ಕರಾವಳಿಯ ಮಠಾಧೀಶರು ಮೀಸಲಾತಿ ಕೇಳಿಲ್ಲದಿರುವುದೇ ನಡ್ಡಾ ಆಶ್ಚರ್ಯಕ್ಕೆ ಕಾರಣ!!
ಸಾಮಾನ್ಯವಾಗಿ ಮಠಾಧೀಶರುಗಳು ಸೇರಿದ್ದಾರೆ ಎಂದರೆ ತಮ್ಮ ಸಮುದಾಯದವರಿಗೆ ಮೀಸಲಾತಿ ಕೊಡಿ ಎಂದೋ, ಹೆಚ್ಚು ಮಾಡಿ ಎಂದೋ ಏನಾದರೂ ಒಂದು ಬೇಡಿಕೆ ಇಟ್ಟು ತಮ್ಮನ್ನು ಅಡಕತ್ತರಿಗೆ ಸಿಲುಕಿಸುವ ಪ್ಲಾನ್ ಮಾಡಿರುತ್ತಾರೆ ಎಂದೇ ಇವತ್ತಿನ ಆಡಳಿತ ಪಕ್ಷದ ಮುಖಂಡರು ಅಂದುಕೊಂಡಿರುತ್ತಾರೆ. ಜೆ.ಪಿ. ನಡ್ಡಾ ಅವರು ಉಡುಪಿ ಪ್ರವಾಸದಲ್ಲಿ ಇರುವಾಗ ಸಣ್ಣ ಗ್ಯಾಪ್ ನಲ್ಲಿ ಪೇಜಾವರ ಈಗಿನ ಶ್ರೀಗಳ ವಿಶೇಷ ಆಸಕ್ತಿಯ ಪರಿಣಾಮದಿಂದ ಒಂದು ಸಮಾಲೋಚನಾ ಸಭೆ ನಡೆಯಿತು. ಪೇಜಾವರ ಶ್ರೀ ವಿಶ್ವೇಶ ತೀರ್ಥ ಪಾದಂಗಳವರು ಇದ್ದಾಗಲೂ ಇಂತಹ ಒಂದು ಸಭೆ ನಡೆದಿತ್ತು. ನಡ್ಡಾ ಇದ್ದ ಜಾಗದಲ್ಲಿ ಆಗ ಅಮಿತ್ ಶಾ ಇದ್ದರು. ನಂತರ ಅವರು ಗೃಹ ಸಚಿವರಾದರು. ಈಗ ಭಾಜಪಾ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ ಅವರು ಬಂದಿರುವಾಗ ಸಹಜವಾಗಿ ಇಂತಹ ಔಪಚಾರಿಕ ಸಭೆಯನ್ನು ಪುತ್ತಿಗೆ ಶ್ರೀಗಳನ್ನು ಒಳಗೊಂಡು ಕರಾವಳಿಯ ಪ್ರಮುಖ ಮಠಾಧೀಶರ ನೇತೃತ್ವದಲ್ಲಿ ಪೇಜಾವರ ಮಠದಲ್ಲಿಯೇ ಏರ್ಪಡಿಸಲಾಗಿತ್ತು. ಆದರೆ ಕರಾವಳಿಯ ಮಠಾಧೀಶರ ವಿಶೇಷತೆ ಏನೆಂದರೆ ಅವರು ಇಡೀ ರಾಷ್ಟ್ರದ ಜನರ ಪರವಾಗಿ ಬೇಡಿಕೆಗಳನ್ನು ಇಡುತ್ತಾರೆಯೇ ವಿನ: ಬೇರೆ ಏಜೆಂಡಾ ಅಲ್ಲಿ ಇರುವುದಿಲ್ಲ. ಆದ್ದರಿಂದ ನಡ್ಡಾ ಸೇರಿಸಿ ಎಲ್ಲಾ ಭಾರತೀಯ ಜನತಾ ಪಾರ್ಟಿಯ ನಾಯಕರು ಅಷ್ಟರಮಟ್ಟಿಗೆ ಸೇಫ್. ಅಂತಹ 10 ನಿರ್ಣಯಗಳನ್ನು ನಡ್ಡಾ ಅವರ ಮುಂದೆ ವಿಸ್ತ್ರೃತವಾಗಿ ಮಂಡಿಸಲಾಯಿತು. ಅದರಲ್ಲಿ ಮೊದಲ ಅಂಶವೇ ಸಮಾನ ನಾಗರಿಕ ನೀತಿ ಸಂಹಿತೆ ಜಾರಿಗೆ ತರಬೇಕು ಎನ್ನುವುದು ಆಗಿತ್ತು. ಈ ಬಗ್ಗೆ ಈಗಾಗಲೇ ಕೇಂದ್ರ ಸರಕಾರ ಒಂದು ರೌಂಡ್ ಯೋಚನೆ ಮಾಡಿ ಒಂದು ರಾಜ್ಯದಲ್ಲಿ ಪ್ರಯೋಗಾತ್ಮಕವಾಗಿ ಜಾರಿಗೆ ತಂದು ಇನ್ನೇನು ಮುಂದಿನ ಲೋಕಸಭಾ ಚುನಾವಣೆಯ ಮೊದಲು ಜಾರಿಗೆ ತರಬಹುದು ಎನ್ನುವ ವಿಶ್ವಾಸವಿದೆ. ಇನ್ನು ಸನಾತನ ಸಂಸ್ಕೃತಿಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ ಎನ್ನುವ ನಿಯಮವನ್ನು ಜಾರಿಗೆ ತರಬೇಕಾಗಿ ಸಂತರು ಹೇಳಿದ್ದಾರೆ. ಅದರ ಅರ್ಥ ಇಷ್ಟೇ, ಭಾರತದಲ್ಲಿ ಸನಾತನ ಸಂಸ್ಕೃತಿಯ ಬೇರುಗಳಿವೆ. ಅದನ್ನು ಕೆಲವರು ಆಗಾಗ ಕೆಣಕುವ ಪ್ರಯತ್ನ ಮಾಡುತ್ತಾರೆ. ಅಂತಹ ಅವಕಾಶ ಅವರಿಗೆ ಸಿಗಬಾರದು ಎಂದಾದರೆ ಸನಾತನ ಸಂಸ್ಕೃತಿಯನ್ನು ಎಲ್ಲಿಯೂ ಪ್ರಶ್ನಿಸಬಾರದು ಎನ್ನುವ ಕಾನೂನು ಜಾರಿಗೆ ಬರಬೇಕಾಗಿದೆ. ನಮ್ಮ ಹಿಂದೂ ಧರ್ಮದ ಪದ್ಧತಿಗಳು ಬೇರೆ, ಸಂಸ್ಕೃತಿ ಬೇರೆ. ಪದ್ಧತಿಗಳನ್ನು ಯಾರಾದರೂ ಪ್ರಶ್ನಿಸಿದರೆ ಅದಕ್ಕೆ ಉತ್ತರ ಕೊಡಬಹುದು. ಆದರೆ ಸಂಸ್ಕೃತಿಯನ್ನೇ ಪ್ರಶ್ನಿಸಿದರೆ, ನಮಗೆ ನೋವಾಗುವುದು ಸಹಜ. ಅದು ಆಗಬಾರದು ಎನ್ನುವುದು ಸ್ವಾಮೀಜಿಗಳ ಇಂಗಿತವಾಗಿದೆ. ಇನ್ನು ಸಹಜವಾಗಿ ಇದ್ದ ಮತ್ತೊಂದು ನಿರೀಕ್ಷೆ ಮಂಗಳೂರು ಅಥವಾ ಆಸುಪಾಸಿನಲ್ಲಿ ರಾಷ್ಟ್ರೀಯ ತನಿಖಾ ದಳದ ಒಂದು ಘಟಕವನ್ನು ಸ್ಥಾಪಿಸುವುದು. ಸದ್ಯದ ಮಟ್ಟಿಗೆ ಇದು ಕರಾವಳಿಗೆ ಅನಿವಾರ್ಯ. ಈ ಕುರಿತು ಈಗಾಗಲೇ ಅನೇಕ ಬಾರಿ ಮನವಿಗಳು ಇಲ್ಲಿಂದ ಬೇರೆ ಬೇರೆ ಮೂಲಗಳ ಮೂಲಕ ಹೋಗಿವೆ. ಆದರೆ ಎನ್ ಐಎ ಸ್ಥಾಪನೆ ಅಷ್ಟು ಸುಲಭಸಾಧ್ಯವಲ್ಲ ಎನ್ನುವ ಅಭಿಪ್ರಾಯ ತಾಂತ್ರಿಕವಾಗಿ ಇದೆ. ಈ ಬಾರಿ ಸ್ವಾಮೀಜಿಗಳಿಂದ ಈ ಮನವಿ ಬಂದಿರುವುದರಿಂದ ಅದು ಎಷ್ಟರಮಟ್ಟಿಗೆ ಅನುಷ್ಟಾನಕ್ಕೆ ಬರುತ್ತದೆ ಎಂದು ನೋಡಬೇಕು.
