ನಗರ ಯೋಜನಾ ವಿಭಾಗದಲ್ಲಿ ಆಗುವ ಲಕ್ಷಾಂತರ ಪೋಲು ಸಚಿವರಿಗೆ ಕಾಣಲ್ವಾ?
ನಿಮ್ಮ ಮನೆಯಲ್ಲಿ ಒಬ್ಬ ಕೆಲಸದವನು ಇದ್ರೆ, ನೀವು ಅದೇ ಕೆಲಸಕ್ಕೆ ಇನ್ನೊಬ್ಬನನ್ನು ತೆಗೆದುಕೊಂಡು ಕೆಲಸ ಮಾತ್ರ ಒಬ್ಬನಿಂದಲೇ ಮಾಡಿಸಿ ಸಂಬಳ ಇಬ್ಬರಿಗೂ ಕೊಡುತ್ತೀರಾ ಎನ್ನುವುದು ನನ್ನ ಪ್ರಶ್ನೆ. ಒಂದು ವೇಳೆ ಇಲ್ಲ ಎಂದಾದರೆ ಸರಕಾರಿ ಇಲಾಖೆಯಲ್ಲಿ ಒಂದೇ ಪೋಸ್ಟಿಗೆ ಇಬ್ಬರನ್ನು ನೇಮಿಸಿ ಒಬ್ಬನಿಂದ ಮಾತ್ರ ಕೆಲಸ ಮಾಡಿಸಿ ಇನ್ನೊಬ್ಬನಿಂದ ಏನೂ ಕೆಲಸ ಕೊಡದೇ ತಿಂಗಳಿಗೆ 90000 ಕೊಟ್ಟು ಹಣ ವ್ಯರ್ಥ ಮಾಡಲು ಅವರನ್ನು ಬಿಟ್ಟವರ್ಯಾರು ಎನ್ನುವ ಪ್ರಶ್ನೆ ಬರುವುದಿಲ್ಲವೇ? ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಹೀಗೆ ಆಗಿದೆ. ಪೋಲಾಗುತ್ತಿರುವುದು ನಮ್ಮ ನಿಮ್ಮ ತೆರಿಗೆ ಹಣ. ಅದು ಕೂಡ ನೂರು, ಇನ್ನೂರು ರೂಪಾಯಿ ವಿಷಯ ಅಲ್ಲ. ಬರೊಬ್ಬರಿ ಮೂರು ಲಕ್ಷ ರೂಪಾಯಿಗಳು. ಏನು ಕಥೆ ಇದು. ಬನ್ನಿ ಪಾಲಿಕೆಯ ನಗರ ಯೋಜನಾ ವಿಭಾಗಕ್ಕೆ ಹೋಗೋಣ.
ಇಲ್ಲಿ ನಗರ ಯೋಜನಾ ಅಧಿಕಾರಿ ಎಂಬ ಹುದ್ದೆ ಇದೆ. ಅದಕ್ಕೆ ಬಾಲಕೃಷ್ಣೇ ಗೌಡ ಎನ್ನುವ ಅಧಿಕಾರಿ ಈಗಾಗಲೇ ಇದ್ದಾರೆ. ಎಷ್ಟು ಸಾಚಾ, ಶುದ್ಧ ಎನ್ನುವುದು ಇವತ್ತಿನ ಜಾಗೃತಿ ಅಂಕಣದ ವಿಷಯ ಅಲ್ಲ. ಮೇ 13, 2022 ರಂದು ಅವರ ಜಾಗಕ್ಕೆ ಶಂಕರ್ ಎನ್ನುವ ವ್ಯಕ್ತಿ ಅಧಿಕಾರ ವಹಿಸಿಕೊಳ್ಳಲು ಬರುತ್ತಾರೆ. ಬಂದು ಆವತ್ತು ಮಧ್ಯಾಹ್ನ ಕಮೀಷನರ್ ಅಕ್ಷಯ್ ಶ್ರೀಧರ್ ಅವರ ಬಳಿ ಹೋಗಿ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳುತ್ತಾರೆ. ಅರೇ, ಈಗಾಗಲೇ ಆ ಪೋಸ್ಟಿಗೆ ಒಂದು ಜನ ಇದ್ದಾರಲ್ಲ, ಅದೇ ಪೋಸ್ಟಿಗೆ ಇನ್ನೊಬ್ಬರನ್ನು ಹೇಗೆ ಕೂರಿಸುವುದು. ನಮ್ಮ ಪಾಲಿಕೆಯಲ್ಲಿ ಟಿಪಿಓ ಎಂದರೆ ಒಂದೇ ಸ್ಥಾನ ಇರುವುದು, ಇವರನ್ನು ಎಲ್ಲಿ ನೇಮಿಸುವುದು, ಬಾಲಕೃಷ್ಣೇ ಗೌಡರು ವರ್ಗಾವಣೆ ಆಗಿ ಶಂಕರ್ ಅವರು ಬಂದಿದ್ದರೆ ಅದು ಬೇರೆ ವಿಷಯ. ಆಗ ಹಸ್ತಾಂತರ ಸುಲಭವಾಗಿ ಆಗುತ್ತಿತ್ತು. ಆದರೆ ಬಾಲಕೃಷ್ಣೇಗೌಡರು ಎಲ್ಲಿಯೂ ವರ್ಗಾವಣೆ ಆಗಿಲ್ಲ. ಶಂಕರ್ ಬಂದಾಗಿದೆ, ಏನು ಮಾಡುವುದು ಎಂದು ಪಾಲಿಕೆ ಕಮೀಷನರ್ ತಲೆಕೆಡಿಸಿಕೊಳ್ಳುತ್ತಾರೆ. ಸರಿ ಏನು ಮಾಡುವುದು, ಸರಕಾರವನ್ನೇ ಕೇಳೋಣ ಎಂದು ನಿರ್ಧರಿಸುತ್ತಾರೆ. ಮೂರ್ನಾಕು ದಿನಗಳ ನಂತರ ಪಾಲಿಕೆಯಿಂದ ನಗರಾಭಿವೃದ್ಧಿ ಇಲಾಖೆಗೆ ಒಂದು ಪತ್ರ ಹೋಗುತ್ತದೆ. “ಏನು ಮಾಡೋದು, ನೀವೆ ಹೇಳಿ” ಎನ್ನುವ ಸರಳ ಅರ್ಥ ಇರುವ ಹತ್ತು ವಾಕ್ಯಗಳ ಪ್ರಶ್ನೆಗಳನ್ನು ಒಳಗೊಂಡ ಅರ್ಥಗರ್ಭಿತ ಪತ್ರ ಅದು. ಅದನ್ನು ಸ್ವೀಕರಿಸಿದ ಬೆಂಗಳೂರಿನಲ್ಲಿರುವ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಈ ಸಮಸ್ಯೆಗೆ ಅದಕ್ಕೆ ಏನೂ ಗತಿ ಕಾಣಿಸುತ್ತಿಲ್ಲ. ಕೇಳಿದ್ರೆ ಇಲಾಖೆಯ ಸಚಿವರಿಗೆ ಕಳುಹಿಸಿಕೊಟ್ಟಿದ್ದೇವೆ. ಅವರು ಏನೂ ಹೇಳಿಲ್ಲ ಎನ್ನುವ ಉತ್ತರ ಬರುತ್ತಿದೆ. ಇದರಿಂದ ಏನಾಗುತ್ತಿದೆ ಎನ್ನುವುದು ಈಗ ಉದ್ಭವಿಸಿರುವ ಪ್ರಶ್ನೆ.
ಮೊದಲನೇಯದಾಗಿ ಹೊಸದಾಗಿ ನಗರ ಯೋಜನಾ ವಿಭಾಗಕ್ಕೆ ಬಂದಿರುವ ಶಂಕರ್ ಅವರಿಗೆ ಪಾಲಿಕೆಯಲ್ಲಿ ಏನೂ ಕೆಲಸ ಇಲ್ಲ. ಅವರು ಬೆಳಿಗ್ಗೆ ಕಚೇರಿಗೆ ಬರುತ್ತಾರೆ. ಮಧ್ಯಾಹ್ನ ಊಟಕ್ಕೆ ಹೋಗುತ್ತಾರೆ. ಊಟ ಮಾಡಿ ಬರುತ್ತಾರೆ. ಸಂಜೆ ಮನೆಗೆ ಹೋಗುತ್ತಾರೆ. ಇದರಿಂದ ಪಾಲಿಕೆಗೆ ಏನು ಪ್ರಯೋಜನ? ವಾರದ ನಂತರ ಇದನ್ನು ವರದಿ ಮಾಡಿ ಶಂಕರ್ ಅವರು ಪಾಲಿಕೆಯ ಆಯುಕ್ತರಿಗೆ ಕೊಡುತ್ತಾರೆ. ಅವರು ಸಹಿ ಹಾಕುತ್ತಾರೆ. ಅಲ್ಲಿಗೆ ಶಂಕರ್ ಅವರ ದಿನವೂ ವೇಸ್ಟ್. ಅವರಿಗೆ ಕೊಡುತ್ತಿರುವ ತಿಂಗಳ 90000 ರೂಪಾಯಿ ಕೂಡ ವೇಸ್ಟ್.
