ಸಿಬಲ್ ಅರಳು ಮರಳಿನ ಹೇಳಿಕೆ ಅವರ ಇವತ್ತಿನ ಪರಿಸ್ಥಿತಿ ಸೂಚಿಸುತ್ತದೆ!
ಸುಪ್ರೀಂಕೋರ್ಟಿನ ಹಿರಿಯ ವಕೀಲ, ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ಸಿನ ಹಿರಿಯ ಮುಖಂಡರಾಗಿದ್ದು ಈಗ ಸಮಾಜವಾದಿ ಪಕ್ಷದಿಂದ ರಾಜ್ಯಸಭಾ ಸದಸ್ಯರೂ ಆಗಿರುವ ಕಪಿಲ್ ಸಿಬಲ್ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಮುನಿಸಿಕೊಂಡಿರುವ ಜಿ-23 ಇದರ ಸದಸ್ಯರೂ ಕೂಡ ಹೌದು. ಅಯೋಧ್ಯೆಯ ಶ್ರೀರಾಮಜನ್ಮ ಭೂಮಿ ವಿಷಯದಲ್ಲಿ ಕಾಂಗ್ರೆಸ್ಸಿನ ಪರವಾಗಿ, ಮುಸ್ಲಿಂ ಸಂಘಟನೆಗಳ ಪರವಾಗಿ ಸುಪ್ರೀಂಕೋರ್ಟಿನಲ್ಲಿ ವಾದಿಸಿದ್ದ ಕಪಿಲ್ ಸಿಬಲ್ ನಂತರ ಪಕ್ಷದಲ್ಲಿಯೂ ಮೂಲೆಗುಂಪಾದರು. ದೆಹಲಿಯ ಚಾಂದನಿಚೌಕ್ ಲೋಕಸಭಾ ಕ್ಷೇತ್ರದ ಒಂದು ಕಾಲದ ಎಂಪಿ ಈಗ ಅಖಿಲೇಶ್ ಸಿಂಗ್ ಯಾದವ್ ಅವರಿಂದ ರಾಜ್ಯಸಭಾ ಸೀಟು ಕೊಂಡುಕೊಂಡು ಈಗ ಸಂಸತ್ತಿನಲ್ಲಿ ಮರ್ಯಾದೆ ಉಳಿಸಿಕೊಂಡಿದ್ದಾರೆ. ಇಂತಹ ಕಪಿಲ್ ಸಿಬಲ್ ತಮ್ಮ ರಾಜಕೀಯ ಜೀವನದ ಮುಸ್ಸಂಜೆಯಲ್ಲಿ ನೀಡಿರುವ ಹೇಳಿಕೆಯನ್ನು ಸುಪ್ರೀಂಕೋರ್ಟಿನ ಹಿರಿಯ ವಕೀಲರು ನ್ಯಾಯಾಂಗ ನಿಂದನೆ ಎಂದಿದ್ದಾರೆ. ಸಿಬಲ್ ಹೇಳಿದ್ದೇನೆಂದರೆ ಸುಪ್ರೀಂಕೋರ್ಟಿನ ತೀರ್ಪುಗಳಲ್ಲಿ ಈಗ ಹಿಂದಿನ ವಿಶ್ವಾಸ ಉಳಿದಿಲ್ಲ. ಈ ಹೇಳಿಕೆಯನ್ನು ಯಾವನೋ ಜನಸಾಮಾನ್ಯ ಹೇಳಿದ್ದರೂ ಅದು ತಪ್ಪು. ಹಾಗಿರುವಾಗ ಕಾನೂನಿನ ಉದ್ದಗಲಗಳನ್ನು ಅರಿತಿರುವ, ಸುಪ್ರೀಂಕೋರ್ಟಿನ ಪಡಸಾಲೆಯಲ್ಲಿ ಅರ್ಧ ಜೀವನವನ್ನು ಕಳೆದಿರುವ ಒಬ್ಬ ವ್ಯಕ್ತಿ ಹೇಳುತ್ತಾರೆ ಎಂದರೆ ಅದಕ್ಕಿಂತ ನಾಚಿಕೆಗೇಡು ಆ ವ್ಯಕ್ತಿಗೆ ಬೇರೆ ಏನೂ ಇಲ್ಲ.
ಒಬ್ಬ ಕ್ರಿಕೆಟ್ ಆಟಗಾರ ತಾನು ಆಡಿದ ಪ್ರತಿ ಪಂದ್ಯವನ್ನು ಗೆಲ್ಲಲು ಆಗುವುದಿಲ್ಲ. ಕೆಲವು ಪಂದ್ಯಗಳಲ್ಲಿ ಎದುರಾಳಿ ತೀಕ್ಣವಾಗಿ ಆಡಿ ನಿಮ್ಮನ್ನು ಮಣಿಸಿರಬಹುದು. ಕೆಲವು ಪಂದ್ಯಾಟಗಳಿಗೆ ನಿಮ್ಮ ತಯಾರಿಯಲ್ಲಿ ಕೊರತೆ ಇರಬಹುದು. ಕೆಲವು ಪಂದ್ಯಾಟಗಳನ್ನು ನಿಮ್ಮ ನಿರ್ಲಕ್ಷ್ಯದಿಂದ ಕಳೆದುಕೊಂಡಿರಬಹುದು. ಹಾಗಂತ ಯಾವುದಾದರೂ ಪಂದ್ಯದಲ್ಲಿ ಸೋತ ಕೂಡಲೇ ಅದಕ್ಕೆ ಅಂಪಾಯರ್ ಕಾರಣ ಎಂದು ಹೇಳಿದ್ರೆ ಆಗುತ್ತಾ? ಒಬ್ಬ ಆಟಗಾರ ಯಾವಾಗಲೂ ತನ್ನ ರಣತಂತ್ರಗಳನ್ನು ಸರಿಯಾಗಿ ಇಟ್ಟುಕೊಂಡಿರಬೇಕೆ ವಿನ: ತನ್ನ ವೈಫಲ್ಯಕ್ಕೆ ಪಿಚ್ ದೂಷಿಸಲು ಹೋಗಬಾರದು. ಇಂತಹ ಕೆಲಸವನ್ನು ಈಗ ಕಪಿಲ್ ಸಿಬಲ್ ಮಾಡುತ್ತಿದ್ದಾರೆ. ಸಿಬಲ್ ಕೂದಲು ಬಿಳಿಯಾಗಿದೆ ಬಿಟ್ಟರೆ ಅದರ ಒಳಗೆ ಏನೂ ಉಪಯೋಗವಾಗುವಂತದ್ದು ಉಳಿದಿಲ್ಲ ಎನ್ನುವುದು ಈಗ ಕಾನೂನು ತಜ್ಞರ ಅಭಿಪ್ರಾಯ. ಸಿಬಲ್ ಕೂಡ ಒಂದು ವಿಷಯ ಅರ್ಥ ಮಾಡಿಕೊಳ್ಳಬೇಕು ಏನೆಂದರೆ ತಾವು ಪ್ರತಿನಿಧಿಸಿದ ಎಲ್ಲಾ ಕೇಸುಗಳನ್ನು ತಾವೇ ಗೆಲ್ಲಲು ಸಾಧ್ಯವಿಲ್ಲ. ಹಾಗಂತ ಅದಕ್ಕೆ ಸುಪ್ರೀಂಕೋರ್ಟಿನ ವಿಭಾಗೀಯ ಪೀಠಗಳಲ್ಲಿ ತಮಗೆ ಬೇಕಿರುವ ನ್ಯಾಯಮೂರ್ತಿಗಳು ಇರಲಿಲ್ಲ ಎನ್ನುವ ಕಾರಣಕ್ಕೆ ಸೋತೆ ಎಂದುಕೊಳ್ಳುವುದು ಮೂರ್ಖತನ.
ಇವತ್ತಿಗೂ ಭಾರತದ ಯಾವ ಮೂಲೆಯಲ್ಲಿ ಯಾವುದೇ ಇಬ್ಬರು ವ್ಯಕ್ತಿಗಳ ನಡುವೆ ಗಲಾಟೆ ಆಗಲಿ, ಅವರು ಒಬ್ಬರಿಗೊಬ್ಬರು ಏನು ಹೇಳುವುದನ್ನು ನೋಡಬಹುದು ಎಂದರೆ “ನಾನು ನಿನ್ನನ್ನು ಕೋರ್ಟಿನಲ್ಲಿ ನೋಡಿಕೊಳ್ಳುತ್ತೇನೆ”. ಅದು ಭಾರತೀಯನಿಗೆ ಈ ದೇಶದ ನ್ಯಾಯಾಂಗದ ಮೇಲಿರುವ ಅದಮ್ಯ ವಿಶ್ವಾಸ. ಇವತ್ತಿಗೂ ಒಂದೊಂದು ಸಿವಿಲ್ ಪ್ರಕರಣಗಳು ಹತ್ತಿಪ್ಪತ್ತು ವರ್ಷಗಳ ತನಕ ವಿವಿಧ ಕೋರ್ಟಿನಲ್ಲಿ ಹೊರಳಾಡಿ ಅಂತಿಮ ತೀರ್ಪು ಬರುವಾಗ ವಾದಿ, ಪ್ರತಿವಾದಿಗಳ ಕುಟುಂಬದಲ್ಲಿ ಎಷ್ಟೋ ಹಿರಿಯರು ಈ ಭೂಮಿಯನ್ನು ಬಿಟ್ಟು ಹೋಗಿರುತ್ತಾರೆ. ಆದರೂ ನ್ಯಾಯಾಲಯದಲ್ಲಿ ಏನು ತೀರ್ಪು ಬರುತ್ತದೆ, ಅದಕ್ಕಾಗಿ ಕಾಯುತ್ತೇವೆ ಎಂದು ಹೇಳುವವರು ಇದ್ದಾರೆ ಎಂದರೆ ಅದು ಈ ದೇಶದ ನ್ಯಾಯಾಂಗ ಅಷ್ಟು ಸದೃಢವಾಗಿದೆ ಎಂದು ಅರ್ಥ. ಈ ದೇಶದ ಜನರು ಶಾಸಕಾಂಗ, ಕಾರ್ಯಾಂಗದ ಮೇಲೆ ವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆ ಇದೆ. ಕೆಲವು ಸಂದರ್ಭದಲ್ಲಿ ಕಳೆದುಕೊಂಡಿರಬಹುದು. ಆದರೆ ನ್ಯಾಯಾಂಗದ ಮೇಲೆ ಯಾವತ್ತೂ ವಿಶ್ವಾಸ ಕಳೆದುಕೊಳ್ಳುವುದಿಲ್ಲ ಎನ್ನುವುದಕ್ಕೆ ಪ್ರತಿ ವರ್ಷ ಏರುತ್ತಿರುವ ಕೇಸುಗಳೇ ಸಾಕ್ಷಿ. ಎಷ್ಟೋ ವಿಷಯಗಳಲ್ಲಿ ರಾಜಕಾರಣಿಗಳ ಮಾತು ಕೇಳದ, ಸರಕಾರದ ಮಾತುಗಳನ್ನು ನಿರ್ಲ್ಯಕ್ಷಿಸುವ ಅಧಿಕಾರಿಗಳು ಅದೇ ವಿಷಯದಲ್ಲಿ ನ್ಯಾಯಾಲಯಗಳು ಛಾಟಿ ಏಟು ಬೀಸಿದರೆ ತಕ್ಷಣ ಎಚ್ಚೆತ್ತುಕೊಳ್ಳುತ್ತಾರೆ ಎಂದರೆ ನ್ಯಾಯಾಂಗದ ಮೇಲೆ ಇವತ್ತಿಗೂ ಎಲ್ಲಾ ಕಡೆ ಅಪರಿಮಿತ ವಿಶ್ವಾಸ ಇದೆ ಎನ್ನುವುದೇ ಸಾಕ್ಷಿ. ಇವತ್ತಿಗೂ ಕೆಳಗಿನ ಹಂತದ ನ್ಯಾಯಾಲಯಗಳಲ್ಲಿ ಒಂದೊಮ್ಮೆ ನ್ಯಾಯ ಸಿಗದಿದ್ರೆ ಎಷ್ಟೇ ಖರ್ಚಾಗಲಿ ಹೈಕೋರ್ಟ್, ಸುಪ್ರೀಂಕೋರ್ಟ್ ತನಕ ಹೋಗೋಣ ಎಂದು ಅಂದುಕೊಳ್ಳುವವರಿದ್ದಾರೆ. ಇನ್ನು ಕೆಲವು ಮಧ್ಯಮ ವರ್ಗದವರು ಸುಪ್ರೀಂಕೋರ್ಟ್ ವಕೀಲರ ಫೀಸ್ ಕೊಡಲು ಆಗದೇ ನನ್ನ ಬಳಿ ಹಣ ಇದ್ದಿದ್ರೆ ಸುಪ್ರೀಂಕೋರ್ಟಿಗೆ ಹೋಗುತ್ತಿದ್ದೆ. ನ್ಯಾಯ ಸಿಗುತ್ತಿತ್ತು ಎಂದು ಅಂದುಕೊಳ್ಳುತ್ತಾರೆ. ಹಾಗಿರುವಾಗ 130 ಕೋಟಿ ಭಾರತೀಯರು ವಿಶ್ವಾಸ ಇಟ್ಟಿರುವ ಭಾರತದ ನ್ಯಾಯಾಂಗ ವ್ಯವಸ್ಥೆಯ ಯಜಮಾನ ಸುಪ್ರೀಂಕೋರ್ಟ್ ಬಗ್ಗೆ ಕಪಿಲ್ ಸಿಬಲ್ ಆಡಿರುವ ಮಾತುಗಳು ಜನರ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುತ್ತದೆ. ಆದ್ದರಿಂದ ಅವರ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದರೆ ಆಗ ಅವರಿಗೆ ಸ್ಥಾನಮಾನದ ನೆನಪಾದರೂ ಬರಬಹುದು
Leave A Reply