ತಾಂಟೆರೆ ಬಾಯಿಂದ ವೈಲೆಂಟ್ ಡೈಲಾಗ್; ಇದು ಸಿನೆಮಾ ಅಲ್ಲ ವಾಸ್ತವ!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘರ್ಷ ಮಾಡುವ ಗುತ್ತಿಗೆಯನ್ನು ಸೋಶಿಯಲ್ ಡೆಮಾಕ್ರೆಟಿಕ್ ಫ್ರಂಟ್ ಆಫ್ ಇಂಡಿಯಾ ಪಡೆದುಕೊಂಡಿದೆ. ಮಂಗಳೂರಿನ ಕಣ್ಣೂರಿನಲ್ಲಿ ನಡೆದ ಅವರದ್ದೇ ಜನಾಗ್ರಹ ಎನ್ನುವ ಸಮಾವೇಶದಲ್ಲಿ ಯಶ್ ಕೆಜಿಎಫ್ 2 ನಲ್ಲಿ ಹೇಳಿದ ಡೈಲಾಗ್ ಅನ್ನು ಹೇಳುವ ಮೂಲಕ ತಾಂಟೆರೆ ಬಾ ತಾಂಟ್ ಖ್ಯಾತಿಯ ಆ ಮನುಷ್ಯ ಮತ್ತೆ ವಿವಾದದ ಹೇಳಿಕೆಯನ್ನು ನೀಡಿದ್ದಾರೆ. ರಿಯಾಜ್ ಫರಂಗಿಪೇಟೆಗೆ ಆ ಸಿನೆಮಾದ ಡೈಲಾಗ್ ಇಷ್ಟವಾಗಿರಬಹುದು. ಸಾವಿರಾರು ಜನ ಸೇರಿರುವ ಸಭೆಯಲ್ಲಿ ಅದನ್ನು ಹೇಳಿ ತಾವು ಕೂಡ ಹೀರೋ ಆಗುವ ಉಮ್ಮೇದು ಇರಬಹುದು. ಆದರೆ ಇದು ಸಿನೆಮಾ ಅಲ್ಲ. ಇಲ್ಲಿ ನಿಮ್ಮಂತಹ ವಿವಾದಪ್ರಿಯರಿಗೆ ಹೀರೋ ಆಗುವ ಹಪಾಹಪಿಯಲ್ಲಿ ಕೆಲವು ಅಮಾಯಕರ ಹೆಣ ಬಿದ್ದರೆ ಆಗ ಏನಾಗುತ್ತದೆ. ಕೆಜಿಎಫ್ ಸಿನೆಮಾ ನೋಡಿ ಹೊರಬಂದ ಪ್ರೇಕ್ಷಕನಿಗೆ ಅದು ಸಿನೆಮಾ ಎಂದು ಗೊತ್ತಿರುತ್ತದೆ. ಸಿನೆಮಾಕ್ಕೂ, ನೈಜತೆಗೂ ವ್ಯತ್ಯಾಸದ ಅರಿವಿರುತ್ತದೆ. ಆದರೆ ಬಹಿರಂಗ ವೇದಿಕೆಯಲ್ಲಿ ರಾಜಕೀಯ ನಾಯಕರು ಅಂತಹ ಹೇಳಿಕೆಗಳನ್ನು ಕೊಡುವಾಗ ಯೋಚಿಸಬೇಕು. ಯೋಚಿಸದಿದ್ದರೆ ಅದು ಜಿಲ್ಲೆಯ ನಾಗರಿಕರ ಪಾಲಿಗೆ ಎಚ್ಚರಿಕೆಯ ಗಂಟೆ ಎಂದೇ ಪರಿಗಣಿಸಬೇಕಾಗುತ್ತದೆ. ಮಳಲಿಯಲ್ಲಿ ಪರಿಸ್ಥಿತಿ ಶಾಂತವಾಗಿದೆ. ಅಲ್ಲಿನ ಸ್ಥಳೀಯ ಮುಸ್ಲಿಮರಿಗೆ ಮತ್ತು ಹಿಂದೂಗಳಿಗೆ ಯಾವ ಗಲಾಟೆಯೂ ಬೇಡಾ. ಆದರೆ ಎಸ್ ಡಿಪಿಐಗೆ ಗಲಭೆ ಬೇಕು. ಯಾಕೆಂದರೆ ಅವರಿಗೆ ಅದು ಇಷ್ಟ. ದಕ್ಷಿಣ ಕನ್ನಡ ಜಿಲ್ಲೆ ಶಾಂತವಾಗಿತ್ತಲ್ಲ. ಅದು ನೋಡಲು ಅವರಿಗೆ ಆಗಿಲ್ಲ. ಅದಕ್ಕಾಗಿ ಅವರು ಜನಾಗ್ರಹ ಸಭೆ ಆಯೋಜಿಸಿದ್ದಾರೆ. ಅದರಲ್ಲಿ ರಿಯಾಜ್ ಫರಂಗಿಪೇಟೆ ಈ ಮಾತನ್ನು ಹೇಳಿದ್ದಾರೆ. ಅದೇ ಸಮಾವೇಶದಲ್ಲಿ ಅವರು ಕಾಂಗ್ರೆಸ್ಸಿನ ಮುಖಂಡರಿಗೂ ಟೀಕಿಸಿದ್ದಾರೆ. ಅದು ಇಲ್ಲಿನ ಶಾಸಕ ಯು.