ಯುಪಿಯಲ್ಲಿ ಆಗುತ್ತದೆ ಎಂದಾದರೆ ಬೇರೆಡೆ ಯಾಕಿಲ್ಲ!
ಒಂದು ಕಾಲದಲ್ಲಿ ಏನಾದರೂ ವಿಶೇಷ ಇದ್ದಾಗ ಬೇರೆ ರಾಜ್ಯದವರು ಗುಜರಾತ್ ಕಡೆ ನೋಡುತ್ತಿದ್ದರು. ಅಂದರೆ ಗುಜರಾತ್ ಮಾದರಿ ಹೇಗಿದೆ ಎಂದು ನೋಡಿ ಅದನ್ನು ತಮ್ಮ ರಾಜ್ಯದಲ್ಲಿ ಅಳವಡಿಸಲು ಆಯಾ ರಾಜ್ಯಗಳ ಸರಕಾರ ಮುಂದಾಗುತ್ತಿತ್ತು. ವಿಶೇಷವಾಗಿ ಭಾರತೀಯ ಜನತಾ ಪಾರ್ಟಿಯ ಆಡಳಿತ ಇದ್ದ ಕಡೆ ಈ ಪದ ಆಗಾಗ ಪ್ರತಿಧ್ವನಿಸುತ್ತಿತ್ತು. ಈಗ ಕಾಲ ಬದಲಾಗಿದೆ. ಗುಜರಾತ್ ಮುಖ್ಯಮಂತ್ರಿ ಯಾರು ಎಂದು ಥಟ್ಟನೆ ಹೇಳಿ ಎಂದರೆ ಯಾರ ನಾಲಿಗೆಯಲ್ಲಿಯೂ ಹೆಸರು ಬರುವುದಿಲ್ಲ. ಈಗ ರಾಜ್ಯ ಬದಲಗಿದೆ. ಗುಜರಾತ್ ಹೋಗಿ ಉತ್ತರ ಪ್ರದೇಶ ಬಂದಿದೆ. ಎಲ್ಲಾ ರಾಜ್ಯದವರು ಉತ್ತರ ಪ್ರದೇಶದ ಕಡೆ ನೋಡುತ್ತಿರುತ್ತಾರೆ. ಈಗ ಎಲ್ಲಾ ರಾಜ್ಯದವರು ಜಪಿಸುವ ಮಂತ್ರ ಯುಪಿ ಮಾದರಿ. ಅಲ್ಲಿಗೆ ವಿದ್ಯುಕ್ತವಾಗಿ ಯೋಗಿ ಆದಿತ್ಯನಾಥ್ ದೇಶದ ಭವಿಷ್ಯದ ಪ್ರಧಾನಿ ಎಂದು ಬಿಂಬಿಸುವ ಪ್ರಯತ್ನ ಕಾಣುತ್ತಿದೆ. ಮೊನ್ನೆಯಷ್ಟೇ ಮಹಾರಾಷ್ಟ್ರದ ನವನಿರ್ಮಾಣ್ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಕೂಡ ಮಹಾರಾಷ್ಟ್ರಕ್ಕೆ ಯೋಗಿ ತರಹದ ಸರಕಾರ ಬೇಕು. ಈಗ ಏನಿದ್ದರೂ ನಮ್ಮಲ್ಲಿರುವುದು ಭೋಗಿ ಸರಕಾರ ಎಂದು ತಮ್ಮದೇ ಸೋದರ ಸಂಬಂಧಿಯನ್ನು ಮೂದಲಿಸಿದ್ದಾರೆ. ಅಷ್ಟಕ್ಕೂ ಅವರು ಹೇಳುತ್ತಿರುವುದು ಮಸೀದಿಗಳ ಹೊರಗೆ ಮೈಕುಗಳನ್ನು ಹಾಕಿ ಆಜಾನ್ ಎಷ್ಟೋ ದೂರದ ತನಕ ಕೇಳುವಂತೆ ಮಾಡುತ್ತಿರುವ ಮಸೀದಿಗಳ ವಿರುದ್ಧ ಏನೂ ಕ್ರಮ ತೆಗೆದುಕೊಳ್ಳಲಾಗದೇ ಒದ್ದಾಡುತ್ತಿರುವ ಮಹಾರಾಷ್ಟ್ರ ಸರಕಾರದ ಬಗ್ಗೆ. ರಾಜ್ ಠಾಕ್ರೆ ಕೊಟ್ಟಿರುವ ಮೇ 3 ರ ಗಡುವು ಹತ್ತಿರ ಬರುತ್ತಿದೆ. ಶಿವಸೇನೆ ನೇತೃತ್ವದ ಸರಕಾರದ ಎದೆಬಡಿತ ಹೆಚ್ಚಾಗುತ್ತಿದೆ. ಇದನ್ನೇ ಯೋಗಿ ಬೇಕು, ಭೋಗಿ ಬೇಡಾ ಎಂದು ರಾಜ್ ಠಾಕ್ರೆ ಹೇಳುತ್ತಿರುವುದು.
