• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಹಿಂದಿನ ಮೇಯರುಗಳಿಗೆ ಆಗದ ಈ ಕೆಲಸಗಳನ್ನು ಜಯಾನಂದ ಮಾಡಬಲ್ಲರಾ?

Hanumantha Kamath Posted On September 10, 2022


  • Share On Facebook
  • Tweet It

ಜಯಾನಂದ ಅಂಚನ್ ಹೊಸ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಅವರಿಗೆ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆಯ ಅವಧಿ ಬಿಟ್ಟರೆ ಹೆಚ್ಚೆಂದರೆ 10 ತಿಂಗಳು ಸಿಗಬಹುದು. ಒಂದು ವರ್ಷವೇ ಕಡಿಮೆ ಆಗುತ್ತದೆ. ಕನಿಷ್ಟ ಎರಡೂವರೆ ವರ್ಷ ಮಾಡಬೇಕು ಎಂದು ಸರಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಹೇಳಿ ಮೇಯರ್ ಸ್ಥಾನದಿಂದ ಕೆಳಗಿರುವ ಪ್ರೇಮಾನಂದ ಶೆಟ್ಟಿಯವರು ಒಂದೂವರೆ ವರ್ಷ ಅಧಿಕಾರದಲ್ಲಿ ಇದ್ದರು. ಈಗ ಜಯಾನಂದ ಅಂಚನ್ ಸಮಯ. ಮಾಡಬೇಕಾಗಿರುವ ಕೆಲಸಗಳು ಸುಮಾರಿವೆ. ಅದನ್ನು ದೊಡ್ಡದು ಮತ್ತು ಚಿಕ್ಕದು ಎಂದು ವಿಂಗಡಿಸಿ ನಿಮ್ಮ ಮೂಲಕ ಅವರ ಮುಂದೆ ಇಡುತ್ತಿದ್ದೇನೆ. ದೊಡ್ಡದನ್ನು ಮೊದಲು ತೆಗೆದುಕೊಳ್ಳುವುದಾದರೆ ಅವರು ಕುಳಿತುಕೊಂಡ ಕಡೆಯಿಂದಲೇ ಪಾಲಿಕೆಯ ಆದಾಯ ಹೆಚ್ಚಳ ಮಾಡಬಹುದು. ಅದು ಹೇಗೆಂದರೆ ಪಾಲಿಕೆಗೆ ಬರಬೇಕಾದ ನೀರಿನ ಬಿಲ್ ಒಟ್ಟು ಮೊತ್ತವೇ ಸುಮಾರು 40 ಕೋಟಿ ರೂಪಾಯಿಗಳು. ಅದರಲ್ಲಿ ಅನೇಕ ಪ್ರಭಾವಿ ಉದ್ಯಮಿಗಳು ಇದ್ದಾರೆ. 40 ಕೋಟಿ ಒಮ್ಮಿಂದೊಮ್ಮೆಲೆ ಬೆಳೆದದ್ದಲ್ಲ. ಕೆಲವು ಲಕ್ಷಗಳು ಬಾಕಿ ಇರುವಾಗಲೇ ಕಟ್ ಮಾಡಿದಿದ್ದರೆ ಬುದ್ಧಿ ಬರುತ್ತಿತ್ತು. ಈಗ ಅದು ಅವಧಿ ಮೀರಿದೆ. ಆದ್ದರಿಂದ 40 ಕೋಟಿ ಕೂಡ ಹೊಸ ಮೇಯರ್ ವಸೂಲಾತಿ ಮಾಡುತ್ತಾರೆ ಎಂದು ಭಾವಿಸುವುದು ಭ್ರಮೆ. ಕವಿತಾ ಸನಿಲ್ ಅವರಿದ್ದಾಗ 20 ಕೋಟಿ ಆಸುಪಾಸು ಬಾಕಿ ಇತ್ತು. ಈಗ ಕಾಂಗ್ರೆಸ್ ಅವಧಿ ಮುಗಿಸಿ ಭಾರತೀಯ ಜನತಾ ಪಾರ್ಟಿಯ ಆಡಳಿತ ಬಂದು ಎರಡೂವರೆ ವರ್ಷ ಮುಗಿದರೂ ಅದರ ವಸೂಲಾತಿ ಬಿಡಿ, ಕೋಟಿಗಳ ಲೆಕ್ಕಚಾರವೇ ಜಾಸ್ತಿಯಾಗುತ್ತದೆ. ಇದು ಪಾಲಿಕೆಗೆ ಬರಬೇಕಾದ ಆದಾಯ. ಜಯಾನಂದ್ ತರುತ್ತಾರಾ? ಇನ್ನು ಪಾಲಿಕೆ ವ್ಯಾಪ್ತಿಯ ವಿವಿಧ ಜಾಹೀರಾತು ಗುತ್ತಿಗೆದಾರರು ಸುಮಾರು ಎರಡೂವರೆ ಕೋಟಿ ರೂಪಾಯಿಗಳನ್ನು ಬಾಕಿ ಇಟ್ಟಿದ್ದಾರೆ. ಅವರಿಂದ ವಸೂಲಿ ಮಾಡಿಕೊಂಡರೂ ಕೂಡ ಅದು ದೊಡ್ಡ ಸಾಹಸವೇ ಆಗಲಿದೆ. ಇನ್ನು ಹೀಗೆ ಪಾಲಿಕೆಯನ್ನು ತಮ್ಮ ಪತ್ರಾರ್ಜಿತ ಆಸ್ತಿಯಂತೆ ಬಿಲ್ ಬಾಕಿ ಉಳಿಸಿಕೊಂಡವರಿಗೆ ಇಲ್ಲಿಯ ತನಕ ಇಂತಿಷ್ಟು ದಂಡ ಎಂದು ಯಾವತ್ತೂ ಹಾಕಿಲ್ಲ. ಆದ್ದರಿಂದ ಅವರೆಲ್ಲರೂ ಆರಾಮವಾಗಿದ್ದಾರೆ. ಹಾಗಂತ ನೀವು ಸ್ವಯಂಘೋಷಿತ ಆಸ್ತಿ ತೆರಿಗೆಯನ್ನು ಬಾಕಿ ಇಟ್ಟು ನೋಡಿ. ಬಾಕಿ ಬಿಡಿ, ನಿಮಗೆ ಗೊತ್ತಿರುವಂತೆ ನಿಮ್ಮ ಕಟ್ಟುವುದು ಮುಂಗಡ ತೆರಿಗೆ, ಅಂದರೆ 2022-23 ರ ಅವಧಿ ಶುರುವಾಗುವುದು ಎಪ್ರಿಲ್ 1 ರಿಂದ. ಆದರೆ ನೀವು ಈ ಅವಧಿಯ ತೆರಿಗೆಯನ್ನು ಜುಲೈ ಅಂತ್ಯದ ಒಳಗೆ ಕಟ್ಟಿಬಿಡಬೇಕು. ಇಲ್ಲದೇ ಹೋದರೆ ಪ್ರತಿ ತಿಂಗಳು 2% ದಂತೆ ಬಡ್ಡಿ ಹಾಕಿಬಿಡುತ್ತಾರೆ. ಮುಂಗಡ ತೆರಿಗೆ ಕಟ್ಟುವುದನ್ನೇ ಒಂದಿಷ್ಟು ತಡ ಮಾಡಿದರೆ ದಂಡ ಹಾಕುವವರು ನೀರಿನ ಬಿಲ್, ಜಾಹೀರಾತು ಗುತ್ತಿಗೆದಾರರಿಗೆ ಏನೂ ಮಾಡಲು ಹೋಗುವುದಿಲ್ಲವಲ್ಲ ಎನ್ನುವುದೇ ಸೋಜಿಗ. ಜಯಾನಂದ ಈ ಸಂಪ್ರದಾಯ ಮುರಿದು ಹಣ ಕಟ್ಟಿ ಹೋಗಿ ಎಂದು ಜೋರು ಮಾಡುವಷ್ಟು ಶಕ್ತರಾಗಿದ್ದಾರಾ?

ಇನ್ನೊಂದು ಹಣ ಬರಬಹುದಾದ ಆದರೆ ಬಾರದೇ ಇರುವ ಮೂಲ ಎಂದರೆ ಈ ತ್ಯಾಜ್ಯ ತಂದು ಸುರಿಯುವ ನಮ್ಮ ಮಂಗಳೂರು ನಗರದ ಅಕ್ಕಪಕ್ಕದ ಮೂಲ್ಕಿ, ಉಳ್ಳಾಲ, ಕೋಟೆಕಾರ್, ಬಂಟ್ವಾಳ ಹೀಗೆ ಕೆಲವು ಕಡೆಯಿಂದ ತ್ಯಾಜ್ಯ ಬರುತ್ತದೆ. ಆದರೆ ಆಯಾ ಪ್ರದೇಶದ ಸ್ಥಳೀಯಾಡಳಿತ ಸಂಸ್ಥೆಗಳು ಪಾಲಿಕೆಗೆ ಯಾರೂ ಕೂಡ ಅದರ ಶುಲ್ಕ ಕಟ್ಟುವುದಿಲ್ಲ. ಅದನ್ನು ಕಟ್ಟಿಸಬಲ್ಲ ಸಾಮರ್ತ್ಯ ಮೇಯರ್ ತೋರಿಸಬೇಕು. ಇನ್ನು ಕಾಂಗ್ರೆಸ್ಸಿನ ಮಹಾಬಲ ಮಾರ್ಲ ಮೇಯರ್ ಆಗಿದ್ದಾಗ ಪಾಲಿಕೆಯ ಕೆಳಗಿರುವ ಮಂಗಳೂರು ಒನ್ ಜನರ ತೆರಿಗೆಯ ಹಣವನ್ನು ಗೋಲ್ ಮಾಲ್ ಎರಡು ಕೋಟಿ ರೂಪಾಯಿ ವಂಚಿಸಿದೆ. ಆದರೆ ಇಲ್ಲಿಯ ತನಕ ಆ ಹಣ ಪಾಲಿಕೆಗೆ ಬಂದಿಲ್ಲ. ಅದು ಜನರ ತೆರಿಗೆಯ ಹಣ. ಮಂಗಳೂರು ಒನ್ ಸಂಗ್ರಹಿಸಿ ಪಾಲಿಕೆಗೆ ಕೊಡಬೇಕಿತ್ತು. ಆದರೆ ಆ ಹಣ ಎಲ್ಲಿಗೆ ಹೋಯಿತು ಎಂದು ಇಲ್ಲಿಯ ತನಕ ಪತ್ತೆಯಾಗಿಲ್ಲ. ಆಗ ಕಾಂಗ್ರೆಸ್ ಇತ್ತು. ಅವರ ಅವಧಿ ಮುಗಿದು ಈ ಬಿಜೆಪಿ ಬಂದರೂ ಗೊತ್ತಾಗಿಲ್ಲ. ಜಯಾನಂದ ಅಂಚನ್ ಅವರು ಆ ಹಣದ ಜಾಡು ಹಿಡಿಯಬಲ್ಲರಾ?

