ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
ಕರ್ನಾಟಕ ವಿಧಾನಸಭಾ ಚುನಾವಣೆ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ತಲುಪಿದೆ. ಇನ್ನೇನೂ ಆಯಾ ರಾಜಕೀಯ ಪಕ್ಷದಿಂದ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದು ಮತ್ತು ಅಧಿಕೃತವಾಗಿ ಘೋಷಿಸುವುದು ಮಾತ್ರ ಬಾಕಿ. ಈ ಹಂತದಲ್ಲಿ ಕೆಲವು ವೆಬ್ ಸೈಟ್ ಗಳು ಜನರ ಮನಸ್ಸನ್ನು ತಮ್ಮೆಡೆಗೆ ಸೆಳೆಯಲು ಇದನ್ನೇ ಒಂದು ಅಸ್ತ್ರವನ್ನಾಗಿ ಮಾಡುತ್ತಿವೆ. ತಮ್ಮ ವೆಬ್ ಸೈಟಿನ ಹಿಟ್ಸ್ ಜಾಸ್ತಿ ಮಾಡಲು ಎಲ್ಲರದ್ದು ಸರ್ಕಸ್ ಜಾರಿಯಲ್ಲಿದೆ. ಇಂತಿಂತಹ ಪಕ್ಷಗಳಿಂದ ಇಂತಹ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಬರೆದು ಅದಕ್ಕೊಂದು ಆಕರ್ಷಕ ಹೆಡ್ಡಿಂಗ್ ಕೊಟ್ಟು ಬಿಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ಇವರಿಗೆ ಫೋನ್ ಮಾಡಿ ಹೇಳಿದರೋ ಎನ್ನುವಷ್ಟು ಕಾನ್ಫಿಡೆನ್ಸಿನಿಂದ ಹೆಸರುಗಳನ್ನು ಬಿಡುತ್ತಿದ್ದಾರೆ. ಇದು ಎಂತಹ ನಗೆಪಾಟಲಿಗೆ ಗುರಿಯಾಗುತ್ತದೆ ಎಂದರೆ ಮಂಗಳೂರು ನಗರ ದಕ್ಷಿಣದಿಂದ ಒಂದು ವೆಬ್ ಸೈಟ್ ಕಾಂಗ್ರೆಸ್ಸಿನ ಮಾಜಿ ಶಾಸಕರ ಹೆಸರನ್ನು ತೇಲಿಬಿಟ್ಟಿದ್ದರೆ, ಇನ್ನೊಂದು ವೆಬ್ ಸೈಟ್ ಇಬ್ಬರ ಜಗಳ, ಮೂರನೇಯವರಿಗೆ ಲಾಭ ಎಂದು ಪದ್ಮರಾಜ್ ಹೆಸರನ್ನು ಹಾಕಿಕೊಂಡಿದೆ.
ಕಳೆದ ಬಾರಿ ಅಂದರೆ 2013ರಲ್ಲಿ ಮಂಗಳೂರು ನಗರ ದಕ್ಷಿಣದಿಂದ ಶಾಸಕರಾಗಿದ್ದವರು 2018 ರಲ್ಲಿ ವೇದವ್ಯಾಸ ಕಾಮತ್ ಎದುರು ಸೋತಿದ್ದರು. ಮಂಗಳೂರು ನಗರ ದಕ್ಷಿಣ ಪಾರಂಪರಿತವಾಗಿ 1970 ರಿಂದಲೇ ಕಾಂಗ್ರೆಸ್ ಪಕ್ಷದಿಂದ ಇಲ್ಲಿ ಕ್ರೈಸ್ತರಿಗೆ ಟಿಕೆಟ್ ಕೊಡುತ್ತಾ ಬರಲಾಗಿದೆ. ಯೋಗೀಶ್ ಭಟ್ 20 ವರ್ಷ ಶಾಸಕರಾಗಿದ್ದಾಗಲೂ ಪ್ರತಿ ಬಾರಿ ಅವರ ಎದುರು ಕಾಂಗ್ರೆಸ್ಸಿನಿಂದ ಕ್ರೈಸ್ತರಿಗೆ ಟಿಕೆಟ್ ನೀಡಲಾಗುತ್ತಿತ್ತು. ಎಷ್ಟೋ ಸಲ ಕ್ರೈಸ್ತರು ಗೆಲ್ಲುವುದಿಲ್ಲ ಎಂದು ಗೊತ್ತಿದ್ದರೂ ಸಂಪ್ರದಾಯ ಮುರಿಯಬಾರದು ಎಂದು ಕಾಂಗ್ರೆಸ್ ಮುಖಂಡರು ಮನಸ್ಸು ಬದಲಿಸಲಿರಲಿಲ್ಲ. ಆದ್ದರಿಂದ ಮಂಗಳೂರು ನಗರ ದಕ್ಷಿಣ ಎಂದ ಕೂಡಲೇ ಕಾಂಗ್ರೆಸ್ ಯಾರಾದರೂ ಒಬ್ಬ ಕ್ರೈಸ್ತರನ್ನು ಕರೆದು ಟಿಕೆಟ್ ಕೊಡುವ ಪದ್ಧತಿ ಇದೆ. ಈ ಬಾರಿ ಪದ್ಮರಾಜ್ ಎಂಬುವರ ಹೆಸರು ಅಲ್ಲಲ್ಲಿ ಕೇಳಿಸಿಕೊಳ್ಳುತ್ತಿದ್ದು, ಅದನ್ನೇ ಕಾಂಗ್ರೆಸ್ ಮುಖಂಡರು ಫೈನಲ್ ಮಾಡುತ್ತಾರೆ ಎಂದು ಕೆಲವು ವೆಬ್ ಸೈಟ್ ಗಳು ಸುದ್ದಿ ಹರಡಿಸುತ್ತಿವೆ. ಎಲ್ಲರೂ ತಮ್ಮ ಮೂಗಿನ ನೇರಕ್ಕೆ ಬರೆಯುವುದರಿಂದ ಅದರಲ್ಲಿ ಸತ್ಯಾಂಶ ಇಲ್ಲ ಎನ್ನುವುದು ಯಾರು ಬೇಕಾದರೂ ಹೇಳಬಹುದು. ಯಾಕೆಂದರೆ ಪ್ರತಿ ಕ್ಷೇತ್ರದ ಅಭ್ಯರ್ಥಿಯ ವಿಷಯದಲ್ಲಿ ರಾಜಕೀಯ ಪಕ್ಷಗಳು ವಿಶೇಷವಾಗಿ ಕಾಂಗ್ರೆಸ್ ಎಷ್ಟು ಯೋಚಿಸಿದರೂ ಸಾಲದು ಎನ್ನುವ ಪರಿಸ್ಥಿತಿ ಇದೆ. ಹಾಗಿರುವಾಗ ಮಂಗಳೂರಿನ ಯಾವುದಾದರೂ ಮೂಲೆಯಲ್ಲಿ ಎಸಿ ಕೋಣೆಯಲ್ಲಿ ಕುಳಿತು ಕ್ಷೇತ್ರಗಳ ಹೆಸರನ್ನು ಗೂಗಲ್ ನಲ್ಲಿ ತೆಗೆದು ಅವುಗಳ ಎದುರು ಅಂದಾಜಿನಲ್ಲಿ ಬರೆದು ಹಾಕುತ್ತಾ ತಮಾಷೆ ನೋಡುವ ಚಾಳಿ ನಡೆಯುತ್ತಾ ಇದೆ.
ಕೆಲವರು ವೇದವ್ಯಾಸ ಕಾಮತ್ ಕಾರ್ಕಳದಿಂದ ಮತ್ತು ಮಂಗಳೂರು ನಗರ ದಕ್ಷಿಣದಿಂದ ಸುನೀಲ್ ಕುಮಾರ್ ಅವರಿಗೆ ಭಾರತೀಯ ಜನತಾ ಪಾರ್ಟಿಯಿಂದ ಟಿಕೆಟ್ ಕೊಡುತ್ತಾರೆ ಎಂದು ಕೂಡ ಭ್ರಮೆಯಲ್ಲಿ ಬಂಗ್ಲೆ ಕಟ್ಟುತ್ತಿದ್ದಾರೆ. ಅಷ್ಟು ಸೂಕ್ಷ್ಮವೂ ಗೊತ್ತಿಲ್ಲದವರು ಕೂಡ ಎಲ್ಲಾ ಕಡೆ ಇದ್ದಾರೆ. ಇಂತಹ ಸಮಯದಲ್ಲಿ ಕೆಲವು ಹವ್ಯಾಸಿ ಪತ್ರಕರ್ತರ ಉದ್ದೇಶ ಒಂದೇ. ಅದೇನೆಂದರೆ ರಾಜಕೀಯದಲ್ಲಿ ಆಸಕ್ತಿ ಇಟ್ಟುಕೊಂಡಿರುವವರ ತಲೆಯಲ್ಲಿ ಹುಳ ಬಿಡುವುದು. ಇದರಿಂದ ಆಗುವುದೇನೆಂದರೆ ಅಂತಹ ವೆಬ್ ಸೈಟ್ ಗಳು ಕೆಲವು ದಿನ ಜೀವಂತವಾಗಿ ಇರುತ್ತವೆ. ಅದರಲ್ಲಿ ಹೀಗೆ ಬಂದಿದೆ ಎಂದು ಓದಿದ ನಾಲ್ಕು