ಚಂದ್ರು ಹತ್ಯೆಯಲ್ಲಿ ಆರಗ ಎಡವಿದ್ದಾ ಅಥವಾ ನೂಕಿದ್ದಾ?
ಯಾವುದೇ ಒಂದು ಅಹಿತಕರ ಘಟನೆ ಆಗುವಾಗ ಅದರ ಒಳಗಿನ ಮಾಹಿತಿಯನ್ನು ಸಂಗ್ರಹಿಸಲು ಗುಪ್ತಚರ ಇಲಾಖೆ ಇರುತ್ತದೆ. ಆ ಇಲಾಖೆಯನ್ನು ಬಹುತೇಕ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ತಮ್ಮಲ್ಲಿಯೇ ಇಟ್ಟುಕೊಂಡಿರುತ್ತಾರೆ. ಆ ಇಲಾಖೆಯ ಅಧಿಕಾರಿಗಳು ಕಾಲಕಾಲಕ್ಕೆ ರಾಜ್ಯದಲ್ಲಿ ಆಗುತ್ತಿರುವ ಆಂತರಿಕ, ರಹಸ್ಯಗಳನ್ನು ಸಿಎಂ ಕಿವಿಯಲ್ಲಿ ಹಾಕುತ್ತಲೇ ಇರುತ್ತಾರೆ. ಗುಪ್ತಚರ ಇಲಾಖೆ ಒಂದು ರೀತಿಯಲ್ಲಿ ಸಿಎಂ ಕಣ್ಣು, ಕಿವಿಯಾಗಿ ಕೆಲಸ ಮಾಡುತ್ತದೆ. ಇದು ಅಧಿಕೃತ ವ್ಯವಸ್ಥೆ. ಇನ್ನು ಪೊಲೀಸ್ ಇಲಾಖೆಯ ಒಳಗಿರುವ ಕೆಲವು ಅಧಿಕಾರಿಗಳು ತಮಗೆ ಆಪ್ತರಾಗಿರುವ ಸಚಿವರಿಗೆ ಕಾಲಕಾಲಕ್ಕೆ ಮಾಹಿತಿಯನ್ನು ಕೊಡುತ್ತಲೇ ಇರುತ್ತಾರೆ. ಅದರಲ್ಲಿಯೂ ಗೃಹ ಸಚಿವರಿಗೆ ಪೊಲೀಸ್ ಇಲಾಖೆಯ ಉನ್ನತ ಮೂಲಗಳಿಂದ ಸರಿಯಾದ ಮಾಹಿತಿ ತಿಳಿಸುವವರೇ ಇರುತ್ತಾರೆ. ಅವರು ಗೃಹ ಸಚಿವರಿಗೆ ನಿಖರ ಮಾಹಿತಿ ಕೊಟ್ಟು ಅವರನ್ನು ಸಂತೃಪ್ತಿಗೊಳಿಸುತ್ತಾರೆ. ಇದು ಅಧಿಕಾರದಲ್ಲಿ ಇರುವಾಗ ಸಿಗುವ ಸೌಲಭ್ಯಗಳು. ಹೀಗೆ ಇತ್ತೀಚೆಗೆ ಚಂದ್ರು ಎನ್ನುವ ಯುವಕನನ್ನು ಕೊಲೆ ಮಾಡಲಾಯಿತಲ್ಲ, ಆಗ ಮಾಧ್ಯಮಗಳು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮೊದಲ ರಿಯಾಕ್ಷನ್ ಕೇಳುವ ಸಂದರ್ಭದಲ್ಲಿ ಆ ಕೊಲೆ ಉರ್ದು ಮಾತನಾಡಲು ಗೊತ್ತಿಲ್ಲ ಎನ್ನುವ ಕಾರಣಕ್ಕೆ ಆಗಿದೆ ಎಂದು ಸಚಿವರು ಹೇಳಿಕೆ ಕೊಟ್ಟಿದ್ದರು. ಅದರ ನಂತರ ಮಾಧ್ಯಮಗಳು ಪೊಲೀಸ್ ಕಮೀಷನರ್ ಕಮಲ್ ಪಂಥ್ ಅವರಿಂದ ಅಭಿಪ್ರಾಯ ಕೇಳಿದಾಗ ಅವರು ಉರ್ದು ವಿಷಯದಲ್ಲಿ ಕೊಲೆ ಆಗಿಲ್ಲ ಎಂದು ಹೇಳಿದ್ರು. ಅದರ ನಂತರ ಮಾಧ್ಯಮಗಳು ಮತ್ತೆ ಗೃಹ ಸಚಿವರಿಗೆ ಕಮೀಷನರ್ ಹೀಗೆ ಹೇಳುತ್ತಿದ್ದಾರಲ್ಲ ಎಂದಾಗ ಹಾಗಾದರೆ ನಾನು ಮೊದಲು ಹೇಳಿದ ಹೇಳಿಕೆ ತಪ್ಪಾಗಿರಬಹುದು ಎನ್ನುವ ಅರ್ಥದ ಮಾತುಗಳನ್ನು ಹೇಳಿದ್ರು. ಇದೇ ಸಮಯವನ್ನು ಕಾಯುತ್ತಿದ್ದ ವಿಪಕ್ಷಗಳು ಗೃಹ ಸಚಿವರು ತನಿಖೆಯ ಹಾದಿ ತಪ್ಪಿಸುತ್ತಿದ್ದಾರೆ, ಸುಳ್ಳು ಹೇಳಿಕೆ ಕೊಡುತ್ತಿದ್ದಾರೆ, ಅವರನ್ನು ಇಳಿಸಿ ಎಂದು ಬೊಬ್ಬೆ ಹೊಡೆಯಲು ಆರಂಭಿಸಿದವು. ಈಗ ಚಂದ್ರುವಿನ ಇಬ್ಬರು ಸ್ನೇಹಿತರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಅದರಲ್ಲಿ ಒಬ್ಬ ಉರ್ದು ಭಾಷೆ ಮಾತನಾಡಲಿಲ್ಲ ಎಂದು ಕೊಲೆಯಾಗಿದೆ ಎಂದು ಹೇಳಿಕೆ ಕೊಟ್ಟಿದ್ದಾನೆ. ಅದರ ನಂತರ ಫೀಲ್ಡಿಗೆ ಇಳಿದ ಭಾರತೀಯ ಜನತಾ ಪಾರ್ಟಿಯ ಮುಖಂಡರು ಪೊಲೀಸ್ ಕಮೀಷನರ್ ಸುಳ್ಳು ಹೇಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರಕಾರಕ್ಕೂ ಪೊಲೀಸ್ ಇಲಾಖೆಗೂ ತಾಳಮೇಳ ಇಲ್ಲ ಎಂದು ಮತ್ತೆ ಸಾಬೀತಾಗಿದೆ. ಒಂದು ಹತ್ಯೆಯ ಸಂಬಂಧ ಮಾಧ್ಯಮಗಳು ಸುದ್ದಿ ಬಿತ್ತರಿಸುತ್ತಿರುವಾಗ, ರಾಜ್ಯದ ಜನ ಚರ್ಚೆ ಮಾಡುತ್ತಿರುವಾಗ ಅದಕ್ಕೆ ಗೃಹ ಸಚಿವರು ಹೇಳಿಕೆ ಕೊಡಬೇಕಾದರೆ ಅವರು ಪೊಲೀಸ್ ಕಮೀಷನರ್ ಅವರಿಗೆ ನೇರ ಕರೆ ಮಾಡಿ ಸಮಾಲೋಚಿಸಿ ಹೇಳಿಕೆ ಕೊಡಬೇಕು. ಒಂದು ವೇಳೆ ಅನಧಿಕೃತ ಮೂಲಗಳಿಂದ ಕೇಳಿ ಹೇಳಿಕೆ ಕೊಟ್ಟರೆ ಅದಕ್ಕೆ ಪುರಾವೆಗಳು ಇಲ್ಲದೇ ಸಿಕ್ಕಿಬೀಳುವ ಸಾಧ್ಯತೆ ಇದೆ. ಒಂದು ವೇಳೆ ಗೃಹ ಸಚಿವರು ಹೇಳಿಕೆ ಕೊಟ್ಟರು ಎಂದೇ ಇಟ್ಟುಕೊಳ್ಳೋಣ, ಕಮೀಷನರ್ ಅದರ ವಿರುದ್ಧ ಹೇಳಿಕೆ ಕೊಟ್ಟರೆ ಆಗ ಅದು ವಿಪಕ್ಷಗಳಿಗೆ ಮಾತನಾಡಲು ಅವಕಾಶ ಕೊಟ್ಟ ಹಾಗೆ ಆಗುತ್ತದೆ. ಈಗ ಸ್ನೇಹಿತನೊಬ್ಬ ಉರ್ದು ವಿಷಯದಲ್ಲಿಯೇ ಕೊಲೆಯಾಗಿದೆ ಎಂದು ಹೇಳಿದ್ದಾನೆ. ಹಾಗಾದರೆ ಕಮೀಷನರ್ ಹೇಳಿದ್ದು ಸುಳ್ಳಾ? ಅದೇ ಇನ್ನೊಬ್ಬ ಗೆಳೆಯ ಮಾತನಾಡಿ ಉರ್ದು ವಿಷಯದಲ್ಲಿ ಹತ್ಯೆ ಅಲ್ಲ, ಬೈಕ್ ಡಿಕ್ಕಿಯಾಗಿ, ಮಾತಿಗೆ ಮಾತು ಬೆಳೆದು ಹತ್ಯೆಯಾಗಿದೆ ಎಂದಿದ್ದಾನೆ. ಈಗ ನಿಜವಾಗಿಯೂ ಯಾಕೆ ಕೊಲೆಯಾಯಿತು ಎಂದು ತನಿಖೆ ಆಗಬೇಕು. ಆದರೆ ಅದರ ಮೊದಲೇ ಗೃಹಸಚಿವರಿಂದ ರಾಜೀನಾಮೆ ಕೊಡಿಸಿ ಎಂದು ವಿಪಕ್ಷಗಳು ಹಟಕ್ಕೆ ಕುಳಿತರೆ ಮತ್ತೊಂದೆಡೆ ಬಿಜೆಪಿ ಮುಖಂಡರು ಕಮೀಷನರ್ ವಿರುದ್ಧ ಕ್ರಮ ಆಗಬೇಕು ಎಂದಿದ್ದಾರೆ. ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ಬಂದ ಸಮಯದಿಂದಲೂ ಪೊಲೀಸ್ ಇಲಾಖೆ ಮತ್ತು ರಾಜ್ಯ ಸರಕಾರದ ನಡುವೆ ಸಂಬಂಧ ಅಷ್ಟಕಷ್ಟೇ ಎನ್ನುವುದು ಸಾಬೀತಾಗಿದೆ. ಯಾಕೆಂದರೆ ಖಡಕ್ ಸಚಿವರೆನಿಸಿದ ಸುನೀಲ್ ಕುಮಾರ್ ಕ್ಷೇತ್ರದಲ್ಲಿಯೇ ಅವ್ಯಾಹತವಾಗಿ ಅಕ್ರಮ ಗೋ ಕಳ್ಳತನ ಆಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಇದೇ ಪರಿಸ್ಥಿತಿ. ಹೀಗಿರುವಾಗ ಪೊಲೀಸ್ ಇಲಾಖೆ ಸರಕಾರದ ಮಾತನ್ನು ಕೇಳುವುದಿಲ್ಲವೋ ಅಥವಾ ಇವರು ನಮ್ಮ ಬಳಿ ಟ್ರಾನ್ಸಫರ್, ಪೋಸ್ಟಿಂಗ್ ಗೆ ಲಕ್ಷಾಂತರ ರೂಪಾಯಿ ತೆಗೆದುಕೊಂಡು ಈಗ ಬರುವ ಆದಾಯದ ಮೂಲವನ್ನು ಮಾತ್ರ ಬಂದ್ ಮಾಡುತ್ತಿದ್ದಾರೆ ಎಂದು ಪೊಲೀಸರು ಅಂದುಕೊಂಡಿದ್ದಾರೋ ತಿಳಿಯುತ್ತಿಲ್ಲ. ಒಟ್ಟಿನಲ್ಲಿ ಚುನಾವಣೆಗೆ ಒಂದು ವರ್ಷ ಇರುವಾಗ ಆಗುವ ಪ್ರತಿ ಹತ್ಯೆಯೂ ಏನೇನೋ ಬಣ್ಣ ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಅದನ್ನು ಸಮರ್ಥವಾಗಿ ನಿಭಾಯಿಸುವ ಕಲೆಗಾರಿಕೆ ಆಡಳಿತ ಪಕ್ಷದವರಿಗೆ ಇರಲೇಬೇಕಾಗುತ್ತದೆ. ಅದರಲ್ಲಿಯೂ ಊಹೆನೆ ಮಾಡದೇ ಗೃಹ ಸಚಿವ ಸ್ಥಾನ ಸಿಕ್ಕಿದಾಗ ನಿಮ್ಮವರೇ ನಿಮಗೆ ಗುಂಡಿ ತೋಡುವ ಚಾನ್ಸ್ ಜಾಸ್ತಿ ಇರುತ್ತದೆ. ಅದು ಆರಗ ಜ್ಞಾನೇಂದ್ರ ಅವರಿಗೆ ಗೊತ್ತಿಲ್ಲದಷ್ಟು ಅವರು ಹೊಸಬರಲ್ಲ. ಆದರೆ ಮಲೆನಾಡಿನ ಮಣ್ಣು ಪ್ರೀತಿ ಸೂಸುವಷ್ಟು ಎಚ್ಚರಿಕೆಯ ಘಮ ಹೊರಗೆ ಹಾಕುವುದಿಲ್ಲ. ಆ ನಿಟ್ಟಿನಲ್ಲಿ ಆರಗ ಮುನ್ನೆಚ್ಚರಿಕೆ ವಹಿಸಬೇಕು. ಕೊಟ್ಟ ಕುದುರೆಯನ್ನು ಏರದವನು ಧೀರನೂ ಅಲ್ಲ, ಶೂರನೂ ಅಲ್ಲ ಎನ್ನುವಂತಹ ಮಾತಿದೆ. ಅಂತಹ ಆಪಾದನೆ ಬರದಂತೆ ನೋಡಿಕೊಳ್ಳಬೇಕು. ರಾಜಕೀಯ ಹೊರಗಿನಿಂದ ನೋಡುವಷ್ಟು ಚೆಂದ ಇಲ್ಲ!
Leave A Reply