ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಂದಾಜು ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ ರಸ್ತೆ ಅಗಲ ಮಾಡಿರುವುದು ಯಾಕೆ? ಎನ್ನುವ ಪ್ರಶ್ನೆಯನ್ನು ಆರನೇ ತರಗತಿಯಿಂದ ಐಎಎಸ್ ಪರೀಕ್ಷೆಯ ತನಕ ಯಾರಿಗೂ ಕೇಳಿದ್ರು ಅದಕ್ಕೆ ಫಿಕ್ಸ್ ಒಂದೇ ಉತ್ತರ ಏನೆಂದರೆ ವಾಹನ ಪಾರ್ಕಿಂಗ್ ಗಾಗಿ. ಮಂಗಳೂರಿನಲ್ಲಿ ಬಹುತೇಕ ಕಟ್ಟಡಗಳಿಗೆ ನಿಯಮ ಪ್ರಕಾರ ಎಷ್ಟು ಪಾರ್ಕಿಂಗ್ ಗಾಗಿ ಜಾಗ ಇರಬೇಕೋ ಅಷ್ಟು ಇಲ್ಲ. ಆದ್ದರಿಂದ ಅಲ್ಲಿಗೆ ಬರುವ ಗ್ರಾಹಕರ ಅಥವಾ ಸಿಬ್ಬಂದಿಗಳ ವಾಹನಗಳಿಗೆ ಎಲ್ಲಿ ಪಾರ್ಕಿಂಗ್ ಎನ್ನುವ ಪ್ರಶ್ನೆ ಬೃಹದಾಕಾರವಾಗಿ ಕಾಣುತ್ತಿತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದೆ. ರಸ್ತೆಯಲ್ಲಿಯೇ ನಿಲ್ಲಿಸಿಬಿಡಿ. ಏನು ಟೆನ್ಷನ್ ಮಾಡಬೇಡಿ. ರಸ್ತೆಬದಿ ಅಥವಾ ಫುಟ್ ಪಾತ್ ಮೇಲೆ ಬೇಕಾದರೆ ನಿಲ್ಲಿಸಿ ಹೋಗಿ. ನಿಮ್ಮ ವಾಹನವನ್ನು ಪೊಲೀಸರು ಕಣ್ಣೆತ್ತಿಯೂ ನೋಡುವುದಿಲ್ಲ. ಯಾಕೆಂದರೆ ಅವರು ನೋ ಎಂಟ್ರಿ ಅಥವಾ ಹೆಲ್ಮೆಟ್ ಧರಿಸದವರ ಫೋಟೋ ತೆಗೆಯುವುದರಲ್ಲಿ ಬ್ಯುಸಿ ಇದ್ದಾರೆ. ಶಾಲೆಗಳು ಇರುವ ರಸ್ತೆಯಲ್ಲಿ ಯಾವುದೋ ಹೋಟೇಲಿನವರು ತಮ್ಮ ಗ್ರಾಹಕರ ವಾಹನಗಳನ್ನು ತಂದು ನಿಲ್ಲಿಸಿ ಓಡಿ ಹೋದರೂ ಅದರಿಂದ ಪೊಲೀಸರು ತಲೆಕೆಡಿಸಿಕೊಳ್ಳುವುದಿಲ್ಲ. ಯಾಕೆಂದರೆ ಶ್ರೀಮಂತ ಹೋಟೇಲಿನವರನ್ನು ಏನಾದರೂ ಮಾಡಲು ಸಾಧ್ಯವಿದೆಯೇ? ಇನ್ನು ಹೆಲ್ಮೆಟ್ ಹಾಕದ ಬಡಪಾಯಿ ಸ್ಕೂಟರ್ ಸವಾರರನ್ನಾದರೂ ನಿಲ್ಲಿಸಿ ಜೋರು ಮಾಡಿ ಫೈನ್ ಕಟ್ಟಿಸಿಕೊಳ್ಳಬಹುದು. ನಾನು ಹೆಲ್ಮೆಟ್ ಹಾಕದಿದ್ದರೆ ಪರವಾಗಿಲ್ಲ ಎಂದು ಹೇಳುತ್ತಿಲ್ಲ. ಹೆಲ್ಮೆಟ್ ಹಾಕುವುದು ನಮ್ಮ ಸುರಕ್ಷತೆಗೆ ಅನಿವಾರ್ಯ. ಆದರೆ ಟ್ರಾಫಿಕ್ ಪೊಲೀಸರಿಗೆ ಅದೊಂದೇ ಕೆಲಸ ಎಂದು ಅವರು ಅಂದುಕೊಳ್ಳಬಾರದು ಎನ್ನುವುದು ನನ್ನ ಅಭಿಪ್ರಾಯ.
