ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
ತಂದೆ ಒಂದು ಸಿದ್ಧಾಂತಕ್ಕಾಗಿ ಪಕ್ಷ ಕಟ್ಟಿದರು. ಕಾಂಗ್ರೆಸ್ಸಿನ ಬಿಗಿಮುಷ್ಟಿಯಲ್ಲಿ ಮಹಾರಾಷ್ಟ್ರದಲ್ಲಿ ಯಾರ್ಯಾರೋ ರಾಜಕೀಯ ಮಾಡುತ್ತಾ, ಮರಾಠಿಗರನ್ನು ತುಳಿಯುತ್ತಾ ಇದ್ದ ಕಾಲದಲ್ಲಿ ಸಾಮಾನ್ಯ ಕಾರ್ಟೂನಿಸ್ಟ್ ಆಗಿದ್ದ ಬಾಳಾ ಸಾಹೇಬ್ ಠಾಕ್ರೆ ಸಿಡಿದೆದ್ದರು. ಆಗ ಅವರ ಬಳಿ ಇದ್ದದ್ದು ಮರಾಠಿ ಮೇಲಿನ ಅಖಂಡ ಪ್ರೀತಿ ಮತ್ತು ಹಿಂದೂತ್ವದ ಮೇಲಿನ ಅಚಲವಾದ ನಿಷ್ಟೆ. ಅದನ್ನು ಅವರು ತಮ್ಮ ಕೊನೆಯ ಉಸಿರಿರುವ ತನಕವೂ ಉಳಿಸಿಕೊಂಡು ಬಂದ್ರು. 1995 ರಲ್ಲಿ ಶಿವಸೇನೆ ಹಾಗೂ ಭಾರತೀಯ ಜನತಾ ಪಾರ್ಟಿ ಮೈತ್ರಿ ಸರಕಾರ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದಾಗ ಶಿವಸೇನೆಯ ಮನೋಹರ್ ಜೋಶಿಯವರನ್ನು ಬಾಳಾ ಠಾಕ್ರೆ ಮುಖ್ಯಮಂತ್ರಿ ಮಾಡಿದರೆ ವಿನ: ತಾವು ಅಧಿಕಾರದಲ್ಲಿ ಕುಳಿತುಕೊಂಡಿರಲಿಲ್ಲ. ಅಧಿಕಾರ ನಮ್ಮ ಅಂತಿಮ ಗುರಿ ಅಲ್ಲ, ಅದು ನಮ್ಮ ಕಾಲಕಸ, ನಾವು ಸಿದ್ಧಾಂತಕ್ಕಾಗಿ ಕೆಲಸ ಮಾಡಬೇಕು ಎಂದು ಎಲ್ಲಾ ಕಡೆ ಹೇಳಿಬರುತ್ತಿದ್ದ ಬಾಳಾ ಠಾಕ್ರೆ ಹಾಗೇನೆ ನಡೆದುಕೊಂಡು ಬಂದರು. ನಾನು ಕಷ್ಟಪಟ್ಟು ಕಟ್ಟಿದ ಪಕ್ಷ, ನಾನು ಸಿಎಂ ಆಗಬಾರದಾ ಎಂದು ಬಾಳಾ ಠಾಕ್ರೆ ಹೇಳಲೇ ಇಲ್ಲ. ನೀವು ಸಿಎಂ ಆಗಲ್ಲ ಎನ್ನುತ್ತಿರಿ, ನಿಮ್ಮ ಕುಟುಂಬ ಅಧಿಕಾರದ ಖುರ್ಚಿಯಲ್ಲಿ ಕುಳಿತುಕೊಳ್ಳಲ್ಲ ಎನ್ನುತ್ತೀರಿ, ನಿಮ್ಮ ಮಗನಿಗೆ ರಾಜಕೀಯದ ಮಹತ್ವಾಕಾಂಕ್ಷೆ ಇದ್ದಿರಬಹುದಲ್ಲ, ಅವರನ್ನಾದರೂ ಸಿಎಂ ಮಾಡುತ್ತೀರಾ ಎಂದು ಯಾವತ್ತೋ ಒಮ್ಮೆ ನಡೆದ ಟಿವಿ ಸಂದರ್ಶನದಲ್ಲಿ ನಿರೂಪಕರು ಕೇಳಿದಾಗ ಠಾಕ್ರೆ ಹೇಳಿದ್ದೇನು ಗೊತ್ತಾ ” ನನ್ನ ಮಗ ಸಿಎಂ ಆಗಲು ಅರ್ಹ ಅಲ್ಲ”. ಮಗನ ಸಾಮರ್ತ್ಯ ತಂದೆಗೆ ತಿಳಿದಿತ್ತು. ಸಿಹಿಯ ಲೇಪನದಲ್ಲಿ ಇರುವ ವಿಷ ಚಪ್ಪರಿಸಿದ ಕೆಲವೇ ನಿಮಿಷದಲ್ಲಿ ಸಿದ್ಧಾಂತದ ಸಾವು ತಂದುಬಿಡುತ್ತದೆ ಎಂದು ಬಾಳಾ ಠಾಕ್ರೆಗೆ ಗೊತ್ತಿತ್ತು. ಶಿವಸೇನೆಯನ್ನು ಇವತ್ತು ರಾಜಕೀಯದ ಐಸಿಯುನಲ್ಲಿ ಮಲಗಿಸಿರುವ ಉದ್ದವ್ ರಾಹುಲ್ ನಂತೆ ಅನಾಯಾಸವಾಗಿ ಒಲಿದು ಬಂದ ರಾಜಗದ್ದುಗೆಯ ಮರ್ಯಾದೆಯನ್ನು ತೆಗೆದಿದ್ದಾರೆ.
ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ ಎನ್ನುವುದು ನಿಜ. ಉದ್ದವ್ ಕೂಡ ಸನ್ಯಾಸಿಯಾಗಬೇಕಾಗಿಲ್ಲ. ಹಾಗಂತ ಸಿದ್ಧಾಂತವನ್ನು ಬಲಿಕೊಟ್ಟು ಕೈಗೆ ಬರುವ ಅಧಿಕಾರ ಒಂದು ರೀತಿಯಲ್ಲಿ ಪಕ್ಕದ ಮನೆಯ ಅಂಕಲ್ ನನ್ನು ತಂದೆ ಎಂದ ಹಾಗೆ. ಕೇಳಿದ್ರೆ ನಾವು ಭಾರತೀಯ ಜನತಾ ಪಾರ್ಟಿಯೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡ್ವಿ. ಗೆದ್ದ ಬಳಿಕ ಅರ್ಧ ನೀವು ಅರ್ಧ ನಾವು ಸಿಎಂ ಆಗುತ್ತೇವೆ ಎಂದ್ವಿ. ಅವರು ಕೇಳಿಲ್ಲ. ನಮ್ಮ ತಪ್ಪಾ ಎಂದು ಉದ್ದವ್ ಈಗ ಕೇಳಬಹುದು. ಮೈತ್ರಿ ಎಂದ ಮೇಲೆ ಯಾರಿಗೆ ಹೆಚ್ಚು ಸೀಟು ಬರುತ್ತೋ ಅವರಿಗೆ ಸಿಎಂ ಸ್ಥಾನ ಸಿಗಲೇಬೇಕಿತ್ತು. ಇನ್ನು ನಿಮಗೆ ಸಿಎಂ ಕೊಡಕೇ ಆಗಲ್ಲ ಎಂದು ಅಮಿತ್ ಶಾ 2019 ರಲ್ಲಿ ಹೇಳುವಾಗ ಅವರಿಗೆ ಗ್ಯಾರಂಟಿ ಇತ್ತು, ಅದೇನೆಂದರೆ ಇವರು ನಮ್ಮನ್ನು ಬಿಟ್ಟು ಹೋದ್ರೆ ಅಲ್ಲಿಗೆ ಶಿವಸೇನೆ ಮುಗಿದ ಹಾಗೆ. ಬಿಜೆಪಿ ಹೆಣೆದ ಬಲೆಯಲ್ಲಿ ಉದ್ದವ್ ಈ ರೀತಿ ಬೀಳುತ್ತಾರೆ ಎಂದು ರಾಜಕೀಯ ಪಂಡಿತರಿಗೆ ಗೊತ್ತಿತ್ತು. ಉದ್ದವ್ ಅದೇ ರೀತಿ ರಾತ್ರಿ ಕಂಡ ಬಾವಿಯಲ್ಲಿ ಬೆಳಿಗ್ಗೆ ಹೋಗಿ ಬಿದ್ದಿದ್ರು. ರಾಜಕೀಯ ಪಕ್ಷಗಳು ಜನ್ಮ ತಾಳುವುದು ಸಿದ್ಧಾಂತದ ಆಧಾರದಲ್ಲಿ. ಯಾವಾಗ ಬಿಜೆಪಿ ಸಿಎಂ ಸ್ಥಾನ ಹಂಚಿಕೊಳ್ಳಲು ಒಪ್ಪಲಿಲ್ಲವೋ ಉದ್ದವ್ ಎನ್ ಸಿಪಿ ಶರದ್ ಪವಾರ್ ಅವರೊಂದಿಗೆ ಹಾಸಿಗೆ ಹಂಚಿಕೊಳ್ಳಲು ಒಪ್ಪಲೇಬಾರದಿತ್ತು. ಅದರೊಂದಿಗೆ ಆದ ರಾಜಕೀಯ ಧ್ರುವೀಕರಣದ ನೋಡಿ. ಕಾಂಗ್ರೆಸ್ ವಿರುದ್ಧ ಹೋರಾಡುತ್ತಾ ಬಂದ ಎನ್ ಸಿಪಿ. ಕಾಂಗ್ರೆಸ್ ಮತ್ತು ಎನ್ ಸಿಪಿ ವಿರುದ್ಧ ಹೋರಾಡುತ್ತಾ ಬಂದ ಶಿವಸೇನೆ ಹೇಗೆ ರಾಜ್ಯಭಾರ ಮಾಡಲು ಆಗುತ್ತೆ. ಬಿಜೆಪಿಯೊಂದಿಗೆ ಇದ್ದಿದ್ರೆ ಕನಿಷ್ಟ ಮರ್ಯಾದೆಯಾದರೂ ಉಳಿಯುತ್ತಿತ್ತು. ಇಲ್ಲಿ ಯಾರು ಯಾವಾಗ ಎಲ್ಲಿ ಫಿಟ್ಟಿಂಗ್ ಇಡುತ್ತಾರೆ ಎಂದು ಗೊತ್ತಾಗದೇ ನಿದ್ರೆ ಬೀಳುವುದು ಕೂಡ ಕಷ್ಟ.
