ಶರದ್ ಪವಾರ್ ಕೂಡ ಗಡಿಯಲ್ಲಿ ಕಡ್ಡಿ ಅಲ್ಲಾಡಿಸಲು ಹೊರಟಿದ್ದಾರೆ!
ಮಹಾರಾಷ್ಟ್ರದ ರಾಜಕಾರಣಿಗಳು ಈಗ ಫ್ರೀಯಾಗಿದ್ದಾರೆ. ರೆಸಾರ್ಟ್ ರಾಜಕೀಯ ಮುಗಿದು ಸರಕಾರ ಈಗ ಸುಸೂತ್ರವಾಗಿ ಹಳಿಗೆ ಬಂದ ನಂತರ ಮಾಡಲು ಏನಾದರೂ ಕೆಲಸ ಬೇಕಲ್ಲ. ಸದ್ಯಕ್ಕೆ ಚುನಾವಣೆ ಇಲ್ಲ. ಉದ್ಭವ್ ಸೈಲೆಂಟ್ ಆಗಿದ್ದಾರೆ. ಮೇಲಿನಿಂದ ಭಾರತೀಯ ಜನತಾ ಪಾರ್ಟಿಯ ದಿಗ್ಗಜರ ಆರ್ಶೀವಾದ ಇರುವುದರಿಂದ ಏಕನಾಥ್ ಶಿಂಧೆ ಕೂಡ ಆರಾಮವಾಗಿದ್ದಾರೆ. ಉಪಚುನಾವಣೆ ಕೂಡ ಮುಗಿದಿವೆ. ಹಾಗಾದರೆ ಈಗ ಏನು ಮಾಡಿ ಮಹಾರಾಷ್ಟ್ರ ಜನರನ್ನು ಬ್ಯುಸಿ ಇಡೋಣ ಎಂದು ಯೋಚಿಸುವಾಗ ಇವರಿಗೆಲ್ಲ ಹೊಳೆದದ್ದು ಗಡಿ ವಿವಾದ. ಕರ್ನಾಟಕದ ಮತ್ತು ಮಹಾರಾಷ್ಟ್ರ ಬೆಳಗಾವಿಯಲ್ಲಿ ಗಡಿಯನ್ನು ಹಂಚಿಕೊಂಡಿವೆ. ಕರ್ನಾಟಕದ ರಾಜಕೀಯದಲ್ಲಿ ಬೆಳಗಾವಿ ಬಹಳ ಪ್ರಮುಖವಾದ ಆಯಕಟ್ಟಿನ ಜಾಗ. ಹಿಂದೆ ಈ ಕೆಲಸವನ್ನು ಬಳ್ಳಾರಿ ಮಾಡುತ್ತಿತ್ತು. ಈಗ ಬೆಳಗಾವಿಯ ಜಾರಕಿಹೊಳಿ ಸಹೋದರರಿಂದ ಈ ಜಿಲ್ಲೆಯನ್ನು ಯಾವ ರಾಜಕೀಯ ಪಕ್ಷಗಳು ಕೂಡ ಲೈಟಾಗಿ ತೆಗೆದುಕೊಳ್ಳುವಂತಿಲ್ಲ. ಆದ್ದರಿಂದ ಸಹಜವಾಗಿ ಬೆಳಗಾವಿ ಅಭಿವೃದ್ಧಿ ಕಂಡಿದೆ. ಇದಕ್ಕೆ ತಾಗಿಕೊಂಡಿರುವ ಮಹಾರಾಷ್ಟ್ರದ ಗಡಿಯ ಕೆಲವು ಹಳ್ಳಿಗಳು ಬೆಳಗಾವಿಯನ್ನು ದಶಕಗಳಿಂದ ಬೆರಗುಕಣ್ಣಿನಿಂದ ನೋಡಿಕೊಂಡು ಬರುತ್ತಿವೆ. ಇವತ್ತಿಗೂ ಗಡಿಯ ಎರಡೂ ಬದಿಯಲ್ಲಿ ಪರಸ್ಪರ ಎರಡೂ ರಾಜ್ಯಗಳ ಜನರು ಇದ್ದಾರೆ. ಎರಡೂ ಕಡೆಗಳಿಗೂ ವ್ಯಾಪಾರ, ವಹಿವಾಟುಗಳಿವೆ. ಆದರೆ ಅಭಿವೃದ್ಧಿಯ ದೃಷ್ಟಿಯಲ್ಲಿ ಗಡಿಯಲ್ಲಿರುವ ಕರ್ನಾಟಕದ ಪ್ರದೇಶಗಳು ತುಂಬಾ ಏಳಿಗೆ ಸಾಧಿಸಿವೆ. ಅದರೊಂದಿಗೆ ಬೆಳಗಾವಿ ಭಾಗದಲ್ಲಿ ಮರಾಠಿಗಳ ಸಂಖ್ಯೆ ಜಾಸ್ತಿ ಇದೆ. ಯಾವಾಗ ಇಲ್ಲಿ ಮೂಲಭೂತ ಸೌಕರ್ಯಗಳು ಹೆಚ್ಚಾಗುತ್ತಾ ಹೋಯಿತೋ ಅಲ್ಲಿನವರು ಇಲ್ಲಿ ಬಂದು ವ್ಯಾಪಾರ, ಉದ್ಯೋಗ ಮಾಡಲಾರಂಭಿಸಿದರು. ಅದರಿಂದ ಮರಾಠಿಗಳ ಜೀವನಶೈಲಿ ಉತ್ತಮವಾಯಿತು. ಯಾವಾಗ ಮನುಷ್ಯನಿಗೆ ಹೊಟ್ಟೆ ತುಂಬಿ ಅದರ ಚಿಂತೆ ಇರುವುದಿಲ್ಲವೋ ನಂತರ ಅವನು ಕೈ ಚಾಚುವುದೇ ಸಾಮ್ರಾಜ್ಯ ವಿಸ್ತರಣೆಯತ್ತ. ಇಲ್ಲಿಯೂ ಹಾಗೆ ಆಗಿದೆ. ಬೆಳಗಾವಿಯಲ್ಲಿರುವ ಮರಾಠಿಗರಿಗೆ ಈಗ ಬದುಕು ಚೆನ್ನಾಗಿದೆ. ಈಗ ಅವರಿಗೆ ನೆನಪಾಗಿರುವುದು ತಮ್ಮ ಮೂಲ ರಾಜ್ಯ ಮಹಾರಾಷ್ಟ್ರ. ಅದಕ್ಕಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ರಚನೆ ಮಾಡಿದ್ರು. ಚುನಾವಣೆಗೆ ನಿಂತರು. ರಾಜಕೀಯವಾಗಿ ಪ್ರಬಲರಾದರು. ಅದೇ ಅತ್ತ ಕೆಲವು ಹಳ್ಳಿಗಳ ಪರಿಸ್ಥಿತಿ ಹೇಗಿದೆ ಎಂದರೆ ಅವರಿಗೆ ಮಹಾರಾಷ್ಟ್ರ ಸರಕಾರದಿಂದ ಏನೂ ಕಿಮ್ಮತ್ತಿಲ್ಲ. ಅನೇಕ ಹಳ್ಳಿಗಳಿಗೆ ಮೂಲಭೂತ ವ್ಯವಸ್ಥೆ ಇಲ್ಲ. ನೀರು, ವಿದ್ಯುತ್, ರಸ್ತೆಗಳನ್ನು ಅವರು ಸರಿಯಾಗಿ ನೋಡಿಲ್ಲ. ಚುನಾವಣೆ ಮತ್ತು ಗಡಿ ವಿಷಯ ಬಂದಾಗ ಈ ಹಳ್ಳಿಗಳು ಅಲ್ಲಿನ ರಾಜಕಾರಣಿಗಳಿಗೆ ನೆನಪಾಗುತ್ತವೆ. ಇದರಿಂದ ಬೇಸತ್ತಿರುವ ಆ ಹಳ್ಳಿಗರು ತಮ್ಮ ಗ್ರಾಮ ಪಂಚಾಯತ್ ಗಳಲ್ಲಿ ಒಂದು ನಿರ್ಣಯ ಪಾಸ್ ಮಾಡಿದ್ದಾರೆ. ಅದೇನೆಂದರೆ ನಮ್ಮನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಿ ಎಂದು ಕರ್ನಾಟಕ ಸರಕಾರಕ್ಕೆ ಮನವಿ ಮಾಡುವುದು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರ ಸರಕಾರದ ಇಬ್ಬರು ಸಚಿವರು ಯಾವ ಮಾನ, ಮರ್ಯಾದೆ ಇಲ್ಲದೆ ಬೆಳಗಾವಿಗೆ ಬಂದು ಇಲ್ಲಿನ ಮರಾಠಿ ಬಾಹುಳ್ಯದ ಪ್ರದೇಶದಲ್ಲಿ ಸಭೆ ಮಾಡಲಿದ್ದಾರೆ ಎಂಬ ಘೋಷಣೆ ಹೊರಬಿದ್ದಿದೆ. ಇವರು ಇಲ್ಲಿಗೆ ಬರುವ ಮೊದಲು ಸಭೆ ಮಾಡಬೇಕಾಗಿರುವುದು ತಮ್ಮ ರಾಜ್ಯದ ಗಡಿಭಾಗದಲ್ಲಿ ವಾಸ ಮಾಡುವ ಜನರು ಯಾಕೆ ಕರ್ನಾಟಕಕ್ಕೆ ಸೇರಲು ಉತ್ಸುಕರಾಗಿದ್ದಾರೆ ಎನ್ನುವುದನ್ನು ಮೊದಲು ನೋಡಲಿ.
ಅಷ್ಟಕ್ಕೂ ಈ ಗಡಿಗಲಾಟೆ ಕರ್ನಾಟಕದ ಜನರಿಗೆ ಅಗತ್ಯವೇ ಇರಲಿಲ್ಲ. ಇದನ್ನು ಮೊದಲು ಪ್ರಾರಂಭಿಸಿದವರೇ ಮಹಾರಾಷ್ಟ್ರದ ಪುಂಡರು. ನಮ್ಮ ಬಸ್ಸುಗಳಿಗೆ ಕಲ್ಲು ಹೊಡೆದು, ಅದರ ಮೇಲೆ ಮಹಾರಾಷ್ಟ್ರಕ್ಕೆ ಜೈ ಎಂದು ಬರೆದು, ನಮ್ಮ ಕರ್ನಾಟಕ ಬ್ಯಾಂಕ್ ಎಂದು ಇದ್ದ ಬೋರ್ಡುಗಳಿಗೆ ಮಸಿ ಬಳಿದು ನಮ್ಮ ಸ್ವಾಭಿಮಾನಕ್ಕೆ ಪೆಟ್ಟು ಕೊಡುವ ವಿಫಲ ಯತ್ನ ಮಾಡಿದವರೇ ಮಹಾರಾಷ್ಟ್ರದವರು. ಅದರ ನಂತರ ನಮ್ಮವರು ಕೂಡ ಎದ್ದರು. ನಮ್ಮ ಸರಕಾರ ಗಡಿಯಲ್ಲಿ ಕಟ್ಟುನಿಟ್ಟಿನ ಭದ್ರತೆಯನ್ನು ಕೈಗೊಂಡಿತು. ಬೆಳಗಾವಿಗೆ ಹೊರಟ ಮಹಾರಾಷ್ಟ್ರದ ಸಚಿವರು ಈಗ ತಮ್ಮ ಗಡಿಭಾಗದ ಜನರ ಸಂಕಷ್ಟ ಗೊತ್ತಾಗಿ ಮುಖ ತೋರಿಸಲಾಗದೇ ದಿನದೂಡುತ್ತಿದ್ದಾರೆ. ಇದರಿಂದ ಅಲ್ಲಿನ ಶಿವಸೇನೆ (ಉ) ಬಣಕ್ಕೆ ಇವರ ವಿರುದ್ಧ ಮಾತನಾಡಲು ವಿಷಯ ಸಿಕ್ಕಿದೆ. ನಿಮಗೆ ಕರ್ನಾಟಕಕ್ಕೆ ಹೋಗಿ ಮಾತನಾಡಲು ಧೈರ್ಯ ಇಲ್ಲ ಎಂದು ಹಂಗಿಸುತ್ತಿದ್ದಾರೆ. ಇದರಿಂದ ಮತ್ತೆ ರೊಚ್ಚಿಗೆದ್ದಿರುವ ಶಿವಸೇನೆ-ಬಿಜೆಪಿ ಸರಕಾರ ನಾವು ಯಾವ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಖಡಕ್ಕಾಗಿ ಹೇಳಿದೆ. ಅತ್ತ ಶಿವಸೇನೆಯ ಎರಡು ಬಣಗಳು ಈ ರಾಜಕೀಯ ಮೇಲಾಟದಲ್ಲಿ ಮೈಲೇಜ್ ಪಡೆಯುವುದು ಹೇಗೆ ಎಂದು ಚಿಂತಿಸುತ್ತಾ ಇರುವಾಗ ನನ್ನದು ಎಲ್ಲಿ ಇಡಲಿ ಎಂದು ಮುಂದೆ ಬಂದಿರುವ ಮಹಾನುಭಾವರ ಹೆಸರು ಶರದ್ ಪವಾರ್.
ಶರದ್ ಪವಾರ್ ಗೆ ರಾಜಕೀಯ ಜೀವನದ ಸಂಧ್ಯಾಕಾಲ. ಸರಿಯಾಗಿ ಮಾತನಾಡುವುದು ಕೂಡ ಕಷ್ಟವಾಗುತ್ತಿರುವಂತಹ ಸಮಯದಲ್ಲಿ ಅವರು ಕೂಡ ತಮ್ಮ ಪಕ್ಷದ ಅಸ್ತಿತ್ವಕ್ಕಾಗಿ ಕರ್ನಾಟಕವನ್ನು ಕೆಣಕುವ ಕೆಲಸ ಮಾಡುತ್ತಿದ್ದಾರೆ. ಈ ಗಡಿ ವಿಷಯ 24 ಗಂಟೆಯೊಳಗೆ ಪರಿಹಾರವಾಗದೇ ಇದ್ದರೆ ತಾವೇ ಬೆಳಗಾವಿಗೆ ಬರುವುದಾಗಿ ಸವಾಲು ಹಾಕಿದ್ದಾರೆ. ಇವರು ರಾಜಕೀಯ ಆರಂಭಿಸಿ 5 ದಶಕಗಳಾಗಿರಬಹುದು. ಅನೇಕ ಬಾರಿ ಅಲ್ಲಿನ ಸಿಎಂ ಆಗಿದ್ದವರು. ಕೇಂದ್ರ ಸಚಿವರಾಗಿದ್ದವರು. ಇಷ್ಟು ವರ್ಷ ಏನೂ ಈ ವಿಷಯದಲ್ಲಿ ಮಾಡದೇ ಈಗ ನಡೆಯಲು ಕಷ್ಟವಾಗುವ ದಿನಗಳಲ್ಲಿ ನಮ್ಮ ಸಿಎಂಗೆ ಸವಾಲು ಹಾಕಲು ಹೊರಟಿದ್ದಾರೆ. ಇದನ್ನೇ ರಾಜಕೀಯ ಎನ್ನುವುದು!
Leave A Reply