ಸರಕಾರಿ ಕಚೇರಿಯಲ್ಲಿ ಐಡಿ ಅಲ್ಲ, ಸಿಸಿಟಿವಿ ತನ್ನಿ!
ಕುತ್ತಿಗೆಗೆ ಐಡಿ ಕಾರ್ಡ್ ಮತ್ತು ಟೇಬಲ್ ಮೇಲೆ ಹೆಸರು ಜೊತೆ ಹುದ್ದೆ ಇರುವ ಫಲಕವನ್ನು ಇಡಬೇಕು ಎಂದು ಎಲ್ಲಾ ಸರಕಾರಿ ಕಚೇರಿಗಳಿಗೆ ಆದೇಶ ಹೊರಡಿಸಲಾಗಿದೆ. ಅದರೊಂದಿಗೆ ಇನ್ನು ಮುಂದೆ ಎಲ್ಲಾ ಸರಕಾರಿ ಕಚೇರಿಯಲ್ಲಿ ನಿರ್ದಿಷ್ಟವಾಗಿ ಯಾರಿಗೆ ಎಷ್ಟು ಲಂಚ ಕೊಡಬೇಕಾಗುತ್ತದೆ ಎನ್ನುವ ಬೋರ್ಡ್ ಹಾಕಿಬಿಟ್ಟರೆ ಕೆಲಸ ಮಾಡಿಸಲು ಬರುವ ನಾಗರಿಕರಿಗೆ ಯಾರಿಗೆ ಎಷ್ಟು ಕೊಡಬೇಕು ಎನ್ನುವ ಗೊಂದಲ ಕೂಡ ಇರುವುದಿಲ್ಲ. ಅದು ಬಿಟ್ಟು ಕೇವಲ ಐಡಿ, ನಾಮಫಲಕದಿಂದ ಆಗುವಂತದ್ದು ಏನು ಇದೆ. ಹೆಚ್ಚೆಂದರೆ ಇನ್ನು ಮುಂದೆ ನೀವು ಯಾರಿಗೆ ಲಂಚ ಕೊಡುತ್ತಿದ್ದೀರಿ ಮತ್ತು ಅವರ ಹುದ್ದೆ ಏನು ಎನ್ನುವುದನ್ನು ಸುಲಭವಾಗಿ ಅರಿಯಬಹುದು ಬಿಟ್ಟರೆ ಆಗುವಂತದ್ದು ಏನೂ ಇಲ್ಲ. ಯಾಕೆಂದರೆ ಯಾವ ಕೆಳಗಿನ ಅಧಿಕಾರಿ ಕೂಡ ಮೇಲಿನವರಿಗೆ ಗೊತ್ತಿಲ್ಲದೆ ತನ್ನ ಅಂಗಡಿ ತೆರೆದು ಕುಳಿತಿರುವುದಿಲ್ಲ. ಮೇಲಿನವರ ಮೌನ ಮತ್ತು ನೇರ ಸಮ್ಮತಿಯೊಂದಿಗೆ ಕೆಳಗೆ ಲಂಚದ ಚೌಕಾಶಿ ನಡೆಯುತ್ತಿರುತ್ತದೆ. ಆದ್ದರಿಂದ ನೀವು ಯಾರಿಗೆ ಲಂಚ ಕೊಡುತ್ತಿದ್ದಿರಿ ಎಂದು ಗೊತ್ತಿದ್ದರೂ ಮೇಲಿನವರಿಗೆ ದೂರು ಕೊಡಲು ಹೋಗುವುದಿಲ್ಲ. ಯಾಕೆಂದರೆ ಒಂದು ವೇಳೆ ಜಿಲ್ಲಾಡಳಿತದ ಯಾವುದಾದರೂ ವಿಭಾಗದ ಅಧಿಕಾರಿಯ ವಿರುದ್ಧ ನೀವು ಲಂಚದ ದೂರು ಕೊಡುವುದಾದರೆ ಅದನ್ನು ಅಪರ ಜಿಲ್ಲಾಧಿಕಾರಿಯವರಿಗೆ ಕೊಡಬೇಕು. ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಯಾವುದಾದರೂ ಅಧಿಕಾರಿಯ ವಿರುದ್ಧ ದೂರು ಕೊಡಲು ಇದ್ದರೆ ಆರ್ ಟಿಒ ಅವರಿಗೆ ಕೊಡಬೇಕಾಗುತ್ತದೆ. ಆದರೆ ಅದರಿಂದ ಏನೂ ಪ್ರಯೋಜನವಿರುವುದಿಲ್ಲ. ಯಾಕೆಂದರೆ ಬೇಲಿ ಹೊಲದ ಪರಧಿಯಲ್ಲಿ ಅಲ್ಲ, ಮಧ್ಯದಲ್ಲಿಯೇ ಮಲಗಿರುವುದರಿಂದ ನೀವು ಎಲ್ಲಿ ಕಾಲಿಟ್ಟರೂ ರಕ್ತ ಹೊರಗೆ ಬರುತ್ತದೆ. ನೀವು ಎಷ್ಟೇ ನಿಯಮಗಳನ್ನು ಮಾಡಿದರೂ ಅದನ್ನು ಪಾಲಿಸುವವರು ಇಲ್ಲವಾದರೆ ಅದರಿಂದ ಪ್ರಯೋಜನ ಏನು? ಉದಾಹರಣೆಗೆ ಪಾಲಿಕೆಯಲ್ಲಿ ಇಂಜಿನಿಯರ್ಸ್, ನಗರ ಯೋಜನಾ ಅಧಿಕಾರಿ, ಸಹಾಯಕ ನಗರ ಯೋಜನಾ ಅಧಿಕಾರಿ, ಕಂದಾಯ ಅಧಿಕಾರಿ ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ಫೀಲ್ಡ್ ನಲ್ಲಿ ಇರಬೇಕು, ನಂತರ ಮಧ್ಯಾಹ್ನ 3.30 ರಿಂದ ಕಡ್ಡಾಯವಾಗಿ ತಮ್ಮ ಕಚೇರಿ ಕೋಣೆಯಲ್ಲಿಯೇ ಇರಬೇಕು ಎನ್ನುವ ನಿಯಮ ಇದೆ. ಆದರೆ ಇರ್ತಾರಾ? ಇಲ್ಲ. ಈ ವಿಷಯವನ್ನು ಮೊನ್ನೆ ಪಾಲಿಕೆಯ ಪರಿಷತ್ ಸಭೆಯಲ್ಲಿಯೇ ಒಬ್ಬರು ಕಾಂಗ್ರೆಸ್ ಕಾರ್ಪೋರೇಟರ್ ಕೇಳಿದ್ದಾರೆ. ಯಾಕೆ ಅಧಿಕಾರಿಗಳು ಇರಲ್ಲ. ಯಾಕೆಂದರೆ ಹೇಳುವವರು, ಕೇಳುವವರು ಯಾರು ಇಲ್ಲ.
ಯಾವುದೇ ಸರಕಾರಿ ಕಚೇರಿಯಲ್ಲಿ ಬೆಳಿಗ್ಗೆ 10 ಗಂಟೆಗೆಲ್ಲ ಉದ್ಯೋಗಿಗಳು ಹಾಜರಿರಬೇಕು. ಇರುತ್ತಾರಾ? ಹೆಚ್ಚಿನವರು ಬರುವುದೇ ಹತ್ತೂವರೆಯ ನಂತರ. ಪರ್ಮನೆಂಟ್ ಸ್ಟಾಫ್ ಮಾತ್ರವಲ್ಲ, ಈ ಹೊರಗುತ್ತಿಗೆಯ ಮೇಲೆ ನೇಮಕವಾಗಿರುತ್ತಾರಲ್ಲ, ಅವರು ಕೂಡ ಹಾಜರಾತಿಯನ್ನು ಗಂಭೀರವಾಗಿ ತೆಗೆದುಕೊಂಡೇ ಇಲ್ಲ. ಹಾಗಂತ ನಿಯಮ ಇಲ್ವಾ? ಇದೆ. ಬೆರಳು ಮುದ್ರಿಕೆಯನ್ನು ಅಲ್ಲಿ ಜೋಡಿಸಲಾಗಿದೆ. ಆದರೆ ಅದರ ಉದ್ದೇಶ ಈಡೇರುತ್ತಿಲ್ಲ. ಒಂದು ವೇಳೆ ಯಾವುದೇ ಉದ್ಯೋಗಿ ಹತ್ತೂವರೆ, ಹನ್ನೊಂದು ಗಂಟೆಗೆ ಬಂದರೆ ಅಂತವರ ವಿರುದ್ಧ ಏನಾದರೂ ಕ್ರಮ ಉಂಟಾ? ಇಲ್ಲ. ಒಂದು ವೇಳೆ ಸೂಕ್ತ ಕ್ರಮ ಇಲ್ಲದಿದ್ದರೆ ಅದು ಇದ್ದು ಪ್ರಯೋಜನವೇನು? ಹೆಚ್ಚಿನವರು ಥಂಬ್ ಇಂಪ್ರೇಶನ್ ಮಾಡುವುದೇ ಇಲ್ಲ. ಕೇಳಿದ್ರೆ ನಾವು ಹಲವಾರು ವರ್ಷಗಳಿಂದ ಬೆರಳುಗಳ ನಡುವೆ ಪೆನ್ನು ಹಿಡಿದು ನಮ್ಮ ಗೆರೆಗಳೇ ಅಳಿಸಿಹೋಗಿವೆ. ನಾವು ಎಷ್ಟು ಒತ್ತಿ ಹಿಡಿದರೂ ಥಂಬ್ ಇಂಪ್ರೇಶನ್ ಮೂಡುವುದಿಲ್ಲ, ಏನು ಮಾಡುವುದು ಎಂದು ಕೇಳುತ್ತಿದ್ದಾರೆ. ಅದಕ್ಕೆ ಇನ್ನು ಮುಂದೆ ಸರಕಾರ ಏನು ಮಾಡಬೇಕು ಎಂದರೆ ಈ ಬೆರಳುಗಳ ಥಂಬ್ ಇಂಪ್ರೇಶನ್ ನಿಂದ ಈ ಉದ್ಯೋಗಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ ಎಂದರೆ ಫೆಸ್ ಇಂಪ್ರೆಶನ್ ಜಾರಿಗೆ ತರಬೇಕು. ಚಾಪೆ ಎಳೆದರೆ ರಂಗೋಲಿ ಕೆಳಗೆ ಜಾರುವ ಈ ಸರಕಾರಿ ವ್ಯವಸ್ಥೆಯಲ್ಲಿ ಅದರಿಂದಲೂ ಏನಾದರೂ ಸರಿ ಆಗಬಹುದು ಎನ್ನುವ ಆಶಯ ನಮಗೆ ಇರಬಾರದು. ನಮ್ಮ ಮುಖ ಈಗ ಸುಕ್ಕುಗಟ್ಟಿದೆ, ಅದರಿಂದ ಸಿಸ್ಟಮ್ ಗುರುತಿಸುತ್ತಿಲ್ಲ ಎಂದು ಹೇಳಿದರೂ ಹೇಳಿಬಿಟ್ಟಾರು. ಒಟ್ಟಿನಲ್ಲಿ ಸರಕಾರಿ ಕಚೇರಿಗಳಲ್ಲಿ ಶಿಸ್ತು ಹೇಗೆ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಯಾರಿಗೂ ಗೊತ್ತಾಗುವುದಿಲ್ಲ.
ಇನ್ನು ಕೊನೆಯದಾಗಿ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಯಾವಾಗ ಬೇಕಾದರೂ ಹೋಗುತ್ತಿರುತ್ತಾರೆ ಮತ್ತು ಯಾವ ಬೇಕಾದರೂ ಬರುತ್ತಿದ್ದಾರೆ. ಇದನ್ನು ತಪ್ಪಿಸಬೇಕಾದರೆ ಪಾಲಿಕೆಗೆ ಒಳಬರುವ ಮೂರ್ನಾಕು ದ್ವಾರಗಳನ್ನು ಬಂದ್ ಮಾಡಿ ಒಂದೇ ದ್ವಾರ ಇಡಬೇಕು. ದ್ವಾರದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಸೆಟ್ ಮಾಡಬೇಕು. ಅದರ ಮಾನಿಟರ್ ಅನ್ನು ಪಾಲಿಕೆಯ ಆಯುಕ್ತರು ತಮ್ಮ ವಿಶಾಲವಾದ ಚೇಂಬರಿನಲ್ಲಿ ತಮ್ಮ ಕಣ್ಣ ಮುಂದೆಯೇ ಗೋಡೆಗೆ ಹೊಡೆದು ಇಡಬೇಕು. ಅವರು ಯಾವಾಗ ಯಾವ ಅಧಿಕಾರಿ ತಮ್ಮ ಚೇಂಬರಿನಲ್ಲಿ ಇರುವುದಿಲ್ಲವೋ ಅವರು ಎಲ್ಲಿದ್ದಾರೆ ಎಂದು ವಿಚಾರಿಸಲು ಆಪ್ತ ಸಹಾಯಕರಿಗೆ ಸೂಚನೆ ನೀಡಬೇಕು. ಒಂದು ಪ್ರೋಫೆಶನಲ್, ಖಾಸಗಿ ಕಂಪೆನಿಯ ರೀತಿಯಲ್ಲಿ ಸರಕಾರಿ ಕಚೇರಿಗಳು ಕೆಲಸ ಮಾಡಬೇಕು. ಆಗ ಮಾತ್ರ ಶಿಸ್ತು ಸಾಧ್ಯ. ಇಲ್ಲದೇ ಹೋದರೆ ಇವರು ನಿಯಮ ತರುವುದಕ್ಕಾಗಿ ಒಂದಿಷ್ಟು ಹಣ ಸುರಿಯುವುದು. ಅದರಿಂದ ವೆಂಡರ್ ಗೆ ಲಾಭ ವಿನ: ಜನಸಾಮಾನ್ಯರಿಗೆ ಅಲ್ಲ!
Leave A Reply