ಆದರೂ ಎರಡೂವರೆ ವರ್ಷ ಉದ್ದವ್ ಅದೇಗೆ ಸಿಎಂ ಆಗಿ ಅಧಿಕಾರ ನಡೆಸಿದರೋ ದೇವರಿಗೆ ಗೊತ್ತು. ಅಧಿಕಾರ ಎನ್ನುವುದನ್ನು ಒಂದು ಜವಾಬ್ದಾರಿ ಎಂದು ತೆಗೆದುಕೊಂಡರೆ ಏನೂ ಆಗುತ್ತಿರಲಿಲ್ಲವೇನೋ. ಆದರೆ ಬಾಳಾ ಠಾಕ್ರೆಯವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಪಕ್ಷ ಮುನ್ನಡೆಸಿದರನ್ನು ಉದ್ದವ್ ಮಗ ಆದಿತ್ಯಾ ಸರಿಯಾಗಿ ನಡೆಸಿಕೊಟ್ಟಿಲ್ಲ ಎನ್ನುವುದರಿಂದ ಪಕ್ಷದ ಅವನತಿ ಶುರುವಾಗಿ ಹೋಗಿದೆ. ರಾಹುಲ್ ಹಾಗೂ ಸೋನಿಯಾಗೆ ಇರುವ ವ್ಯತ್ಯಾಸ ಕೂಡ ಅದೇ. ಸೋನಿಯಾ ಯಾರು ಹೇಳಿದರೂ ಕೇಳುತ್ತಾರೆ ಎನ್ನುತ್ತದೆ ಅವರ ಪ್ರಭಾ ವಲಯ. ಅದಕ್ಕೆ ಅವರಿಗೆ ಬೆಂಬಲ ಕೊಟ್ಟು ಎರಡು ಅವಧಿ ಸರಕಾರ ನಡೆಸಲು ಮಿತ್ರಪಕ್ಷಗಳು ಮುಂದಾಗಿದ್ದವು. ಯುಪಿಎಗೆ ಅದು ಸಾಧ್ಯವಾಗಿತ್ತು. ಅದೇ ರಾಹುಲ್ ಕರೆದರೆ ಸರಿಯಾಗಿ ಎರಡ್ಮೂರು ಪಕ್ಷಗಳು ಚಾ ಕುಡಿಯಲು ಬರುವುದು ಕೂಡ ಡೌಟು ಎನ್ನಲಾಗುತ್ತದೆ. ಇಲ್ಲಿ ಕೂಡ ಹಾಗೆ. ಪಕ್ಷ ಯಾವುದೇ ಇರಲಿ ಬಾಳಾ ಠಾಕ್ರೆಯವರ ಬಗ್ಗೆ ಪಕ್ಷಾತೀತವಾಗಿ ಎಲ್ಲರಿಗೂ ಗೌರವ ಇತ್ತು. ಹಿಂದೂತ್ವ ರಕ್ತದಲ್ಲಿಯೇ ಹರಿಯುತ್ತಿದೆ ಎಂದು ಸೀನಿಯರ್ ಠಾಕ್ರೆ ನಿರೂಪಿಸಿಬಿಟ್ಟಿದ್ದರು ಮತ್ತು ಹಾಗೆ ನಡೆದುಕೊಂಡು ಬಿಟ್ಟಿದ್ದರು. ಮಗ ಉದ್ದವ್ ಅದನ್ನು ಸುಳ್ಳು ಮಾಡಿಬಿಟ್ಟರು. ಈಗ ಅಂತೂ ಮಗ ಬಾಳಾ ಠಾಕ್ರೆಯವರದ್ದೇನಾ ಎನ್ನುವ ಸಂಶಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಕುಚೋದ್ಯ. ಒಟ್ಟಿನಲ್ಲಿ ತಮ್ಮ ಅಧಿಕಾರದ ತೆವಲಿಗೆ ಶಿವಸೇನೆಯನ್ನು ಪಕ್ಕದ ಅರಬ್ಬಿ ಸಮುದ್ರವಾಗಿ ವಿದ್ಯುಕ್ತವಾಗಿ ಮುಳುಗಿಸಿದ ಕೀರ್ತಿ ಜ್ಯೂನಿಯರ್ ಠಾಕ್ರೆಗೆ ಸಲ್ಲುತ್ತದೆ!
Leave A Reply