ಥ್ಯಾಂಕ್ಯೂ ಅಲೋಕ್ ಕುಮಾರ್!
ಮಂಗಳೂರಿನಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡಿದ್ದ ನೂರರಷ್ಟು ಇಸ್ಪೀಟ್, ಸ್ಕಿಲ್ ಗೇಮ್ ಕ್ಲಬ್ಬುಗಳು ಶಟರ್ ಎಳೆದಿವೆ. ಎಡಿಜಿಪಿ ಅಲೋಕ್ ಕುಮಾರ್ ಅವರ ಜೊತೆ ಸಾರ್ವಜನಿಕರ ಕುಂದುಕೊರತೆಗಳ ಸಭೆಯ ನಂತರದ ಮೊದಲ ಪರಿಣಾಮ. ಪೊಲೀಸರು ರೇಡ್ ಮಾಡಿ ಇವುಗಳನ್ನು ಬಂದ್ ಮಾಡುವುದು ಬೇರೆ. ಉನ್ನತ ಪೊಲೀಸ್ ಅಧಿಕಾರಿಗಳು ತಮ್ಮ ಕಚೇರಿಯ ಕ್ಯಾಬಿನ್ ನಲ್ಲಿಯೇ ಕುಳಿತು ಒಂದು ಗುಟುರು ಹಾಕಿದ ಕೂಡಲೇ ಬಂದ್ ಆಗುವುದು ಬೇರೆ. ಇಲ್ಲಿ ರೇಡ್ ಆಗದೇ ಬಂದ್ ಆಗಿವೆ ಎಂದರೆ ಅರ್ಥ ಮಾಡಿಕೊಳ್ಳಿ. ಪೊಲೀಸ್ ಅಧಿಕಾರಿಗಳ ಕ್ಯಾಪೆಸಿಟಿ ಹೇಗಿದೆ ಎಂದು ತಿಳಿಯುತ್ತದೆ. ಇದರ ಅರ್ಥ ಏನು? ಪೊಲೀಸ್ ಅಧಿಕಾರಿಗಳು ಮನಸ್ಸು ಮಾಡಿದರೆ ಏನೂ ಆಗುತ್ತದೆ ಎನ್ನುವುದಕ್ಕೆ ಇದೇ ಉದಾಹರಣೆ. ಪೊಲೀಸ್ ಅಧಿಕಾರಿಗಳ ಇಶಾರೆ ಇಲ್ಲದಿದ್ದರೆ ಇಂತಹ ಕ್ಲಬ್ಬುಗಳ ಮಾಲೀಕರು ತಮ್ಮ ಅಡ್ಡೆಗಳ ದಿಕ್ಕಿಗೆ ತಲೆ ಹಾಕಿ ಮಲಗಲು ಕೂಡ ಹೆದರುತ್ತಾರೆ. ಅದೇ ಪೊಲೀಸ್ ಅಧಿಕಾರಿಗಳು ಸಂಥಿಂಗ್ ತೆಗೆದುಕೊಂಡರೆ ಪೊಲೀಸ್ ಠಾಣೆಯ ಎದುರೇ ಅಡ್ಡೆ ತೆಗೆಯಲು ಕೆಲವರು ಹೆದರುವುದಿಲ್ಲ. ಇದರಿಂದಲೇ ಗೊತ್ತಾಗುವುದು ಏನೆಂದರೆ ಪೊಲೀಸ್ ಇಲಾಖೆ ಮನಸ್ಸು ಮಾಡಿದರೆ ತಮ್ಮ ಏರಿಯಾದಲ್ಲಿ ಇಂತಹ ಅನೈತಿಕ ಕ್ಲಬ್ಬುಗಳನ್ನು ತೆರೆಯಲೂಬಹುದು, ಮುಚ್ಚಲೂಬಹುದು.
