ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
ಮಂಗಳೂರು ಮಹಾನಗರದ ಕೆಲವು ಏರಿಯಾಗಳು ಗುರುವಾರ ಸುರಿದ ಭಾರಿ ಮಳೆಗೆ ಜಲಾವೃತಗೊಂಡಿರುವುದನ್ನು ತಾವು ನೋಡಿದ್ದೀರಿ, ಕೆಲವರು ಅನುಭವಿಸಿದ್ದೀರಿ. ಇಲ್ಲಿ ಸ್ಮಾರ್ಟ್ ಸಿಟಿಯ ಕಾಮಗಾರಿಗಳಿಂದ ಹೀಗೆ ಆಯಿತು ಎಂದು ಹೇಳುವವರು ಇದ್ದಾರೆ. ಆದರೆ ಹೆಚ್ಚು ಸಮಸ್ಯೆ ಆಗಿರುವುದು ಸ್ಮಾರ್ಟ್ ಸಿಟಿ ಕಾಮಗಾರಿ ಆಗದೇ ಇರುವ ಏರಿಯಾಗಳಲ್ಲಿ. ಉದಾಹರಣೆಗೆ ಕೋರ್ಟ್ ವಾರ್ಡ್, ಸೆಂಟ್ರಲ್ ವಾರ್ಡ್, ಕುದ್ರೋಳಿ ವಾರ್ಡ್, ಬಂದರು, ಪೋರ್ಟ್, ಮಂಗಳಾದೇವಿ, ಹೊಯಿಗೆ ಬಜಾರ್, ಬೋಳಾರ ಹೀಗೆ ಎಂಟು ಕಡೆ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿವೆ. ಆದರೆ ಕೊಟ್ಟಾರದಿಂದ ಕೊಟ್ಟಾರ ಚೌಕಿಯ ತನಕ ಮತ್ತು ಅದರ ಆಸುಪಾಸಿನಲ್ಲಿ, ಪಡೀಲ್ ಸಹಿತ ಕೆಲವು ಕಡೆ ಏನು ಸಮಸ್ಯೆಯಾಗಿದೆಯೋ ಅದಕ್ಕೆ ಸ್ಮಾರ್ಟ್ ಸಿಟಿಯ ಕಾಮಗಾರಿಗಳು ಕಾರಣವಲ್ಲ. ಯಾಕೆಂದರೆ ಈ ಮೇಲೆ ಹೇಳಿದ 8 ವಾರ್ಡುಗಳಲ್ಲಿ ಬಿಟ್ಟು ಬೇರೆ ಕಡೆ ಸ್ಮಾರ್ಟ್ ಸಿಟಿಯ ಕಾಮಗಾರಿಗಳು ನಡೆಯುತ್ತಿಲ್ಲ. ಎಲ್ಲಿ ನಡೆಯುವುದಿಲ್ಲವೋ ಅಲ್ಲಿ ಸ್ಮಾರ್ಟ್ ಸಿಟಿಯ ಕಾಮಗಾರಿಗಳಿಂದ ಆವಾಂತರ ಆಯಿತು ಎಂದರೆ ಸಾರಾಸಗಟಾಗಿ ಯಾರೂ ಒಪ್ಪಲು ಸಾಧ್ಯವಿಲ್ಲ. ಹಾಗಾದರೆ ಏನು ಕಾರಣ? ಸಂಶಯವೇ ಇಲ್ಲ. ಇಲ್ಲಿ ಒಂದಕ್ಕಿಂತ ಹೆಚ್ಚು ಕಾರಣಗಳಿವೆ. ಮೊದಲನೇಯದಾಗಿ ಗುರುವಾರ ಸುರಿದ ಮಳೆ ದಾಖಲೆ ಪ್ರಮಾಣದಲ್ಲಿ ಎನ್ನಬಹುದಾದಷ್ಟು ದೊಡ್ಡದಾಗಿ ಸುರಿದಿದೆ. ಮಳೆಯ ನೀರನ್ನು ನಮಗೆ ತೊಂದರೆಯಾಗದಂತೆ ಸುರಿಸು ಎಂದು ದೇವರಿಗೆ ಹೇಳಲು ಸಾಧ್ಯವಿಲ್ಲವಾದ ಕಾರಣ ನಿರೀಕ್ಷೆಗಿಂತ ಹೆಚ್ಚು ಸುರಿದಾಗ ತಗ್ಗು ಪ್ರದೇಶದಲ್ಲಿ ನೀರು ರಸ್ತೆಯ ಮೇಲೆ ಕೆಲವು ಹೊತ್ತು ಹರಿದು ಹೋಗುವುದು ಸ್ವಾಭಾವಿಕ. ಮಳೆಯ ನೀರು ಸಮುದ್ರಕ್ಕೆ ಹರಿದು ಹೋಗುವಾಗ ವಿಪರೀತ ಗಾಳಿ ಇರುವ ಸಂದರ್ಭದಲ್ಲಿ ಆ ನೀರನ್ನು ಸಮುದ್ರ ತೆಗೆದುಕೊಳ್ಳುವುದಿಲ್ಲ. ಆಗ ನೀರು ಹೋದ ಕಡೆ ಹಿಂದಕ್ಕೆ ಬರುವುದೂ ಇದೆ. ಎರಡನೇಯದಾಗಿ ರಾಜಕಾಲುವೆ ಹಾಗೂ ಬೃಹತ್ ಚರಂಡಿಗಳಲ್ಲಿ ಎಷ್ಟು ಪ್ರಮಾಣಬದ್ಧವಾಗಿ ಹೂಳು ತೆಗೆಯಲಾಗಿದೆ ಎನ್ನುವುದನ್ನು ಕೂಡ ನೋಡಬೇಕು. ಒಂದು ಕಾಲುವೆಯ ಹೂಳು ತೆಗೆಯುವ ಫೋಟೋ ಹಿಡಿದು ಎಷ್ಟು ರಾಜಕಾಲುವೆಗಳ ಎಷ್ಟು ಬಿಲ್ ಪಾಸಾಗಿದೆ ಎಂದು ಕೂಡ ಪರಿಶೀಲಿಸಬೇಕಾಗುತ್ತದೆ. ಆಗ ಭ್ರಷ್ಟಾಚಾರ ಹೊರಗೆ ಬರುವ ಸಾಧ್ಯತೆ ಇದೆ. ಮೂರನೇಯದಾಗಿ ಈ ಕಾಂಕ್ರೀಟ್ ರಸ್ತೆಗಳ ಇಕ್ಕೆಲಗಳಲ್ಲಿರುವ ಫುಟ್ ಪಾತ್ ಗಳ ಸೆರಗಿನಲ್ಲಿ ಮಳೆಯ ನೀರು ಹರಿದುಹೋಗಲು ಜಾಲಿ ತರಹದ ವ್ಯವಸ್ಥೆ ಮಾಡಿರುತ್ತಾರಲ್ಲ, ಅದು ಮಳೆಗಾಲ ಶುರುವಾಗುವ ಬೆರಳೆಣಿಕೆಯ ದಿನಗಳ ಮೊದಲು ಎಷ್ಟು ಕಡೆ ಕ್ಲೀನಾಗಿದೆ ಎಂದು ಕೂಡ ನೋಡಬೇಕಾಗುತ್ತದೆ. ಪಾಲಿಕೆ ಕಡೆಯಿಂದ ಕ್ಲೀನ್ ಮಾಡುತ್ತಾರೋ, ಬಿಡುತ್ತಾರೋ, ಕಾರ್ಪೋರೇಟರ್ ಗಳು ಏನು ಮಲಗಿದ್ದಾರಾ? ನೋಡಲು ಕಣ್ಣಿಲ್ಲವೇ? ಅದು ಕ್ಲೀನ್ ಮಾಡದೇ ಇದ್ದರೆ ನೀರು ಎಲ್ಲಿ ಹರಿದು ಹೋಗಬೇಕಾಗುತ್ತದೆ. ಇನ್ನು ಒಂದು ಮೀಟರ್ ಅಗಲದ ಚರಂಡಿಗಳಿಂದ ಆಂಟೋನಿ ವೇಸ್ಟ್ ನವರು ಎಷ್ಟು ಹೂಳು ತೆಗೆದಿದ್ದಾರೆ, ಎಲ್ಲಿ ತೆಗೆದಿದ್ದಾರೆ ಎಂದು ಯಾರಾದರೂ ನೋಡಿದ್ದಾರಾ? ಇಲ್ಲ, ತೆಗೆದರೆ ತಾನೆ, ನೋಡುವುದು. ಹಾಗಿರುವಾಗ ಪಾಲಿಕೆಯವರು ಕೂಡ ನಿರ್ಲಕ್ಷ್ಯ ವಹಿಸಿ, ಆಂಟೋನಿಯವರು ಕೂಡ ಕ್ಲೀನ್ ಮಾಡದೇ ಇದ್ದರೆ ಏನಾಗುತ್ತದೆ?
