ತೋಕೂರಿನಲ್ಲಿ ಇಳಿಸಿದರೆ ಚೌತಿಯ ಗಣಪತಿಯೇ ಕಾಯಬೇಕು!!
ಮೊಣಕೈಗೆ ಉಪ್ಪಿನಕಾಯಿ ತಾಗಿಸಿ ಎದುರಿಗೆ ಬಿಸಿ ಗಂಜಿ ಇಟ್ಟರೆ ಏನಾಗುತ್ತದೆ? ಹಾಗೆ ಮಾಡುತ್ತದೆ, ನಮ್ಮ ರೈಲ್ವೆ ಇಲಾಖೆ. ಇನ್ನು ಅಗಸ್ಟ್ ತಿಂಗಳ ಕೊನೆಯಲ್ಲಿ ಚೌತಿಯ ಸೀಸನ್ ಶುರುವಾಗುತ್ತದೆ. ಮಂಗಳೂರು ಮತ್ತು ಮುಂಬೈ ನಡುವೆ ಈ ಚೌತಿಯ ವಿಷಯ ಬಂದಾಗ ವಿಶಿಷ್ಟವಾದ ಭಾವನಾತ್ಮಕ ಸಂಬಂಧ ಇದೆ. ಅಸಂಖ್ಯಾತ ಕರಾವಳಿಗರು ದೂರದ ಮುಂಬೈಯಲ್ಲಿ ಉದ್ಯೋಗ, ವ್ಯವಹಾರದ ನಿಮಿತ್ತ ನೆಲೆಸಿದ್ದಾರೆ. ಅವರು ಚೌತಿಯ ಸಂದರ್ಭದಲ್ಲಿ ಊರಿಗೆ ಬರಲು ಹಾತೊರೆಯುತ್ತಾರೆ. ಅದೇ ರೀತಿ ಎಷ್ಟೋ ಜನ ಮುಂಬೈ ಮೂಲದವರು ಕರಾವಳಿಯಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ. ಅವರು ಮಹಾರಾಷ್ಟ್ರದ ಅತೀ ದೊಡ್ಡ ಹಬ್ಬ ಗಣೇಶ ಚೌತಿಯಂದು ಹುಟ್ಟೂರಿಗೆ ಮರಳಲು ತಯಾರಾಗಿ ನಿಂತಿರುತ್ತಾರೆ. ಹೀಗೆ ಎರಡೂ ಭಾಗದಲ್ಲಿ ಕಾಲ ಬೆರಳ ತುದಿಯಲ್ಲಿ ಚೌತಿಗಾಗಿ ಕಾಯುವವರಿಗೆ ಪ್ರಧಾನ ಕೊಂಡಿ ಎಂದರೆ ಅದು ರೈಲು. ಚೌತಿಗೆ ವಾರ ಇರುವಾಗಲೇ ರೈಲಿನಲ್ಲಿ ಒಂದೇ ಒಂದು ಸೀಟು ಖಾಲಿ ಇರುವುದಿಲ್ಲ. ಚೌತಿ ಮುಗಿದು ವಾರದ ತನಕವೂ ಇದು ಮುಂದುವರೆಯುತ್ತದೆ. ಅದಕ್ಕಾಗಿ ಈ ಎರಡು ರಾಜ್ಯಗಳ ನಡುವೆ ಹೆಚ್ಚುವರಿ ರೈಲು ಓಡಿಸಬೇಕೆಂಬ ಬೇಡಿಕೆ ಇದ್ದೇ ಇರುತ್ತದೆ. ಈ ಬಾರಿಯೂ ಅಂತಹ ಒಂದು ರೈಲು ಓಡಾಡಲಿದೆ. ಅದು ಗಣಪತಿ ಸ್ಪೆಶಲ್ ಟ್ರೇನ್ ಎಂದು ಕರೆಯಬಹುದು. ಅದು ಇದೇ ಅಗಸ್ಟ್ 13 ರಿಂದ ಸೆಪ್ಟೆಂಬರ್ 11 ರ ತನಕ ಓಡಾಟ ನಡೆಸಲಿದೆ. ಇಷ್ಟೇ ಆಗಿದ್ದರೆ ಜನ ಖುಷಿ ಪಡುತ್ತಿದ್ದರೇನೋ. ಆದರೆ ವಿಷಯ ಇರುವುದು ಅಷ್ಟೇ ಅಲ್ಲವೇ ಅಲ್ಲ. ಮುಂಬೈಯಿಂದ ಬರುವ ಟ್ರೇನು ಎಲ್ಲಿಗೆ ಬಂದು ನಿಲ್ಲುತ್ತೆ ಎಂದು ನಿಮಗೆ ಯಾರಾದರೂ ಕೇಳಿದರೆ ನೀವು ಅಷ್ಟೂ ಗೊತ್ತಾಗಲ್ವ? ಮಂಗಳೂರು ಸೆಂಟ್ರಲ್ ತಪ್ಪಿದರೆ ಜಂಕ್ಷನ್ ಎಂದು ಪಕ್ಕನೆ ಹೇಳಿಬಿಡಬಹುದು. ಆದರೆ ನಿಮ್ಮ ಉತ್ತರ ಶುದ್ಧ ತಪ್ಪು ಎಂದು ನಿಮಗೆ ಗೊತ್ತಾದರೆ ಆಶ್ಚರ್ಯದ ಜೊತೆಗೆ ಬೇಸರವೂ ಮೂಡುತ್ತದೆ. ಯಾಕೆ ಗೊತ್ತಾ?
ಗಣಪತಿ ಸ್ಪೆಶಲ್ ಮುಂಬೈಯಿಂದ ಹೊರಟು ಬಂದು ನಿಲ್ಲುವುದು ಎಲ್ಲಿ ಗೊತ್ತಾ? ತೋಕೂರಿನಲ್ಲಿ. ಇಂದೆಂತಹ ತಮಾಷೆ ಎಂದು ಕೇಳುತ್ತೀರಾ? ಹೌದು. ನಿಮಗೆ ಇದು ತಮಾಷೆ ಎಂದು ಅನಿಸಬಹುದು. ಆದರೆ ಪರಮ ಬುದ್ಧಿವಂತರಾದ ರೈಲ್ವೆ ಇಲಾಖೆಯವರು ತೋಕೂರನ್ನೇ ಕೊನೆಯ ಸ್ಟಾಪ್ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ. ಕೇಳಿದರೆ ಬೇರೆ ಉಪಾಯವಿಲ್ಲ ಎನ್ನುತ್ತಾರೆ. ಮಂಗಳೂರಿನ ಒಳಗೆ ಬರಬಹುದಲ್ಲ, ಏನು ಮೈಲಿಗೆಯಾಗುತ್ತಾ ಎಂದು ಕೇಳಿ ನೋಡಿ. ಅಲ್ಲಿ ಫ್ಲಾಟ್ ಫಾರಂ ಕೊಡಲು ದಕ್ಷಿಣ ರೈಲ್ವೆ ವಿಭಾಗ ಒಪ್ಪುತ್ತಿಲ್ಲ ಎನ್ನುವ ಉತ್ತರ ಬರುತ್ತದೆ. ಈಗ ಗಣಪತಿ ಸ್ಪೆಶಲ್ ಓಡುವುದು ಕೊಂಕಣ ರೈಲ್ವೆ ಅಡಿಯಲ್ಲಿ. ಅದರ ಪರಿಧಿ ಇರುವುದು ತೋಕೂರು ತನಕ ಮಾತ್ರ. ಅದರ ನಂತರ ಮಂಗಳೂರು ರೈಲ್ವೆ ನಿಲ್ದಾಣಗಳು ದಕ್ಷಿಣ ರೈಲ್ವೆ ಅಧೀನದಲ್ಲಿ ಬರುತ್ತವೆ. ಇಲ್ಲಿ ನಡೆಯುವುದು ಇವರದ್ದೇ ಯಜಮಾನಿಕೆ. ಇವರು ನೋ ಎಂಟ್ರಿ ಎಂದರೆ ಮಂಗಳೂರಿನ ಹೊಸ್ತಿಲಲ್ಲಿ ಬಂದವರು ಒಳಗೆ ಕಾಲಿಡಲು ಆಗದ ಪರಿಸ್ಥಿತಿಗೆ ಬಂದು ನಿಂತಂತೆ ಆಗುತ್ತದೆ. ಹಾಗಂತ ತೋಕೂರು ಮಂಗಳೂರಿನಿಂದ ತುಂಬಾ ದೂರ ಏನಲ್ಲ. ಆದರೆ ವಿಷಯ ಇರುವುದು ಅಲ್ಲಿ ನಿಮ್ಮನ್ನು ಇಳಿಸುವುದು ಒಂದೇ, ಯಾವುದಾದರೂ ಸುರಂಗದಲ್ಲಿ ನಡುವೆ ಇಳಿಸಿ ಬಾಯ್ ಹೇಳುವುದು ಒಂದೇ. ಅಸಲಿಗೆ ತೋಕೂರು ರೈಲ್ವೆ ನಿಲ್ದಾಣವನ್ನು ರೈಲ್ವೆ ನಿಲ್ದಾಣ ಎಂದು ಕರೆಯುವುದೇ ಮಹಾ ಜೋಕು. ಅದು ಒಂದು ರೀತಿಯಲ್ಲಿ ಅನಿವಾರ್ಯ ಕ್ರಾಸಿಂಗ್ ಬಿದ್ದರೆ ಇರಲಿ ಎಂದು ಮಾಡಿಟ್ಟ ವ್ಯವಸ್ಥೆ. ಅಲ್ಲಿ ಏನು ಇಲ್ಲ ಎಂದು ಹೇಳುವುದಕ್ಕಿಂತ ಏನು ಇದೆ ಎಂದು ಕೇಳುವುದು ಸೂಕ್ತ. ಅಂತಹ ಒಂದು ಒಣಕಲು ಫ್ಲಾಟ್ ಫಾರಂ ಇರುವುದನ್ನೇ ರೈಲ್ವೆ ನಿಲ್ದಾಣ ಎಂದು ಕರೆಯುವುದಾದರೆ ನಮಗೆ ಅದಕ್ಕಿಂತ ಬೇರೆ ಅವಮಾನ ಬೇಕಿಲ್ಲ.
ರೈಲ್ವೆಯ ಬಗ್ಗೆ ಮಾತನಾಡುವಾಗ ಇನ್ನೊಂದು ವಿಷಯ ಹೇಳಲೇಬೇಕು. ಮಂಗಳೂರು-ಬೆಂಗಳೂರು ರೈಲ್ಲನ್ನು ಸೀಳಿ ಒಂದನ್ನು ಕಣ್ಣೂರಿಗೆ, ಇನ್ನೊಂದನ್ನು ಕಾರವಾರಕ್ಕೆ ಕಳುಹಿಸುವ ಏರ್ಪಾಟು ಆಗಿ ಹಲವು ವರ್ಷಗಳು ಕಳೆದಿವೆ. ಸರಿಯಾಗಿ ನೋಡಿದರೆ ಕಣ್ಣೂರಿಗೆ ಆ ರೈಲ್ಲನ್ನು ವಿಸ್ತರಿಸಿರುವುದೇ ಹಾಸ್ಯಾಸ್ಪದ. ಅದರ ಅಗತ್ಯ ಇರಲಿಲ್ಲ. ಆದರೆ ಆಗ ಯುಪಿಎ ಸರಕಾರ ಇತ್ತು. ಕೇರಳದ ಸಂಸದ ಈ-ಅಹ್ಮದ್ ಕೇಂದ್ರದಿಂದ ರಾಜ್ಯ ರೈಲ್ವೆ ಮಂತ್ರಿಯಾಗಿದ್ದರು. ರೈಲಿನ ವಿಷಯ ಬಂದಾಗ ಕೇರಳದ ರಾಜಕಾರಣಿಗಳು ಅದ್ಯಾವ ನಮೂನೆಯ ಅತ್ಯಾಸೆಗೆ ಬೀಳುತ್ತಾರೆ ಎಂದರೆ ದೇಶದ ಎಲ್ಲಾ ರೈಲುಗಳು ದಿನಕ್ಕೆ ಒಂದು ಸಲ ಕೇರಳಕ್ಕೆ ಬಂದು ಹೋಗುವಂತಾಗಲಿ ಎಂದು ಬಯಸುವಷ್ಟು ದುರಾಸೆ ಅವರಿಗೆ ಇದೆ. ಯಾವುದಾದರೂ ಒಂದು ರೈಲು ಎಲ್ಲಿಂದಲಾದರೂ ಮಂಗಳೂರಿಗೆ ಬರುತ್ತದೆ ಎಂದು ಗೊತ್ತಾದರೆ ಅದು ಕೇರಳಕ್ಕೂ ವಿಸ್ತರಿಸಿ ಎಂದು ಕೈಕಾಲು ಹೊಡೆಯುತ್ತಾರೆ. ಅದರ ಅಗತ್ಯ ಇದೆಯೋ ಇಲ್ವೋ ಬೇರೆ ವಿಷಯ, ಆದರೆ ಅವರಿಗೆ ಅದು ಬೇಕು. ಹೀಗೆ ಅಂದು ಅಹ್ಮದ್ ಕಣ್ಣೂರಿಗೆ ಹಾಕಿಸಿಕೊಂಡ ಮಂಗಳೂರು-ಬೆಂಗಳೂರು ರೈಲನ್ನು ಈಗ ಕಣ್ಣೂರಿನಿಂದ ಕ್ಯಾಲಿಕಟ್ ತನಕ ತೆಗೆದುಕೊಂಡು ಹೋಗಲು ಅಲ್ಲಿ ಪ್ಲಾನ್ ನಡೆಯುತ್ತಿದೆ. ಸ್ವಾರ್ಥ ಇರಬೇಕು, ಆದರೆ ಅದು ಜನರ ತೆರಿಗೆಯ ಹಣ ಪೋಲು ಮಾಡಿ ಮಜಾ ಉಡಾಯಿಸುವಂತಾಗಬಾರದು. ಬೆಂಗಳೂರಿನಿಂದ ಮಂಗಳೂರಿಗೆ ಬರುವ ರೈಲು ಕಣ್ಣೂರಿಗೆ ಹೊರಡುವಾಗ ಅದರಲ್ಲಿ ಇರುವುದು ಕೆಲವೇ ಕೆಲವು ಪ್ರಯಾಣಿಕರು. ಅದರ ಅರ್ಥ ಆ ಭಾಗದಲ್ಲಿ ಓಡುವಾಗ ರೈಲು ನಷ್ಟದಲ್ಲಿ ನಡೆಯುತ್ತಿದೆ. ಹೀಗಿರುವಾಗ ಅದೇ ನಷ್ಟವನ್ನು ಇನ್ನು ಹೆಚ್ಚು ಮಾಡಲು ಕ್ಯಾಲಿಕಟ್ ತನಕ ಓಡಿಸುವುದಾ ಎನ್ನುವ ಪ್ರಶ್ನೆ ಮೂಡುತ್ತದೆ. ರೈಲ್ವೆ ವಿಷಯದಲ್ಲಿ ಕರ್ನಾಟಕದ ಜನರ ಮತ್ತು ದೇಶದ ಹಿತ ಕಾಯುವುದಕ್ಕಾಗಿ ನಮ್ಮ ಸಂಸದರಿಗೆ ನಾವು ಮಾಡುವ ಮನವಿ ಏನೆಂದರೆ ಈ ಎರಡೂ ವಿಷಯಗಳಲ್ಲಿ ತಾವು ಮಧ್ಯ ಪ್ರವೇಶಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ನಿಮ್ಮ ಮೇಲೆ ಭರವಸೆ ಇದೆ. ಈಡೇರಿಸಿ!!
Leave A Reply