ಮಂಗಳೂರಿನಲ್ಲಿ 65 ಅಕ್ರಮ ಕಟ್ಟಡಗಳಿವೆ, ತೆಗೆಯುತ್ತೀರಾ, ಕಲ್ಲು ಬಿಸಾಡಲು ಕಾಯುತ್ತೀರಾ!
ಉತ್ತರ ಪ್ರದೇಶ, ಮಧ್ಯಪ್ರದೇಶ, ದೆಹಲಿ ಎಲ್ಲಾ ಕಡೆ ಅಕ್ರಮ ಕಟ್ಟಡಗಳ ಮೇಲೆ ಬುಲ್ಡೋಜರ್ ಹರಿಸಲು ಅಲ್ಲಿನ ರಾಜ್ಯ ಸರಕಾರ ಮನಸ್ಸು ಮಾಡಿಯಾಗಿದೆ. ಅದರಂತೆ ಅನುಷ್ಟಾನ ಕೂಡ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ, ರಾಜ್ಯದ ಇಂಧನ ಸಚಿವರೂ ಆಗಿರುವ ಸುನೀಲ್ ಕುಮಾರ್ ಶಾಂತಿಗೆ ಸಹಕರಿಸಿ ಅಥವಾ ಬುಲ್ಡೋಜರ್ ಗೆ ಸಹಕರಿಸಿ ಎಂದು ಸೂಚ್ಯವಾಗಿ ತಿಳಿಸಿದ್ದಾರೆ. ಅವರು ಹೇಳುತ್ತಿರುವುದು ರಾಜ್ಯದಲ್ಲಿ ಕೆಲವೆಡೆ ಗಲಭೆಕೋರರು ಸಾರ್ವಜನಿಕ ಸ್ವತ್ತುಗಳನ್ನು ಹಾಳು ಮಾಡುತ್ತಿದ್ದಾರಲ್ಲ, ಅವರ ಮನೆ, ಕಟ್ಟಡಗಳು ಅಕ್ರಮವಾಗಿ ಇದ್ದರೆ ಅದನ್ನು ಕೆಡವಲಾಗುವುದು ಎಂದು ಹಿಂಟ್ ಕೊಟ್ಟಿದ್ದಾರೆ. ಒಬ್ಬ ಗಲಭೆಕೋರ ಕಲ್ಲು ಬಿಸಾಡಿದ್ದನ್ನು ಸಿಸಿಟಿವಿ ಕ್ಯಾಮೆರಾದಲ್ಲಿ ನೋಡಿ ಮರುದಿನ ಅವನ ಮನೆ ಅಕ್ರಮವೋ, ಸಕ್ರಮವೋ ಎಂದು ಪತ್ತೆಹಚ್ಚಿ ಅಕ್ರಮ ಆದರೆ ಬುಲ್ಡೋಜರ್ ತೆಗೆಯಿರಿ, ಕೆಡವೋಣ ಎಂದು ಯಾವುದೇ ಸಚಿವರು ಹಾಗೆ ನಿರ್ಧರಿಸಲು ಆಗುವುದಿಲ್ಲ. ಅದಕ್ಕೆ ಒಂದಿಷ್ಟು ಪ್ರಕ್ರಿಯೆಗಳು ಇರುತ್ತವೆ. ಅದರ ನಂತರ ಕೆಡವಲು ಹೊರಡಬೇಕಾಗುತ್ತದೆ. ಆದರೆ ಅವರೇ ಉಸ್ತುವಾರಿ ಆಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಪಾಲಿಕೆ ವ್ಯಾಪ್ತಿಯಲ್ಲಿ ಕನಿಷ್ಟ 65 ಅಕ್ರಮ ಕಟ್ಟಡಗಳನ್ನು ಸುಲಭವಾಗಿ ಕೆಡವಲು ಅವಕಾಶ ಇರುವಾಗ ಇವರು ಕೆಡವಲು ಮುಂದಾಗುತ್ತಾರೋ ಅಥವಾ ಆ ಕಟ್ಟಡದವರು ಕಲ್ಲು ಬಿಸಾಡಲಿ ಎಂದು ಕಾಯುತ್ತಾರೋ ನೋಡಬೇಕು.
ಮೊದಲನೇಯದಾಗಿ ಒಂದು ಸಣ್ಣ ಹಿನ್ನಲೆಯನ್ನು ನಿಮಗೆ ಇಲ್ಲಿ ಹೇಳಲೇಬೇಕು. ಯಡ್ಡಿ ಮೊದಲ ಬಾರಿ ಸಿಎಂ ಆಗಿದ್ದಾಗ 2008 ರ ಆಸುಪಾಸಿನಲ್ಲಿ ಒಂದು ಸೂಚನೆ ಕೊಟ್ಟಿದ್ದರು. ಅದೇನೆಂದರೆ ಯಾವುದಾದರೂ ಒಂದು ವಸತಿ ಕಟ್ಟಡ 50% ಅನಧಿಕೃತವಾಗಿದ್ದರೆ ಅಥವಾ ಯಾವುದಾದರೂ ವಾಣಿಜ್ಯ ಕಟ್ಟಡ 20% ಅನಧಿಕೃತವಾಗಿದ್ದರೆ ಅದನ್ನು ಅಕ್ರಮ-ಸಕ್ರಮ ಯೋಜನೆಯಡಿ ನಿರ್ದಿಷ್ಟ ದಂಡವನ್ನು ಕಟ್ಟಿ ನಂತರ ಸಕ್ರಮಗೊಳಿಸಬಹುದು. ಅದಕ್ಕೆ ಮಾನ್ಯ ಉಚ್ಚ ನ್ಯಾಯಾಲಯ ಕೂಡ ಸಮ್ಮತಿ ಸೂಚಿಸಿದೆ. ಈಗ ಆ ಪ್ರಕರಣ ಮಾನ್ಯ ಸುಪ್ರೀಂ ಕೋರ್ಟಿನಲ್ಲಿ ಬಾಕಿ ಉಳಿದಿದೆ. ಇನ್ನು ಮಂಗಳೂರಿನ ವಿಷಯಕ್ಕೆ ಬರೋಣ. ಇಲ್ಲಿ ಪಾಲಿಕೆಯ ಆಯುಕ್ತರಾಗಿದ್ದ ಹರೀಶ್ ಕುಮಾರ್ ಸುಮಾರು 136 ಅನಧಿಕೃತ ಕಟ್ಟಡಗಳ ಪಟ್ಟಿಯನ್ನು ಸಿದ್ಧಪಡಿಸಿ ಅವುಗಳನ್ನು ಧರೆಗೆ ಉರುಳಿಸುವ ಸ್ಕೆಚ್ ಹಾಕಿ ಕುಳಿತಿದ್ದರು. ಅಷ್ಟು ಕಟ್ಟಡಗಳು ನಿರ್ನಾಮವಾದರೆ ಆಗ ಮಂಗಳೂರು ಒಂದಿಷ್ಟು ವೈಜ್ಞಾನಿಕವಾಗಿ ಅಭಿವೃದ್ಧಿಯಾಗುವತ್ತ ಸಾಗುವ ಸಾಧ್ಯತೆ ಇತ್ತು. ಆ ಕಟ್ಟಡಗಳಲ್ಲಿ ಕೆಲವು ಕಟ್ಟಡಗಳ ಮಾಲೀಕರು ಅಕ್ರಮ-ಸಕ್ರಮಕ್ಕೆ ಅರ್ಜಿ ಹಾಕಿದರು. ಕೆಲವರು ನ್ಯಾಯಾಲಯದ ಮೊರೆ ಹೋದರು. ಇರಲಿ, ಅದನ್ನು ಬಿಡೋಣ. ಈಗ ಆ 136 ಕಟ್ಟಡಗಳಲ್ಲಿ ಅತ್ತ ಅಕ್ರಮ-ಸಕ್ರಮಕ್ಕೂ ಅರ್ಜಿ ಹಾಕದೇ, ನ್ಯಾಯಾಲಯಕ್ಕೂ ಹೋಗದೇ ಹಾಗೆ ಇರುವ ಸುಮಾರು 65 ಕಟ್ಟಡಗಳ ಬಗ್ಗೆ ಮಾತ್ರ ಮಾತನಾಡೋಣ. ಇನ್ನು ಪಾಲಿಕೆಯ ಕಮೀಷನರ್ ಅವರ ಆದೇಶದ ಮೇಲೆ ಕೋರ್ಟಿಗೆ ಹೋದ ಕೆಲವು ಕಟ್ಟಡ ಮಾಲೀಕರ ವಿರುದ್ಧ ತೀರ್ಪು ಬಂದಿದೆ. ಉಚ್ಚ ನ್ಯಾಯಾಲಯಕ್ಕೆ ಹೋದ ಅನಧಿಕೃತ ಕಟ್ಟಡಗಳ ಮಾಲೀಕರಲ್ಲಿ ನಾಲ್ವರಲ್ಲಿ ಸೋಲಾಗಿದೆ. ಈಗ ಅದನ್ನೆಲ್ಲ ಪಕ್ಕಕ್ಕೆ ಇಟ್ಟರೂ ಆ 65 ಅನಧಿಕೃತ ಕಟ್ಟಡಗಳ ಮಾಲೀಕರು ತಾವು ತಪ್ಪು ಮಾಡಿದ್ದು ಹೌದು ಎಂದು ಒಪ್ಪಿಕೊಂಡಂತೆ ಅಲ್ಲವೇ. ಆಗಿದ್ದರೆ ಅವರ ಕಟ್ಟಡಗಳನ್ನು ಕೆಡವಬಹುದಲ್ಲ.
