ಹೆಣ್ಣುಮಕ್ಕಳು ನೇತಾಡಿ ಹೋಗುವ ಪರಿಸ್ಥಿತಿ ಬರಬಾರದಾಗಿತ್ತು!!
ಕೋವಿಡ್ ಲಾಕ್ ಡೌನ್ ನಂತರ ಮಂಗಳೂರಿನ ಖಾಸಗಿ ಬಸ್ಸುಗಳಲ್ಲಿ ಜನ ಬರುವುದು ಕಡಿಮೆಯಾಗಿದೆ ಎಂದು ಬಸ್ಸು ಮಾಲೀಕರು ಹೇಳುತ್ತಲೇ ಬರುತ್ತಿದ್ದರು. ಬಸ್ಸು ಉದ್ಯಮ ಎಂದರೆ ಲಾಸ್ ಎನ್ನುವುದು ಅವರ ಶಾಶ್ವತ ಗೋಳಾಗಿತ್ತು. ಜನರು ದ್ವಿಚಕ್ರ ವಾಹನಗಳನ್ನು ಖರೀದಿಸಿದ್ದಾರೆ. ಆದ್ದರಿಂದ ಬಸ್ಸುಗಳಿಗೆ ಬರುವುದಿಲ್ಲ. ಬಸ್ಸು ಉದ್ಯಮ ಲಾಸ್ ಎನ್ನಲು ಅವರು ಕಾರಣಗಳನ್ನು ಪಟ್ಟಿ ಮಾಡಿ ಹೇಳುತ್ತಾ ಇದ್ದರು. ಆದರೆ ಇವತ್ತಿಗೂ ಜನ ಬಸ್ಸುಗಳಿಗೆ ಬರುವುದು ಕಡಿಮೆಯಾಗಿಲ್ಲ ಎಂದು ಈಗಲೇ ಮತ್ತೊಮ್ಮೆ ಸಾಬೀತಾಗಿದೆ. ಮಂಗಳೂರಿನ ಬಸ್ಸುಗಳಲ್ಲಿ ಹೆಣ್ಣುಮಕ್ಕಳು ಫುಟ್ ಬೋರ್ಡಿನಲ್ಲಿ ನೇತಾಡಿ ಹೋಗುವಂತಹ ವಿಡಿಯೋ ಮತ್ತು ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳ ಮೂಲಕ ವೈರಲ್ ಆಗಿದೆ. ಇಲ್ಲಿಯ ತನಕ ಈ ಪರಿಸ್ಥಿತಿ ಮಂಗಳೂರಿನಲ್ಲಿ ಬಂದಿರಲಿಲ್ಲ. ಎಲ್ಲೋ ಅಲ್ಲಲ್ಲಿ ಪುಂಡ ವಿದ್ಯಾರ್ಥಿಗಳಂತಿದ್ದವರು ಶೋಕಿಗಾಗಿ ನೇತಾಡಿ ಹೋಗುವುದನ್ನು ನಾವು ನೋಡಿದ್ದೇವೆ. ಒಳಗೆ ಸೀಟು ಇದ್ರೂ ನೇತಾಡುತ್ತಾರೆ ಎನ್ನುವುದು ಕೆಲವು ಬಾರಿ ನಿರ್ವಾಹಕರ ಸಬೂಬು ಕೂಡ ಆಗಿತ್ತು. ಆದರೆ ಹೆಣ್ಣುಮಕ್ಕಳು ಅದು ಕೂಡ ಕೆಲಸಕ್ಕೆ ಹೋಗುವವರು ಹೀಗೆ ನೇತಾಡುತ್ತಾರೆ ಎಂದರೆ ಪರಿಸ್ಥಿತಿ ಬದಲಾಗಿದೆ ಎಂದೇ ಅರ್ಥ. ಈಗ ಬಸ್ಸಿನಲ್ಲಿ ಜಾಗ ಇಲ್ಲ ಎಂದಾದರೆ ಒಂದೋ ಅಲ್ಲಿ ಬಸ್ಸಿನವರಿಗೆ ಒಳ್ಳೆಯ ಆದಾಯ ಇರಲೇಬೇಕು ಅಥವಾ ಅಲ್ಲಿ ಬಸ್ಸುಗಳ ಸಂಖ್ಯೆ ಕಡಿಮೆ ಇರಬೇಕು. ಅಲ್ಲಿ ಬಸ್ಸುಗಳು ಕಡಿಮೆ ಇರಬೇಕು ಎಂದಾದರೆ ಆ ರೂಟಿನಲ್ಲಿ ಸರಕಾರ ನರ್ಮ್ ಬಸ್ ಹಾಕಬೇಕು. ಈ ಖಾಸಗಿ ಬಸ್ಸಿನವರು ನರ್ಮ್ ಬಸ್ ಹಾಕಲು ಅಡ್ಡಿಪಡಿಸುತ್ತಾರೆ. ಯಾಕೆಂದರೆ ಅದರಿಂದ ಇವರ ಆದಾಯಕ್ಕೆ ಹೊಡೆತ ಬೀಳುತ್ತದೆ ಎಂದು ಹೆದರಿಕೆ. ಇವರು ತಮ್ಮ ಆದಾಯದ ಬಗ್ಗೆ ಯೋಚಿಸುವುದಕ್ಕಿಂತ ಹೀಗೆ ಹೆಣ್ಣುಮಕ್ಕಳು ನೇತಾಡಿಹೋಗುವುದರ ಬಗ್ಗೆನೂ ಯೋಚಿಸಿದರೆ ಅದರಿಂದ ಅಮಾಯಕ ಹೆಣ್ಣುಮಕ್ಕಳ ಪ್ರಾಣವಾದರೂ ಉಳಿಯುತ್ತದೆ. ಈಗ ಯಾವ ಏರಿಯಾದಲ್ಲಿ ಹೆಣ್ಣುಮಕ್ಕಳು ಹೀಗೆ ನೇತಾಡಿ ಹೋಗುವಂತಹ ಪರಿಸ್ಥಿತಿ ಇದೆ ಎನ್ನುವುದನ್ನು ಜಿಲ್ಲಾಧಿಕಾರಿಗಳು ತಕ್ಷಣ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು ಅಲ್ಲಿ ನರ್ಮ್ ಬಸ್ ಹಾಕಿಬಿಡಬೇಕು. ಯಾಕೆಂದರೆ ಒಂದು ವೇಳೆ ಒಂದು ಹೆಣ್ಣುಮಗಳ ಕೈ ಜಾರಿತು ಎಂದೇ ಇಟ್ಟುಕೊಳ್ಳೋಣ, ನಂತರ ಅದರಿಂದ ಆಗುವ ಮುಂದಿನ ಪರಿಣಾಮಗಳ ಬಗ್ಗೆ ಯಾರು ಹೊಣೆ? ಬಸ್ಸಿನವರಾ? ಜಿಲ್ಲಾಡಳಿತವಾ? ಪೊಲೀಸ್ ಇಲಾಖೆಯಾ?
