ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
ಅನಗತ್ಯವಾಗಿ ನಾಗರಿಕರನ್ನು ನಿಲ್ಲಿಸಿ ವಾಹನದ ದಾಖಲೆ ಪರೀಕ್ಷಿಸುವ ನೆಪದಲ್ಲಿ ಯಾವುದೇ ಕಿರಿಕಿರಿ ಆಗುವುದನ್ನು ಇನ್ನು ಮುಂದೆ ನಿಲ್ಲಿಸಲಾಗುವುದು ಎಂದು ರಾಜ್ಯ ಎಡಿಜಿಪಿ ಪ್ರವೀಣ್ ಸೂದ್ ಸುತ್ತೋಲೆ ಹೊರಡಿಸಿದ್ದಾರೆ. ಇದು ವಾಹನ ಸವಾರರಿಗೆ ನಿಜಕ್ಕೂ ನೆಮ್ಮದಿ ತಂದಿರುವುದು ಹೌದು. ಯಾರಾದರೂ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದರೆ ಮಾತ್ರ ಅಂತವರನ್ನು ತಡೆದು ಅವರ ಬಳಿ ದಾಖಲೆಗಳನ್ನು ಕೇಳಿ, ಇಲ್ಲದಿದ್ದರೆ ಅಗತ್ಯವಿಲ್ಲ ಎನ್ನುವ ನಿಯಮ ಉತ್ತಮ. ಆದರೆ ಇದು ನಿಜಕ್ಕೂ ಅನುಷ್ಟಾನವಾಗುತ್ತಾ ಎನ್ನುವುದನ್ನು ನೋಡಬೇಕು. ಯಾಕೆಂದರೆ ಪೊಲೀಸ್ ಸ್ಟೇಶನ್ ಗಳಿಗೆ ಪ್ರತಿ ತಿಂಗಳು ಇಂತಿಷ್ಟು ಟಾರ್ಗೆಟ್ ಎಂದು ಕೊಟ್ಟಿರುತ್ತಾರೆ. ಅವರು ಅದಕ್ಕೆ ರೀಚ್ ಆಗಲೇಬೇಕು. ಆಗ ನಿರ್ದಿಷ್ಟ ಸಮಯದಲ್ಲಿ ಪೊಲೀಸ್ ಸಿಬ್ಬಂದಿಗಳು ಅಲ್ಲಲ್ಲಿ ರಸ್ತೆಗಳ ತಿರುವಿನಲ್ಲಿ ವಾಹನಗಳನ್ನು ನಿಲ್ಲಿಸಿ ಎಲ್ಲವೂ ಇದ್ದರೂ ಯಾವುದಾದರೂ ಒಂದು ದಾಖಲೆ ಇಲ್ಲ ಎಂದು ಹೇಳಿ ಸುಮ್ಮನೆ ದಂಡ ಪೀಕಿಸುತ್ತಿದ್ದರು. ಬಹುಶ: ಬರುವ ದಿನಗಳಲ್ಲಿ ಇದು ನಿಲ್ಲಬೇಕಿದೆ. ಯಾಕೆಂದರೆ ಮೇಲಿನವರು ಎಂತಹ ಆದೇಶ ಕೊಟ್ಟರೂ ಅದು ಕೆಳಗಿನ ಹಂತದಲ್ಲಿ ಅನುಷ್ಟಾನಗೊಳ್ಳುವುದು ಕಷ್ಟ. ಯಾಕೆಂದರೆ ಉನ್ನತ ಅಧಿಕಾರಿಗಳ ಯೋಚನಾ ಶೈಲಿಯೇ ಬೇರೆ. ಅದೇ ಕೆಳಗಿನ ಅಧಿಕಾರಿ, ಸಿಬ್ಬಂದಿಗಳ ಎದುರಿಗಿರುವ ಸವಾಲುಗಳೇ ಬೇರೆ. ಈಗ ಬೇಕಾದರೆ ನೋಡಿ. ಪಾಲಿಕೆಯಲ್ಲಿ ಕೆಲಸದಲ್ಲಿರುವ ಅಧಿಕಾರಿಗಳು ತಮ್ಮ ಕುತ್ತಿಗೆಗೆ ಗುರುತು ಚೀಟಿ ಅಥವಾ ಐಡೆಂಟಿಟಿ ಕಾರ್ಡ್ ಎಂದು ಏನು ಹೇಳುತ್ತೇವೆಯೋ ಅದನ್ನು ನೇತಾಡಿಸಬೇಕು ಎಂದು ಸುತ್ತೋಲೆ ಇತ್ತು. ಅದರೊಂದಿಗೆ ಅವರು ತಮ್ಮ ಟೇಬಲ್ ಮೇಲೆ ತಮ್ಮ ಹೆಸರು, ಹುದ್ದೆಯನ್ನು ನಮೂದಿಸಿರುವ ಬೋರ್ಡ್ ಇಡಬೇಕು ಎಂದು ಕೂಡ ಹೇಳಲಾಗಿತ್ತು. ಆದರೆ ಎಷ್ಟರಮಟ್ಟಿಗೆ ಅದು ಜಾರಿಗೆ ಬಂದಿದೆ. ಬಂದಿಲ್ಲ. ಯಾಕೆಂದರೆ ಯಾವ ಅಧಿಕಾರಿ ತಾನೆ ಕುತ್ತಿಗೆಯಲ್ಲಿ ಹೆಸರು ನಮೂದಿಸಿಕೊಂಡು ತನ್ನ ಎದುರು ಹುದ್ದೆಯ ಬೋರ್ಡ್ ಇಟ್ಟು ಡೀಲಿಗೆ ಕುಳಿತುಕೊಳ್ಳಲು ಸಾಧ್ಯ. ಅವರಿಗೆ ಲಂಚ ಬರುವುದು ಕಷ್ಟವಾಗಲ್ವ? ನೀವು ಈಗ ಕೆಲಸ ಮಾಡಿಸಲು ಸರಕಾರಿ ಕಚೇರಿಗೆ ಹೋದಾಗ ಇಂತಿಂತಹ ಕೆಲಸ ಮಾಡಲು ಯಾರಿಗೆ ಸಿಗಬೇಕು ಎಂದು ಹೋದ ಕೂಡಲೇ ಮೊದಲು ಯಾರು ಕುಳಿತುಕೊಂಡಿರುತ್ತಾರೋ ಅವರಿಗೆ ಕೇಳಿರುತ್ತೀರಿ. ಅವರು “ನೋಡಿ ಸೀದಾ ಹೋಗಿ ಅಲ್ಲಿ ಕೊನೆಯಲ್ಲಿ ಕುಳಿತಿರುವ ಮೇಡಂ ಬಳಿ ಹೇಳಿ, ಅವರು ಮಾಡಿಕೊಡುತ್ತಾರೆ” ಎಂದು ಹೇಳುತ್ತಾರೆ. ನೀವು ಅಲ್ಲಿ ಹೋಗಿ ಕೆಲಸ ಮಾಡಿಸಲು ತಗಲುವ “ವೈಯಕ್ತಿಕ ಫೀಸ್” ಕೊಟ್ಟು ಕೆಲಸ ಮಾಡಿಸಬಹುದು. ಆದರೆ ನೀವು ಯಾರಿಗೆ ಹಣ ಕೊಟ್ಟದ್ದು ಎಂದು ನಿಮಗೆ ಗೊತ್ತೇ ಇರುವುದಿಲ್ಲ. ಯಾಕೆಂದರೆ ನೀವು ಕೇಳಿರುವುದಿಲ್ಲ. ಒಂದೊಮ್ಮೆ ಅಪ್ಪಿ ತಪ್ಪಿ ಕೇಳಿದರೂ ಅವರು ಕಣ್ಣು ದೊಡ್ಡದು ಮಾಡಿದ ಕೂಡಲೇ ನೀವು ಉಗುಳು ನುಂಗಿ ಬಿಟ್ಟಿರುತ್ತೀರಿ. ಆದ್ದರಿಂದ ನೀವು ಕೇಳಲು ಹೋಗಿರುವುದಿಲ್ಲ. ಆದ್ದರಿಂದ ಅದೇ ಕೆಲಸ ಬೇರೆಯವರಿಗೆ ಮಾಡಿಸಬೇಕಾದಾಗ ನಿಮ್ಮ ಬಳಿ ಸಲಹೆ ಕೇಳಿದರೆ ನೀವು “ಸೀದಾ ತಾಲೂಕು ಪಂಚಾಯತ್ ಒಳಗೆ ಹೋಗುವಾಗ ಮೊದಲ ಕೋಣೆಯಲ್ಲಿ ಕೊನೆಯಲ್ಲಿ ಕಿಟಕಿಯ ಬಳಿ ಕುಳಿತಿರುವ ಮೇಡಂ ಅವರಿಗೆ ಇಷ್ಟು ಕೊಟ್ಟರೆ ಅವರು ಮಾಡಿಕೊಡುತ್ತಾರೆ” ಎಂದು ಹೇಳುತ್ತೀರಿ ಬಿಟ್ಟರೆ ಆ ಅಧಿಕಾರಿಯ ಹೆಸರು, ಪೋಸ್ಟ್ ಗೊತ್ತಿರುವುದಿಲ್ಲ. ಅದೇ ಅವರ ಟೇಬಲ್ ಮೇಲೆ ಹೆಸರು, ಹುದ್ದೆ ಇದ್ದರೆ ನಿಮಗೆ ಯಾರಿಂದ ಎಷ್ಟು ಲಂಚ ಕೊಟ್ಟರೆ ಕೆಲಸ ಸುಲಭವಾಗುತ್ತದೆ ಎಂದು ನಿಖರವಾಗಿ ಗೊತ್ತಾಗುತ್ತದೆ. ನೀವು ಅವರ ಹೆಸರನ್ನೇ ನಾಲ್ಕು ಮಂದಿಗೆ ಹೇಳಿರುತ್ತೀರಿ. ಅದರಿಂದ ಯಾವ ಇಲಾಖೆಯಲ್ಲಿ ಯಾರು ಭ್ರಷ್ಟರು ಎಂದು ನಿಖರವಾಗಿ ಗೊತ್ತಾಗಿರುತ್ತದೆ. ಆದರೆ ಎಲ್ಲಿ ತಮ್ಮ ತಟ್ಟೆಗೆ ಕಲ್ಲು ಬೀಳುತ್ತೋ ಎಂದು ಸರಕಾರಿ ವ್ಯವಸ್ಥೆಯಲ್ಲಿ ಯಾರೂ ಕೂಡ ಸರಕಾರದ ಆದೇಶವನ್ನು ಜಾರಿಗೆ ತರಲು ಮುಂದಾಗಿಲ್ಲ.
ಇನ್ನು ಟೋ ವಿರುದ್ಧ ಜನ ಸಾಕಷ್ಟು ಆಕ್ರೋಶಿತಗೊಂಡ ನಂತರ ಅದನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ. ಹಾಗಾದರೆ ವಾಹನಗಳು ಅಡ್ಡಾದಿಡ್ಡಿ ಪಾರ್ಕಿಂಗ್ ಆಗುವುದು ನಿಂತಿದೆಯಾ? ಇಲ್ಲ. ಹಾಗಾದರೆ ಈ ಸಮಸ್ಯೆಗೆ ಪರಿಹಾರ ಏನು? ಬೆಸ್ಟ್ ಏನು ಎಂದರೆ ಹಿಂದೆ ವಾಹನಗಳು ನೋ ಪಾರ್ಕಿಂಗ್ ಜಾಗದಲ್ಲಿ ನಿಂತಿದ್ದರೆ ಪೊಲೀಸರು ಅದರ ಚಕ್ರಕ್ಕೆ ಲಾಕ್ ಹಾಕುತ್ತಿದ್ದರು. ಕೆಂಪು-ಹಳದಿ ಬಣ್ಣದ ಲೋಹದ ಬೀಗ ಹಾಕಿದರೆ ವಾಹನ ಅಲ್ಲಾಡುತ್ತಿರಲಿಲ್ಲ. ಅದನ್ನು ಹಾಕಿದರೆ ಎರಡು ರೀತಿಯ ಪ್ರಯೋಜನ ಉಂಟು. ಮೊದಲನೇಯದಾಗಿ ಅದರ ಚಾಲಕ ವಾಹನದ ಬಳಿ ಬಂದಾಗ ಅದನ್ನು ನೋಡಿ ಸೀದಾ ಪೊಲೀಸ್ ಠಾಣೆಗೆ ಫೋನ್ ಮಾಡಿ ಅವರು ಬಂದು ಫೈನ್ ಕಟ್ಟಿಸಿಕೊಂಡು ಲಾಕ್ ತೆಗೆಯುವಾಗ ಒಂದು ಗಂಟೆ ಆಗಿರುತ್ತದೆ. ಆ ರಗಳೆ ಬೇಡಾ ಎಂದು ಯಾರೂ ಕೂಡ ಎಲ್ಲೆಲ್ಲಿಯೋ ನಿಲ್ಲಿಸಿ ಹೋಗುವುದಿಲ್ಲ. ಇನ್ನೊಂದು ಏನೆಂದರೆ ಒಮ್ಮೆ ಇಂತಹ ಅನುಭವವಾದರೆ ನಂತರ ಪಾರ್ಕಿಂಗ್ ಇಲ್ಲದ ಅಂಗಡಿಗಳಿಗೆ ಯಾರೂ ಕೂಡ ವ್ಯಾಪಾರಕ್ಕೆ ಹೋಗುವುದಿಲ್ಲ. ಇದರಿಂದ ಪಾರ್ಕಿಂಗ್ ಇಲ್ಲದ ಕಟ್ಟಡಗಳಲ್ಲಿರುವ ಅಂಗಡಿಗಳಿಗೆ ವ್ಯಾಪಾರ ಇಳಿಯುತ್ತದೆ. ಅದರಿಂದ ಪಾರ್ಕಿಂಗ್ ಇಲ್ಲದೆ ಅಂಗಡಿಗಳು ಅಂತಹ ಕಟ್ಟಡದಲ್ಲಿ ಅಂಗಡಿಗಳನ್ನು ತೆರೆಯುವುದಿಲ್ಲ. ತಿಲಕಚಂದ್ರ ಅವರು ಮಂಗಳೂರಿನಲ್ಲಿ ಟ್ರಾಫಿಕ್ ಎಸಿಪಿಯಾಗಿದ್ದಾಗ ಹೀಗೆ ಪಾರ್ಕಿಂಗ್ ಇಲ್ಲದ ವಾಣಿಜ್ಯ ವ್ಯವಹಾರಗಳ ಕಟ್ಟಡಗಳ ಪಟ್ಟಿ ತಯಾರಿಸಿಕೊಂಡಿದ್ದರು. ಅಂತಹ ಒಂದು ಪದ್ಧತಿ ಮತ್ತೆ ಜಾರಿಗೆ ತಂದರೆ ಒಳ್ಳೆಯದು. ಇನ್ನು ಜುಲೈ 1 ರಿಂದ ಏಕಬಳಕೆಯ ಪ್ಲಾಸ್ಟಿಕ್ ನಿಷೇಧವಾಗಲಿದೆ. ಇಲ್ಲಿಯ ತನಕ ಪ್ಲಾಸ್ಟಿಕ್ ನಿಷೇಧ ಎನ್ನುವುದು ಕೇವಲ ಜೋಕ್ ನಂತೆ ಕಾಣಿಸುತ್ತಿತ್ತು. ಮೂಲ್ಕಿ, ಮೂಡಬಿದ್ರೆಯಲ್ಲಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಅಂಗಡಿಗಳ ಮೇಲೆ ದಾಳಿಯಾದ ನ್ಯೂಸ್ ಬರುತ್ತಿದ್ದರೂ ಮಂಗಳೂರಿನಲ್ಲಿ ಅದರ ಸುದ್ದಿ ಇರಲೇ ಇಲ್ಲ!
Leave A Reply