ಈಗ ಡೊಂಗರಕೇರಿ ಕೆನರಾ ಹೈಸ್ಕೂಲ್ ಇರುವ ಅಮೆಂಬಳ ಸುಬ್ರಾಯ್ ಪೈ ರಸ್ತೆಯಲ್ಲಿ ಹೋಟೇಲೊಂದರ ವಾಹನಗಳನ್ನು ಯಾವಾಗ ನೋಡಿದರೂ ರಸ್ತೆಬದಿ ಪಾರ್ಕ್ ಮಾಡಿ ನಿಲ್ಲಿಸಲಾಗಿರುತ್ತದೆ. ಅದು ತಪ್ಪೆಂದು ಹೋಟೇಲಿನವರಿಗೂ ಗೊತ್ತು. ಪಾರ್ಕ್ ಮಾಡಿ ಹೋದರೆ ಏನಾಗುತ್ತದೆ ಎಂದು ಯಾರಿಗಾದರೂ ಅನಿಸಬಹುದು. ಆದರೆ ಶಾಲೆ ಬಿಡುವಾಗ ಮತ್ತು ಆರಂಭವಾಗುವಾಗ ಮಕ್ಕಳಿಗೆ ಎಷ್ಟು ರಿಸ್ಕ್ ಎನ್ನುವುದು ಯಾರಿಗೂ ಗೊತ್ತಿಲ್ಲ. ಅಲ್ಲಿ ಫುಟ್ ಪಾತ್ ಮೇಲೆ ವಾಹನಗಳು ನಿಲ್ಲಿಸಿದರೆ ಮಕ್ಕಳು ರಸ್ತೆಯಲ್ಲಿಯೇ ನಡೆದು ಶಾಲೆಗೆ ಹೋಗಬೇಕಾಗುತ್ತದೆ. ಮಕ್ಕಳು ನಡೆದು ಹೋಗುವಾಗ ಹಿಂದೆಯಿಂದ ಯಾವುದಾದರೂ ಕಾರೋ, ಬೈಕೋ ಬಂದು ಬಡಿದರೆ ಅದಕ್ಕೆ ಯಾರು ಹೊಣೆ. ಮಕ್ಕಳು ಆಸ್ಪತ್ರೆಗೆ. ಯಾಕೆಂದರೆ ಮಕ್ಕಳಿಗೆ ಸರಿಯಾಗಿ ನಡೆದುಕೊಂಡು ಹೋಗಲು ಅಲ್ಲಿ ವ್ಯವಸ್ಥೆ ಇಲ್ಲ. ಇದ್ದ ವ್ಯವಸ್ಥೆಯಲ್ಲಿ ಕಾರುಗಳು ಸಾಲುಗಟ್ಟಿ ನಿಂತಿವೆ. ಇದು ಕೇವಲ ಒಂದು ರಸ್ತೆಯ ಕಥೆ ಅಲ್ಲ.
ಪಿವಿಎಸ್ ಸರ್ಕಲ್, ಬಂಟ್ಸ್ ಹಾಸ್ಟೆಲ್ ಸರ್ಕಲ್, ಅಲೋಶಿಯಸ್ ಶಾಲೆಯ ಬಳಿ, ಬಂಟ್ಸ್ ಹಾಸ್ಟೆಲ್ – ಮಲ್ಲಿಕಟ್ಟೆ ರಸ್ತೆ, ಚಿನ್ಮಯ್ ಶಾಲೆಯ ಬಳಿ, ಮಾನಸ ಟವರ್ಸ್ ಹತ್ತಿರ, ಓಶಿಯನ್ ಪರ್ಲ್ ಹೋಟೇಲಿನ ಎದುರು ಹೀಗೆ ಅನೇಕ ಕಡೆ ವಾಹನಗಳನ್ನು ಪಾರ್ಕ್ ಮಾಡಿ ಹೋಗಲಾಗುತ್ತಿದೆ. ಹೀಗೆ ಪಾರ್ಕಿಂಗ್ ಮಾಡಿ ಹೋಗುವವರಿಗೆ ನೋಟಿಸು ಕೊಟ್ಟು ಫೈನ್ ಕಟ್ಟಿಸಿಕೊಳ್ಳಬೇಕಾದದ್ದು ಟ್ರಾಫಿಕ್ ಪೊಲೀಸರ ಕರ್ತವ್ಯ. ಆದರೆ ಅವರು ಅದನ್ನು ಮಾಡುವುದಿಲ್ಲ. ಅಪ್ಪಿ ತಪ್ಪಿ ನೋಟಿಸು ಕೊಟ್ಟರೂ ಅದರಿಂದ ಆಗಿರುವುದು ಏನೂ ಇಲ್ಲ. ಅದರ ಬದಲು ಏನಾದರೂ ಪ್ರಯೋಜನವಾಗುವಂತದ್ದು ಟ್ರಾಫಿಕ್ ಪೊಲೀಸರು ಮಾಡಬೇಕು. ಅದೇನೆಂದರೆ ಅನಧಿಕೃತವಾಗಿ ಪಾರ್ಕಿಂಗ್ ಮಾಡಿದ ವಾಹನಗಳ ಚಕ್ರಕ್ಕೆ ಲಾಕ್ ಮಾಡುವುದು. ಅದರಿಂದ ಏನಾಗುತ್ತೆ? ಚಾಲಕ ಇಟ್ಟು ಹೋಗುತ್ತಾನೆ. ನಂತರ ತೆಗೆದುಕೊಂಡು ಹೋಗಲು ಓಡಿ ಬರುತ್ತಾನೆ. ಅಲ್ಲಿ ಬರುವಾಗ ಲಾಕ್ ಆಗಿರುತ್ತದೆ. ಅದರ ನಂತರ ಇವರು ಪೊಲೀಸರಿಗೆ ಫೋನ್ ಮಾಡಿ ಅವರು ಬಂದು ಲಾಕ್ ತೆಗೆದುಕೊಡುವಾಗ ಅರ್ಧ, ಮುಕ್ಕಾಲು ಗಂಟೆ ತಗಲುತ್ತದೆ. ಆಗ ಏನಾಗುತ್ತೆ. ಹೋಟೇಲಿಗೆ ಬಂದ ಗ್ರಾಹಕ ಕೋಪಗೊಳ್ಳುತ್ತಾನೆ. ನಂತರ ಅವನು ಹೋಟೇಲಿಗೆ ಬರುವುದಿಲ್ಲ. ಅದರಿಂದ ಹೋಟೇಲಿಗೆ ನಷ್ಟವಾಗುತ್ತದೆ. ಹೋಟೇಲಿನವರಿಗೆ ಬುದ್ಧಿ ಬರುತ್ತದೆ. ಈಗ ವಾಹನಗಳನ್ನು ಟೋ ಮಾಡುವುದು ನಿಲ್ಲಿಸಿದ್ದರೂ ಅದನ್ನು ಲಾಕ್ ಮಾಡುವುದು ನಿಲ್ಲಿಸಬೇಕಾಗಿಲ್ಲ.
ಈಗ ಎಲ್ಲಿಯ ತನಕ ಪರಿಸ್ಥಿತಿ ಇದೆ ಎಂದರೆ ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ಕಚೇರಿಯ ಹೊರಗೆ ನೋ ಪಾರ್ಕಿಂಗ್ ಎಂದು ಬೋರ್ಡ್ ಇರುವ ಜಾಗದಲ್ಲಿಯೇ ವಾಹನಗಳನ್ನು ಪಾರ್ಕ್ ಮಾಡಿ ಹೋಗಿರುತ್ತಾರೆ. ಅಲ್ಲಿಯೇ ಒಬ್ಬರು ಪೊಲೀಸರು ನಿಂತಿರುತ್ತಾರೆ. ಅವರು ಆ ವಾಹನಗಳ ಬಗ್ಗೆ ಏನೂ ಕ್ರಮ ಕೈಗೊಳ್ಳುವುದಿಲ್ಲ. ಡಿಸಿ ಆಫೀಸಿನ ಕಥೆಯೇ ಹೀಗಾದರೆ ಉಳಿದ ರಸ್ತೆಗಳ ಕಥೆ ಏನು? ಇದನ್ನು ಮೇಯರ್ ಹಾಗೂ ಶಾಸಕರು ಪರಿಶೀಲಿಸಿ ಯೋಗ್ಯ ಕ್ರಮ ಕೈಗೊಳ್ಳಬೇಕಾಗಿ ವಿನಂತಿ. ಇಲ್ಲದಿದ್ದರೆ ಸರಕಾರ ಸಾವಿರ ಕೋಟಿ ರೂ ಖರ್ಚು ಮಾಡಿ 75% ಪಾರ್ಕಿಂಗ್, 25% ಬೀದಿಬದಿ ವ್ಯಾಪಾರಕ್ಕೆ ಹೋದರೆ ಪ್ರಯೋಜನ ಏನು?
Leave A Reply