ಪಚ್ಚನಾಡಿಯ ದಲಿತರ ಜಾಗದಲ್ಲಿ ಕಟ್ಟಿದ ಮನೆಗಳಿಗೆ ಯಾರು ಗತಿ!
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಪಚ್ಚನಾಡಿ ಎನ್ನುವ ಸ್ಥಳ ತ್ಯಾಜ್ಯ ಡಂಪಿಂಗ್ ಯಾರ್ಡ್ ಎಂದು ಇಡೀ ಮಂಗಳೂರಿಗೆ ಫೇಮಸ್. ಅಲ್ಲಿ ಒಂದು ಏರಿಯಾದಲ್ಲಿ ಪೌರ ಕಾರ್ಮಿಕರಿಗಾಗಿ ಮನೆ ಕಟ್ಟಲು ಜಾಗವನ್ನು ಮೀಸಲಿಡಲಾಗಿದೆ. ಆದರೆ ಇಲ್ಲಿಯ ತನಕ ಆ ಬಗ್ಗೆ ಯಾವುದೇ ಸುದ್ದಿ ಅಥವಾ ವಿವಾದ ಇರಲೇ ಇಲ್ಲ. ಆದರೆ ಇತ್ತೀಚೆಗೆ ದಲಿತ ಸಂಘರ್ಷ ಸಮಿತಿಯವರು ಅಲ್ಲಿ ಹೋಗಿ ಪ್ರತಿಭಟನೆ ನಡೆಸಿದ್ದಾರೆ. ಯಾಕೆಂದರೆ ದಲಿತರಿಗಾಗಿ ಮೀಸಲಿರಿಸಿದ ಜಾಗದಲ್ಲಿ ಅಲ್ಲಿ ಯಾರ್ಯಾರೋ ತಮಗೆ ಬೇಕಾದ ಮನೆಯನ್ನು ಕಟ್ಟಿಸುತ್ತಿದ್ದಾರೆ. ಈಗಾಗಲೇ ಎಂಟು ಮನೆಗಳನ್ನು ಕಟ್ಟಿಸಲಾಗಿದ್ದು, ಮೊನ್ನೆ ಒಂದು ಮನೆಯ ಗೃಹಪ್ರವೇಶದ ಸಿದ್ಧತೆ ಕೂಡ ನಡೆಸಲಾಗಿತ್ತು. ಈಗ ಅಲ್ಲಿ ಭಾರತೀಯ ಜನತಾ ಪಾರ್ಟಿಯ ಕಾರ್ಪೋರೇಟರ್ ಸಂಗೀತಾ ಆರ್ ನಾಯಕ್ ಗೆದ್ದು ಬಂದಿದ್ದಾರೆ. ಹಿಂದೆ ಅದು ಕಾಂಗ್ರೆಸ್ ಕಾರ್ಪೋರೇಟರ್ ಗಳ ಕೈಯಲ್ಲಿ ಇತ್ತು. ದಲಿತ ಸಮಿತಿಗಳು ಪ್ರತಿಭಟನೆಯೊಂದಿಗೆ ಮಂಗಳೂರು ಮಹಾನಗರ ಪಾಲಿಕೆಗೆ ಈ ಅನಧಿಕೃತ ಮನೆಗಳನ್ನು ಕೆಡವಲು ಮನವಿ ಕೂಡ ಸಲ್ಲಿಸಿದ್ದರು. ಅವರ ಬೇಡಿಕೆ ಅರ್ಹವಾಗಿದ್ದ ಕಾರಣ ಪಾಲಿಕೆ ಆಯುಕ್ತರು ಆ ಅಕ್ರಮ ನಿರ್ಮಾಣಗಳನ್ನು ಕೆಡವಲು ಜೆಸಿಬಿಯನ್ನು ಕೂಡ ಕಳುಹಿಸಿಕೊಟ್ಟಿದ್ದರು. ಜೆಸಿಬಿ ಅಲ್ಲಿ ತನ್ನ ಕೆಲಸವನ್ನು ಮಾಡಲು ತಯಾರಾದಾಗ ಕೆಲವರು ಅಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕಾರ್ಪೋರೇಟರ್ ಕೂಡ ಕೆಡವಲು ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಇದು ನಡೆದಿರುವ ಘಟನೆ.
ಪಚ್ಚನಾಡಿಯಲ್ಲಿ ಪಾಲಿಕೆಯ ಅಂದರೆ ಸರಕಾರಿ ಒಡೆತನದ ಸಾಕಷ್ಟು ಏಕರೆ ಜಾಗ ಇದೆ. ಒಂದಿಷ್ಟು ಜಾಗವನ್ನು ಆಶ್ರಯ ಯೋಜನೆಗೆ ಬಿಟ್ಟುಕೊಡಲಾಗಿದೆ. ಉಳಿದ ಜಾಗ ಹಾಗೆ ಉಳಿದುಕೊಂಡಿದೆ. ಪಾಲಿಕೆಯಲ್ಲಿ ಈ ವಾರ್ಡಿನಿಂದ ಘಟಾನುಘಟಿಗಳು ಗೆದ್ದು ಹೋಗಿದ್ದಾರೆ. ಹಿಂದೆ ಹಿಲ್ಡಾ ಆಳ್ವ, ಕವಿತಾ ಸನೀಲ್, ಭಾರತಿ ನಂತರ ಈಗ ಸಂಗೀತಾ ಹೀಗೆ ಎಲ್ಲರ ಅವಧಿಯಲ್ಲಿಯೂ ಎಲ್ಲರೂ ಮಾಡಿರುವುದು ಒಂದೇ. ಅದೇನೆಂದರೆ ಹೊಂದಾಣಿಕೆ ರಾಜಕಾರಣದ ಮೂಲಕ ತಮ್ಮ ತಮ್ಮವರಿಗೆ ಪೌರ ಕಾರ್ಮಿಕರಿಗೆ ಮೀಸಲಿಟ್ಟ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಮೌನ ಸಮ್ಮತಿ ನೀಡಿರುವುದು. ಇಲ್ಲಿ ಕಾಂಗ್ರೆಸ್ ಇರಲಿ, ಬಿಜೆಪಿ ಬರಲಿ ಎರಡೂ ಪಕ್ಷದ ನಾಯಕರು ಹೊಂದಾಣಿಕೆಯ ಮೂಲಕ ನೀವು ನಿಮ್ಮ ಕಾರ್ಯಕರ್ತರಿಗೆ ನಾವು ನಮ್ಮ ಜನರಿಗೆ ಇಂತಿಷ್ಟು ಎಂದು ಮನೆ ಕಟ್ಟಿಕೊಳ್ಳಲು ಅವಕಾಶ ನೀಡಿಕೊಂಡು ಬಂದಿದ್ದಾರೆ. ಆದ್ದರಿಂದ ಅದು ಇಲ್ಲಿಯ ಯಾವುದೇ ವಿವಾದಗಳಿಲ್ಲದೆ ನಡೆದುಕೊಂಡು ಬರುತ್ತಿತ್ತು. ಕೆಲವು ಕಡೆ ಪಕ್ಷದ ಕಾರ್ಯಕರ್ತರೇ ಅಕ್ರಮ ಕಟ್ಟುವಾಗ ಮುಂದೆ ನಿಂತು ಕಟ್ಟುವ ಗುತ್ತಿಗೆಯನ್ನು ಪಡೆದುಕೊಂಡದ್ದು ಇದೆ. ಇದೆಲ್ಲಾ ಆಗುವಾಗಲೇ ಪಾಲಿಕೆ ಅಥವಾ ಜಿಲ್ಲಾಡಳಿತದಿಂದ ಏನಾದರೂ ಕಠಿಣ ಕ್ರಮ ತೆಗೆದುಕೊಳ್ಳಬೇಕಿತ್ತು. ಆದರೆ ಏನೂ ಮಾಡಿಲ್ಲ.