ಟಿ. ಖಾದರ್ ಅವರನ್ನು ಕೆರಳಿಸಿದೆ. ಖಾದರ್ ಅವರಿಗೆ ಎಸ್ ಡಿಪಿಐ ಕೊಡುತ್ತಿರುವ ಕೋಮುವಾದಿ ಹೇಳಿಕೆಗಳಿಂದ ಬೇಸರವಾಗಿಲ್ಲ. ಅವರಿಗೆ ನೋವಾದದ್ದು ಸಿದ್ಧರಾಮಯ್ಯನವರಿಗೆ ಟೀಕೆ ಮಾಡಿದಾಗ ಮಾತ್ರ. ಅದಕ್ಕೆ ಅವರು ಪ್ರತ್ಯುತ್ತರ ಕೊಟ್ಟಿದ್ದಾರೆ. ಅದೇ ಡಿಕೆಶಿ ತಾಂಬೂಲ ಪ್ರಶ್ನೆ ಇಟ್ಟವರನ್ನು ಬಂಧಿಸಿ ಎಂದಾಗ ಖಾದರ್ ಅವರಿಗೆ ಏನು ಅನಿಸಿತೋ? ನಿಮಗೆ ಬೇರೆ ಪಕ್ಷದವರು ನಿಮ್ಮ ವಿರುದ್ಧ ಹೇಳಿಕೆ ಕೊಟ್ಟಾಗ ಅಸಮಾಧಾನವಾಗುತ್ತದೆ. ಅದೇ ಜಿಲ್ಲೆಯ ಶಾಂತಿ ಕದಡುವ ಹೇಳಿಕೆ ಕೊಟ್ಟರೆ ನೀವು ಅದರ ಬಗ್ಗೆ ಮೌನ ವಹಿಸುತ್ತಿರಿ. ಮಳಲಿಯ ಒಂದು ಹಿಡಿ ಮರಳು ಮುಟ್ಟಲು ಬಿಡಲ್ಲ ಎಂದು ಎಸ್ ಡಿಪಿಐ ಮುಖಂಡರು ಹೇಳಿದ್ದಾರೆ. ಮರಳು ತೆಗೆಯಬೇಕೋ, ಮಣ್ಣು ತೆಗೆಯಬೇಕೋ ಎಂದು ನ್ಯಾಯಾಲಯ ನಿರ್ಧಾರ ಮಾಡುತ್ತದೆ. ತಾಂಬೂಲ ಪ್ರಶ್ನೆಯ ಬಗ್ಗೆ ಎಸ್ ಡಿಪಿಐ ವ್ಯಂಗ್ಯ ಮಾಡುತ್ತಾ ಇದೆ. ಇದರಿಂದ ಇಲ್ಲಿ ಈಗ ಏನಾಗುತ್ತದೆ? ಅದನ್ನೇ ಸವಾಲಾಗಿ ಕೇಸರಿ ಪಾಳಯ ತೆಗೆದುಕೊಳ್ಳುತ್ತದೆ. ಸುಮ್ಮನೆ ಕುಳಿತುಕೊಂಡರೆ ಜನ ಕೇಳಲ್ವಾ? ಈಗ ಆಗಬೇಕಾಗಿರುವುದು ಅದಲ್ಲ.
ಮುಂದಿನ ದಿನಗಳಲ್ಲಿ ಎರಡು ಸಮುದಾಯದ ಹಿರಿಯರು ಕುಳಿತು ಮಳಲಿ ವಿಷಯದಲ್ಲಿ ಒಂದು ನಿರ್ಧಾರಕ್ಕೆ ಬರಬಹುದು. ಹೊರಗಿನವರು ಇದರಲ್ಲಿ ನಡುವೆ ಬರಲು ಬಿಡಲ್ಲ ಎಂದು ಹೇಳಬಹುದು. ಸ್ಥಳೀಯ ಜನಪ್ರತಿನಿಧಿಗಳನ್ನು ಸಾಕ್ಷಿಯಾಗಿ ಇಟ್ಟು ಸಾಮರಸ್ಯ ಕದಡದೇ ಒಂದು ಜಟಿಲವಾಗಬಹುದಾದ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದು. ಇದಕ್ಕೆ ರಿಯಾಜ್ ಫರಂಗಿಪೇಟೆಯೂ ಅಗತ್ಯವಿಲ್ಲ, ಪ್ರಮೋದ್ ಮುತಾಲಿಕ್ ಕೂಡ ಅನಿವಾರ್ಯ ಅಲ್ಲ.