ಅಷ್ಟಕ್ಕೂ ಪೊಲೀಸರಿಗೆ ಗೊತ್ತಿಲ್ಲದ್ದು ಏನಿದೆ? ತಮ್ಮ ಏರಿಯಾದಲ್ಲಿ ಕಳ್ಳತನ ಆದರೆ ಬಹುತೇಕ ಸಂದರ್ಭದಲ್ಲಿ ಮೋಡಸ್ ಅಪರೆಂಡಿ ಶೈಲಿ ನೋಡಿ ಯಾರು ಕಳ್ಳ ಎಂದು ಹೇಳಬಲ್ಲರು. ಡ್ರಗ್ಸ್ ಯಾರು, ಯಾರಿಗೆ, ಎಷ್ಟು ಪೂರೈಕೆ ಮಾಡುತ್ತಾರೆ ಎನ್ನುವ ಅಂದಾಜು ಇವರ ಏರಿಯಾದಲ್ಲಿ ಇವರಿಗೆ ಇದ್ದೇ ಇದೆ. ಮರಳು ಮಾಫಿಯಾದವರು ಯಾರು ಎಂದು ಮೊಬೈಲಿನಲ್ಲಿ ಎಂ ಎಂದು ಹಾಕಿದ ಕೂಡಲೇ ಬರುವ ಲಿಸ್ಟ್ ನಂತೆ ಇವರಿಗೆ ಫೀಡ್ ಆಗಿರುತ್ತದೆ. ವೇಶ್ಯಾವಾಟಿಕೆಯ ಕಿಂಗ್ ಪಿನ್ ಗಳ ಹೆಸರು ಇವರಿಗೆ ಸಿನೆಮಾ ಹೀರೋಗಳ ಹೆಸರಿಗಿಂತ ಹೆಚ್ಚು ನೆನಪಿನಲ್ಲಿರುತ್ತದೆ. ಜುಗಾರಿ ಅಡ್ಡೆಗಳ ಬಾಸ್ ಇವರ ಕಸಿನ್ ಗಳಿಗಿಂತ ಇವರಿಗೆ ಹೆಚ್ಚು ಆಪ್ತರು. ಇಷ್ಟೆಲ್ಲಾ ಇರುವಾಗ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಕಳ್ಳರಿಂದ ಹಿಡಿದು ಜುಗಾರಿ ಅಡ್ಡೆಗಳ ಮಾಲೀಕರ ತನಕ ಇವರಿಗೆ ಯಾರೂ ಗೊತ್ತಿಲ್ಲ ಎಂದಲ್ಲ. ಕೆಲವರ ಮುಖ ನೋಡಿ ಇವರು ಇಂತವರು ಎಂದು ಜ್ಯೋತಿಷಿಗಳಿಗಿಂತ ಹೆಚ್ಚು ನಿಖರವಾಗಿ ಒಬ್ಬ ಹಿರಿಯ ಪೊಲೀಸ್ ಅಧಿಕಾರಿ ಹೇಳಬಲ್ಲರು. ಆದ್ದರಿಂದ ನಾಯಿಕೊಡೆಗಳಂತೆ ಇಸ್ಪೀಟ್ ಕ್ಲಬ್ಬುಗಳು ನಡೆಯುತ್ತಿವೆ ಎಂದು ಯಾರಾದರೂ ಸಾರ್ವಜನಿಕರು ದೂರು ಕೊಡುವ ತನಕ ಕಾಯಲು ಪೊಲೀಸ್ ಅಧಿಕಾರಿಗಳು ಹೋಗಬಾರದು. ಇರಲಿ, ಈಗ ಶುಭಂ ಆಗಿದೆ. ಆದರೆ ಇದು ಕೆಲವು ದಿನಗಳ ನಂತರ ಮತ್ತೆ ಶುರುವಾಗದಂತೆ ನೋಡುವ ಹೊಣೆಗಾರಿಕೆಯೂ ಪೊಲೀಸ್ ಅಧಿಕಾರಿಗಳ ಮೇಲಿದೆ. ಒಬ್ಬ ಕೂಲಿ ಕಾರ್ಮಿಕ ಬೆಳಗ್ಗಿನಿಂದ ಸಂಜೆಯ ತನಕ ಕಷ್ಟಪಟ್ಟು ದುಡಿದ ಹಣವನ್ನು ಕ್ಲಬ್ಬುಗಳಲ್ಲಿ ಪೋಲು ಮಾಡಿ ಮನೆಯಲ್ಲಿ ಹೆಂಡತಿ, ಮಕ್ಕಳ ನೋವಿಗೆ ಕಾರಣರಾದರೆ ಆ ಶಾಪ ಆ ಎಂಜಿಲು ಹಣವನ್ನು ಪಡೆದುಕೊಂಡ ಎಲ್ಲರಿಗೂ ತಟ್ಟುತ್ತದೆ. ಅದೇ ರೀತಿಯಲ್ಲಿ ಡ್ರಗ್ಸ್ ಯಾರೋ ಖರೀದಿಸಿ ಯಾರೋ ಹಾಳಾಗಲಿ, ನಮಗೆ ಮಾಮೂಲಿ ಸಿಕ್ಕಿದರೆ ಸಾಕು ಎಂದು ಪೊಲೀಸ್ ಅಧಿಕಾರಿ ಅಂದುಕೊಂಡರೆ, ಅದಕ್ಕೆ ಕೈ ಚಾಚಿದರೆ ಆ ಕುಟುಂಬದ ನಿಟ್ಟುಸಿರಿನ ನೋವು ಈ ಅಧಿಕಾರಿಯ ಕುಟುಂಬಕ್ಕೂ ತಟ್ಟುತ್ತದೆ. ನಮಗೆ ಮೇಲಿನವರ ಒತ್ತಡ ಎಂದು ಹೇಳಿ ಹಾಗೆ ಡ್ರಗ್ಸ್, ಜುಗಾರಿ, ಇಸ್ಪೀಟು ಅಡ್ಡೆಗಳನ್ನು ಬಿಟ್ಟರೆ ಇದರಿಂದ ಸಮಾಜದ ಸ್ವಾಸ್ಥ್ಯ ಕೆಟ್ಟು ನಿಮ್ಮ ಮನಶಾಂತಿ ಕೂಡ ಹಾಳಾಗುತ್ತದೆ. ಇದನ್ನು ಮೇಲಿನಿಂದ ಕೆಳಗಿನ ತನಕ ಎಲ್ಲಾ ಪೊಲೀಸ್ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು.
ಮರಳು ಮಾಫಿಯಾದ ನಡು ಮುರಿಯಲು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮರಳು ನೈಸರ್ಗಿಕವಾಗಿ ಸಿಗುತ್ತದೆ ಎನ್ನುವುದು ನಿಜ. ಆದರೆ ಅದಕ್ಕಾಗಿ ಸರಕಾರ ಮರಳು ನೀತಿಯನ್ನು ಜಾರಿಗೆ ತಂದಿದೆ. ಗಣಿ ಇಲಾಖೆಗೆ ಜುಜುಬಿ ರಾಯಲ್ಟಿ ಕಟ್ಟಿ ಈ ಮಾಫಿಯಾದವರು ಎಷ್ಟು ಬೇಕೋ ಅಷ್ಟು ಮರಳನ್ನು ತಮ್ಮ ಪಿತ್ರಾರ್ಜಿತ ಆಸ್ತಿಯಂತೆ ಎತ್ತಿಕೊಂಡು ಹೋದರೆ ಅದನ್ನು ತಡೆಯಲೇಬೇಕು. ಒಬ್ಬ ಮರಳು ಸಾಗಾಟದಾರನಿಗೆ ಇಂತಿಷ್ಟೇ ಪರ್ಮಿಟ್ ನೀಡಲಾಗಿರುತ್ತದೆ. ಅದನ್ನು ಮೀರಿ ಆತ 20-25 ಲೋಡ್ ಜಾಸ್ತಿ ತೆಗೆಯುತ್ತಾ ಹೋದರೆ ಪೊಲೀಸ್ ಇಲಾಖೆ ಗಾಂಧೀಜಿಯವರ ಮೂರು ಕೋತಿಗಳಂತೆ ಆಡಿದರೆ ಏನು ಕಥೆ? ಆದ್ದರಿಂದ ಒಂದು ಸ್ವಸ್ಥ ಸಮಾಜ, ನೈತಿಕ ವಾತಾವರಣ ಕಟ್ಟುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ದೊಡ್ಡದಿದೆ. ಅದನ್ನು ಅವರು ಮಾಡಲಿ ಎಂಬುದು ನಮ್ಮ ಹಾರೈಕೆ. ಎಡಿಜಿಪಿ ಅಲೋಕ್ ಕುಮಾರ್ ಅವರು ಈ ನಿಟ್ಟಿನಲ್ಲಿ ಬಹಳ ಉತ್ತಮ ಹೆಜ್ಜೆ ಇಟ್ಟಿದ್ದಾರೆ. ಅವರಿಗೆ ಒಂದೇ ಶಬ್ದದಲ್ಲಿ ಧನ್ಯವಾದ ಸಲ್ಲಿಸೋಣ.. ಥ್ಯಾಂಕ್ಯೂ!
Leave A Reply