ಜೆಎನ್ ಯು ದಂಡದ ಮೂಲಕವಾದರೂ ಸ್ವಚ್ಛವಾಗಲಿ!!
ದೆಹಲಿಯಲ್ಲಿರುವ ಜವಾಹರಲಾಲ್ ನೆಹರೂ ಯೂನಿವರ್ಸಿಟಿ ಎನ್ನುವುದಕ್ಕಿಂತ ಶಾರ್ಟ್ ಆಗಿ ಜೆಎನ್ ಯು ಎಂದರೆ ಅನೇಕರಿಗೆ ಬೇಗ ಅರ್ಥವಾಗುತ್ತದೆ. ಜೆಎನ್ ಯು ಶಿಕ್ಷಣಕ್ಕೆ ಹೆಸರು ಗಳಿಸುವುದು ನಿಂತು ಯಾವುದೋ ಕಾಲವಾಗಿದೆ. ಈಗ ಏನಿದ್ದರೂ ಪ್ರತಿಭಟನೆ, ಗಲಾಟೆ, ಹೋರಾಟ, ಭಾರತದ ವಿರುದ್ಧ ಘೋಷಣೆ, ಪುಂಡಾಟ ಹೀಗೆ ಯಾವ ಕಾರಣಕ್ಕೆ ಸುದ್ದಿಯಾಗಬಾರದೋ ಆ ಕಾರಣಗಳಿಗೆ ಸುದ್ದಿಯಾಗುತ್ತಿದೆ. ಅಲ್ಲಿನ ಕ್ಯಾಂಪಸ್ಸಿನಲ್ಲಿ ಪುಸ್ತಕಗಳಿಗಿಂತ ಬಾಟಲಿ, ಕಾಂಡೋಮ್ ಜಾಸ್ತಿ ಸಿಗುತ್ತದೆ ಎನ್ನುವುದು ಕುಹಕವಲ್ಲ. ವಿದ್ಯಾರ್ಥಿಗಳು ತರಗತಿಗಳಿಗಿಂತ ಕ್ಯಾಂಟಿನಿನಲ್ಲಿ ಹೆಚ್ಚು ಇರುತ್ತಾರೆ ಎನ್ನುವುದು ಉತ್ಪ್ರೇಕ್ಷೆಯಲ್ಲ. ಯುವತಿಯರು ಮತ್ತು ಯುವಕರು ಮನೆಗೆ ಹೋಗುವುದರ ಬದಲಿಗೆ ಪರಸ್ಪರರ ಕೋಣೆಗಳಲ್ಲಿ ಹೆಚ್ಚು ಕಾಲ ಕಳೆಯುತ್ತಾರೆ ಎನ್ನುವುದು ಯಾರಿಗೂ ಸೋಜಿಗ ಎಂದು ಅನಿಸುವುದಿಲ್ಲ. ಒಂದು ಕಾಲದಲ್ಲಿ ನಿರ್ಮಲಾ ಸೀತಾರಾಮನ್ ಅವರಂತವರನ್ನು ವಿದ್ಯಾರ್ಥಿಯಾಗಿ ಹೊಂದಿದ ಜೆಎನ್ ಯು ಈಗ ತುಕ್ಡೇ ತುಕ್ಡೇ ಗ್ಯಾಂಗ್ ಗಳಿಗೆ ಆಶ್ರಯದಾತವಾಗಿದೆ. ಕಡಿಮೆ ಖರ್ಚಿನಲ್ಲಿ ಉನ್ನತ ಡಿಗ್ರಿಯನ್ನು ಗಳಿಸುವ ಗುರಿಯನ್ನು ಹೊಂದಿದ ಸಾಮಾನ್ಯ ಕುಟುಂಬದ ಮಕ್ಕಳಿಗಾಗಿ ಸ್ಥಾಪನೆಯಾದ ಇದು ಈಗ ಆರ್ಥಿಕವಾಗಿ ಬಲಾಢ್ಯರಿಗೂ ದಾಖಲಾತಿಯನ್ನು ಕೊಟ್ಟು ಮಜಾ ಮಾಡಲು ವೇದಿಕೆ ನೀಡಿದಂತೆ ಆಗಿದೆ. ಒಂದು ಕಾಲದಲ್ಲಿ ಜೆಎನ್ ಯುನಲ್ಲಿ ಕಲಿಯುವುದೆಂದರೆ ಹೆಮ್ಮೆಯ ಸಂಗತಿಯಾಗಿತ್ತು. ಈಗ ಜೆಎನ್ ಯುನಲ್ಲಿ ಕಲಿತವರು ಎಂದರೆ ಮೂರು ಕಾಸಿನ ಬೆಲೆ ಇಲ್ಲ. ಅಸಹ್ಯವಾಗಿ ನೋಡುವ ಪರಿಸ್ಥಿತಿ ಉದ್ಭವವಾಗಿದೆ. ದೇಶದ ಪ್ರತಿಷ್ಟಿತ ವಿಶ್ವವಿದ್ಯಾನಿಲಯವೊಂದು ಕೆಟ್ಟ ಕಾರಣಗಳಿಗಾಗಿ ಅವನತಿಯ ಅಂಚಿಗೆ ಹೋಗುವ ಮೊದಲು ಸರಕಾರ ಸೂಕ್ತ ನಿರ್ಧಾರವೊಂದನ್ನು ಕೈಗೊಳ್ಳಬೇಕಿದೆ. ಅಂತಹ ಜೆಎನ್ ಯು ಈಗ ಶುದ್ಧವಾಗಬೇಕಾಗಿರುವ ಅನಿವಾರ್ಯತೆಗೆ ಬಂದಿರುವುದರಿಂದ ಒಂದಿಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲು ಕಾಲೇಜಿನ ಆಡಳಿತ ಮಂಡಳಿ ಮುಂದಾಗಿದೆ. ಅದರ ಮೊದಲ ಹಂತವೇ ದಂಡ ಪ್ರಯೋಗವನ್ನು ಮಾಡುವುದು.
ಇನ್ನು ಮುಂದೆ ಪ್ರತಿಭಟನೆ ಮಾಡುವವರಿಗೆ ಇಪ್ಪತ್ತು ಸಾವಿರ ರೂಪಾಯಿ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗಿದೆ. ಇದನ್ನು ಕೆಲವು ವಿದ್ಯಾರ್ಥಿ ಸಂಘಟನೆಗಳು ವಿರೋಧಿಸುತ್ತಿವೆ. ಯುವತಿಯರಿಗೆ ಚುಡಾವಣೆ, ರ್ಯಾಗಿಂಗ್, ಕೀಟಲೆ ಮುಂತಾದವುಗಳನ್ನು ಮಾಡುವವರಿಗೂ ದಂಡ ಹಾಗೂ ಕಾಲೇಜಿನಿಂದ ಹೊರಗೆ ಹಾಕಲು ಸಿದ್ಧತೆ ನಡೆಸಲಾಗುತ್ತಿದೆ. ಗಲಭೆ ನಡೆಸಿದರೆ 30000 ದಂಡ ಕೂಡ ಕಟ್ಟಿಸಿಕೊಳ್ಳಲು ಯೋಚನೆ ನಡೆಸಲಾಗುತ್ತಿದೆ. ಇದನ್ನು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿ ಎಂದು ಹೇಳುವವರು ಇದ್ದಾರೆ. ಆದರೆ ಅಂತವರು ಕಾಲೇಜಿಗೆ ಬರುವುದು ಕಲಿಯುವುದಕ್ಕಾ ಅಥವಾ ಗಲಭೆ ಮಾಡುವುದಕ್ಕಾ ಕೇಳಿದರೆ ವಿರೋಧಿಸುವವರ ಬಳಿ ಉತ್ತರ ಇಲ್ಲ. ಈಗ ಏನಾಗಿದೆ ಎಂದರೆ ಜೆನ್ ಯು ನಲ್ಲಿ ಅಡ್ಮಿಶನ್ ಆಗಲು ಸುಲಭವಾದ ಮಾರ್ಗಗಳಿವೆ. ಅದನ್ನು ಒಂದಿಷ್ಟು ಕಠಿಣ ಮಾಡಬೇಕಿದೆ. ಅರ್ಹ ವಿದ್ಯಾರ್ಥಿಗಳಿಗಾಗಿ ಮಾತ್ರ ಅಲ್ಲಿ ಕಲಿಯುವ ಅವಕಾಶ ಸಿಗಬೇಕಿದೆ. ಯಾವ ಉದ್ದೇಶಕ್ಕೆ ಅದರ ಸ್ಥಾಪನೆಯಾಗಿತ್ತೋ ಅಂತವರಿಗೆ ಮಾತ್ರ ಅಲ್ಲಿ ದಾಖಲಾತಿ ಸಿಗಬೇಕಿದೆ. ಅದು ಬಿಟ್ಟು ದಾಖಲಾತಿ ಇದ್ದಬದ್ದವರಿಗೆ ಕೊಡುವುದರಿಂದ ದೇಶ ವಿರೋಧಿಗಳು ಅಲ್ಲಿ ಜಾಸ್ತಿಯಾಗುತ್ತಿದ್ದಾರೆ. ಆದ್ದರಿಂದ ಅಡ್ಮಿಶನ್ ಎಲ್ಲರಿಗೂ ಸುಲಭವಾಗಿ ಸಿಗುವಂತಾಗಬಾರದು. ಈಗ ಅಲ್ಲಿ ಕಡಿಮೆ ಫೀಸ್, ಕಡಿಮೆ ದರಕ್ಕೆ ಊಟ, ತಿಂಡಿ ಕೊಡುವುದರಿಂದ ಎಷ್ಟೋ ಮಂದಿ ಎಷ್ಟೋ ವರ್ಷಗಳಿಂದ ಅಲ್ಲಿಯೇ ಗೂಟ ಹೊಡೆದು ಕೂತಿದ್ದಾರೆ. ಅವರನ್ನು ಕತ್ತು ಹಿಡಿದು ಹೊರಗೆ ಹಾಕುವಂತದ್ದು ಮೊದಲ ಆದ್ಯತೆಯಾಗಿರಬೇಕು. ಆದ್ದರಿಂದ ಈ ದಂಡ ಹಾಕುವ ಪ್ರಕ್ರಿಯೆ ಹಣ ಮಾಡುವ ಉದ್ದೇಶ ಅಲ್ಲ ಎನ್ನುವುದನ್ನು ಇದನ್ನು ವಿರೋಧಿಸುವವರು ಅರ್ಥ ಮಾಡಿಕೊಳ್ಳಬೇಕು. ಇದು ಕಲಿಯುವುದಕ್ಕೆ ಅಲ್ಲಿ ಬರುವವರು ಅದನ್ನು ಮಾತ್ರ ಮಾಡಿ, ಹೆಚ್ಚಿನ ಸಂಶೋಧನೆ ಅಧ್ಯಯನ ನಡೆಸಿ, ಸಮಾಜದ ಉತ್ತಮ ನಾಗರಿಕರಾಗುವ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಬೇಕೆ ವಿನ: ಸುಮ್ಮನೆ ಅಲ್ಲಿ ಜುಜುಬಿ ಹಣಕ್ಕೆ ಎಲ್ಲವೂ ಸಿಗುತ್ತದೆ ಎನ್ನುವ ಕಾರಣಕ್ಕೆ ಕಲಿಯುವ ನೆಪದಲ್ಲಿ ಅಡ್ಮಿಶನ್ ಆಗಿ ಪುಕ್ಕಟೆ ಎನ್ನುವಂತೆ ತಿಂದು, ಮಲಗಿ, ಗಲಭೆ ಎಬ್ಬಿಸಲು ಜೆಎನ್ ಯು ಇರುವುದಲ್ಲ ಎನ್ನುವ ಸಂದೇಶ ಸಮಾಜಕ್ಕೆ ಹೋಗಬೇಕಾಗಿದೆ. ಜೆಎನ್ ಯು ಯಾವುದೇ ಒಂದು ಪಂಥದ ಪ್ರಯೋಗಶಾಲೆಯಾಗಬಾರದು. ಅಲ್ಲಿ ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವ ನೆಪದಲ್ಲಿ ಸಂಘರ್ಷಕ್ಕೆ ಇಳಿಯುವುದರಿಂದ ಜನಸಾಮಾನ್ಯರ ತೆರಿಗೆ ಹಣ ಪೋಲಾಗುತ್ತಿದೆ. ಬಡ ಮಕ್ಕಳು ಕಿಂಚಿತ್ ಖರ್ಚಿನಲ್ಲಿ ಉನ್ನತ ಶಿಕ್ಷಣ ಪಡೆಯಲು ನಮ್ಮ ತೆರಿಗೆ ಹಣ ವ್ಯಯವಾದರೆ ಬೇಸರವಿಲ್ಲ. ಅದೇ ಈ ದೇಶವನ್ನು ತುಂಡರಿಸುವವರಿಗೆ ನಾವು ಯಾಕೆ ನಮ್ಮ ತೆರಿಗೆಯ ಹಣ ನೀಡಿ ಸಾಕಬೇಕು. ಆ ನಿಟ್ಟಿನಲ್ಲಿ ತಡವಾಗಿಯಾದರೂ ಅಲ್ಲಿನ ಉನ್ನತ ಸಮಿತಿಯವರು ಸೂಕ್ತ ಕ್ರಮ ಕೈಗೊಂಡಿದ್ದಾರೆ. ಅದನ್ನು ಎಲ್ಲರೂ ಬೆಂಬಲಿಸಬೇಕು. ಇಲ್ಲಿ ರಾಜಕೀಯ ಬರಲೇಬಾರದು. ಮಕ್ಕಳ ಭವಿಷ್ಯದ ದೃಷ್ಟಿಯಿಂದ ದಂಡದ ಪ್ರಯೋಗ ಉತ್ತಮ. ಇದಕ್ಕೂ ಬಗ್ಗದಿದ್ದರೆ ಮುಂದೆ ಏನೂ ಮಾಡಬೇಕು ಎಂದು ಯೋಚಿಸಬೇಕು. ಅದು ಬಿಟ್ಟು ಪುಂಡರು ವಿರೋಧಿಸಿದರು ಎಂದು ಈ ನಿಯಮವನ್ನೇ ಕೈಬಿಡಬಾರದು!!
Leave A Reply