ಇಷ್ಟೆಲ್ಲ ದೊಡ್ಡ ವಿಷಯ ಮಾಡಲು ಸಾಧ್ಯವಾಗುವುದಿಲ್ಲ ಎಂದಾದರೆ ಹೊಸ ಮೇಯರ್ ಮಾಡಬಹುದಾದ ಚಿಕ್ಕ ಕೆಲಸಗಳನ್ನಾದರೂ ಹೇಳಿಬಿಡುತ್ತೇನೆ. ಪಾಲಿಕೆಯ ಸಿಬ್ಬಂದಿಗಳು ಬೆಳಿಗ್ಗೆ ಸಮಯಕ್ಕೆ ಸರಿಯಾಗಿ ಬರುವಂತೆ ಮತ್ತು ತಮ್ಮ ಡ್ಯೂಟಿ ಅವಧಿಯಲ್ಲಿ ತಮ್ಮ ಸ್ಥಾನದಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು. ಇನ್ನು ಅಧಿಕಾರಿಗಳು ಮಧ್ಯಾಹ್ನ 3.30 ರಿಂದ ಕನಿಷ್ಟ 6 ಗಂಟೆಯ ತನಕವಾದರೂ ತಮ್ಮ ಚೇಂಬರಿನಲ್ಲಿ ಇರಬೇಕು ಎನ್ನುವ ನಿಯಮ ಇದೆ. ಆದರೆ ಇಲ್ಲಿಯ ತನಕ ಇದನ್ನು ಯಶಸ್ವಿಯಾಗಿ ಜಾರಿಗೊಳಿಸಲು ಯಾವ ಮೇಯರ್ ಅವರಿಗೂ ಆಗಿಲ್ಲ. 12 ಬಾರಿ ಸುತ್ತೋಲೆ ಹೊರಡಿಸಲಾಗಿದೆ. ನಗರ ಯೋಜನಾ ಅಧಿಕಾರಿಗಳು ಬಿಲ್ಡರ್ ಗಳೊಂದಿಗೆ ಕಾರಿನಲ್ಲಿ ತಿರುಗಲು ಹೋದರೆ, ಇಂಜಿನಿಯರ್ ಗಳು ಗುತ್ತಿಗೆದಾರರೊಂದಿಗೆ ಸುತ್ತುತ್ತಿರುತ್ತಾರೆ. ಇನ್ನು ಪಾಲಿಕೆಯ ಹಾಜರಾತಿ ಪರಿಶೀಲಿಸಲು ಥಂಬ್ ಇಂಪ್ರೆಶನ್ ಇದೆ. ಆದರೆ ಇದು ಆಗಾಗ ಹಾಳಾಗುವಂತೆ ತಂತ್ರ ಹೂಡಲಾಗುತ್ತದೆ. ಇನ್ನು ಮುಂದೆ ಇದರ ಬದಲಿಗೆ ಪಾಲಿಕೆಯ ಉದ್ಯೋಗಿಗಳ ಮುಖ ಹಾಜರಾತಿ ಪತ್ತೆ ಹಚ್ಚುವ ಯಂತ್ರವನ್ನು ಅಳವಡಿಸಿದರೆ ಉತ್ತಮ. ಎಲ್ಲಕ್ಕಿಂತ ಇನ್ನೊಂದು ಚಿಕ್ಕ ಕೆಲಸ ಇದೆ. ಅದೇನೆಂದರೆ ಸಿಬ್ಬಂದಿಗಳು ಸಂಜೆ ತಮ್ಮ ಕೆಲಸ ಆಗಿ ಹೋಗುವಾಗ ತಮ್ಮ ವಿಭಾಗದ ಫ್ಯಾನ್ಸ್, ಲೈಟ್ಸ್ ಆಫ್ ಮಾಡಿ ಹೋಗುವಂತೆ ನೋಡಿಕೊಳ್ಳಬೇಕು. ಯಾಕೆಂದರೆ ವ್ಯರ್ಥವಾಗಿ ಹೋಗುವಂತಹ ವಿದ್ಯುತ್ ಬಿಲ್ ರಾಷ್ಟ್ರೀಯ ನಷ್ಟ. ಇದೆಲ್ಲವನ್ನು ಬಿಟ್ಟು ಹೊಸ ಮೇಯರ್ ಮುಂದಿನ ಆರು ತಿಂಗಳು ಅಂಗಡಿಗಳ ಉದ್ಘಾಟನೆ, ಅಲ್ಲಲ್ಲಿ ಸನ್ಮಾನ್ಯ, ನವರಾತ್ರಿ ಕಾರ್ಯಕ್ರಮ ಎಂದು ಬಿಝಿ ಆದರೆ ಪಾಲಿಕೆಯನ್ನು ಕೇಳುವವರು ಇರುವುದಿಲ್ಲ. ನೀವು ಉತ್ಸವ, ಉದ್ಘಾಟನೆಗೆ ಹೋಗಲು ನಮ್ಮ ವಿರೋಧ ಇಲ್ಲ. ಆದರೆ ಮೇಲೆ ಹೇಳಿದ ಕೆಲಸಗಳನ್ನು ಮಾಡಲು ಮನಸ್ಸು ಮಾಡಿ. ಇನ್ನು ಕೊನೆಯದಾಗಿ ಒಳರಸ್ತೆಗಳನ್ನು ಕಾಂಕ್ರೀಟ್ ಮಾಡುವುದೇ ಆದರೆ ಮೊದಲು ಅದರ ಕೆಳಗಿರುವ ಒಳಚರಂಡಿ ಮತ್ತು ಕುಡಿಯುವ ನೀರಿನ ಪೈಪುಗಳು ಎರಡಿವೆಯಲ್ಲ, ಅದನ್ನು ರಸ್ತೆಗಳ ಇಕ್ಕೆಲದಲ್ಲಾದರೂ ಹಾಕಿ, ನಂತರ ಕಾಂಕ್ರೀಟ್ ಎಳೆಯಿರಿ. ಅದಾದ್ರೂ ಮಾಡಿ!