ಜನ ಇನ್ನೊಂದು ನಾಲ್ಕು ಜನರಲ್ಲಿ ಹೇಳುತ್ತಾರೆ. ಅವರು ಆ ಲಿಂಕ್ ಗಳನ್ನು ಬೇರೆ ಬೇರೆ ಗ್ರೂಪುಗಳಿಗೆ ಫಾರ್ವಾಡ್ ಮಾಡುತ್ತಾರೆ. ಇನ್ನು ಕೆಲವರಿಗೆ ಇಂತಹ ಸಮಯದಲ್ಲಿ ಗೊಂದಲ ಸೃಷ್ಟಿ ಮಾಡುವುದರಲ್ಲಿಯೇ ಆಸಕ್ತಿ. ಇನ್ನು ಕೆಲವು ಪುಡಿ ರಾಜಕಾರಣಿಗಳು ತಮಗೆ ಗೊತ್ತಿರುವ ವೆಬ್ ಸೈಟುಗಳಿಗೆ ಗಾಳಿ ಸುದ್ದಿಗಳನ್ನು ಹೇಳಿ ತಮಗೆ ಎಲ್ಲಾ ಗೊತ್ತಿರುವಂತೆ ಫೋಸ್ ನೀಡುತ್ತಾರೆ. ಅದನ್ನೇ ನಿಜವೆಂದು ಬರೆದು ಪೋಸ್ಟ್ ಮಾಡುವ ವರದಿಗಾರರಿದ್ದಾರೆ. ಇನ್ನು ಕೆಲವು ರಾಜಕೀಯ ಪಕ್ಷಗಳು ಹೆಸರು ಪ್ರಚಲಿತದಲ್ಲಿ ಇರಲಿ ಎಂದು ತಮ್ಮ ಆಪ್ತರಲ್ಲಿ ಬರೆಸಿಕೊಂಡು ಖುಷಿ ಅನುಭವಿಸುತ್ತಾರೆ.
ಇನ್ನು ಭಾರತೀಯ ಜನತಾ ಪಾರ್ಟಿಯ ಮನಸ್ಥಿತಿಯ ವಾಹಿನಿಗಳು ತಮಗೆ ಅನುಕೂಲವಾದ ಹೆಸರುಗಳನ್ನು ಬರೆದು ಆತ್ಮಸಂತೋಷ ಅನುಭವಿಸುತ್ತಾ ವಿರೋಧ ಪಕ್ಷದ ನಾಯಕರ ವಿಷಯದಲ್ಲಿ ಕಡ್ಡಿ ಅಲ್ಲಾಡಿಸುತ್ತಾ ಇರುತ್ತವೆ. ಸಿದ್ಧರಾಮಯ್ಯನವರಿಗೆ ಕೋಲಾರದಲ್ಲಿ ಇಲ್ವಂತೆ, ಅವರ ಮಗನಿಗೆ ವರುಣದಲ್ಲಿ ಕೊಟ್ಟರಂತೆ, ಸಿದ್ದು ಅತಂತ್ರರಂತೆ ಎಂದು ಬರೆಯುತ್ತಿದ್ದಾರೆ. ಅದಕ್ಕಾಗಿ ಸಿದ್ದು ನಿಗದಿಯಂತೆ ಭಾಗವಹಿಸಬೇಕಾಗಿದ್ದ ಪ್ರಜಾಧ್ವನಿ ಯಾತ್ರೆಯನ್ನು ರದ್ದುಗೊಳಿಸಿದ್ದಾರಂತೆ ಎಂದು ಬರೆಯುತ್ತಿದ್ದಾರೆ. ಇನ್ನು ಕೆಲವರು ಜಾತಿವಾರು ಲೆಕ್ಕಾಚಾರದ ಪ್ರಕಾರ ಯೋಚಿಸುತ್ತಾ ಹೆಸರುಗಳನ್ನು ಅಚ್ಚೊತ್ತಿ ಜಾಲಿ ಮಾಡುತ್ತಿದ್ದಾರೆ. ಇವರ್ಯಾರಿಗೂ ತಾವು ಬರೆಯುವುದು ಊಹಾಪೋಹ ಎಂದು ಚೆನ್ನಾಗಿ ಗೊತ್ತಿದೆ. ಆದ್ದರಿಂದ ನೆಮ್ಮದಿಯಿಂದ ಇರುತ್ತಾರೆ. ಆದರೆ ಇವರು ಬರೆದಿದ್ದನ್ನು ಓದಿದವರು ಮಾತ್ರ ತಲೆಕೆಡಿಸಿಕೊಂಡು ನಿದ್ರೆಬಿಡುತ್ತಿದ್ದಾರೆ. ಅದನ್ನು ಬಿಟ್ಟು ಕಾಂಗ್ರೆಸ್, ಬಿಜೆಪಿ ಅಧಿಕೃತವಾಗಿ ಹೆಸರುಗಳನ್ನು ಘೋಷಿಸುವ ತನಕ ಸುಮ್ಮನೆ ಇದ್ದು, ನಂತರ ವಿಶ್ಲೇಷಣೆ ಮಾಡುವುದು ಒಳಿತಲ್ವಾ?
Leave A Reply