ಈ ಎಲ್ಲಾ ಕಾರಣಗಳಿಂದ ಕೆಲವು ಕಡೆ ಪರಿಸ್ಥಿತಿ ಹದಗೆಟ್ಟಿರುವುದು ನಿಜ. ಅದಕ್ಕೆ ಮುಖ್ಯವಾಗಿ ಇನ್ನೊಂದು ಕಾರಣ ಸರಕಾರದ ವಿವಿಧ ಇಲಾಖೆ ಮತ್ತು ಪಾಲಿಕೆಯ ವಿವಿಧ ವಿಭಾಗಗಳ ನಡುವೆ ಸಮನ್ವಯತೆ ಇಲ್ಲದೆ ಇರುವುದು ಕೂಡ ಮುಖ್ಯ ಕಾರಣ. ಯಾವಾಗ ಕಮ್ಯೂನಿಕೇಶನ್ ಗ್ಯಾಪ್ ಆಗುತ್ತೋ ಆಗ ಸಮಸ್ಯೆಗಳು ಆರಂಭವಾಗುತ್ತದೆ. ಇಲ್ಲದೇ ಹೋದರೆ ಸ್ಮಾರ್ಟ್ ಸಿಟಿಯ ಕಾಮಗಾರಿಗಳು ಯಾಕೆ ಕುಂಟುತ್ತಾ ಸಾಗುತ್ತವೆ. ಇದನ್ನೆಲ್ಲ ನೋಡದೇ ನಾವು ಒಂದು ದಿನದ ಜೋರು ಮಳೆಗೆ ಸಂಬಂಧಪಡದೇ ಇರುವವರನ್ನು ದೂಷಿಸಿ ಪ್ರಯೋಜನವಿಲ್ಲ. ಈಗ ನಿಜವಾದ ಪ್ರಶ್ನೆ ಇರುವುದು ಹಾಗಾದರೆ ಪಾಲಿಕೆಯ ಅರವತ್ತು ವಾರ್ಡಿನ ಅರವತ್ತು ಮತ್ತು ಎರಡು ಸ್ಪೆಶಲ್ ಗ್ಯಾಂಗುಗಳು ಇಷ್ಟು ದಿನ ಏನು ಮಾಡುತ್ತಿದ್ದವು. ಆಯುಕ್ತರನ್ನು ಕತ್ತಲೆಯಲ್ಲಿಟ್ಟು ಅವರಿಗೆ ಏನೇನೋ ಹೇಳಿ ಗ್ಯಾಂಗ್ ಹಾಕಿಸಿಕೊಂಡಿರಲ್ಲ, ಈಗ ಅವು ಈ ಮಳೆಗೆ ಎಲ್ಲಿ ಇದ್ದವು? ಪ್ರತಿ ಸ್ಪೆಶಲ್ ಗ್ಯಾಂಗಿನಲ್ಲಿರುವ ಸದಸ್ಯರು ಎಲ್ಲಿ ಕೆಲಸ ಮಾಡುತ್ತಿದ್ದರು? ಅಥವಾ ಅವರು ಕೂಡ ಜೋರು ಮಳೆ ಎಂದು ಮನೆಯ ಹೊರಗೆ ಕಾಲಿಡಲಿಲ್ಲವಾ? ಈಗ ಪ್ರತಿ ಕಾರ್ಪೋರೇಟರ್ ಏನು ಮಾಡಬೇಕು ಎಂದರೆ ತಮ್ಮ ತಮ್ಮ ಸ್ಪೆಶಲ್ ಗ್ಯಾಂಗಿನ ಅಷ್ಟೂ ಜನ ಸದಸ್ಯರು, ಅವರ ವಾಹನ ಮತ್ತು ಇರಬೇಕಾದ ಅನಿವಾರ್ಯ ವಸ್ತುಗಳ ಜೊತೆ ನಿಂತು ಫೋಟೋ ತೆಗೆಸಿ ಅದನ್ನು ತಮ್ಮ ವಾರ್ಡಿನ ಗ್ರೂಪಿನಲ್ಲಿ ವೈರಲ್ ಮಾಡಬೇಕು. ಇದರಿಂದ ಆ ವಾರ್ಡಿನ ಜನರಿಗೆ ತಮ್ಮ ವಾರ್ಡಿನಲ್ಲಿಯು ಆಪತ್ ಕಾಲದಲ್ಲಿಯೂ ಇಂತಹ ಒಂದು ವ್ಯವಸ್ಥೆ ಇದೆ ಎಂದು ಗೊತ್ತಾಗುತ್ತದೆ. ಈ ಸ್ಪೆಶಲ್ ಗ್ಯಾಂಗ್ ಮಳೆಗಾಲದಲ್ಲಿ ನಿಮ್ಮ ಸೇವೆಗೆ ಸದಾ ಸಿದ್ಧ ಎಂದು ಹೇಳಿಬಿಡಲಿ. ಅಲ್ಲಲ್ಲಿ ಒಂದೆರಡು ಫ್ಲೆಕ್ಸ್ ನಿಲ್ಲಿಸಿ ಜನರಲ್ಲಿ ಭರವಸೆ ತುಂಬಲಿ. ಅದು ಬಿಟ್ಟು ಸ್ಪೆಶಲ್ ಗ್ಯಾಂಗ್ ದಾಖಲೆಗಳಲ್ಲಿ ಮಾತ್ರ ಇದ್ದು, ಮಳೆಯ ನೀರು ಮನೆಗಳ ಒಳಗೆ ನುಗ್ಗಿದರೆ ಜನ ಮುಂದಿನ ಬಾರಿ ಅದೇ ನೀರನ್ನು ಯಾರಿಗೆ ಕುಡಿಸಬೇಕೋ ಅವರಿಗೆ ಕುಡಿಸಬಹುದು!
Leave A Reply