ಉದಾಹರಣೆಗೆ ಉತ್ತರ ಪ್ರದೇಶವನ್ನೇ ತೆಗೆದುಕೊಳ್ಳಿ. ಅಲ್ಲಿ ಸುಪ್ರೀಂಕೋರ್ಟಿನ ಆದೇಶವನ್ನು ಉಲ್ಲಂಘಿಸಿ ಲೌಡ್ ಸ್ಪೀಕರ್ ಬಳಸುತ್ತಿದ್ದ ಸುಮಾರು 41,500 ಧಾರ್ಮಿಕ ಕೇಂದ್ರಗಳನ್ನು ಅಲ್ಲಿನ ಸರಕಾರ ಗುರುತಿಸಿದೆ. ಅದರಲ್ಲಿ 12000 ಲೌಡ್ ಸ್ಪೀಕರ್ ಗಳನ್ನು ತೆಗೆಸಲು ಸೂಚನೆ ನೀಡಲಾಗಿದೆ. ಇನ್ನಷ್ಟು ಪರಿಶೀಲನೆಯ ಹಂತದಲ್ಲಿದೆ. ಬಹುತೇಕ ಧಾರ್ಮಿಕ ಸ್ಥಳಗಳಲ್ಲಿ ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ಎಷ್ಟು ಡೆಸಿಬಲ್ ಶಬ್ದ ಮಾಲಿನ್ಯ ಮೀರುತ್ತದೆಯೋ ಅಂತಹ ಕಡೆ ಸೂಚನೆ ಕೊಟ್ಟು ಮೈಕ್, ಲೌಡ್ ಸ್ಪೀಕರ್ ತೆಗೆಸಲಾಗಿದೆ. ಯುಪಿಯಲ್ಲಿ ಮೀರತ್ ಎನ್ನುವ ಜಿಲ್ಲೆ ಇದೆ. ಆ ಮೀರತ್ ನಲ್ಲಿ ಅಲ್ಪಸಂಖ್ಯಾತರೇ ಹೆಚ್ಚಿರುವ ಸ್ಥಳವೊಂದಿದೆ. ಅಲ್ಲಿ ಮಸೀದಿ ಕಟ್ಟಡದ ಮೇಲೆ ಲೌಡ್ ಸ್ಪೀಕರ್ ಹಾಕಿ ಜೋರಾಗಿ ಆಜಾನ್ ಕೂಗಲಾಗುತ್ತಿತ್ತು. ಅಲ್ಲಿನ ಆಡಳಿತ ಆ ಲೌಡ್ ಸ್ಪೀಕರ್ ತೆಗೆಯಲು ಆದೇಶ ನೀಡಿದ ಬಳಿಕ ಅದನ್ನು ತಕ್ಷಣ ತೆಗೆಯಲಾಗಿದೆ. ಒಬ್ಬನೇ ಒಬ್ಬ ಮುಸಲ್ಮಾನ ಕೂಡ ಪ್ರತಿಭಟಿಸಲಿಲ್ಲ. ಕೇಳಿದ್ರೆ ನಾವು ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಲೇಬೇಕಲ್ವಾ ಎಂದು ಎಷ್ಟು ಕೂಲಾಗಿ ಹೇಳುತ್ತಾರೆ ಎಂದರೆ ನಿಮಗೆ ಆಶ್ಚರ್ಯವಾಗುತ್ತದೆ. ಕೆಲವು ದೇವಸ್ಥಾನಗಳಿಗೆ ನಿಯಮಗಳನ್ನು ಪಾಲಿಸಲು ಹೇಳಲಾಗಿದೆ. ಅಲ್ಲಿಯೂ “ನಮ್ಮದೇ ಸರಕಾರ. ನಮಗೆ ಹೇಳುವುದು ಸರಿಯಾ” ಎಂದು ಯಾರೂ ಪ್ರಶ್ನಿಸಿಲ್ಲ. ಪ್ರತಿಯೊಬ್ಬರು ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಿದ್ದಾರೆ. ಈಗ ವಿಷಯ ಇರುವುದು ಯುಪಿಯಲ್ಲಿ ಆಗುವುದಾದರೆ ಇಲ್ಲಿ ಯಾಕೆ ಆಗಲ್ಲ? ಯಾಕೆಂದರೆ ಸುಪ್ರೀಂ ಕೋರ್ಟ್ ನಿಯಮ ಎಂದರೆ ಅದು ಇಡೀ ರಾಷ್ಟ್ರಕ್ಕೆ ಅನ್ವಯಿಸುವಂತದ್ದು. ಅದನ್ನು ಎಲ್ಲಾ ರಾಜ್ಯಗಳು ಕೂಡ ಪಾಲಿಸಬೇಕು. ಆದರೆ ಯುಪಿ ಬಿಟ್ಟು ಬೇರೆ ರಾಜ್ಯಗಳಲ್ಲಿ ಆಜಾನ್ ಮತ್ತು ಲೌಡ್ ಸ್ಪೀಕರ್ ಎಂದ ಕೂಡಲೇ ಅಲ್ಲಿನ ಸರಕಾರಗಳು ಯಾಕೆ ನಡುಗುತ್ತವೆ? ಯಾಕೆಂದರೆ ಲೌಡ್ ಸ್ಪೀಕರ್ ತೆಗೆಯಿರಿ ಎಂದು ಮಸೀದಿಗಳಿಗೆ ಹೇಳುವ ಧೈರ್ಯ ಯಾವ ಸರಕಾರಕ್ಕೂ ಇಲ್ಲ. ಒಂದು ವೇಳೆ ಹೇಳಿದ್ರೂ ತೆಗೆಯದಿದ್ರೆ ಆ ಸರಕಾರ ಏನು ಮಾಡೋಕೆ ಆಗುತ್ತೆ? ಈಗ ಅಗತ್ಯವಿರುವುದು ಆಯಾ ರಾಜ್ಯದ ಸರಕಾರಗಳು ಯಾವುದೇ ಜಾತಿ, ಧರ್ಮ ನೋಡದೆ ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೆ ತರಲು ಕ್ರಮ ಕೈಗೊಳ್ಳುವುದು. ಆಗುತ್ತಾ ?
Leave A Reply