ಹಿಂದಿನ ಸಹಸವಾರ ಹೆಲ್ಮೆಟ್ ಹಾಕಲಿಲ್ಲ ಎಂದು ಪೊಲೀಸರು ವಾಹನ ನಿಲ್ಲಿಸಿ ಅಲ್ಲಿ ದಂಡ ಹಾಕಲ್ವಾ? ಮೂರು ಜನ ಬೈಕಿನಲ್ಲಿ ಹೋದರೆ ಅವರನ್ನು ನಿಲ್ಲಿಸಿ ಫೈನ್ ಕಟ್ಟಲು ಹೇಳಲ್ವಾ? ನೋಎಂಟ್ರಿಯಲ್ಲಿ ಹೋದರೆ ನಿಲ್ಲಿಸಿ ದಂಡ ಕಕ್ಕಿಸಲ್ವಾ? ಅಲ್ಲೆಲ್ಲ ಬಹಳ ಆಕ್ಟಿವ್ ಆಗಿರುವ ಪೊಲೀಸರು ಈ ಬಸ್ಸಿನವರ ಮೇಲೆ ಮೃಧು ಧೋರಣೆ ತೋರಿಸುವುದು ಸರಿನಾ? ಬಸ್ಸಿನ ಬಾಗಿಲಲ್ಲಿ ನೇತಾಡುವುದು ತುಂಬಾ ಡೇಂಜರ್. ಆದರೆ ಪೊಲೀಸ್ ಹಾಗೂ ಆರ್ಟಿಒ ಅಧಿಕಾರಿಗಳು ಬಸ್ಸಿನವರ ಇಂತಹ ಎಷ್ಟೇ ಅವಾಂತರಗಳನ್ನು ಕೂಡ ಸಹಿಸಿಕೊಳ್ಳುತ್ತಾರೆ. ಅಪರೂಪಕ್ಕೊಮ್ಮೆ ಬಸ್ಸಿನ ಹಾರ್ನ್ ಕಳಚುವುದು ಬಿಟ್ಟು ಬೇರೆ ಏನೂ ಮಾಡುವುದಿಲ್ಲ. ಆದ್ದರಿಂದ ಬಸ್ಸಿನವರು ಎಷ್ಟೇ ಜನರನ್ನು ತುಂಬಿಸಿಕೊಂಡು ಹೋದರೂ ಏನೂ ಕ್ರಮ ಇಲ್ಲ. ಆರ್ಟಿಒ ಮತ್ತು ಬಸ್ಸಿನವರ ಅಪವಿತ್ರ ಮೈತ್ರಿ ಹೇಗಿರುತ್ತದೆ ಎಂದರೆ ಬಸ್ಸಿನ ಸೀಟುಗಳ ಸಂಖ್ಯೆ ಅಥವಾ ಉದ್ದ ಕಡಿಮೆ ಇದ್ದಷ್ಟು ಕಟ್ಟಬೇಕಾದ ತೆರಿಗೆ ಕೂಡ ಕಡಿಮೆ. ಉದಾಹರಣೆಗೆ 42 ಸಿಟ್ಟಿಂಗ್ ಹಾಗೂ 10 ಸ್ಟ್ಯಾಂಡಿಂಗ್ ಆದರೆ ಇರುವ ತೆರಿಗೆ ಪ್ರಮಾಣ ಹೆಚ್ಚಿರುತ್ತದೆ ಎನ್ನುವ ಕಾರಣಕ್ಕೆ 32 ಸಿಟ್ಟಿಂಗ್ ಹಾಗೂ 5 ಸ್ಟ್ಯಾಂಡಿಂಗ್ ಇರುವ ಬಸ್ಸುಗಳನ್ನು ಮಾಲೀಕರು ರಸ್ತೆಗೆ ಬಿಡುತ್ತಾರೆ. ಆದರೆ ಎಡ ಮತ್ತು ಬಲ ಸೀಟುಗಳ ನಡುವೆ ಅಂತರ ಜಾಸ್ತಿ ಇಟ್ಟಿರುತ್ತಾರೆ. ಇದರ ಅರ್ಥ ಪೀಕ್ ಅವರ್ ನಲ್ಲಿ ಎಷ್ಟು ಬೇಕಾದರೂ ಅಷ್ಟು ತುಂಬಿಸಿಕೊಂಡು ಹೋಗಬಹುದು ಎಂದು ಅವರೇ ಅದಕ್ಕೆ ತಯಾರಾಗಿರುತ್ತಾರೆ. ಇದರಿಂದ ಏನಾಗುತ್ತದೆ? ಬಸ್ಸಿನಲ್ಲಿ ಲೆಕ್ಕಕ್ಕಿಂತ ಜನ ಜಾಸ್ತಿ ಹಾಕಲು ಆರ್ ಟಿಒದಲ್ಲಿ ಮೌನ ಸಮ್ಮತಿ ಸಿಕ್ಕಿದೆ ಎಂದೇ ಅರ್ಥ. ಯಾವಾಗಲೂ ಬಸ್ಸಿನಲ್ಲಿ ಹೋಗುವವರು ಮಧ್ಯಮ ವರ್ಗದ ಜನರು. ಅವರು ಸ್ವಂತ ದ್ವಿಚಕ್ರ ವಾಹನಗಳನ್ನು ಖರೀದಿಸಲು ಆಗದೇ, ಈಗಿನ ಪೆಟ್ರೋಲ್ ದರದಲ್ಲಿ ಸಿಗುವ ಸ್ವಲ್ಪ ಸಂಬಳವನ್ನು ಹೊಂದಿಸಿಕೊಳ್ಳಲು ಸಾಧ್ಯವಾಗದೇ ಆದಷ್ಟು ಬಸ್ಸಿನಲ್ಲಿ ಹೋಗುತ್ತಾರೆ. ಇನ್ನು ವೃದ್ಧರು ಕೂಡ ಅನೇಕ ಸಂದರ್ಭದಲ್ಲಿ ಬಸ್ಸನ್ನೇ ಆಯ್ಕೆ ಮಾಡುತ್ತಾರೆ. ಒಂದು ಕಡೆಯಲ್ಲಿ ಈಗ ಮಳೆಗಾಲದಲ್ಲಿ ಅನೇಕ ಗ್ರಾಮಾಂತರ ಭಾಗದ ರಸ್ತೆಗಳು ಕಂಬಳದ ಗದ್ದೆಯಾಗಿವೆ. ಅದರಲ್ಲಿ ಕೋಣಗಳು ಸಲೀಸಾಗಿ ಓಡಬಹುದು. ಆದರೆ ಬಸ್ಸುಗಳನ್ನು ಓಡಿಸುವುದು ಕಷ್ಟ. ಹಾಗಿರುವಾಗ ಅಂತಹ ರಸ್ತೆಗಳಲ್ಲಿ ಫುಟ್ ಬೋರ್ಡಿನ ಮೇಲೆ ನಿಂತು ಚಲಿಸುವುದು ಎಂದರೆ ಬಾಹ್ಯಾಕಾಶದಲ್ಲಿ ಸಂಚರಿಸಿದ ಹಾಗೆ. ನೀವು ಬಸ್ಸಿನ ಸೀಟಿನಲ್ಲಿ ಕುಳಿತುಕೊಂಡಾಗಲೇ ರಸ್ತೆಯಲ್ಲಿರುವ ಗುಂಡಿಗಳಲ್ಲಿ ಎದ್ದುಬಿದ್ದು ಬಸ್ಸು ಸಂಚರಿಸುವಾಗ ಸುಧಾರಿಸಿಕೊಳ್ಳುವುದು ಕಷ್ಟ. ಹಾಗಿರುವಾಗ ಇದು ಸಾಧ್ಯವೇ ಎನ್ನುವುದನ್ನು ಯಾವುದಾದರೂ ಜ್ಞಾನಿ ಹೇಳಬೇಕು.
ಮಂಗಳೂರಿನಲ್ಲಿ ಏನಾಗಿದೆ ಎಂದರೆ ಹೆಚ್ಚಿನ ಬಸ್ ಮಾಲೀಕರು ತಮ್ಮ ಬಸ್ಸುಗಳನ್ನು ದಿನಕ್ಕೆ ಇಷ್ಟು ಕೊಡಿ, ಉಳಿದದ್ದು ನಿಮಗೆ ಎನ್ನುವ ಒಪ್ಪಂದದ ಮೇರೆಗೆ ಬಸ್ಸಿನ ಚಾಲಕನಿಗೋ, ಕಂಡಕ್ಟರಿಗೋ ಕೊಟ್ಟಿರುತ್ತಾರೆ. ಹಾಗಿರುವಾಗ ಪೀಕ್ ಅವರ್ ನಲ್ಲಿ ಎಷ್ಟು ಆಗುತ್ತೋ ಅಷ್ಟು ತುಂಬಿಸಿ ಹೋಗುವ ಪ್ರಯತ್ನವನ್ನು ಅವರು ಮಾಡಿಯೇ ಮಾಡಿರುತ್ತಾರೆ. ಯಾಕೆಂದರೆ ಅವರ ಮುಂದೆ ಇರುವುದು ಲಾಭ. ಇಲ್ಲಿ ಸುರಕ್ಷತೆಗಿಂತ ವ್ಯಾಪಾರ ಮುಖ್ಯ
Leave A Reply