ಎಸಿಬಿ ರದ್ದು ಮಾಡಿದ್ದು ಕೋರ್ಟ್, ಬೆನ್ನು ತಟ್ಟಿಕೊಳ್ಳುವ ಅವಕಾಶ ಬಿಜೆಪಿಗೆ ಮಿಸ್!
ಯಾವುದನ್ನು ಭಾರತೀಯ ಜನತಾ ಪಾರ್ಟಿ ಸರಕಾರ ಅನುಷ್ಟಾನಕ್ಕೆ ತರುತ್ತದೆ ಎನ್ನುವ ನಿರೀಕ್ಷೆ ಭ್ರಷ್ಟಾಚಾರವನ್ನು ವಿರೋಧಿಸುವ ಜನಸಾಮಾನ್ಯರಿಗೆ ಇತ್ತೋ ಅದು ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳ ಬಳಿಕ ಕೂಡ ಈಡೇರಿರಲಿಲ್ಲ. ಬಿಜೆಪಿ ಚುನಾವಣೆಯ ಮೊದಲು ಕೊಟ್ಟ ಭರವಸೆ ಅದಾಗಿದ್ದರೂ ಅನುಷ್ಟಾನ ಮಾಡುವ ಲಕ್ಷಣವೂ ಕಾಣುತ್ತಿರಲಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅದರಲ್ಲಿಯೂ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಹಗರಣವನ್ನು ಮುಚ್ಚಿಡಲು ಸ್ಥಾಪಿಸಿದ್ದ ಎಸಿಬಿ ಎಂಬ ಪಾಪದ ಕೂಸನ್ನು ಮುಂದುವರೆಸಲ್ಲ ಎನ್ನುವುದನ್ನು ಕೂಡ ಬಿಜೆಪಿ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿ ಹೇಳಿರಲಿಲ್ಲ. ನ್ಯಾಯಾಲಯ ಕೇಳಿದ್ದಕ್ಕೆ ಸ್ವಲ್ಪ ಬದಲಾವಣೆ ಮಾಡಿ ಮುಂದುವರೆಸುತ್ತೇವೆ ಎಂದು ಯಾವಾಗ ಹೇಳಿತೋ ಆಗ ಇವರಿಗೂ ಸಿದ್ಧರಾಮಯ್ಯನವರಿಗೂ ಅದೇನು ವ್ಯತ್ಯಾಸ ಇದೆ ಎಂದು ಪ್ರಜ್ಞಾವಂತರು ಮಾತನಾಡಿಕೊಳ್ಳುವಂತಾಯಿತು. ಕೊನೆಗೂ ಜನಸಾಮಾನ್ಯರ ಅದೃಷ್ಟ ಚೆನ್ನಾಗಿದೆ. ಮಾನ್ಯ ಉಚ್ಚ ನ್ಯಾಯಾಲಯ ಎಸಿಬಿಯನ್ನು ರದ್ದುಪಡಿಸಿದೆ. ಇನ್ನು ಮುಂದೆ ಎಸಿಬಿ ವ್ಯಾಪ್ತಿಯ ಎಲ್ಲಾ ಪ್ರಕರಣಗಳು ಲೋಕಾಯುಕ್ತ ವ್ಯಾಪ್ತಿಗೆ ಬರಲಿವೆ. ಅಲ್ಲಿಗೆ ಸಿದ್ದು ತಲೆ ಮೇಲೆ ತಣ್ಣಗಿನ ನೀರು ಹೊಯ್ದಂತೆ ಆಗಿದೆ. ಅಷ್ಟಕ್ಕೂ ಸಿದ್ದು ಎಸಿಬಿಯನ್ನು ಯಾಕೆ ಸ್ಥಾಪಿಸಿದ್ದರು ಮತ್ತು ಅದು ಯಾವೆಲ್ಲಾ ಪ್ರಮುಖ ಪ್ರಕರಣಗಳಿಗೆ ಎಳ್ಳು ನೀರು ಬಿಟ್ಟಿತ್ತು ಎಂದು ನೋಡುವುದಾದರೆ 2017 ರಲ್ಲಿ ಸಿದ್ದುವನ್ನು ಸಂಕಷ್ಟಕೀಡು ಮಾಡಿದ್ದ ವಜ್ರ ಖಚಿತ ಹ್ಯೂಬ್ಲೋಟ್ ವಾಚ್ ಪ್ರಕರಣ. ಪ್ರಧಾನ ಮಂತ್ರಿ ಸ್ವಾಸ್ಥ ಸುರಕ್ಷಾ ಯೋಜನೆಯಡಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಡಯಾಗ್ಲಾಸ್ಟಿಕ್ ಸರ್ವೀಸಸ್ ಘಟಕ ಆರಂಭಿಸಲು ಸಿದ್ದು ಪುತ್ರ ಯತೀಂದ್ರ ನಡೆಸುತ್ತಿದ್ದ ಮ್ಯಾಟ್ರಿಕ್ ಇಮ್ಯಾಜಿಂಗ್ ಸೆಲ್ಯೂಷನ್ ಕಂಪೆನಿಗೆ ನಿಯಮ ಉಲ್ಲಂಘಿಸಿ ಟೆಂಡರ್ ನೀಡಿರುವ ಪ್ರಕರಣ, ಸರಕಾರಿ ನೌಕರಿ ಪಡೆಯಲು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಆರೋಪಿಸಿ ಗೃಹ ಇಲಾಖೆ ಸಲಹೆಗಾರರಾಗಿದ್ದ ಕೆಂಪಯ್ಯ ವಿರುದ್ಧ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಸಿಬಿಗೆ ದೂರು ನೀಡಿದ್ದ ಪ್ರಕರಣ, ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಶಾಮೀಲಾಗಿದ್ದಾರೆ ಎಂದು ಆರೋಪಿಸಿ ಹಿರಿಯ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ವಿರುದ್ಧ ದಾಖಲಿಸಿಕೊಂಡ ಪ್ರಕರಣ, ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ಪ್ರಯೋಗಾಲಯದ ನಿರ್ದೇಶಕ ವಿ.ಜಿ.ನಾಯಕ್, ಸಹಾಯಕ ನಿರ್ದೇಶಕ ಡಾ.ಅರವಿಂದ್ ಅವರು ಸುಳ್ಳು ವರದಿ ನೀಡಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಕೊಟ್ಟಿದ್ದ ದೂರು, ಅತ್ತಿಬೆಲೆ ಬಳಿ ಕೆಐಎಡಿಬಿಯು ನಿರ್ಮಿಸಲು ಉದ್ದೇಶಿಸಿದ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ 4 ನೇ ಹಂತಕ್ಕಾಗಿ ವಶಪಡಿಸಿಕೊಂಡಿದ್ದು, 2009 ರಲ್ಲಿ ಭೂಸ್ವಾಧೀನವನ್ನು ಅಕ್ರಮವಾಗಿ ಕೈಬಿಟ್ಟಿರುವ ದೂರು ಸಹಿತ ಅನೇಕ ಪ್ರಮುಖ ಪ್ರಕರಣಗಳಿಗೆ ಎಸಿಬಿ ಕ್ಲೀನ್ ಚಿಟ್ ನೀಡಿತ್ತು. ಸಿದ್ದು ವಾಚ್ ಹಗರಣದ ಕುರಿತು ಬಿಜೆಪಿ ಸಾಕಷ್ಟು ಪ್ರತಿಭಟನೆ ನಡೆಸಿತ್ತು. ಎಸಿಬಿಯನ್ನು ಸಿದ್ದು ಮಾಡಿದ್ದೇ ತಮ್ಮ ಹಾಗೂ ಯತೀಂದ್ರನ ಹಗರಣಗಳನ್ನು ಮುಚ್ಚಿಹಾಕಲು ಎಂದು ಆರೋಪ ಮಾಡಿತ್ತು. ಇನ್ನು ಎಸಿಬಿಯ ರಚನೆ ಹೇಗಿತ್ತು ಎಂದರೆ ಅದು ಸರಕಾರದ ಅಧೀನದಲ್ಲಿ ಬರುವಂತಹ ಒಂದು ಸಂಸ್ಥೆ. ಎಸಿಬಿಗೆ ಎಡಿಜಿಪಿ ದರ್ಜೆ ಐಪಿಎಸ್ ಅಧಿಕಾರಿ ಮುಖ್ಯಸ್ಥರಾಗಿದ್ದರೂ ಇವರ ಮೇಲೆ ಜಾಗೃತ ಸಲಹಾ ಮಂಡಳಿ ರಚಿಸಲಾಗಿದೆ. ಇದರ ಅಧ್ಯಕ್ಷರಾಗಿ ಮುಖ್ಯ ಕಾರ್ಯದರ್ಶಿಯನ್ನು ನೇಮಕ ಮಾಡಿದ್ದು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಡಿಜಿ-ಐಜಿಪಿ ಸೇರಿ 7 ಸದಸ್ಯರು ಇದ್ದಾರೆ. ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ 3 ತಿಂಗಳಿಗೊಮ್ಮೆ ಒಮ್ಮೆ ಸಭೆ ನಡೆಸಿ ಮುಖ್ಯಮಂತ್ರಿಗೆ ವರದಿ ಒಪ್ಪಿಸಿ ಅನುಮೋದನೆ ಪಡೆಯಬೇಕು. ಹೀಗೆಲ್ಲ ನಿರ್ಭಂದನೆಗಳು ಎಸಿಬಿಗೆ ಇತ್ತು. ಇನ್ನು ಎಸಿಬಿಯಲ್ಲಿ ಇರುವ ಅಧಿಕಾರಿಗಳಿಗೂ ಲೋಕಾಯುಕ್ತದಲ್ಲಿರುವ ಮುಖ್ಯಸ್ಥರಿಗೂ ಸಾಕಷ್ಟು ವ್ಯತ್ಯಾಸ ಇದೆ. ಲೋಕಾಯುಕ್ತ ಇಲಾಖೆಯಲ್ಲಿರುವ ಲೋಕಾಯುಕ್ತ, ಉಪ ಲೋಕಾಯುಕ್ತರು ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ನಲ್ಲಿರುವ ನಿವೃತ್ತ ನ್ಯಾಯಮೂರ್ತಿಗಳು ಆಗಿರುತ್ತಾರೆ. ಅವರಿಗೆ ವಿಶೇಷವಾದ ಗೌರವ ಇದೆ. ಸದ್ಯ ಬಿಜೆಪಿ ಸರಕಾರ ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲ್ಲ ಎಂದು ಹೇಳಿದೆ. ಮೇಲ್ಮನವಿ ಸಲ್ಲಿಸುವುದು ಯಾವ ಮುಖ ಇಟ್ಟು ಹೇಳಿ. ಇವರು ಅಧಿಕಾರಕ್ಕೆ ಬಂದ ತಕ್ಷಣವೂ ಮಾಡಲಿಲ್ಲ. ಒಬ್ಬ ಪ್ರಜೆ ನ್ಯಾಯಾಲಯದಲ್ಲಿ ಈ ಕುರಿತು ಸಾರ್ವಜನಿಕ ಹಿತಾಸಕ್ತಿ ದಾವೆ ಹಾಕದೇ ಇದ್ದಿದ್ದರೆ ಇನ್ನು ಕೂಡ ಆಗುತ್ತಿರಲಿಲ್ಲ. ಹಾಗಂತ ಲೋಕಾಯುಕ್ತ ಏಕಾಏಕಿ ಬಲಯುತವಾಯಿತು ಎಂದು ಅಂದುಕೊಳ್ಳಬೇಕಾಗಿಲ್ಲ. ಅದಕ್ಕೆ ಸೂಕ್ತ, ಪ್ರಾಮಾಣಿಕ ಅಧಿಕಾರಿಗಳ ನೇಮಕ ಆಗಬೇಕು. ವೆಂಕಟಾಚಲಯ್ಯ, ಸಂತೋಷ್ ಹೆಗ್ಡೆಯವರಂತಹ ನೇರ, ನಿಷ್ಟುರವಾದಿಗಳು ಲೋಕಾಯುಕ್ತದ ಗತವೈಭವ ಮರಳಿ ತರಬೇಕು. ಅವರಿಗೆ ಕೇವಲ ವಿಚಾರಣೆ ಮಾಡಿ ಭ್ರಷ್ಟರನ್ನು ಏನು ಮಾಡಬೇಕು ಎಂದು ಸರಕಾರಕ್ಕೆ ವರದಿ ಕೊಡುವ ಕೆಲಸ ಮಾತ್ರ ಇದ್ದರೆ ಸಾಕಾಗುವುದಿಲ್ಲ. ಮುಂದುವರೆದು ವಿಚಾರಣೆಯಲ್ಲಿ ನಿರ್ಲಕ್ಷ್ಯ ರಾಜಕಾರಣಿ, ಅಧಿಕಾರಿ ಭ್ರಷ್ಟ ಎಂದು ಸಾಬೀತಾದರೆ ನೇರವಾಗಿ ಜೈಲು ಶಿಕ್ಷೆ ನೀಡುವ ನಿಯಮ ಕೂಡ ಜಾರಿಗೆ ತರಬೇಕು. ಇನ್ನು ಜನಪ್ರತಿನಿಧಿಗಳು ಭ್ರಷ್ಟರಾಗಿದ್ದ ಸಾಕ್ಷ್ಯಾಧಾರಗಳು ಸಿಕ್ಕಲ್ಲಿ ನೇರವಾಗಿ ಬಂಧಿಸುವ ಅಧಿಕಾರ ಕೊಡಬೇಕು. ಒಟ್ಟಿನಲ್ಲಿ ಚುನಾವಣೆಯ ಸಂದರ್ಭದಲ್ಲಿ ಕೋರ್ಟ್ ಆದೇಶ ಬಿಜೆಪಿಗೆ ಪ್ಲಸ್ ಆಗಲಿದೆ. ಆದರೆ ನ್ಯಾಯಾಲಯ ತೀರ್ಪು ಕೊಟ್ಟ ಬಳಿಕ ಎಸಿಬಿ ರದ್ದಾಗಿರುವುದರಿಂದ ನಾವೇ ಮಾಡಿದ್ದು ಎಂದು ಹೇಳುವ ಅವಕಾಶದಿಂದ ಬಿಜೆಪಿ ವಂಚಿತವಾಗಿದೆ.!
Leave A Reply