ಹೇಗೂ ನೀವು ಯುಪಿ ಮಾದರಿಯನ್ನು ಇಟ್ಟುಕೊಂಡವರು. ಅವರದ್ದೇ ದಾರಿ ಪಾಲಿಸಬಹುದಲ್ಲ, ಯಾಕೆ ಧೈರ್ಯ ಇಲ್ವಾ? ಅಥವಾ ನಿಮಗೆ ನೈತಿಕತೆ ಇಲ್ವಾ? ನೀವು ಟಿವಿ ಕ್ಯಾಮೆರಾಗಳ ಎದುರಿಗೆ ಬೀದಿಬದಿ ವ್ಯಾಪಾರಿಗಳನ್ನು ಓಡಿಸಿ, ಅವರ ಸ್ವತ್ತುಗಳನ್ನು ವಶಪಡಿಸಿ ನಂತರ ಯಾರದ್ಯಾರದೋ ಶಿಫಾರಸ್ಸಿಗೆ ವಶಪಡಿಸಿಕೊಂಡ ಮಾಲುಗಳನ್ನು ಮತ್ತೆ ಹಿಂತಿರುಗಿಸುವ ನಾಟಕ ಮಾಡುವವರು. ನಿಮಗೆ ಅಲ್ಲಿಯೇ ದಿಟ್ಟವಾಗಿ ಮಂಗಳೂರಿನ ಸೌಂದರೀಕರಣದ ಬಗ್ಗೆ ಕ್ರಮ ತೆಗೆದುಕೊಳ್ಳಲು ಇಚ್ಚಾಶಕ್ತಿ ಇಲ್ಲ. ಇನ್ನು ನೀವು ಶ್ರೀಮಂತರ, ಪ್ರಭಾವಿಗಳ ಅನಧಿಕೃತ ಕಟ್ಟಡಗಳನ್ನು ಮುಟ್ಟುವುದುಂಟೆ? ಇಲ್ಲಿ ಸ್ಥಳೀಯ ಶಾಸಕರು ಮತ್ತು ಉಸ್ತುವಾರಿ ಸಚಿವರು ತಮ್ಮ ಜವಾಬ್ದಾರಿ ಮೆರೆದು ನಗರದ ವೈಜ್ಞಾನಿಕ ಬೆಳವಣಿಗೆಗೆ ಅಡ್ಡಿಯಾಗಿರುವ ಅನಧಿಕೃತ ಕಟ್ಟಡಗಳನ್ನು ಕೆಡವಲು ಹೊರಡಬೇಕು. ಆದರೆ ಹೀಗೆ ಕೆಡವಲು ಹೊರಟರೆ ಮೈಲೇಜು ಸಿಗುವುದಿಲ್ಲ ಎಂದು ಇವರು ಅಂದುಕೊಂಡಿರಬಹುದು. ಬಹುಶ: ಅದಕ್ಕಾಗಿ ಒಂದು ಗಲಭೆಯ ಡ್ರಾಮ ಆಗಲಿ, ಕಲ್ಲು ಬಿದ್ದ ಮೇಲೆ ಈ ಪಟ್ಟಿಯನ್ನು ತೆರೆದು ಅದರಲ್ಲಿ ಕಲ್ಲು ಬಿಸಾಡಿದವರ ಯಾವುದಾದರೂ ಕಟ್ಟಡ ಇದೆಯೇನೋ ಎಂದು ನೋಡಿ ಅದರ ಬಳಿಕ ಕ್ರಮ ತೆಗೆದುಕೊಳ್ಳೋಣ ಎಂದು ಇವರು ಐಡಿಯಾ ಹಾಕಿರಬಹುದು. ಒಟ್ಟಿನಲ್ಲಿ ಇಲ್ಲಿ ಪಟ್ಟಿ ಮಾಡಿರುವ ಅನಧಿಕೃತ ಕಟ್ಟಡಗಳನ್ನು ಬಿಟ್ಟು ಯಾರ್ಯಾರಿಗೋ ಹೆದರಿಸಲು ಹೊರಟಿರುವ ರಾಜ್ಯ ಸರಕಾರಕ್ಕೆ ಶುಭವಾಗಲಿ!!
Leave A Reply