ಬೇಲಿ ಎದ್ದು ಫ್ಲೆಕ್ಸ್ ಮೇಯುವಾಗ ಪಾಲಿಕೆ ಕಣ್ಣುಮುಚ್ಚಿಕೊಳ್ಳುತ್ತದೆ!!

ಯಾವಾಗ ಬೇಲಿ ಎದ್ದು ಹೊಲ ಮೇಯಲು ಶುರು ಮಾಡುತ್ತೋ ಅದರ ನಂತರ ಹೊಲ ಎನ್ನುವುದು ಪಕ್ಕಾ ಶೌಚಾಲಯದ ಲೆವೆಲ್ಲಿಗೆ ಬಂದುಬಿಡುತ್ತದೆ. ಇಲ್ಲಿ ಬೇಲಿ ಎಂದರೆ ಮಂಗಳೂರು ಮಹಾನಗರ ಪಾಲಿಕೆ. ಹೊಲ ಎಂದರೆ ಅದರ ವ್ಯಾಪ್ತಿಯ ಕ್ಷೇತ್ರ. ಮೇಯಲು ಇವರಿಗೆ ಏನೂ ಆಗುವುದರಿಂದ ಇವರು ಹಲವು ವರ್ಷಗಳಿಂದ ಮೇಯುತ್ತಾ ಇರುವುದುಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು. ಇವರು ಕುಳಿತುಕೊಂಡ ಕಡೆಯಲ್ಲಿಯೇ ಮೇಯುವ ಈ ವಸ್ತುಗಳನ್ನು ತಂದು ಬಾಯಿಗೆ ಸುರಿಯುತ್ತಿರುವವರು ಈ ಫ್ಲೆಕ್ಸ್ ಮತ್ತು ಬ್ಯಾನರ್ ಪ್ರಿಂಟ್ ಮಾಡುವ ಪ್ರಿಂಟರ್ ಗಳು ಅಥವಾ ಅದರ ಗುತ್ತಿಗೆ ಪಡೆದುಕೊಂಡಿರುವ ಸಂಸ್ಥೆಗಳು. ಪಾಲಿಕೆಯ ಮುಖ್ಯ ಕಟ್ಟಡ ಇರುವುದು ಲಾಲ್ ಭಾಗಿನಲ್ಲಿ. ಕಟ್ಟಡದ ಹೊರಗೆ ಬಂದು ಎದುರು ನೋಡಿದರೆ ಎಷ್ಟೋ ಅನಧಿಕೃತ ಫ್ಲೆಕ್ಸ್ ಗಳು ರಾರಾಜಿಸುತ್ತವೆ. ಇದು ಒಂದು ರೀತಿಯಲ್ಲಿ ಪಾಲಿಕೆಯ ಗಂಡಸ್ತನಕ್ಕೆ ಹಾಕಿದ ಸವಾಲು. ನಿಮ್ಮದೇ ಪಾಲಿಕೆ ಕಟ್ಟಡದ ಎದುರು ಫ್ಲೆಕ್ಸ್ ಹಾಕುತ್ತವೆ. ಏನು ಕಿತ್ಕೋತ್ತೀರಿ, ಕಿತ್ಕೋಳ್ಳಿ ಎಂದು ಚಾಲೆಂಜ್ ಮಾಡಿದ ಹಾಗೆ. ಆದರೆ ಒಂದು ಫ್ಲೆಕ್ಸ್ ಕೂಡ ಮುಟ್ಟಲು ಪಾಲಿಕೆಗೆ ಧೈರ್ಯ ಇಲ್ಲ. ಧೈರ್ಯ ಇಲ್ಲ ಯಾಕೆಂದರೆ ಇವರಿಗೆ ನೈತಿಕತೆ ಇಲ್ಲ. ಒಂದು ವೇಳೆ ಕಿತ್ತು ಬಿಸಾಡೋಣ ಎಂದು ಯಾವುದೇ ಅಧಿಕಾರಿ ಹೊರಟರೂ ಅವರಿಗೆ ಮೇಲಿನಿಂದ ಹಿಡಿದು ಕೆಳಗಿನ ತನಕ ಫೋನ್ ಬರುತ್ತದೆ. ಕೀಳಲು ಹೋದ ಅಧಿಕಾರಿಯ ಎತ್ತಂಗಡಿ ಆಗುತ್ತದೆ. ಅವನನ್ನು ಕಂಡು ಉಳಿದ ಅಧಿಕಾರಿಗಳು ವ್ಯಂಗ್ಯ ಆಡುತ್ತಾರೆ. ಈಗ ಬುದ್ಧಿ ಬಂತಾ, ದೊಡ್ಡ ಸಿಂಗಂ ತರಹ ಹೊರಟಿದ್ದ ಎಂದು ತಮಾಷೆ ಮಾಡುತ್ತಾರೆ. ಇಂತಹ ಉದಾಹರಣೆಗಳು ಹಲವಾರು ಇರುವುದರಿಂದ ಯಾರೂ ಕೂಡ ಏನೂ ಮಾಡಲು ಹೋಗುವುದಿಲ್ಲ.
