ್ಟ ಆತ್ಮಸಾಕ್ಷಿ ಕೂಡ ಇಲ್ಲವೇ ಎಂದು ಅನಿಸದೇ ಇರುವುದಿಲ್ಲ. ಅಲ್ಲಿ ನೋಡಿದರೆ ಕೋವಿಡ್ ಕಾರಣದಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣದ ಮುಗ್ಗಟ್ಟು ಇದೆ ಎಂದು ಹೇಳುತ್ತಾರೆ. ಬೇರೆ ಬೇರೆ ರೀತಿಯಲ್ಲಿ ತೆರಿಗೆಗಳನ್ನು ಏರಿಸುತ್ತಾರೆ. ಜನರಿಂದ ಹೇಗೆಲ್ಲ, ಯಾವ ರೀತಿಯಲ್ಲಿ ಹಣ ಸುಲಿಯುವುದು ಎಂದು ಚಿಂತನೆ ನಡೆಯುತ್ತಿದೆ. ಆದರೆ ಇವರು ಮಾತ್ರ ನಿಶ್ಚಿಂತೆಯಿಂದ ತಮ್ಮ ಸಂಬಳ ಏರಿಸಿಕೊಂಡು ಕುಳಿತಿದ್ದಾರೆ.

ಇನ್ನು ದೇಶದ ಅತೀ ದೊಡ್ಡ ಕಾಮಿಡಿ ನೋಡಿ. ಒಂದು ವೇಳೆ ಕರ್ನಾಟಕದಲ್ಲಿ ಜಿಯೋದವರು ಏನಾದರೂ ನಮ್ಮ ಶಾಸಕರುಗಳಿಗೆ, ಸಚಿವರುಗಳಿಗೆ ಸಿಗುತ್ತಿರುವ ಟೆಲಿಫೋನ್ ಭತ್ಯೆಯನ್ನು ಕೇಳಿದರೆ ಎಲ್ಲಿಂದ ನಗಬೇಕು ಎಂದು ಗೊತ್ತಾಗದೇ ಗೊಂದಲಕ್ಕೆ ಬೀಳಬಹುದು. ಏಕೆಂದರೆ ದೇಶದ ಯಾವುದೇ ಮೂಲೆಗೆ ನೀವು ಹೋಗಿ, ಯಾವುದೇ ರಾಜ್ಯದ ಯಾವುದೇ ಬೀದಿಗೆ ಹೋಗಿ, ಅಲ್ಲಿನ ಲೈಟ್ ಕಂಬಕ್ಕೊಂದು ವಿನೈಲ್ ಪೋಸ್ಟರ್ ನೇತಾಡುತ್ತಿರುತ್ತದೆ. ಅದರಲ್ಲಿ ತಿಂಗಳಿಗೆ 339 ರೂಪಾಯಿ ಕರೆನ್ಸಿ ರಿಚಾರ್ಜ್ ಮಾಡಿಕೊಳ್ಳಿ ಮತ್ತು ಅನ್ ಲಿಮಿಟೆಡ್ ಮಾತನಾಡಿ ಎಂದು ಬರೆದಿರುತ್ತದೆ. ಇದು ಗ್ರಾಮ ಪಂಚಾಯತ್ ಸದಸ್ಯನಿಂದ ಹಿಡಿದು ಪ್ರಧಾನಿಯವರೆಗೆ ಎಲ್ಲರಿಗೂ ಗೊತ್ತು. ಆದರೆ ನಮ್ಮ ರಾಜ್ಯದ ಶಾಸಕರುಗಳಿಗೆ ಟೆಲಿಫೋನ್ ಭತ್ಯೆ ಎಂದು ನಿಗದಿಪಡಿಸಿರುವುದು ತಿಂಗಳಿಗೆ ಎಷ್ಟು ರೂಪಾಯಿ ಗೊತ್ತಾ? ಬರೋಬ್ಬರಿ 20 ಸಾವಿರ ರೂಪಾಯಿಗಳು. ಈಗ 339 ರೂಪಾಯಿ ಬಿಡಿ, 500 ರೂಪಾಯಿ ಕರೆನ್ಸಿ ಹಾಕಿ ಎಂದು ಸರಕಾರ ಅಷ್ಟು ಹಣ ಕೊಟ್ಟರೆ ಸಾಕಿತ್ತು. ಶಾಸಕರು ಏನು ಇಡೀ ಊರಿನವರಿಗೆ ರೀಚಾರ್ಜ್ ಮಾಡಿಸುತ್ತಾರಾ? ಹಣ ಇದೆ ಎಂದು ಒಟ್ರಾಶಿ ಕೊಟ್ಟರೆ ಆಗುತ್ತಾ? ಇನ್ನು ತಿಂಗಳಿಗೆ 2000 ಲೀಟರ್ ಡಿಸೀಲ್ ಶಾಸಕರ ಕಾರುಗಳಿಗೆ ಹಾಕಿಸಲಾಗುತ್ತದೆ. ಬಹುತೇಕ ಎಲ್ಲಾ ಶಾಸಕರ ಬಳಿ ಕನಿಷ್ಟ ಇನ್ನೊವಾ ಆದರೂ ಇದೆ. ಅದು ಲೀಟರಿಗೆ ಹತ್ತು ಕಿಲೋ ಮೀಟರ್ ಮೈಲೇಜ್ ಕೊಟ್ಟರೆ ನಗರ ಪ್ರದೇಶದ ಶಾಸಕರುಗಳಿಗೆ ಎಷ್ಟೋ ತಿಂಗಳಿಗೆ ಸಾಕು. ಗ್ರಾಮೀಣ ಪ್ರದೇಶದ ಶಾಸಕರುಗಳಿಗೂ ಇಷ್ಟು ಲೀಟರ್ ಇಂಧನ ಕೊಡುವ ಅವಶ್ಯಕತೆ ಏನಿದೆ? ಆದರೂ ಹಣ ಇದೆಯಲ್ಲ, ಯಾರದ್ದೋ ಹಣ, ಎಲ್ಲಮ್ಮನ ಜಾತ್ರೆ ತರಹ ಮಾಡಬೇಕಲ್ಲ. ಅದರೊಂದಿಗೆ ಮಾಜಿ ಶಾಸಕರ ಸಂಬಳ ಕೂಡ ತಿಂಗಳಿಗೆ 50000. ಒಬ್ಬ ವ್ಯಕ್ತಿಗೆ ನಿವೃತ್ತ ಪಿಂಚಣಿ ಸಿಗಬೇಕಾದರೆ ಅವನು 60 ವರ್ಷ ಸೇವೆ ಸಲ್ಲಿಸಿ ನಂತರ ಅವನಿಗೆ ಅವನ ಸಂಬಳದ ಒಂದಿಷ್ಟು ಶೇಕಡಾ ಪಿಂಚಣಿ ಸಿಗುತ್ತದೆ. ಅದು ಕ್ರಮ. ಆದರೆ ಶಾಸಕರು ಒಮ್ಮೆ ಐದು ವರ್ಷ ಇದ್ದು ನಂತರ ಸೋತು ಮನೆ ಸೇರಿದರೆ ಅವರಿಗೆ 50000 ರೂಪಾಯಿ ಪಿಂಚಣಿ ಹಣ ಸಿಗುತ್ತದೆ. ಅವರು ಏನು ಕಿತ್ತು ಹಾಕುತ್ತಾರೆ ಎಂದು ಅವರಿಗೆ ಅಷ್ಟು ಹಣ. ಇಲ್ಲಿ ಬಡವ ಇಡೀ ದಿನ ಮೈಮುರಿದು ದುಡಿದರೂ ಸಿಗುವುದು ಚಿಲ್ಲರೆ ಇರುವಾಗ ಈ ಮಾಜಿಗಳಿಗೆ ಏಕೆ ಇಷ್ಟು ಪಿಂಚಣಿ. ಮೊದಲೇ ಕೊರೊನಾ ಅವಧಿಯಲ್ಲಿ ಎಷ್ಟು ಮೇಯಲು ಆಗುತ್ತಾ ಅಷ್ಟು ಹಣವನ್ನು ಬೇರೆ ಬೇರೆ ಹೆಸರಿನಲ್ಲಿ ಪಕ್ಷಭೇದವಿಲ್ಲದೆ ಎಲ್ಲರೂ ನುಂಗಿ ಆಗಿದೆ. ಕೆಲವು ದಿನ ಪ್ರತಿಪಕ್ಷ ಜೀವಂತ ಇದೆ ಎನ್ನುವ ಕಾರಣಕ್ಕೆ ಪ್ರತಿಭಟನೆ ಮಾಡಲಾಗಿತ್ತು. ಈಗ ಎಲ್ಲವೂ ಮುಗಿದಿದೆ. ಈಗ ಎಲ್ಲಾ ಲೆಕ್ಕಪತ್ರವನ್ನು ಹಿಡಿದು ವಿಪಕ್ಷಗಳು ಹೊರಗೆ ಬರಬಹುದಲ್ಲ. ಬರಲ್ಲ, ಏಕೆಂದರೆ ಎಲ್ಲರ ಮೂತಿಗೆ ಎಷ್ಟು ಬೇಕೋ ಅಷ್ಟು ಒರೆಸಲಾಗಿದೆ. ಜಿಎಸ್ ಟಿ ಹೆಸರಿನಲ್ಲಿ ಮಧ್ಯಮ, ಬಡ ವರ್ಗದ ಜನರು ಕೂಡ ಒಂದಲ್ಲ ಒಂದು ರೀತಿಯಲ್ಲಿ ತೆರಿಗೆ ಕಟ್ಟುವ ಪರಿಸ್ಥಿತಿ ಇದೆ. ಇದರ ನಡುವೆ ಇವರ ಸಂಬಳ ಹೆಚ್ಚಳದ ಹೊಡೆತ ಏನು ಸಣ್ಣ ಮೊತ್ತ ಏನಲ್ಲ. ಆದರೆ ಮೂರು ಬಿಟ್ಟವರು ಸದನ ಸೇರಿರುವಾಗ ಅವರಿಂದ ಏನು ನಿರೀಕ್ಷೆ ಸಾಧ್ಯ!!

  • Share On Facebook
  • Tweet It


- Advertisement -


Trending Now
ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
Hanumantha Kamath July 1, 2022
ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
Hanumantha Kamath June 30, 2022
Leave A Reply

  • Recent Posts

    • ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
    • ನೂಪುರ್ ಹೇಳಿಕೆಗೆ ಮುಸ್ಲಿಮರು ದೇಶದಲ್ಲಿ ಬೆಂಕಿ ಇಟ್ಟರು, ಶೈಲಜಾ ಹೇಳಿಕೆಗೆ??
  • Popular Posts

    • 1
      ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • 2
      ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • 3
      ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • 4
      ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • 5
      ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search