ಇನ್ನು ಕರಾವಳಿಯಲ್ಲಿ ಹೊಸ ಹೊಸ ಕೈಗಾರಿಕೆಗಳು ಸ್ಥಾಪನೆಯಾಗುವಾಗ ಅದರಲ್ಲಿ ಸ್ಥಳೀಯರಿಗೆ ಉದ್ಯೋಗ ಆದ್ಯತೆಯಾಗಿರಬೇಕು. ಮೇಲಿನಿಂದ ಕೆಳಗಿನವರೆಗೆ ಎಲ್ಲಾ ಸ್ತರದಲ್ಲಿಯೂ ನಮ್ಮವರು ಇರುವಂತಾಗಬೇಕು ಎನ್ನುವುದು ಒಂದು ನಿರ್ಣಯ. ಇದು ಆಗಲೇಬೇಕಾಗಿದೆ. ಇದಕ್ಕೆ ಕೇಂದ್ರ ಮಟ್ಟದಲ್ಲಿ ನಿಯಮಗಳನ್ನು ಮಾಡಬೇಕು. ಆಗ ಇಲ್ಲಿನವರಿಗೆ ಉನ್ನತ ಸ್ತರದಲ್ಲಿ ಕೆಲಸಗಳನ್ನು ಆಯಾ ಕಂಪೆನಿಗಳು ನೀಡಿದರೆ ಪ್ರಯೋಜನವಾಗುತ್ತದೆ. ಇನ್ನು ರಾಷ್ಟ್ರೀಯ ಶಿಕ್ಷಣ ನೀತಿಯಡಿ ಗುರುಕುಲ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದು ಮರೆತಿರುವ ನಮ್ಮ ಹಿಂದೂ ಆಚಾರ, ವಿಚಾರಗಳನ್ನು ಮಕ್ಕಳಿಗೆ ಬಾಲ್ಯದಲ್ಲಿಯೇ ತಿಳಿಹೇಳುವ ಉದ್ದೇಶ ಸಂತರಲ್ಲಿ ಇದೆ. ಅದು ಆಗಬೇಕು ಎನ್ನುವ ನಿರ್ಣಯ ಉಡುಪಿ ಸಂತರ ಸಮಾಗಮದಲ್ಲಿ ಬಂತು. ಇನ್ನು ತುಳುವಿಗೆ ರಾಜ್ಯದ ಅಧಿಕೃತ ಭಾಷೆಯಾಗಿ ಮಾನ್ಯತೆಯೂ ಹತ್ತು ನಿರ್ಣಯಗಳಲ್ಲಿ ಒಂದಾಗಿದೆ. ಸಂಪೂರ್ಣ ಗೋಹತ್ಯಾ ನಿಷೇಧ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಹಿಂದೂ ದೇವಾಲಯಗಳ ಭೂಮಿಯನ್ನು ದೇವಳಕ್ಕೆ ಸಿಗುವಂತೆ ಮಾಡಬೇಕು ಮತ್ತು ಎಲ್ಲಾ ಸ್ತರದ ದೇವಾಲಯಗಳ ಅಭಿವೃದ್ಧಿಗೆ ರಾಜ್ಯದ ಎ ಶ್ರೇಣಿಯ ದೇವಾಲಯಗಳ ಆದಾಯ ಬಳಕೆಯಾಗಬೇಕು ಎನ್ನುವ ಆಶಯ ಸಂತರಲ್ಲಿ ಇದೆ. ಹೀಗೆ ಈ ನಿರ್ಣಯಗಳನ್ನು ಜೆಪಿ ನಡ್ಡಾ ಅವರು ಕೇಳಿಸಿಕೊಂಡು ಹೋಗಿದ್ದಾರೆ. ಕರಾವಳಿಯಲ್ಲಿ ವಿವಿಧ ಮಠಾಧೀಶರುಗಳ ಜೊತೆ ಮಾತುಕತೆಯಿಂದ ಅವರಿಗೂ ಖುಷಿ ಕೊಟ್ಟಿದೆ. ಇನ್ನು ಈ ನಿರ್ಣಯಗಳನ್ನು ಅವರು ಕೇಂದ್ರದಲ್ಲಿ ಯಾರಿಗಾದರೂ ಫಾಲೋ ಅಪ್ ಮಾಡಲು ನೀಡಿದರೆ ಅದು ಜಾರಿಯಾಗಲಿದೆ. ಕೆಲವು ರಾಷ್ಟ್ರೀಯ ನೀತಿ ನಿರೂಪಣೆಯ ಸಂಗತಿಗಳಾಗಿದ್ದರೆ ಕೆಲವು ಪಕ್ಕಾ ದಕ್ಷಿಣ ಕನ್ನಡ, ಉಡುಪಿಯ ಏಳಿಗೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡಿರುವಂತದ್ದು. ಚುನಾವಣೆಯ ಗಡಿಬಿಡಿಯಲ್ಲಿ ಎಷ್ಟೋ ಕೆಲಸಗಳ ನಡುವೆ ಈ ಮನವಿಯ ದಾಖಲೆ ಮಿಸ್ ಆಗದಿರಲಿ ಎನ್ನುವುದೇ ಆಶಯ!
Leave A Reply