ಒಂದು ಕಡೆ ರಾಜ್ಯದಲ್ಲಿ ಪಠ್ಯಪುಸ್ತಕದ ಗೊಂದಲ ಮುಂದುವರೆದಿದೆ. ಟಿಪ್ಪು, ಭಗತ್ ಸಿಂಗ್, ಬ್ರಹ್ಮಶ್ರೀ ನಾರಾಯಣ ಗುರು, ಪೆರಿಯಾರ್ ಹೀಗೆ ಯಾರನ್ನು ಎಷ್ಟು ಕಲಿಯಬೇಕು ಎನ್ನುವುದನ್ನು ಅಳತೆ ಮಾಡುತ್ತಾ ಅದೇ ಗದ್ದಲ ಜಾಸ್ತಿಯಾಗುತ್ತಿದೆ. ಇನ್ನೊಂದು ಕಡೆ ಮತ್ತೆ ಹಿಜಾಬ್ ವಿವಾದ ಮಂಗಳೂರಿನಲ್ಲಿ ಕಾಣಿಸಿಕೊಂಡಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಹಂಪನಕಟ್ಟೆಯಲ್ಲಿರುವ ಕಾಲೇಜಿನಲ್ಲಿ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ವಿವಾದವನ್ನು ಮತ್ತೆ ಹಬ್ಬಿಸಿದ್ದಾರೆ. ಆ ಬಗ್ಗೆ ಸಭೆ ನಡೆದು ಹಿಜಾಬ್ ಹಾಕುವಂತಿಲ್ಲ ಎಂದು ಕಾಲೇಜು ಅಭಿವೃದ್ಧಿ ಸಮಿತಿ ನಿರ್ಧಾರ ಕೈಗೊಂಡಿದೆ. ಆ ವಿವಾದ ಅಷ್ಟು ಸುಲಭವಾಗಿ ಮುಗಿಯಲು ಮತಾಂಧರು ಬಿಡುತ್ತಾರೆ ಎಂದು ಅನಿಸುವುದಿಲ್ಲ. ಯಾವಾಗ ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತೋ ಆವಾಗಲೇ ಕಾಲೇಜು ಆಡಳಿತ ಮಂಡಳಿ ಕಠಿಣ ನಿರ್ಧಾರ ಕೈಗೊಳ್ಳಬೇಕಿತ್ತು. ಇವರು ಯಾರದ್ದೋ ಒತ್ತಡಕ್ಕೆ ಮಣಿದು ಬಿಟ್ಟರು. ಅದು ಮುಂದುವರೆಯಿತು. ಆದರೆ ಕಾಲೇಜಿನ ಕ್ಯಾಂಪಸ್ ನಲ್ಲಿಯೂ ಹಾಕಲು ಬಿಡಬಾರದು ಎಂದು ಕೆಲವರು ನಿರ್ಧರಿಸಿದರು. ಅದಕ್ಕೆ ಕಾಲೇಜು ವಿದ್ಯಾರ್ಥಿ ನಾಯಕನ ಬೆಂಬಲ ಇರಲಿಲ್ಲ. ಆತನ ವಿರುದ್ಧವೂ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಆತ ರಾಜೀನಾಮೆ ನೀಡಿಬಿಟ್ಟ. ಈಗ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಲು ಹಿಜಾಬ್ ಧಾರಿಗಳು ನಿಶ್ಚಯಿಸಿದ್ದಾರೆ. ಅದರ ಅರ್ಥ ಈ ವಿವಾದ ಇನ್ನಾರು ತಿಂಗಳು ಎಳೆಯಲು ಎಲ್ಲರ ಪ್ರೋತ್ಸಾಹ ಸಿಗುತ್ತದೆ. ಹೀಗೆ ಎಲ್ಲಾ ಕಡೆ ಒತ್ತಡ ಇರುವಾಗ ರಾಜಕೀಯ ನಾಯಕರು ಕೊಡುವ ಹೇಳಿಕೆ ಒಲೆಯ ಮೇಲಿರುವ ಕುಕ್ಕರಿನ ಸ್ಥಿತಿಯನ್ನು ಮಂಗಳೂರಿಗೆ ತಂದಿದೆ. ಬೆಂಕಿಯ ಪ್ರತಾಪ ಹೆಚ್ಚಾದಷ್ಟು ಕುಕ್ಕರ್ ಬಿಸಿಯಾಗಿ ಸೀಟಿ ಹೊಡೆಯಲಾರಂಭವಾಗುತ್ತದೆ. ಸೀಟಿ ಕೊಡುವ ಸಂಕೇತ ಏನು ಎಂದು ಅರ್ಥ ಮಾಡಿಕೊಂಡರೆ ಸಾಕು. ಸೀಟಿ ಹೊಡೆಯುವುದು ನಿಲ್ಲದಿದ್ದರೆ ಕುಕ್ಕರ್ ಏನಾಗುತ್ತದೆ? ಚುನಾವಣೆಗೆ 11 ತಿಂಗಳು ಇರುವಾಗ ಕುಕ್ಕರ್ ಬ್ಲಾಸ್ಟ್ ಆದರೆ? ಅದನ್ನೇ ರಾಜಕೀಯ ಎನ್ನುವುದು!
Leave A Reply