ಅದು ಪೌರ ಕಾರ್ಮಿಕರಿಗೆ ಮೀಸಲಿಟ್ಟಿರುವ ಜಾಗ. ಅದು ಅವರಿಗೆ ಮಾತ್ರ ಸೇರಬೇಕಾಗಿರುವಂತದ್ದು. ಎಷ್ಟೋ ಪೌರ ಕಾರ್ಮಿಕರಿಗೆ ನಿಜವಾಗಿಯೂ ಸ್ವಂತ ಸೂರಿಲ್ಲ. ಜಪ್ಪು ಏರಿಯಾದಲ್ಲಿ ಫ್ಲಾಟ್ ಮಾದರಿಯಲ್ಲಿ ವಸತಿ ಸಮುಚ್ಚಯವನ್ನು ಕಟ್ಟಲಾಗುತ್ತಿದೆ. ಅದು ಎಷ್ಟೆಂದರೆ ಫ್ಲಾಟ್. ಇನ್ನು ಸರಕಾರಿ ಫ್ಲಾಟುಗಳು ಹೇಗಿರುತ್ತದೆ ಎಂದು ಎಲ್ಲರಿಗೂ ಗೊತ್ತು. ಆದರೆ ಪಚ್ಚನಾಡಿಯಲ್ಲಿ ಮನಸ್ಸು ಮಾಡಿದರೆ ಪ್ರತಿ ನೊಂದಾಯಿತ ಪೌರ ಕಾರ್ಮಿಕನಿಗೂ 3 ಅಥವಾ 5 ಸೆಂಟ್ಸ್ ಜಾಗವನ್ನು ಸರಕಾರ ಕೊಡಬಹುದು. ಹೇಗೂ ಕೇಂದ್ರದ ಮೋದಿ ಸರಕಾರ ವಸತಿ ಯೋಜನೆಯಡಿ ಇಂತಿಷ್ಟು ಎಂದು ಹಣ ನೀಡಿ ಮನೆ ಕಟ್ಟಲು ಸಹಕರಿಸುತ್ತದೆ. ಒಂದಿಷ್ಟು ಹಣವನ್ನು ಪಾಲಿಕೆ ಮತ್ತು ರಾಜ್ಯ ಸರಕಾರ ಕೊಟ್ಟರೆ ಎಷ್ಟೋ ಅರ್ಹರಿಗೆ ಮನೆ ಸಿಗುತ್ತದೆ. ಪೌರ ಕಾರ್ಮಿಕರಿಗೆ ವಿದ್ಯುತ್ ಸಂಪರ್ಕ ಉಚಿತವಾಗಿ ಕೊಡುವ ಯೋಜನೆಗಳು ಅನುಷ್ಟಾನಗೊಂಡರೆ ಫಲಾನುಭವಿಗಳಿಗೂ ಸಹಾಯ ಮಾಡಿದಂತಾಗುತ್ತದೆ. ಆದರೆ ಇಚ್ಚಾಶಕ್ತಿಯ ಕೊರತೆಯಿಂದ ಅದ್ಯಾವುದನ್ನು ಇಲ್ಲಿಯ ತನಕ ಸಮರ್ಪಕವಾಗಿ ಜಾರಿಗೆ ತಂದಿಲ್ಲ. ಅದು ಬಿಟ್ಟು ಅದೇನೂ ಮಾಡದೇ ಈಗ ಬಿಜೆಪಿ ಕಾರ್ಪೋರೇಟರ್ ಗಳು ದಲಿತ ಸಮಿತಿಗಳೊಂದಿಗೆ ಫೈಟ್ ಮಾಡಿದರೆ ಆಗುತ್ತದಾ? ಈಗ ಪಾಲಿಕೆ ಮತ್ತು ಜಿಲ್ಲಾಡಳಿತ ಏನು ಮಾಡಬೇಕು ಎಂದರೆ ಅಲ್ಲಿ ಯಾರೆಲ್ಲ ಹಕ್ಕುಪತ್ರ ಇಲ್ಲದಿದ್ದರೂ ಮನೆ ಕಟ್ಟಿದ್ದಾರೋ ಅವರಿಗೆ ತಕ್ಷಣ ನೋಟಿಸು ನೀಡಿ ನೋಟಿಸು ಅವಧಿಯ ನಂತರ ಮನೆಯನ್ನು ಕೆಡವಲು ಮುಂದಾಗಬೇಕು. ಇನ್ನು ಯಾವ ಪೌರ ಕಾರ್ಮಿಕರಿಗೆ ಜೆಪ್ಪುವಿನಲ್ಲಾಗಲಿ, ಆಶ್ರಯ ಯೋಜನೆಯಲ್ಲಾಗಲಿ ಮನೆ ಸಿಗಲಿಲ್ಲವೋ ಅವರಿಗೆ ಇಲ್ಲಿ ಜಾಗ ಕೊಟ್ಟು ಮನೆ ಕಟ್ಟಲು ನೆರವಾಗಬೇಕು. ಇದು ಈಗ ನಿಜವಾಗಿಯೂ ಆಗಬೇಕಾಗಿರುವುದು. ಆದರೆ ಅದ್ಯಾವುದೂ ಆಗದೇ ಇದರಲ್ಲಿ ರಾಜಕೀಯವನ್ನು ತರುವುದು ಶುದ್ಧ ಅಸಂಬದ್ಧವಾಗುತ್ತದೆ. ತಮ್ಮ ಮತ ರಾಜಕಾರಣಕ್ಕಾಗಿ ಯಾರ್ಯಾರಿಗೋ ಮನೆ ಕಟ್ಟಲು ಅವಕಾಶ ನೀಡಿ ಈಗ ಅಂತವರ ಮನೆಗೆ ಕುತ್ತು ತರುವ ಪ್ರಸಂಗವನ್ನು ರಾಜಕಾರಣಿಗಳೇ ಮಾಡಿದ್ದಾರೆ. ಈಗ ಅಲ್ಲಿ ಮನೆ ಯಾರು ಕಟ್ಟಿಕೊಂಡಿದ್ದಾರೋ ಅವರಿಗೆ ನಿಜಕ್ಕೂ ತೊಂದರೆ ಆದರೆ ಕಟ್ಟಲು ಮೌನ ಸಮ್ಮತಿ ನೀಡಿದ ರಾಜಕೀಯ ವ್ಯಕ್ತಿಗಳೇ ಕಾರಣ. ನೀವು ಕಟ್ಟಿಕೊಳ್ಳಿ, ನಾವು ನೋಡ್ಕೋತ್ತೇವೆ ಎಂದು ಅವರಿಂದ ಸಂಥಿಂಗ್ ಇಸ್ಕೊಂಡವರೂ ಇರಬಹುದು. ಒಟ್ಟಿನಲ್ಲಿ ದಲಿತರ ಜಾಗದಲ್ಲಿ ರಾಜಕೀಯ ನುಸುಳಬಾರದು. ಅರ್ಹರಿಗೆ ಮನೆ ಸಿಗಬೇಕು. ಅದನ್ನು ಕೊಡಿಸುವ ಕೆಲಸವನ್ನು ದಲಿತ ಸಮಿತಿಗಳು ಪಾಲಿಕೆಯ ಬೆನ್ನು ಬಿಡದೆ ಮಾಡಿಸಿಕೊಳ್ಳಲಿ. ಇದರ ನಡುವೆ ರಾಜಕೀಯ ಇಣುಕದಂತೆ ಆಯುಕ್ತರು ನೋಡಿಕೊಳ್ಳಲಿ!
Leave A Reply