ಮೂರು ತಿಂಗಳುಗಳಿಂದ ದಿನಗಳು ಮತ್ತು ಹಣ ಹೀಗೆ ಮುಗಿಯುತ್ತಿದೆ. ಅವರನ್ನು ಜಂಟಿ ನಿರ್ದೇಶಕರನ್ನಾಗಿ ಮಾಡಲು ಹೋಗೋಣ ಎಂದರೆ ಅದಕ್ಕೆ ಶಂಕರ್ ತಯಾರಿಲ್ಲ. ನಾವು ಟಿಪಿಓ ಸ್ಥಾನಕ್ಕೆ ಬಂದಿರೋದು. ಅದನ್ನೇ ಮಾಡುವುದು ಎಂದು ಹೇಳುತ್ತಿದ್ದಾರೆ. ಹೀಗೆ ಅವರು ಮಂಗಳೂರಿಗೆ ಬಂದು ಮೂರುವರೆ ತಿಂಗಳಾಗುತ್ತಾ ಬರುತ್ತಿದೆ. ಮೂರು ಲಕ್ಷ ವೇಸ್ಟಾಗಿದೆ. ಆದರೆ ನಗರಾಭಿವೃದ್ಧಿ ಸಚಿವರಿಗೆ ಇದ್ಯಾವುದೂ ಬಿದ್ದಿಲ್ಲ. ಒಬ್ಬ ಅಧಿಕಾರಿ ತನ್ನ ಮಾತು ಕೇಳಿಲ್ಲ ಎಂದು ಸಡನ್ನಾಗಿ ಎತ್ತಂಗಡಿ ಮಾಡುವುದು, ಬುದ್ಧಿ ಕಲಿಸುತ್ತೇನೆ ಎಂದು ವರ್ಗಾವಣೆ ಮಾಡುವ ಮೊದಲು ಅವರನ್ನು ಯಾವ ಜಿಲ್ಲೆಗೆ ಅಥವಾ ಪಾಲಿಕೆಗೆ ಕಳುಹಿಸಲಾಗುತ್ತದೆಯೋ ಅಲ್ಲಿ ಇವರ ಶ್ರೇಣಿಯ ಹುದ್ದೆ ಖಾಲಿ ಇದೆಯೋ ಎಂದು ಮೊದಲು ನೋಡಬೇಕು ಎಂದು ಕರ್ನಾಟಕದ ಹೈಕೋರ್ಟ್ ಈ ವಾರವಷ್ಟೇ ಸರಕಾರಕ್ಕೆ ಎಚ್ಚರಿಕೆ ಕೊಟ್ಟಿದೆ. ಸುಮ್ಮನೆ ಇಲ್ಲಿಂದ ಅಲ್ಲಿ ಹೋಗಿ ಎಂದು ಹೇಳುವುದು ಸುಲಭ. ಆದರೆ ಅಲ್ಲಿ ಆ ಹುದ್ದೆ ಇಲ್ಲದೇ ಇದ್ದರೆ ಹಾಗೆ ಮಾಡಲೇಬೇಡಿ ಎಂದು ಹೇಳಿರುವ ಹೈಕೋರ್ಟ್ ತೀರ್ಪು ದೂರಗಾಮಿ ಪರಿಣಾಮವನ್ನು ಉಂಟು ಮಾಡುತ್ತದೆ.
ಇದು ಕೇವಲ ಮಂಗಳೂರು ಪಾಲಿಕೆಯ ಒಂದು ವಿಷಯವಲ್ಲ. ಇಂತಹ ನೂರಾರು ಪ್ರಕರಣಗಳು ರಾಜ್ಯದಲ್ಲಿ ನಡೆಯುತ್ತವೆ. ಇದರ ಹಿಂದೆ ಭ್ರಷ್ಟಾಚಾರ ಇದೆಯೋ ಎನ್ನುವಂತಹ ವಾಸನೆ ದಟ್ಟವಾಗುತ್ತಿದೆ. ಯಾಕೆಂದರೆ ನಗರ ಯೋಜನಾ ಅಧಿಕಾರಿ ಎಂದರೆ ಅದು ಬಹಳ ಫಲವತ್ತಾದ ಫಸಲು ಸಿಗುವ ಭೂಮಿಯ ಚೌಕಿದಾರ. ಅದಕ್ಕೆ ಇಂತಿಷ್ಟು ಹಣ ಕೊಟ್ಟು ಬರುವವರು ಇದ್ದೇ ಇರುತ್ತಾರೆ. ಸಚಿವರು ಅದರ ನಿರೀಕ್ಷೆಯಲ್ಲಿ ಇದ್ದಾರೋ ಎನ್ನುವಂತಹ ಭಾವನೆ ಬರುತ್ತಿದೆ. ಇಂತವರು ಯಾವುದೋ ಅಧಿಕಾರಿಯನ್ನು ನಮ್ಮ ತೆರಿಗೆಯ ಹಣದಲ್ಲಿ ಸಂಬಳ ಕೊಟ್ಟು ಸುಮ್ಮನೆ ಕುಳ್ಳಿರಿಸಿದರೆ ಅದರಿಂದ ಸಚಿವರಿಗೆ ಏನೂ ನಷ್ಟ ಇಲ್ಲದೇ ಇರಬಹುದು. ಆದರೆ ಕೊಡುವ ಲಕ್ಷಾಂತರ ರೂಪಾಯಿ ಸಂಬಳ ಯಾರ ಜೇಬಿನಿಂದ ಹೋಗುತ್ತದೆ
Leave A Reply