ಆದ್ದರಿಂದ ಪ್ರಿಂಟರ್ ಗಳು ಅಥವಾ ಫ್ಲೆಕ್ಸ್ ಗುತ್ತಿಗೆದಾರರು ಕವರಿನಲ್ಲಿ ಕೊಡುವ ಹಣವನ್ನು ಇಸ್ಕೊಂಡು ಸುಮ್ಮನೆ ಕುಳಿತುಕೊಳ್ಳುತ್ತಾರೆ. ಇದು ಅವರಿಗೆ ಅಭ್ಯಾಸ ಆಗಿದೆ. ಒಂದು ವೇಳೆ ನಮ್ಮ ಪಾಲಿಕೆಯ ಭಾರತೀಯ ಜನತಾ ಪಾರ್ಟಿಯ ಆಡಳಿತ ಅಷ್ಟು ಪಾರದರ್ಶಕವಾಗಿದ್ದರೆ ಒಪನಾಗಿ ಅಧಿಕಾರಿಗಳಿಗೆ ಧೈರ್ಯ ಕೊಟ್ಟು ಯಾವುದೇ ಅನಧಿಕೃತ ಬ್ಯಾನರ್ ಅಥವಾ ಫ್ಲೆಕ್ಸ್ ಸಹಿಸುವುದಿಲ್ಲ, ಕಿತ್ತಾಕಿ ಎಂದು ಮೇಯರ್ ಅವರಿಂದ ಆದೇಶ ಕೊಡಬೇಕು. ಪಾಲಿಕೆಯ ಕಮೀಷನರ್ ಅವರಿಗೂ ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಆಗಬೇಕಾಗಿರುವ ಯಾವುದೇ ಕಾನೂನಾತ್ಮಕ ಕಾರ್ಯಗಳಿಗೆ ನಮ್ಮ ಪೂರ್ಣ ಬೆಂಬಲ ಇದೆ ಎಂದು ಘೋಷಿಸಿಬಿಡಬೇಕು. ಆದರೆ ಇವರು ಏನೂ ಮಾಡದೇ ಇರುವುದರಿಂದ ಇವತ್ತಿನ ದಿನಗಳಲ್ಲಿ ಮಂಗಳೂರಿನ ಸೌಂದರ್ಯ ಹಾಳಾಗುತ್ತಿರುವುದು. ಹಾಗಾದರೆ ಒಂದು ಫ್ಲೆಕ್ಸ್ ಅಥವಾ ಬ್ಯಾನರ್ ಹೇಗೆ ಅನಧಿಕೃತವಾಗುತ್ತದೆ ಎಂದು ನೋಡೋಣ.
ಮೊದಲನೇಯದಾಗಿ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಗೆ ಫ್ಲೆಕ್ಸ್ ಅಥವಾ ಬ್ಯಾನರ್ ಹಾಕಿಸಬೇಕು ಎಂದಾದರೆ ಅವರು ಇದನ್ನೇ ವ್ಯವಹಾರ ಮಾಡಿಕೊಂಡಿರುವ ಮಳಿಗೆಗಳ ಬಳಿ ಹೋಗುತ್ತಾರೆ. ಈಗ ಸರಕಾರದ ನಿಯಮ ಪ್ರಕಾರ ಫ್ಲೆಕ್ಸ್ ನಿಷೇಧವಾಗಿದೆ. ಆದ್ದರಿಂದ ಫ್ಲೆಕ್ಸ್ ಹಾಕುವುದು ಕಾನೂನುಬಾಹಿರ. ಆದರೂ ಅದನ್ನು ಅಲ್ಲಲ್ಲಿ ಕಾಣಬಹುದು. ಅದು ನಮ್ಮ ದುರ್ದೈವ. ಆದ್ದರಿಂದ ಈಗ ಏನಿದ್ದರೂ ಬ್ಯಾನರ್ ಹೆಸರಿನಲ್ಲಿ ಎಲ್ಲವೂ ನಡೆಯುವುದು. ನೀವು ಬ್ಯಾನರ್ ವ್ಯವಹಾರ ಮಾಡುವವರ ಬಳಿ ಮಾತನಾಡಿದಾಗ ಅವರು ನಿಮಗೆ ಎಷ್ಟು ದೊಡ್ಡ ಬ್ಯಾನರ್ ಬೇಕು ಎಂದು ಮೊದಲು ಕೇಳುತ್ತಾರೆ. ನೀವು ನಿಮಗೆ ಬೇಕಾದ ಬ್ಯಾನರ್ ಸೈಜ್ ಹೇಳುತ್ತೀರಿ. ಅದರ ನಂತರ ಎಷ್ಟು ಬೇಕಾಗುತ್ತದೆ ಎಂದು ಕೇಳಿದಾಗ ನೀವು ಐವತ್ತೋ, ನೂರೋ ಎಷ್ಟು ಬೇಕೋ ಅಷ್ಟು ಹೇಳುತ್ತೀರಿ. ಅವರು ಒಂದೊಂದು ಬ್ಯಾನರಿಗೆ ತಗಲುವ ವೆಚ್ಚ ಹಾಗೂ ಅದರೊಂದಿಗೆ ಪಾಲಿಕೆಗೆ ಕಟ್ಟಬೇಕಾದ ಪ್ರತಿ ಬ್ಯಾನರಿನ ಶುಲ್ಕ ಸೇರಿಸಿ ಒಟ್ಟು ಮೊತ್ತ ಹೇಳುತ್ತಾರೆ. ಸಾಮಾನ್ಯವಾಗಿ ಒಂದು ಬ್ಯಾನರಿನ ಪಾಲಿಕೆಯ ಶುಲ್ಕ 120 ಆದರೆ ನೂರು ಬ್ಯಾನರಿನ ಒಟ್ಟು ಶುಲ್ಕ ಸೇರಿಸಿ ಹಣವನ್ನು ನಿಮ್ಮಿಂದ ಪಡೆದುಕೊಳ್ಳಲಾಗುತ್ತದೆ. ಆದರೆ ಆ ಪ್ರಿಂಟರ್ ನವರು ಅಷ್ಟೇ ಹಣವನ್ನು ಅಲ್ಲಿ ಪಾಲಿಕೆಗೆ ಹೋಗಿ ಕಟ್ಟುವುದಿಲ್ಲ. ನೀವು ನೂರು ಬ್ಯಾನರ್ ಶುಲ್ಕ ಕೊಟ್ಟಿದ್ದರೆ ಅವರು ಪಾಲಿಕೆಯ ಸಂಬಂಧಪಟ್ಟ ಯೋಜನಾ ವಿಭಾಗಕ್ಕೆ ಬಂದು ಹತ್ತೋ, ಇಪ್ಪತ್ತೋ ಬ್ಯಾನರಿನ ಹಣವನ್ನು ಕಟ್ಟಿ ಉಳಿದದ್ದರಲ್ಲಿ ಅದನ್ನು ಆ ಅಧಿಕಾರಿಗಳಿಗೆ ಇಂತಿಷ್ಟು ಎಂದು ಕೊಟ್ಟು ಡಿಲೀಂಗ್ ಮುಗಿಸಿಬಿಡುತ್ತಾರೆ. ಯಾವುದೇ ಬ್ಯಾನರ್ ಅಳವಡಿಸುವ ಮೊದಲು ಸ್ಥಳೀಯ ಆಡಳಿತದಿಂದ ಅನುಮತಿಯನ್ನು ಪಡೆಯಬೇಕು ಎಂದು ರಾಜ್ಯ ಉಚ್ಚ ನ್ಯಾಯಾಲಯದ ಸ್ಪಷ್ಟ ಆದೇಶ ಕೊಟ್ಟಿರುವುದರಿಂದ ಇವರು ಒಂದಿಷ್ಟು ಬ್ಯಾನರ್ ಗಳಿಗಾದರೂ ಹಣ ಕಟ್ಟುತ್ತಾರೆ. ಇಲ್ಲದಿದ್ದರೆ ಅದು ಕೂಡ ಇಲ್ಲ. ಇನ್ನು ಸರಕಾರ ನಿಷೇಧ ಮಾಡಿರುವ ಪ್ಲಾಸ್ಟಿಕ್ ಅಥವಾ ನಿಷೇಧಿತ ವಸ್ತುಗಳನ್ನು ಬ್ಯಾನರ್ ನಲ್ಲಿ ಬಳಸಬಾರದು ಎಂದು ಇದ್ದರೂ ಕಡಿಮೆಯಲ್ಲಿ ಆಗುತ್ತದೆ ಎನ್ನುವ ಕಾರಣಕ್ಕೆ ಅದನ್ನು ಬಳಸಿಯೇ ಬ್ಯಾನರ್ ಅಥವಾ ಫ್ಲೆಕ್ಸ್ ಮಾಡಲಾಗುತ್ತಿದೆ. ಇದನ್ನೆಲ್ಲಾ ನೋಡುತ್ತಾ ಕಣ್ಣುಮುಚ್ಚಿ ಕುಳಿತಿರುವ ಮಂಗಳೂರು ಮಹಾನಗರ ಪಾಲಿಕೆಯಿಂದ ನಾವು ಇನ್ನೇನೂ ತಾನೆ ನಿರೀಕ್ಷೆ ಮಾಡಬಹುದು ಅಲ್ವಾ!
Leave A Reply