ಚಕ್ರವರ್ತಿ ಹೇಳಿದ ಸತ್ಯ ಮತ್ತು ಕಾಂಗ್ರೆಸ್ಸಿಗರು ನಂಬಿದ ಸುಳ್ಳು!!
ಇಂಗ್ಲಿಷ್ ನಲ್ಲಿ ಒಂದು ಗಾದೆ ಮಾತಿದೆ. ಎವರಥಿಂಗ್ ಫೇರ್ ಇನ್ ಲವ್ ಅಂಡ್ ವಾರ್. ಇದರ ಅರ್ಥ ಪ್ರೀತಿ ಮತ್ತು ಯುದ್ಧದಲ್ಲಿ ಎಲ್ಲವೂ ಸಮ್ಮತ. ಸ್ವಾತಂತ್ರ್ಯ ಹೋರಾಟ ಎಂದರೆ ಅದೊಂದು ಯುದ್ಧ. ಅದರಲ್ಲಿ ನಾವು ಎಂತಹ ರಣನೀತಿಯನ್ನು ಅಳವಡಿಸಿಕೊಳ್ಳುತ್ತೇವೆ ಎನ್ನುವುದು ನಮ್ಮ ಚಾಣಾಕ್ಷತನದ ಮೇಲೆ ಅವಲಂಬಿತವಾಗಿದೆ. ಸಾವರ್ಕರ್ ಮಾಡಿದ್ದು ಅದನ್ನೇ. ಅವರು ಕಾಲಾಪಾನಿ ಶಿಕ್ಷೆಯನ್ನು ಅನುಭವಿಸುವಾಗ ತಮಗೆ ಕ್ಷಮಾಪಣೆ ಕೊಡಿ ಎಂದು ಬ್ರಿಟಿಷರಲ್ಲಿ ಕೇಳಿದ್ದಾರೆ. ಅವರು ಕ್ಷಮಾಪಣೆ ಕೇಳಿಯೇ ಇಲ್ಲ ಎನ್ನಲು ಸಾಧ್ಯವಿಲ್ಲ. ಆದರೆ ಅದೊಂದನ್ನೇ ಹಿಡಿದುಕೊಂಡು ಅವರ ವ್ಯಕ್ತಿತ್ವ ಕುಂದಿಸುವ ಕೆಲಸ ಮಾಡಲಾಗುತ್ತೆ ಎಂದರೆ ಅದನ್ನು ಒಪ್ಪಲು ಆಗುತ್ತಾ? ಹುಲಿ, ಸಿಂಹಗಳು ಬೇಟೆಯಾಡಿ ತಿನ್ನಲು ಎಂದೇ ಕಾಡಿನಲ್ಲಿ ಹುಟ್ಟುತ್ತವೆ. ಅವುಗಳನ್ನು ಬೋನಿನಲ್ಲಿ ಹಾಕಿದರೆ ಕಾಲಕ್ರಮೇಣ ಅವುಗಳು ಬೇಟೆಯಾಡುವ ಉತ್ಸಾಹ, ಶಕ್ತಿ ಕಳೆದುಕೊಳ್ಳುತ್ತವೆ. ಸಾವರ್ಕರ್ ಕೂಡ ಸಿಂಹದಂತೆ. ಅವರಿಗೆ ತಾವು ಹೊರಗೆ ಹೋಗಿ ಬಡಿದಾಡಲು ನಿಂತರೆ ಮಾತ್ರ ಸ್ವಾತಂತ್ರ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ನಾಲ್ಕು ಗೋಡೆಯ ನಡುವೆ ಹಗಲು ಯಾವುದು, ರಾತ್ರಿ ಯಾವುದು ಎಂದು ಗೊತ್ತಾಗದೇ ದಿನಗಳು ವ್ಯರ್ಥವಾಗುತ್ತವೆ ಎಂದು ಅನಿಸುತ್ತಿತ್ತು. ಅವರು ಜನರನ್ನು ಸಂಘಟಿಸಲು, ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಪ್ರೇರೆಪಿಸಲು ಅಂಡಮಾನ್ ಜೈಲಿನಿಂದ ಹೊರಗೆ ಬರುವ ಅವಕಾಶಕ್ಕಾಗಿ ಕ್ಷಮಾರ್ಪಣಾ ಅರ್ಜಿಯನ್ನು ಬರೆದರು. ಅಷ್ಟಾಗಿಯೂ ಅವರನ್ನು ಹತ್ತು ವರ್ಷಗಳ ತನಕ ಕಾಲಾಪಾನಿ ಶಿಕ್ಷೆಗೆ ಗುರಿಪಡಿಸಲಾಗಿತ್ತು. ಬಹುಶ: ಈಗಿನ ತಲೆಮಾರಿಗೆ ಕರಿನೀರಿನ ಶಿಕ್ಷೆಯ ಬಗ್ಗೆ ಸಣ್ಣ ಸುಳಿವು ಕೂಡ ಇರಲು ಸಾಧ್ಯವಿಲ್ಲ. ಆ ಶಿಕ್ಷೆ ತಾಳಲಾರದೇ ಎಷ್ಟೋ ಜನ ಹುಚ್ಚರಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಹತ್ತು ವರ್ಷ ಅದನ್ನು ಸಹಿಸಿ ಬದುಕಿದ ಸಾವರ್ಕರ್ ಮತ್ತು ಒಂದು ದಿನ ಮಾತ್ರ ಸಾಮಾನ್ಯ ಜೈಲಿನಲ್ಲಿ ಇದ್ದ ನೆಹರೂ ಅವರನ್ನು ಹೋಲಿಕೆ ಮಾಡಿದರೆ ಆಗುತ್ತಾ? ಬ್ರಿಟಿಷರು ಹತ್ತು ದಿನದ ಜೈಲು ಶಿಕ್ಷೆಯನ್ನು ನೆಹರೂಗೆ ಕೊಟ್ಟಾಗ ಅವರ ತಂದೆ ಮೋತಿಲಾಲ್ ನೆಹರೂ ಒಂದೇ ದಿನದಲ್ಲಿ ಓಡಿ ಬಂದು ಕ್ಷಮಾರ್ಪಣೆ ಅರ್ಜಿ ನೀಡಿ ಇನ್ನೆಂದೂ ತಮ್ಮ ಮಗ ಬ್ರಿಟಿಷರ ವಿರುದ್ಧ ಹೋರಾಡಲ್ಲ ಎಂದು ಬರೆದುಕೊಟ್ಟಿಲ್ವಾ? ಅದನ್ನು ಯಾರು ಕೂಡ ಹೇಳಲ್ಲ. ಇನ್ನು ನೆಹರೂ ಅರಮನೆ ಬಂಧನದಲ್ಲಿದ್ದರೆ ಹೊರತು ಕಾಲಾಪಾನಿ ಜೈಲಿನಲ್ಲಲ್ಲ. ಹೀಗೆ ಸಾವರ್ಕರ್ ಎಂಬ ಅಪ್ಪಟ ಸ್ವಾತಂತ್ರ್ಯ ಹೋರಾಟಗಾರ ಮತ್ತು ಹಿಂದೂತ್ವ ಹೋರಾಟಗಾರರ ಬದುಕು ನಾವು ಓದಿದಷ್ಟು ಸುಲಭವಾಗಿಲ್ಲ. ಹೀಗೆ ಹತ್ತು ಹಲವು ವಿಷಯಗಳನ್ನು ಚಕ್ರವರ್ತಿ ಸೂಲಿಬೆಲೆಯವರು ಹೇಳುತ್ತಿದ್ದರೆ ಕೇಳುತ್ತಿದ್ದವರ ಕಣ್ಣಾಲಿಗಳು ಒದ್ದೆಯಾಗುತ್ತಿದ್ದವು. ಚಕ್ರವರ್ತಿ ಬರೋಬ್ಬರಿ ಮೂರು ಗಂಟೆಯಷ್ಟು ಮಾತನಾಡಿದರು. ಭುವನೇಂದ್ರ ಸಭಾಂಗಣ ಕಿಕ್ಕಿರಿದು ತುಂಬಿತ್ತು. ಕಾರ್ಯಕ್ರಮ ಆಯೋಜಿಸಿದ್ದು ಚಿಂತನ ಗಂಗಾ ಎನ್ನುವ ಹೊಸ ವೇದಿಕೆ. ಅದರ ಪ್ರಥಮ ಕಾರ್ಯಕ್ರಮ ಅದು.
ನಮ್ಮ ಮನೆಯ ಎಲ್ಲಾ ಮೂರು ಗಂಡಸರು ಸ್ವಾತಂತ್ರ್ಯ ಹೋರಾಟ ಎಂದು ಜೈಲಿಗೆ ಹೋದರೆ ಮನೆಯ ಕಥೆ ಏನು ಎಂದು ಸಾವರ್ಕರ್ ಜೈಲಿನಲ್ಲಿದ್ದಾಗ ಒಂದು ಸಲ ತಮ್ಮನ್ನು ಭೇಟಿಯಾಗಲು ಬಂದ ಅತ್ತಿಗೆ ಕೇಳಿದಾಗ ಸಾವರ್ಕರ್ ಒಂದು ಮಾತು ಹೇಳುತ್ತಾರೆ ” ಭಾರತಮಾತೆ ನಮ್ಮ ಮನೆಯ ತೋಟಕ್ಕೆ ಬಂದು ಹೂಗಳನ್ನು ಕೇಳಿದರೆ ಬೇಡ ಎನ್ನಲು ಆಗುತ್ತದೆಯಾ? ಮೂರು ಅಲ್ಲ, ಇನ್ನು ಹತ್ತು ಹೂಗಳಿದ್ದರೂ ನಾವು ಭಾರತ ಮಾತೆಗೆ ಅರ್ಪಿತರಾಗುತ್ತಿದ್ದೆವು” ಎಂದು ಹೇಳುತ್ತಾರೆ. ಇಂತಹ ಸಾವರ್ಕರ್ ಅವರು ಗಾಂಧೀಜಿಯವರ ವಿಫಲ ಕ್ವಿಟ್ ಇಂಡಿಯಾ ಚಳುವಳಿಗೆ ಸಮ್ಮತಿಸಲಿರಲಿಲ್ಲ. ಯಾಕೆಂದರೆ ಆ ಚಳುವಳಿ ಯಾವುದೇ ಪೂರ್ವಸಿದ್ಧತೆ ಇಲ್ಲದೆ ಮಾಡಲಾಗಿತ್ತು ಎನ್ನುವುದು ಸಾವರ್ಕರ್ ನಿಲುವಾಗಿತ್ತು. ಹೀಗೆ ಹೇಳುತ್ತಲೇ ಹೋದರು ಚಕ್ರವರ್ತಿ ಸೂಲಿಬೆಲೆ. ಕೊನೆಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿಯೂ ಚಕ್ರವರ್ತಿಯವರು ಸಾವರ್ಕರ್ ಮೇಲಿದ್ದ ನಿರಾಧಾರ ಆರೋಪಗಳನ್ನು ಕೂಡ ಆಧಾರ ಸಹಿತ ಸುಳ್ಳೆಂದು ಸಾಬೀತುಪಡಿಸಿದರು. ಅದರಲ್ಲಿ ಒಂದು ಸ್ವಾತಂತ್ರ್ಯಪೂರ್ವದಲ್ಲಿ ಭಾರತದ ಯಾವುದೋ ಒಂದು ಭಾಗದಲ್ಲಿ ಮುಸ್ಲಿಂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳಾದಾಗ ಅದನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಬಹುದೆಂದು ಸಾವರ್ಕರ್ ಯೋಜಿಸಿದ್ದರು ಎಂದು ಒಬ್ಬರು ಮಹಿಳಾ ಸೆಲೆಬ್ರೆಟಿ ತನ್ನ ಟ್ವಿಟರ್ ನಲ್ಲಿ ಹಾಕಿದ್ದರು. ಅದರ ನಂತರ ಅದು ಎಷ್ಟು ಸುಳ್ಳೆಂದು ಸಾಬೀತಾಗಿ ಹೋಗಿತ್ತು. ಅದರ ಜೊತೆ ಸಾವರ್ಕರ್ ಭಾರತದ ರಾಷ್ಟ್ರಧ್ವಜಕ್ಕೆ ಗೌರವ ಕೊಡಲ್ಲ ಎನ್ನುವ ಸುಳ್ಳು ಕೂಡ ಅವರ ವಿರುದ್ಧ ಮಾಡಿದ್ದ ಷಡ್ಯಂತ್ರಗಳಲ್ಲಿ ಒಂದು. ಒಟ್ಟಿನಲ್ಲಿ ಅನೇಕ ಮುಚ್ಚಿಹೋದ ಸತ್ಯಗಳನ್ನು ಚಕ್ರವರ್ತಿ ಬಿಚ್ಚಿಡುತ್ತಾ ಹೋದರು. ಬಹಳ ಕಾಲದ ನಂತರ ಜನರು ಇಂತಹ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ತೃಪ್ತಿಯಲ್ಲಿ ಮನೆಗಳಿಗೆ ಹಿಂತಿರುಗಿದರು. ಮನದಲ್ಲಿ ಸಾವರ್ಕರ್ ತುಂಬಿದ್ದರು. ದೇಶಭಕ್ತಿಯ ಉದ್ದೀಪನ ಇನ್ನಷ್ಟು ಪ್ರಬಲವಾಗಿ ಆಗಿತ್ತು.
Leave A Reply