ಮಂಗಳೂರಿನಲ್ಲಿ ಟ್ರಾಫಿಕ್ ಪೊಲೀಸ್ ವಿಭಾಗ ಇದೆಯಾ?
ಮಂಗಳೂರು ಟ್ರಾಫಿಕ್ ಪೊಲೀಸರ ನಿರ್ಲಕ್ಷ್ಯ, ಬೇಜವಾಬ್ದಾರಿ ಮತ್ತು ಹೇಗಾದರೂ ಆಗುತ್ತೆ ಎನ್ನುವ ನಡವಳಿಕೆಯಿಂದ ಮಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಹಿಂದಿಗಿಂತ ಜಾಸ್ತಿಯಾಗಿದೆ. ಮಂಗಳೂರಿನ ಹೆಚ್ಚಿನ ರಸ್ತೆಗಳು ಚತುಷ್ಪಥಗಳಾಗಿವೆ. ಅದರ ಹಿಂದೆ ಅನೇಕ ನಾಗರಿಕರ, ವ್ಯಾಪಾರಿ ಸಮೂಹದ ದೊಡ್ಡ ತ್ಯಾಗ ಇದೆ. ಇನ್ನು ಜನರು ಜಾಗ ಬಿಟ್ಟುಕೊಡುವ ಹಿಂದೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಅನೇಕರ ಶ್ರಮವಿದೆ. ಇನ್ನು ನಾವು ಜಾಗ ಬಿಟ್ಟುಕೊಡುವುದರಿಂದ ಸಿಗುವ ರಿಟನ್ಸ್ ಗಿಂತ ಹೆಚ್ಚಾಗಿ ನಮ್ಮ ಮುಂದಿನ ಪೀಳಿಗೆ ಮತ್ತು ಭವಿಷ್ಯದ ಮಂಗಳೂರು ಚೆನ್ನಾಗಿರಬೇಕು ಎನ್ನುವ ಆಶಾಭಾವನೆ ಹಲವರಲ್ಲಿತ್ತು. ಅವರಿಂದ ರಸ್ತೆ ಬದಿ ಜಾಗ ತೆಗೆದುಕೊಂಡ ಸ್ಥಳೀಯಾಡಳಿತ, ಸರಕಾರ ಮತ್ತು ಜನಪ್ರತಿನಿಧಿಗಳು ರಸ್ತೆಗಳನ್ನು ಅಗಲ ಮಾಡಿಬಿಟ್ಟರು. ಆದರೆ ಸಮಸ್ಯೆ ಪರಿಹಾರ ಆಯಿತಾ? ಇಲ್ಲ. ಸಮಸ್ಯೆ ಬಿಗಡಾಯಿಸಿತು. ಯಾವ ರಸ್ತೆ ಅಗಲವಾಗುವುದರಿಂದ ವಾಹನಗಳ ಸಂಚಾರ ಸುಗಮವಾಗಬೇಕಿತ್ತೋ ರಸ್ತೆ ಅಗಲವಾಗಿರುವುದರಿಂದ ವಾಹನಗಳು ಹಿಂದಿಗಿಂತ ಈಗ ಹೆಚ್ಚು ತೆವಳಿಕೊಂಡು ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದೆ ರಸ್ತೆ ಅಗಲವಾಗುವ ಮೊದಲು ರಸ್ತೆಬದಿಯ ಅಂಗಡಿಗಳ ಎದುರು ಅವರ ಗ್ರಾಹಕರು ವಾಹನ ನಿಲ್ಲಿಸುತ್ತಿದ್ದರೆ ಈಗ ಏನಾಗಿದೆ ಎಂದರೆ ಇದ್ದಬದ್ದ ವಾಹನಗಳೆಲ್ಲ ಬಂದು ನಿಲ್ಲುತ್ತಿವೆ. ಇದರಿಂದ ಗ್ರಾಹಕರೇ ಬಂದರೂ ಅಂಗಡಿಯ ಎದುರಿಗೆ ನಿಲ್ಲಿಸಲು ಜಾಗ ಇಲ್ಲದೆ ಹೋಗುತ್ತಿದ್ದಾರೆ. ಇದರಿಂದ ಹಿಂದಿಗಿಂತ ಹೆಚ್ಚು ನಷ್ಟವಾಗುತ್ತಿದೆ ವಿನ: ಅಂಗಡಿಯವರಿಗೆ ಏನೂ ಲಾಭವಾಗುತ್ತಿಲ್ಲ. ಯಾವಾಗ ಒಂದು ರಸ್ತೆ ಅಗಲವಾಗುತ್ತೋ ಅಲ್ಲಿ ಸೂಕ್ತ ಇನ್ನಿತರ ವ್ಯವಸ್ಥೆ ಮಾಡಬೇಕಾಗಿರುವ ಸ್ಮಾರ್ಟ್ ಸಿಟಿ, ಪಾಲಿಕೆ ಮತ್ತು ಪೊಲೀಸ್ ಇಲಾಖೆಯವರು ಏನೂ ಮಾಡದೇ ಮೌನವಾಗಿರುವುದರಿಂದ ರಸ್ತೆ ಅಗಲಕ್ಕೆ ಜಾಗ ಬಿಟ್ಟುಕೊಟ್ಟವರು ಹಿಡಿಶಾಪ ಹಾಕುವಂತಾಗಿದೆ. ರಸ್ತೆಗಳು ಅಗಲವಾಗಿರುವುದೇ ನಮ್ಮ ವಾಹನ ಪಾರ್ಕ್ ಮಾಡಲು ಎಂದು ಜನರು ಅಂದುಕೊಂಡಿರುವುದರಿಂದ ಅಗಲವಾಗಿರುವ ರಸ್ತೆಗೆ ಬಂದ ಕೂಡಲೇ ಎಲ್ಲೆಲ್ಲೋ ಪಾರ್ಕ್ ಮಾಡಿ ಹೋಗಿಬಿಡುತ್ತಾರೆ. ಪೊಲೀಸ್ ಇಲಾಖೆ ಕೆಲವು ಸಮಯದ ಹಿಂದೆ ಅಗಲವಾಗಿರುವ ರಸ್ತೆಯಲ್ಲಿ ವಾಹನ ಪಾರ್ಕ್ ಮಾಡಲು ಒಂದು ದಿನ ರಸ್ತೆಯ ಬಲಭಾಗ ಮತ್ತೊಂದು ದಿನ ರಸ್ತೆಯ ಎಡಭಾಗ ಎಂದು ನಿಯಮ ರೂಪಿಸಿತ್ತು.
ಉದಾಹರಣೆಗೆ ಸಮಸಂಖ್ಯೆಗಳಾದ 2,4,6.8 ಹೀಗೆ ಈ ದಿನಾಂಕಗಳಂದು ಎಡಬದಿಯಲ್ಲಿ ಮಾತ್ರ ವಾಹನ ಪಾರ್ಕಿಂಗ್ ಆದರೆ ಉಳಿದ ದಿನಗಳಂದು ಬೆಸಸಂಖ್ಯೆಗಳಾದ 1,3,5,7,9 ಹೀಗೆ ಇಂತಹ ದಿನಗಳಂದು ತಿಂಗಳೀಡಿ ಬಲಭಾಗದಲ್ಲಿ ವಾಹನ ನಿಲುಗಡೆಗೆ ವಾಹನ ನಿಲ್ಲಿಸಲು ಅನುಮತಿ ನೀಡಲಾಗುತ್ತಿತ್ತು. ಒಂದಿಷ್ಟು ದಿನ ಈ ನಿಯಮದ ಪ್ರಕಾರ ಎಲ್ಲವೂ ನಡೆಯುತ್ತಿತ್ತು. ಆದರೆ ಯಾರು ಮೊದಲು ನಿಯಮ ಉಲ್ಲಂಘಿಸಿದಾಗ ಅವರ ವಿರುದ್ಧ ಯಾವ ಕ್ರಮವೋ ಪೊಲೀಸ್ ಇಲಾಖೆಯಿಂದ ಆಗಲಿಲ್ಲವೋ ನಿಧಾನಕ್ಕೆ ಒಂದೊಂದೇ ವಾಹನಗಳು ನಿಯಮ ಉಲ್ಲಂಘಿಸುತ್ತಾ ಈಗ ತಿಂಗಳೀಡಿ ರಸ್ತೆಯ ಎರಡು ಬದಿಗಳಲ್ಲಿ ಸರಾಗವಾಗಿ ವಾಹನಗಳ ನಿಲುಗಡೆ ನಡೆಯುತ್ತಿದೆ. ಇನ್ನು ಈಗ ಹಿಂದಿಗಿಂತ ದೊಡ್ಡ ದೊಡ್ಡ ಮಾಡೆಲಿನ ವಾಹನಗಳು ರಸ್ತೆಗೆ ಬಂದಿರುವುದರಿಂದ ಅಂತಹ ನಾಲ್ಕು ವಾಹನಗಳು ಒಂದು ರಸ್ತೆಯಲ್ಲಿ ಬಂದು ಎಲ್ಲೆಲ್ಲೋ ಪಾರ್ಕ್ ಮಾಡಿ ಹೋದರೆ ದೇವರೇ ಗತಿ. ಇನ್ನು ಹಡಗಿನಂತಹ ಕಾರುಗಳ ಹಿಂದೆ, ಮುಂದೆ ಸಣ್ಣಪುಟ್ಟ ಗಾಡಿಗಳು ನಿಲ್ಲಿಸಿ, ವಾಹನಗಳನ್ನು ತೆಗೆಯುವಾಗ ಅಧ್ವಾನಗಳಾಗುವುದು ಹೆಚ್ಚೆಚ್ಚು ನಡೆಯುತ್ತಿವೆ. ಹಿಂದೆ ಟ್ರಾಫಿಕ್ ಪೊಲೀಸರು ವೀಲ್ ಲಾಕ್ ಮೂಲಕ ತಮ್ಮ ಶಕ್ತಿ ಪ್ರದರ್ಶಿಸುತ್ತಿದ್ದರು. ಅವರು ನೋಪಾರ್ಕಿಂಗ್ ನಲ್ಲಿ ನಿಲ್ಲಿಸಿದ ವಾಹನಗಳಿಗೆ ಒಂದು ಕಡೆಯಿಂದ ಲಾಕ್ ಹಾಕುತ್ತಾ ಹೋಗುತ್ತಿದ್ದರೆ ಇತ್ತ ಯಾರಾದರೂ ವಾಹನ ಮಾಲೀಕರು ಬಂದು ತಮ್ಮ ವಾಹನದ ವೀಲ್ ಲಾಕ್ ತೆಗೆಸಲು ಅದರಲ್ಲಿರುವ ನಂಬರಿಗೆ ಫೋನ್ ಮಾಡಿದರೆ ಪೊಲೀಸರು ತಕ್ಷಣಕ್ಕೆ ಬರುತ್ತಿರಲಿಲ್ಲ. ಇದರಿಂದ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಆ ರಗಳೆ ಬೇಡವೆಂದು ವಾಹನ ಮಾಲೀಕರು ಕೂಡ ಎಲ್ಲೆಲ್ಲೋ ಪಾರ್ಕ್ ಮಾಡಿ ಹೋಗುತ್ತಿರಲಿಲ್ಲ. ನಂತರ ಟೋ ಮಾಡುವ ಪರಿಪಾಠ ಶುರುವಾಯಿತು. ಅದು ಕೂಡ ಒಂದಿಷ್ಟು ದಿನ ಚೆನ್ನಾಗಿಯೇ ನಡೆಯುತ್ತಿತ್ತು. ಅದರ ನಂತರ ಅದು ಕೂಡ ವಿವಾದಗಳ ಸುತ್ತ ಗಿರಾಕಿ ಹೊಡೆಯಿತು. ಆದ್ದರಿಂದ ಅದನ್ನು ಕೂಡ ಸ್ಥಗಿತಗೊಳಿಸಲಾಯಿತು. ಈಗ ಏನಿದ್ದರೂ ಫೋಟೋ ತೆಗೆಯುವುದು ಮತ್ತು ನೋಟಿಸು ಕೊಡುವುದು. ಆದರೆ ಆ ನೋಟಿಸಿಗೆ ತಕ್ಷಣ ದಂಡ ಕಟ್ಟದಿದ್ದರೂ ಏನೂ ಟೆನ್ಷನ್ ಮಾಡಿಕೊಳ್ಳಬೇಕಾಗಿಲ್ಲ. ಮುಂದಿನ ಬಾರಿ ಎಲ್ಲಿಯಾದರೂ ನೀವು ಸಿಕ್ಕಿಬಿದ್ದರೆ ಆಗ ಟ್ರಾಫಿಕ್ ಪೊಲೀಸರು ನಿಮ್ಮ ವಾಹನದ ನಂಬರ್ ಅನ್ನು ತಮ್ಮ ಮೊಬೈಲಿನಲ್ಲಿ ಅಳವಡಿಸಿರುವ ಸಾಫ್ಟ್ ವೇರ್ ನಲ್ಲಿ ಎಂಟ್ರಿ ಮಾಡಿದರೆ ಆಗ ಹಿಂದಿನ ನಿಯಮ ಉಲ್ಲಂಘಿಸಿ ನೋಟಿಸು ಪಡೆದುಕೊಂಡಿದ್ದು ಗೊತ್ತಾಗುತ್ತದೆ. ಇನ್ನು ಏನೇ ಟ್ರಾಫಿಕ್ ಜಾಮ್ ಆಗಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳು ಅತ್ತ ಸುಳಿಯದೇ ತಮ್ಮ ಮೊಬೈಲಿನಲ್ಲಿ ಬಿಝಿಯಾಗಿರುತ್ತಾರೆ. ಕೆಲವು ಸಿಬ್ಬಂದಿಗಳು ಹೆಲ್ಮೆಟ್ ಹಾಕದೇ ದ್ವಿಚಕ್ರ ಚಲಾಯಿಸುವವರ ಫೋಟೋ ತೆಗೆಯುವಲ್ಲಿ ವ್ಯಸ್ತರಾಗಿರುತ್ತಾರೆ. ಆದ್ದರಿಂದ ಮಂಗಳೂರು ಕಿಷ್ಕಿಂದೆಯಾಗಿರುವುದು ಖಂಡಿತ. ಹಾಗಾದರೆ ಇದನ್ನು ಹೇಗೆ ಸರಿ ಮಾಡುವುದು. ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಮೀಟಿಂಗ್ ಕರೆಯಬೇಕು. ಅಲ್ಲಿ ಬಸ್, ರಿಕ್ಷಾ ಹಾಗೂ ನಾಗರಿಕರ ಪರವಾಗಿರುವವರ ಸಭೆ ಕರೆದು ಟ್ರಾಫಿಕ್ ಜಾಮ್ ನಿವಾರಣೆಗೆ, ಅನಧಿಕೃತ ಪಾರ್ಕಿಂಗ್ ಸುಧಾರಣೆಗೆ ಏನು ಪರಿಹಾರ ಎನ್ನುವುದರ ಸಭೆ ನಡೆಸಬೇಕು. ಹಿಂದೆ ಇಂತಹ ಸಭೆ ಆಗಿದೆ. ಈಗ ನಿಂತಿದೆ. ಇದರಿಂದ ಟ್ರಾಫಿಕ್ ಪೊಲೀಸ್ ಇಲಾಖೆ ಇದ್ದೂ ಇಲ್ಲದಂತಾಗಿದೆ!
Leave A Reply