ಮೇಯರ್ ಇನ್ನೆಷ್ಟು ದಿನ ತುಂಬೆಯಲ್ಲಿ ನೀರಿದೆ?
ಕೆಲವು ಹೇಳಿಕೆಗಳು ಎಷ್ಟರಮಟ್ಟಿಗೆ ನಮ್ಮ ಕುತ್ತಿಗೆಗೆ ಬರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳದಿದ್ದರೆ ಅಂತವರು ಹೇಗೆ ತಾನೆ ಉತ್ತಮ ಆಡಳಿತಗಾರ ಆಗುತ್ತಾರೆ ಎನ್ನುವುದನ್ನು ಈಗ ಕೇಳಬೇಕಾಗಿದೆ. ಮಂಗಳೂರಿನ ಈಗಿನ ಮೇಯರ್ ಯಾವ ಜೋಶ್ ನಲ್ಲಿಯೋ ಮೇ ಕೊನೆಯ ತನಕ ಮಂಗಳೂರಿಗೆ ಕುಡಿಯುವ ನೀರಿಗೆ ಯಾವ ತೊಂದರೆಯೂ ಬರುವುದಿಲ್ಲ ಎಂದು ಹೇಳಿದ್ದರು. ಹಾಗೆ ಹೇಳಿದ ಹದಿನೈದು ದಿನಗಳಲ್ಲಿ ಈ ಹೇಳಿಕೆ ಅವರಿಗೆ ಪೀಕಲಾಟ ತಂದುಬಿಟ್ಟಿದೆ. ಯಾಕೆಂದರೆ ಎಪ್ರಿಲ್ ನಲ್ಲಿ ಬೇಸಿಗೆಯ ಒಂದೆರಡು ಜೋರು ಮಳೆ ಬರದಿದ್ದರೆ ಮಂಗಳೂರಿಗೆ ನೀರಿನ ಸಮಸ್ಯೆ ಶುರುವಾಯಿತು ಎಂದೇ ಲೆಕ್ಕ. ಅಷ್ಟಕ್ಕೂ ಮೇಯರ್ ಅದನ್ನು ಯಾಕೆ ಹೇಳಿದ್ರು? ಒಂದನೇಯದಾಗಿ ಜನರಿಗೆ ಖುಷಿಪಡಿಸಲು. ಎರಡನೇಯದಾಗಿ ಅವರು ತುಂಬೆಗೆ ಭೇಟಿಕೊಟ್ಟಾಗ ಅವರಿಗೆ ಅಲ್ಲಿ ಅಧಿಕಾರಿಗಳು ಕೊಟ್ಟ ಮಾಹಿತಿ ಹಾಗೆ ಇತ್ತು. ಮೂರನೇಯದಾಗಿ ತಮ್ಮ ಆಡಳಿತ ಚೆನ್ನಾಗಿರುವುದರಿಂದ ಜನರಿಗೆ ಯಾವುದೇ ಕಷ್ಟ ಎದುರಾಗುವುದಿಲ್ಲ ಎಂಬ ಸಂದೇಶ ಕೊಟ್ಟು ಪಕ್ಷದ ಇಮೇಜು ಹೆಚ್ಚಿಸುವ ಪ್ರಯತ್ನ ಅವರು ಮಾಡಿದ್ದರು.
ಆದರೆ ಅವರ ಗ್ರಹಚಾರ ಹೇಗಿತ್ತು ಎಂದರೆ ಅವರು ಅಂತಹ ಹೇಳಿಕೆ ಕೊಟ್ಟ 15 ದಿನಗಳಲ್ಲಿ ಮಂಗಳೂರಿನ ನೆತ್ತಿಯ ಮೇಲೆ ಸೂರ್ಯ ಹೇಗೆ ತಾಂಡವ ನೃತ್ಯ ಮಾಡಿದ ಎಂದರೆ ತುಂಬೆಯಲ್ಲಿ ನೇತ್ರಾವತಿ ಬಸವಳಿದು ಸೊರಗಿ ಹೋಗಿದ್ದಳು. ಸಂಗ್ರಹಿಸಿಟ್ಟ ನೀರು ಯಾವ ಮಟ್ಟಿಗೆ ಆವಿಯಾಗುತ್ತಾ ಹೋಯಿತು ಎಂದರೆ ಇದೇ ಉಷ್ಣ ಹವೆ ಮುಂದುವರೆದರೆ ನಮ್ಮನ್ನು ಯಾರೂ ರಕ್ಷಿಸಲಾರರು ಎಂಬ ವಾತಾವರಣ ಸೃಷ್ಟಿಯಾಗಿದೆ. ಆದ್ದರಿಂದ ಈಗ ತುರ್ತಾಗಿ ನಾವು ನೀರಿನ ಬಗ್ಗೆ ಯೋಚಿಸದಿದ್ದರೆ ಪರಿಸ್ಥಿತಿ ಕೈ ಮೀರಿ ಹೋಗುತ್ತದೆ. ಈಗ ಏನು ಮಾಡಬೇಕು? ಮೊದಲನೇಯದಾಗಿ ನೀರಿನ ಕೊರತೆ ಉಂಟಾಗುವ ಸಾಧ್ಯತೆಯ ಬಗ್ಗೆ ಮೇಯರ್ ಜನರಲ್ಲಿ ಜಾಗೃತಿ ಮೂಡಿಸಬೇಕು. ನೀರನ್ನು ಮಿತವಾಗಿ ಬಳಸಲು ವಿನಂತಿ ಮಾಡಬೇಕು. ಇದನ್ನು ಜನರು ಕೂಡ ಗಂಭೀರವಾಗಿ ಪಾಲಿಸಬೇಕು. ಅದು ಬಿಟ್ಟು ಈ ಸಮಯದಲ್ಲಿಯೂ ಮನೆಯ ತೆಂಗಿನ ಮರಕ್ಕೆ ನೀರಿನ ಪೈಪ್ ಬಿಟ್ಟು ನೀರನ್ನು ವ್ಯರ್ಥ ಮಾಡುವುದಾಗಲಿ, ಕಾರು ಚೆಂದ ಕಾಣಬೇಕು ಎನ್ನುವ ಕಾರಣಕ್ಕೆ ಕಾರಿಗೆ ಪೈಪ್ ಬಿಟ್ಟು ನೀರನ್ನು ಪೋಲು ಮಾಡುವುದನ್ನು ತಕ್ಷಣ ನಿಲ್ಲಿಸಬೇಕು. ನಿಮ್ಮ ಕಾರು, ಬೈಕು ಚೆಂದ ಕಾಣದಿದ್ದರೆ ಅದರಿಂದ ಕಳೆದುಕೊಳ್ಳುವಂತದ್ದು ಏನೂ ಇಲ್ಲ. ಅದೇ ಕುಡಿಯುವ ನೀರು ಮೇ ನಲ್ಲಿ ದಿನಕ್ಕೆ ಎರಡೇ ಗಂಟೆ ಮಾತ್ರ ಪೈಪಿನಲ್ಲಿ ಬರುವುದು ಎಂದರೆ ಜೂನ್ ಬರುವ ಒಳಗೆ ನಮ್ಮ ಕಥೆ ಕೇಳುವುದು ಯಾರು?
ಆದ್ದರಿಂದ ನೀರಿನ ವಿಷಯದಲ್ಲಿ ನಾವು ಎಷ್ಟು ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತೇವೋ ಅಷ್ಟು ಒಳ್ಳೆಯದು. ಇನ್ನು ನೀರಿನ ಕೊರತೆಯಾದರೆ ಕೈಗಾರಿಕೆಗಳಿಗೆ, ಹೊಸ ನಿರ್ಮಾಣಗಳಿಗೆ ನೀರಿನ ರೇಶನಿಂಗ್ ಮಾಡಬೇಕಾಗುವುದು ಎಂದು ಮೇಯರ್ ಹೇಳಿದ್ದಾರೆ. ರೇಶನಿಂಗ್ ಮಾಡುವುದಕ್ಕಿಂತ ಅವರಿಗೆ ಮಾರ್ಚ್ 15 ರಿಂದ ನೀರನ್ನು ಪೂರೈಕೆ ಮಾಡುವುದನ್ನು ನಿಲ್ಲಿಸುವುದು ಉತ್ತಮ. ಯಾಕೆಂದರೆ ಅವರು ಬೇಕಾದರೆ ಟ್ಯಾಂಕರಿನಲ್ಲಿ ನೀರು ತರಿಸಿಕೊಳ್ಳಲಿ. ನಮಗೆ ಕುಡಿಯುವ ನೀರು ಮೊದಲ ಆದ್ಯತೆಯಾಗಿರಬೇಕು. ಇನ್ನು ಸರಕಾರದ ವಿವಿಧ ಯೋಜನೆಗಳ ಕಾಮಗಾರಿಗಳು ಅಲ್ಲಲ್ಲಿ ಆಗುತ್ತಿವೆ. ಅದರ ಗುತ್ತಿಗೆದಾರರಿಗೆ ಅಂದಾಜುಪಟ್ಟಿ ತಯಾರಿಸುವಾಗಲೇ ಕ್ಯೂರಿಂಗ್ ಗಾಗಿ ಇಂತಿಷ್ಟು ಹಣವನ್ನು ಕೂಡ ನಮೂದಿಸಲಾಗುತ್ತದೆ. ಅದರ ಉದ್ದೇಶ ಕ್ಯೂರಿಂಗ್ ಮಾಡಲು ಗುತ್ತಿಗೆದಾರರೇ ನೀರಿನ ವಿಷಯದಲ್ಲಿ ತಮ್ಮ ಸ್ವಂತ ವ್ಯವಸ್ಥೆಯನ್ನು ಮಾಡಬೇಕು. ಆದರೆ ಗುತ್ತಿಗೆದಾರರ ಮತ್ತು ಪಾಲಿಕೆಯ ಅಧಿಕಾರಿಗಳ ಅಪವಿತ್ರ ಮೈತ್ರಿಯಿಂದ ಜನರಿಗೆ ಪೂರೈಸುವ ಕುಡಿಯುವ ನೀರಿನ ಪೈಪುಗಳಿಗೆ ಇವರು ಅನಧಿಕೃತ ಸಂಪರ್ಕ ಪಡೆದುಕೊಂಡು ತಮ್ಮ ಕಾಮಗಾರಿಗಳ ಕ್ಯೂರಿಂಗ್ ಗಾಗಿ ಲಕ್ಷಗಟ್ಟಲೆ ಲೀಟರ್ ನೀರನ್ನು ಬಳಸಿಕೊಳ್ಳುತ್ತಾರೆ. ಮೊದಲನೇಯದಾಗಿ ಇದು ಅಕ್ರಮ. ಇದನ್ನು ಆಯಾ ಕಾಮಗಾರಿ ಆಗುವ ಪ್ರದೇಶದ ಕಾರ್ಪೋರೇಟರ್ ನೋಡಿ ಆಕ್ಷೇಪಿಸಬೇಕು. ಒಂದು ವೇಳೆ ಕಾರ್ಪೋರೇಟರ್ ಅವರಿಗೆ ಸಿಗಬೇಕಾಗಿರುವುದು ಸಿಕ್ಕಿದರೆ ಅವರು ಮಾತನಾಡುವುದಿಲ್ಲ. ಅಂತಹ ಸಂದರ್ಭದಲ್ಲಿ ಅಲ್ಲಿಯ ನಾಗರಿಕರು ಈ ಬಗ್ಗೆ ವಿರೋಧ ವ್ಯಕ್ತಪಡಿಸಬಹುದು.
ಇನ್ನು ತುಂಬೆಯ ಹೊಸ ವೆಂಟೆಂಡ್ ಡ್ಯಾಂ ಎನ್ನುವುದು ನಮ್ಮೆಲ್ಲರ ಪಾಲಿಗೆ ಕನ್ನಡಿಯೊಳಗಿನ ಗಂಟು ತರ ಆಗಿಬಿಟ್ಟಿದೆ. ಅದನ್ನು ಏಳು ಮೀಟರ್ ಕಟ್ಟಿರುವುದೇ ನೀರಿನ ಸಮಸ್ಯೆ ಮಂಗಳೂರಿಗೆ ಬರಬಾರದು ಎನ್ನುವ ಕಾರಣಕ್ಕೆ. ಆದರೆ ಏಳು ಮೀಟರ್ ನೀರು ನಿಲ್ಲಿಸಿದರೆ ಅಕ್ಕಪಕ್ಕದ ಗ್ರಾಮಗಳ ಜಮೀನುಗಳು ನೀರಿನಲ್ಲಿ ಮುಳುಗುತ್ತವೆ. ಅದಕ್ಕೆ ಆ ಜಮೀನಿನ ಮಾಲೀಕರಿಗೆ ಪರಿಹಾರ ಧನ ನೀಡಬೇಕು. ಆ ಮೊತ್ತ 120 ಕೋಟಿ ಆಗುತ್ತದೆ ಎನ್ನುವ ಕಾರಣಕ್ಕೆ ಆರು ಮೀಟರ್ ಮೇಲೆ ನೀರು ನಿಲ್ಲಿಸಲಾಗುವುದಿಲ್ಲ. ಕೆಲವೊಮ್ಮ ಐದೂವರೆ ಮೀಟರ್ ಮಾತ್ರ ನೀರು ನಿಲ್ಲಿಸಲಾಗುತ್ತದೆ. ಇದರಿಂದಲೂ ನೀರಿನ ಕೊರತೆ ಉದ್ಭವವಾಗುತ್ತದೆ. ಒಟ್ಟಿನಲ್ಲಿ ಅಧಿಕಾರಿಗಳು ನೀರಿನ ವಿಷಯದಲ್ಲಿ ಜನಪ್ರತಿನಿಧಿಗಳಿಗೆ ಸೂಕ್ತ ಮಾಹಿತಿ ನೀಡಬೇಕು. ಇಲ್ಲದಿದ್ದರೆ ರಾಜಕಾರಣಿಗಳು ತಮ್ಮ ಟಿಆರ್ ಪಿ ಹೆಚ್ಚಿಸಲು ಹೇಳಿಕೆ ನೀಡುತ್ತಲೇ ಇರುತ್ತಾರೆ. ಸದ್ಯಕ್ಕೆ ತುಂಬೆ ವೆಂಟೆಂಡ್ ಡ್ಯಾಂನಲ್ಲಿ ಇರುವ ನೀರು ಅದಕ್ಕೆ ಉದಾಹರಣೆ.!!
Leave A Reply