ಪ್ರೀತಿ ಗೆಹ್ಲೋತ್ ಮಾಡಿದ ಕೆಲಸ ಅಕ್ಷಯ್ ಶ್ರೀಧರ್ ಅವರಿಗೆ ಆಗುತ್ತಾ?
ಮಹಿಳೆಯರೇ ಸ್ಟ್ರಾಂಗ್ ಗುರು ಎಂದು ತಿಳಿದವರು ಬರೆದಿದ್ದಾರೆ. ಅದರಲ್ಲಿಯೂ ಮಹಿಳಾ ಐಎಎಸ್ ಅಥವಾ ಐಪಿಎಸ್ ಅಧಿಕಾರಿಗಳು ಕೆಲವೊಮ್ಮೆ ತೆಗೆದುಕೊಳ್ಳುವ ಬೋಲ್ಡ್ ನಿರ್ಧಾರಕ್ಕೆ ಹೆಸರುವಾಸಿಯಾಗಿದ್ದಾರೆ. ಇದಕ್ಕೆ ಸದ್ಯ ಬಳ್ಳಾರಿ ಮಹಾನಗರ ಪಾಲಿಕೆಯ ಕಮೀಷನರ್ ಪ್ರೀತಿ ಗೆಹ್ಲೋತ್ ಅವರು ಉದಾಹರಣೆಯಾಗಿದ್ದಾರೆ. ತಾವು ಆಯುಕ್ತರಾಗಿರುವ ಬಳ್ಳಾರಿ ಪಾಲಿಕೆಯ ಸುಮಾರು 60 ಜನ ಅಧಿಕಾರಿಗಳನ್ನು, ಸಿಬ್ಬಂದಿಗಳನ್ನು ಬೇರೆಡೆಗೆ ವರ್ಗಾವಣೆ ಮಾಡಿ ಎಂದು ಅವರು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಒಬ್ಬರು ಪಾಲಿಕೆ ಆಯುಕ್ತರಾಗಿ ಮೊದಲು ಮಾಡಲೇಬೇಕಾದ ಕಾರ್ಯವನ್ನು ಅವರು ಮಾಡಿದ್ದಾರೆ. ಯಾಕೆಂದರೆ ಒಬ್ಬರು ಆಯುಕ್ತರು ಪಾಲಿಕೆಯಲ್ಲಿ ಅಧಿಕಾರ ವಹಿಸಿಕೊಂಡಾಗ ಅವರಿಗೆ ಮೊದಲು ತಮ್ಮ ಕ್ಷೇತ್ರವ್ಯಾಪ್ತಿಯ ಸಮಗ್ರ ಸುದ್ದಿ ಅರಿಯಲು ಒಂದೆರಡು ತಿಂಗಳು ಹಿಡಿಯಬಹುದು. ಆಗ ಅವರಿಗೆ ಸೂಕ್ತ ಮಾಹಿತಿ ನೀಡದೇ ದಾರಿ ತಪ್ಪಿಸುವ ಕಾರ್ಯದಲ್ಲಿ ನಗರ ಯೋಜನಾ, ಆರೋಗ್ಯ ವಿಭಾಗದ ಅಧಿಕಾರಿಗಳು ಯಶಸ್ವಿಯಾದರೋ ಅದರ ನಂತರ ಆಯುಕ್ತರು ಕೇವಲ ಶೋಪೀಸ್ ಆಗಿ ಉಳಿಯುತ್ತಾರೆ. ಯಾಕೆಂದರೆ ಅವರು ಏನು ದಿಟ್ಟ ನಿರ್ಧಾರ ತೆಗೆದುಕೊಂಡರೂ ಅವರಿಗೆ ಸುಳ್ಳು ಮಾಹಿತಿ ನೀಡಿ ಕತ್ತಲೆಯಲ್ಲಿ ಇಡುವ ಪ್ರಯತ್ನ ಮಾಡಲಾಗುತ್ತದೆ. ಹೆಪ್ಸಿಬಾ ರಾಣಿ ಕೊರ್ಲಪಾಟಿ ಎಂಬ ದಿಟ್ಟ ಐಎಎಸ್ ಅಧಿಕಾರಿಣಿ ಯಾವಾಗ ಇವರ ತಾಳಕ್ಕೆ ಕುಣಿಯಲು ನಿರಾಕರಿಸಿದರೋ ಅವರನ್ನು ಮಂಗಳೂರಿನಿಂದ ಬೇರೆಡೆ ಎತ್ತಂಗಡಿ ಮಾಡಲಾಗಿತ್ತು. ಈಗ ಅಕ್ಷಯ್ ಶ್ರೀಧರ್ ಅವರು ಸ್ಪೆಶಲ್ ಗ್ಯಾಂಗ್ ವಿಷಯದಲ್ಲಿ ಜನರ ತೆರಿಗೆಯ ಹಣ ಉಳಿಸಲು ಸೂಕ್ತ ಕ್ರಮ ತೆಗೆದುಕೊಂಡಾಗ ಅವರಿಗೆ ತಪ್ಪು ಮಾಹಿತಿ ನೀಡಿ ಮತ್ತೆ ಹಳೆಯ ಪದ್ಧತಿ ಬರುವಂತೆ ಮಾಡಲಾಯಿತು. ಇದೆಲ್ಲವು ಆಗುವುದು ಫಲವತ್ತಾದ ಜಮೀನಿನಲ್ಲಿ ತಿಂದು ತೇಗುತ್ತಿರುವ ಕ್ರಿಮಿಗಳಿಂದ. ಅವರು ಒಂದು ಕಡೆ ತಮ್ಮ ಬೇರುಗಳನ್ನು ನೆಲಕ್ಕೆ ಬಿಟ್ಟು, ಕುರ್ಚಿಗೆ ಗೆದ್ದಲು ಬರುವಷ್ಟು ದಶಕಗಳಿಂದ ಒಂದೇ ಕಡೆ ಮಲಗಿದ್ದರೆ ಇನ್ನೇನಾಗುತ್ತದೆ.
ಅಂತಹ 60 ಮಂದಿಯನ್ನು ಗುರುತಿಸಿ ವರ್ಗಾವಣೆ ಮಾಡುವ ಕೆಲಸಕ್ಕೆ ಬಳ್ಳಾರಿ ಆಯುಕ್ತೆ ಮುಂದಾಗಿದ್ದಾರೆ. ಅವರದ್ದೇ ಕೈಯಲ್ಲಿ ಆ ಅಧಿಕಾರ ಇದ್ದರೆ ತಕ್ಷಣ ಮಾಡಿಬಿಡುತ್ತಿದ್ದರೋ ಏನೋ ಆದರೆ ಅದನ್ನು ಮಾಡಬೇಕಾಗಿರುವುದು ನಗರಾಭಿವೃದ್ಧಿ ಇಲಾಖೆ. ಇಲಾಖೆಯ ಅಧಿಕಾರಿಗಳು ಮಾಡುತ್ತಾರೋ, ಇಲ್ವೋ ಅಥವಾ ಕೆಲವರನ್ನು ಮಾತ್ರ ವರ್ಗಾವಣೆ ಮಾಡುತ್ತಾರೋ ನೋಡಬೇಕು. ಯಾಕೆಂದರೆ ಎಲ್ಲವೂ ನಿರ್ಧಾರವಾಗುವುದು ವರ್ಗಾವಣೆ ಆಗಬೇಕಾದ ಅಧಿಕಾರಿ ಎಷ್ಟು ಭಾರದ ಸೂಟುಕೇಸು ಹಿಡಿದ ಯಾರ ಮನೆಬಾಗಿಲಿಗೆ ಅಲೆಯುತ್ತಾರೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಮಂಗಳೂರಿನಲ್ಲಿ ಬಾಲಕೃಷ್ಣ ಗೌಡ ಎನ್ನುವ ನಗರಯೋಜನಾ ಅಧಿಕಾರಿ ಇದ್ದಾರೆ. 