ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!

ಮಂಗಳೂರು ಮಹಾನಗರದಲ್ಲಿ ಜನನಿಬಿಡ ಪ್ರದೇಶಗಳಲ್ಲಿರುವ ಮುಖ್ಯರಸ್ತೆಗಳ ಅಂಗಡಿಗಳ ಎದುರಿನ ರಸ್ತೆಬದಿಯ ಜಾಗವನ್ನು ಕೂಡ ಅಂಗಡಿಯವರು ತಮ್ಮದೇ ಸ್ವಂತ ಆಸ್ತಿ ಎಂದು ಅಂದುಕೊಂಡಿದ್ದಾರೆ. ಕೆಲವು ಅಂಗಡಿಯವರು “ಗ್ರಾಹಕರಿಗೆ ಮಾತ್ರ” ಎನ್ನುವ ಬೋರ್ಡ್ ಬರೆದು ಕೂಡ ಅಲ್ಲಿ ನಿಲ್ಲಿಸಿರುತ್ತಾರೆ. ಯಾರೂ ಕೂಡ ಸಾರ್ವಜನಿಕ ರಸ್ತೆಯಲ್ಲಿ ತಮ್ಮ ಮಳಿಗೆಗಳಿಗೆ ಬರುವ ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಆಗುವುದಿಲ್ಲ. ಅದು ನಿಯಮಬಾಹಿರವಾಗಿರುವ ವಿಷಯ. ಅಲ್ಲಿ ತಮ್ಮ ಅಂಗಡಿಯ ಗ್ರಾಹಕರ ವಾಹನಗಳನ್ನು ಬಿಟ್ಟು ಬೇರೆ ಯಾರಾದರೂ ತಮ್ಮ ವಾಹನಗಳನ್ನು ನಿಲ್ಲಿಸಿದರೆ ಅಂಗಡಿಯವರಿಗೆ ಅಸಾಧ್ಯವಾದ ಕೋಪ ಬರುತ್ತದೆ. ಅಲ್ಲಿಂದ ಗಾಡಿಯನ್ನು ತೆಗೆಯಲು ಹೇಳಲಾಗುತ್ತದೆ. ಅನೇಕ ಬಾರಿ ಸಣ್ಣಪುಟ್ಟ ಮಾತಿನ ಚಕಮಕಿಗಳು ಆಗುತ್ತದೆ. ಇಲ್ಲಿ ಅಂಗಡಿಯವರು ತಮ್ಮ ಅಂಗಡಿಯ ಎದುರಿನ ರಸ್ತೆಬದಿ ಜಾಗ ಕೂಡ ತಮ್ಮದೇ ಎಂದು ಅಂದುಕೊಂಡಿರುವುದರಿಂದ ಈ ಎಲ್ಲಾ ಸಮಸ್ಯೆಗಳು ಉದ್ಭವವಾಗಿರುವುದು. ಈ ವಿಷಯ ದಲಿತ ಕುಂದುಕೊರತೆಗಳ ಸಭೆಯಲ್ಲಿ ಕೂಡ ಮೊನ್ನೆ ಬಂದಿದೆ. ಆಗ ಸಂಚಾರಿ ಟ್ರಾಫಿಕ್ ಡಿಸಿಪಿ ಕೂಡ ತಮಗೂ ಇಂತಹ ಅನುಭವವಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಪೊಲೀಸರು ಒಂದು ವೇಳೆ ಸಿವಿಲ್ ಡ್ರೆಸ್ಸಿನಲ್ಲಿ ಬಂದು ತಮ್ಮ ಖಾಸಗಿ ವಾಹನಗಳನ್ನು ಯಾವುದಾದರೂ ಅಂಗಡಿಯ ಎದುರು ಇಟ್ಟು ಹೋದರೆ ಅವರಿಗೂ ಕೆಟ್ಟ ಅನುಭವವಾಗುತ್ತದೆ. ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ದಲಿತ ಮುಖಂಡರು ಪೊಲೀಸ್ ಅಧಿಕಾರಿಗಳಿಗೆ ಸಭೆಯಲ್ಲಿ ಒತ್ತಾಯಿಸಿದ್ದಾರೆ. ಬಹುಶ: ಇದು ಮುಂದಿನ ದಿನಗಳಲ್ಲಿ ಜಾರಿಗೆ ಬಂದರೂ ಬರಬಹುದು. ಯಾಕೆಂದರೆ ಆ ಅಧಿಕಾರ ಪೊಲೀಸರಿಗೆ ಇದೆ. ಯಾವುದೇ ರಸ್ತೆಬದಿಯಲ್ಲಿ ತಾವು ಗ್ರಾಹಕರು ಎಂದು ವಾಹನಗಳನ್ನು ಇಟ್ಟು ಹೋಗುವವರು ಅಥವಾ ಫುಟ್ ಪಾತ್ ಮೇಲೆ ತಮ್ಮ ಅಂಗಡಿಯ ವಸ್ತುಗಳನ್ನು ಹರಡಿಸಿಕೊಂಡು ಇರುವವರಿಂದ ಅಲ್ಲಿ ಪಾದಚಾರಿಗಳಿಗೆ ನಡೆದಾಡಲು ತೊಂದರೆಯಾಗುತ್ತದೆ ಎಂದು ಪೊಲೀಸರಿಗೆ ಅನಿಸಿದರೆ ಅವರು ತಕ್ಷಣ ಅವುಗಳನ್ನು ತೆರವುಗೊಳಿಸಲು ಸೂಚಿಸಬಹುದು.
ನಾನೀಗ ಹೇಳುವುದೇನೆಂದರೆ ತಮ್ಮ ಸಾಮಾನು, ಸರಂಜಾಮುಗಳನ್ನು ಕೂಡ ಫುಟ್ ಪಾತ್ ಮೇಲೆ ಇಟ್ಟು ತಮ್ಮ ಹಕ್ಕುಸ್ವಾಮ್ಯವನ್ನು ಸಾಬೀತುಪಡಿಸಲು ಹೋಗುವ ಬೀದಿಬದಿಅಂಗಡಿಯವರಿಗೂ ಈ ವಿಷಯದಲ್ಲಿ ಕಟ್ಟುನಿಟ್ಟಿನ ಸೂಚನೆಗಳನ್ನು ಪೊಲೀಸರು ನೀಡಬೇಕು. ಆದರೆ ನಮ್ಮಲ್ಲಿ ಹಾಗೆ ಆಗುವುದಿಲ್ಲ. ನಮ್ಮಲ್ಲಿ ರೇಡ್ ಆಗುವುದು ಮೊದಲೇ ಗೊತ್ತಾಗುತ್ತದೆ ಮತ್ತು ಟೈಗರ್ ಕಾರ್ಯಾಚರಣೆಯವರು ಮತ್ತೆ ಬರುತ್ತಾರೆ. ಹಿಂದಿನ ಸಿನೆಮಾಗಳಲ್ಲಿ ಇರುವಂತೆ ಪೊಲೀಸರು ಕೊನೆಯಲ್ಲಿ ಬರುತ್ತಾರೆ.