  • Share On Facebook
  • Tweet It


- Advertisement -


Trending Now
ಹೆಣ್ಣು ಕಾಮದ ಸರಕಲ್ಲ!
Hanumantha Kamath June 7, 2023
ಎರಡೂವರೆ ವರ್ಷ ಬಳಿಕ ಸಚಿವರಾಗಿ ಇರುವುದೇ ಡೌಟು!
Hanumantha Kamath June 6, 2023
Leave A Reply

  • Recent Posts

    • ಹೆಣ್ಣು ಕಾಮದ ಸರಕಲ್ಲ!
    • ಎರಡೂವರೆ ವರ್ಷ ಬಳಿಕ ಸಚಿವರಾಗಿ ಇರುವುದೇ ಡೌಟು!
    • ದೇವರು ಕೊಟ್ಟರೂ ಅರ್ಚಕ ಕೊಟ್ಟಿಲ್ಲ ಎಂದು ಇನ್ನು ಆಗಲಿಕ್ಕಿಲ್ಲ!!
    • ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!
    • ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
    • ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
    • ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
  • Popular Posts

    • 1
      ಹೆಣ್ಣು ಕಾಮದ ಸರಕಲ್ಲ!
    • 2
      ಎರಡೂವರೆ ವರ್ಷ ಬಳಿಕ ಸಚಿವರಾಗಿ ಇರುವುದೇ ಡೌಟು!
    • 3
      ದೇವರು ಕೊಟ್ಟರೂ ಅರ್ಚಕ ಕೊಟ್ಟಿಲ್ಲ ಎಂದು ಇನ್ನು ಆಗಲಿಕ್ಕಿಲ್ಲ!!
    • 4
      ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search