33 ವರ್ಷಗಳಿಂದ ಮಂಗಳೂರಿನಲ್ಲಿಯೇ ಇದ್ದಾರೆ. ಅವರನ್ನು ವರ್ಗಾವಣೆ ಮಾಡಲು ಎರಡು ಸಲ ಪ್ರಯತ್ನ ಮಾಡಲಾಯಿತು. ಯಾರಿಗೆ ಎಷ್ಟು ತಲುಪಿಸಬೇಕೋ ಅಷ್ಟು ನೀಡಿ ಮತ್ತೆ ತಮ್ಮ ಹಳೆ ಖರ್ಚಿಗೆ ಮರಳಿದ್ದಾರೆ. ಅವರು ಹೇಗೆ ಮಂಗಳೂರಿನಲ್ಲಿಯೇ ಮೂರುವರೆ ದಶಕಗಳಿಂದ ಉಳಿದಿದ್ದಾರೆ ಎನ್ನುವುದರ ಬಗ್ಗೆ ಅಧ್ಯಯನ ಮಾಡಬಹುದು ಎಂದು ಇದೇ ಜಾಗೃತ ಅಂಕಣದಲ್ಲಿ ಕೆಲವು ದಿನಗಳ ಹಿಂದೆ ನಾನು ಬರೆದಿದ್ದೆ. ಯಾಕೆಂದರೆ ಇವರು ಯಾವುದೇ ಪಕ್ಷದ ಸರಕಾರ ಬರಲಿ, ಎಲ್ಲರೊಂದಿಗೆ “ಚೆನ್ನಾಗಿ” ಇರುತ್ತಾರೆ. ಆದ್ದರಿಂದ ಒಂದೇ ಕಡೆ ಪೊಗದಸ್ತಾಗಿ ಬೆಳೆಯುತ್ತಿರುತ್ತಾರೆ. ಇದರಿಂದ ಜನರಿಗೆ ಏನು ತೊಂದರೆ ಎಂದು ನೀವು ಕೇಳಬಹುದು?
ಒಬ್ಬ ಅಧಿಕಾರಿ ಒಂದೇ ಕಡೆ ದಶಕಗಳ ತನಕ ಬೀಡುಬಿಟ್ಟ ಪರಿಣಾಮ ಅವರಿಗೆ ಅಲ್ಲಿನ ಬಿಲ್ಡರ್ಸ್, ಗುತ್ತಿಗೆದಾರರು ಮತ್ತು ಮೂರ್ನಾಕು ಬಾರಿ ಗೆದ್ದು ಪಾಲಿಕೆಯಲ್ಲಿ ಹವಾ ಇಟ್ಟುಕೊಂಡಿರುವ ಕಾರ್ಪೋರೇಟರ್ಸ್ ಮತ್ತು ಯಾವ ಮರ ಅಲ್ಲಾಡಿಸಿದರೆ ಹಣ್ಣು ಬೀಳುತ್ತದೆ ಎಂದು ಗೊತ್ತಿರುತ್ತದೆ. ಇದರಿಂದ ನಗರಗಳಲ್ಲಿ ಬಿಲ್ಡರ್ಸ್ ಗಳು ಪಾಲಿಕೆ ನಿಯಮಗಳನ್ನು ಅಲ್ಲಂಘಿಸಿ ಕಟ್ಟಡಗಳನ್ನು ಕಟ್ಟುತ್ತಾರೆ. ನಗರ ಯೋಜನಾ ವಿಭಾಗ ಗುಟುರು ಹಾಕಿದ ತಕ್ಷಣ ಇಂತಿಷ್ಟೇ ಹಣ ಎಂದು ಫಿಕ್ಸ್ ಮಾಡಿ ಕೊಟ್ಟು ಬರುತ್ತಾರೆ. ಇದರಿಂದ ಒಂದು ನಗರ ಅವೈಜ್ಞಾನಿಕವಾಗಿ ಬೆಳೆಯುತ್ತಾ ಹೋಗುತ್ತದೆ. ಈ ಪಾರ್ಕಿಂಗ್ ಅವ್ಯವಸ್ಥೆ, ಟ್ರಾಫಿಕ್ ಜಾಮ್ ಆಗುವುದೇ ಇದರಿಂದ. ಇನ್ನು ಪಾಲಿಕೆಯ ಗುತ್ತಿಗೆದಾರರು ಕಳಪೆ ನಿರ್ಮಾಣ ಮಾಡಲಿ, ಕೆಲಸವೇ ಮಾಡದೇ ಬಿಲ್ ಮಾಡಲಿ, ಅರ್ಥಂಬರ್ದ ಕೆಲಸ ಮಾಡಿಸಲಿ ಇಂತಹ ಭ್ರಷ್ಟ ಅಧಿಕಾರಿಗಳೊಂದಿಗೆ ಚೆನ್ನಾಗಿದ್ದರೆ ಅಷ್ಟೇ ಸಾಕು. ಇದರಿಂದ ಜನರ ತೆರಿಗೆ ಹಣ ಪೋಲಾಗುತ್ತದೆ. ಇನ್ನು ಮೂರನೇ ಮತ್ತು ನೇರ ಜನರಿಗೆ ತೊಂದರೆ ನೀಡುವಂತದ್ದು ಬ್ರೋಕರ್ಸ್ ಗಳ ಹಾವಳಿ. ನೀವು ಸೀದಾ ಪಾಲಿಕೆಗೆ ಹೋದರೆ ಆಗದ ಕೆಲಸ ಮಧ್ಯವರ್ತಿಗಳ ಮೂಲಕ ಮಾಡಿಸಿದಾಗ ಬೇಗ ಆಗುತ್ತದೆ. ಇದಕ್ಕೆ ಏನು ಕಾರಣ ಎಂದರೆ ಈ ಮಧ್ಯವರ್ತಿಗಳಿಗೂ ಪಾಲಿಕೆಯ ಒಳಗೆ ಜಡ್ಡುಗಟ್ಟಿರುವ ವ್ಯವಸ್ಥೆಗೂ ಹಾಲು ಜೇನಿನ ಸಂಬಂಧ ಇರುತ್ತದೆ. ಹೀಗೆ ಮೂರು ವಿಷಯಗಳಿಗೆ ಇಂತಹ ಅಧಿಕಾರಿಗಳಿಂದ ನೇರ ತೊಂದರೆ ಇದೆ. ಅದನ್ನು ಅರಿತಿರುವ ಬಳ್ಳಾರಿ ಪಾಲಿಕೆ ಕಮೀಷನರ್ ಪ್ರೀತಿ ಗೆಹ್ಲೋತ್ ಈ ಕ್ರಮ ತೆಗೆದುಕೊಂಡಿದ್ದಾರೆ. ಒಂದು ವೇಳೆ ಅವರು ಬಯಸಿದ್ದಂತೆ ಆದರೆ ಅದು ಬಳ್ಳಾರಿ ಜನರ ಅದೃಷ್ಟ. ಆದರೆ ಅವರು ಮಾತ್ರ ಅದೃಷ್ಟವಂತರಾಗುವುದಕ್ಕಿಂತ ರಾಜ್ಯದ ಒಟ್ಟು ಏಳು ಪಾಲಿಕೆಗಳು ಕೂಡ ಇದನ್ನು ಹಿಂಬಾಲಿಸಬೇಕು. ಎಲ್ಲಾ ಪಾಲಿಕೆಗಳನ್ನು ಒಂದು ಕಡೆಯಿಂದ ಡೆಟ್ಟಾಲ್ ಹಾಕಿ ಸ್ವಚ್ಚ ಮಾಡುತ್ತಾ ಬರಬೇಕು. ಅದಕ್ಕೆ ಜನಪ್ರತಿನಿಧಿಗಳು, ಸರಕಾರ ಸಹಕಾರ ನೀಡಬೇಕು. ಜನರು ಈ ಬಗ್ಗೆ ಜನಾಭಿಪ್ರಾಯ ಮೂಡಿಸಬೇಕು. ಅದು ಬಿಟ್ಟು ಪಾಲಿಕೆಯ ಒಳಗಿನ ವ್ಯವಸ್ಥೆ ಹಾಗೇ ಇದ್ದರೆ ಯಾರು ಬಂದರೂ ಅಷ್ಟೇ!
Leave A Reply