ಇನ್ನು ಮಂಗಳೂರು ನಗರದಲ್ಲಿ ಯಾವೆಲ್ಲಾ ವಾಣಿಜ್ಯ ಕಟ್ಟಡಗಳಿಗೆ ಪಾರ್ಕಿಂಗ್ ಇಲ್ಲ ಎನ್ನುವ ಪಟ್ಟಿಯನ್ನು ಪಾಲಿಕೆಯಲ್ಲಿ ಸಿದ್ಧಪಡಿಸಲಾಗಿದೆ. ಅದರ ಒಂದು ಪ್ರತಿ ಮಂಗಳೂರು ಪೊಲೀಸ್ ಕಮೀಷನರೇಟ್ ಕಚೇರಿಯಲ್ಲಿಯೂ ಇದೆ. ಈಗ ಮೊದಲಿಗೆ ಅಂತಹ ಎಲ್ಲಾ ಮಳಿಗೆಗಳ ಮಾಲೀಕರಿಗೆ ಪೊಲೀಸ್ ಇಲಾಖೆ ಮತ್ತು ಪಾಲಿಕೆ ಕಡೆಯಿಂದ ನೋಟಿಸು ನೀಡಬೇಕು. ಅದರ ನಂತರ ಪಾರ್ಕಿಂಗ್ ಜಾಗವನ್ನು ಆಯಾ ಕಟ್ಟಡದವರು ಗುರುತಿಸದಿದ್ದರೆ ನೇರವಾಗಿ ಪೊಲೀಸ್ ಇಲಾಖೆ ಕಾರ್ಯಾಚರಣೆಗೆ ಇಳಿಯಬೇಕು. ಯಾಕೆಂದರೆ ಒಂದು ಕಟ್ಟಡ ಕಟ್ಟುವಾಗ ಅಲ್ಲಿ ಬರುವ ಗ್ರಾಹಕರ ಪಾರ್ಕಿಂಗಾಗಿ ಕಟ್ಟಡದ ಉದ್ದಗಲಕ್ಕೆ ಅನುಗುಣವಾಗಿ ಪಾರ್ಕಿಂಗ್ ಜಾಗವನ್ನು ನಿಗದಿಪಡಿಸಲಾಗುತ್ತದೆ. ಕಟ್ಟಡ ಕಟ್ಟಲು ಅನುಮತಿ ಪಡೆಯುವ ಸಂದರ್ಭದಲ್ಲಿ ಗುತ್ತಿಗೆದಾರರು ದಾಖಲೆ ಸಲ್ಲಿಸುವಾಗ ಪಾರ್ಕಿಂಗ್ ಜಾಗವನ್ನು ನಕ್ಷೆಯಲ್ಲಿ ತೋರಿಸಿರುತ್ತಾರೆ. ಆದರೆ ಆ ಕಟ್ಟಡ ಕಟ್ಟಿ ಮುಗಿಸಿ ಅಲ್ಲಿ ಅಂಗಡಿಗಳು ತೆರೆದ ನಂತರ ಪಾರ್ಕಿಂಗ್ ಜಾಗದಲ್ಲಿಯೂ ಕೆಲವು ಅಂಗಡಿಗಳು ವ್ಯಾಪಾರ ಆರಂಭಿಸಿರುತ್ತವೆ. ಹಾಗಾದರೆ ನಕ್ಷೆಯಲ್ಲಿ ಇರುವುದಕ್ಕೂ ವಾಸ್ತವಕ್ಕೂ ಯಾಕೆ ಅಷ್ಟು ವ್ಯತ್ಯಾಸ. ಅದಕ್ಕೆ ಮುಖ್ಯ ಕಾರಣ ಪಾಲಿಕೆಯ ಅಧಿಕಾರಿಗಳ ಮತ್ತು ಕಟ್ಟಡಗಳ ಮಾಲೀಕರ ಅಪವಿತ್ರ ಮೈತ್ರಿ. ಈಗ ಪೊಲೀಸ್ ಇಲಾಖೆ ತನ್ನ ಅಧಿಕಾರ ವ್ಯಾಪ್ತಿಯನ್ನು ಬಳಸಿಕೊಂಡು ಪಾರ್ಕಿಂಗ್ ಎಂದು ನಮೂದಿಸಿದ ಜಾಗದಲ್ಲಿಯೇ ಆಯಾ ಅಂಗಡಿಯವರು ವಾಹನ ನಿಲ್ಲಿಸಲು ಕ್ರಮ ತೆಗೆದುಕೊಳ್ಳಬೇಕು. ಹಾಗೆ ಆಗುತ್ತಾ ಅಥವಾ ಎಸ್ ಸಿ, ಎಸ್ ಟಿ ಸಭೆಯಲ್ಲಿ ಕೇವಲ ಕಾಟಾಚಾರದ ಚರ್ಚೆ ಆಗುತ್ತಾ ಎನ್ನುವುದು ಪೊಲೀಸ್ ಇಲಾಖೆಗೆ ಬಿಟ್ಟಿದ್ದು!
Leave A Reply