ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
ಮಂಗಳೂರು ನಗರದ ಕಸ ತ್ಯಾಜ್ಯ ವಿಲೇವಾರಿಯ ಸಮಸ್ಯೆ ಪರಿಹಾರ ಕಂಡಿದೆ. ಬೆಂಗಳೂರಿನಲ್ಲಿ ಮುಷ್ಕರಕ್ಕೆ ಕುಳಿತಿದ್ದ ಮಂಗಳೂರಿನ ತ್ಯಾಜ್ಯ ಸಂಗ್ರಹ ಮಾಡುವ ವಾಹನದ ಚಾಲಕರು, ಸೂಪರ್ ವೈಸರ್ ಗಳು ಕರ್ತವ್ಯಕ್ಕೆ ಮರಳಿದ್ದಾರೆ. ಬೆಂಗಳೂರಿನ ಪ್ರತಿಭಟನಾಕಾರರ ಮಧ್ಯದಿಂದ ಮಂಗಳೂರಿನ ಹೊರಗುತ್ತಿಗೆ ಪೌರ ಕಾರ್ಮಿಕರು ಎದ್ದು ಮಂಗಳೂರಿನಲ್ಲಿ ಮತ್ತೆ ಕೆಲಸಕ್ಕೆ ಮರಳಿರುವುದರ ಹಿಂದೆ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರ ಶ್ರಮ ದೊಡ್ಡದಿದೆ.
ಯಾವಾಗ ಮಂಗಳೂರಿನಲ್ಲಿ ತ್ಯಾಜ್ಯದ ಸಮಸ್ಯೆ ಬೃಹದಾಕಾರವಾಗಿ ಬೆಳೆಯಿತೋ ವೇದವ್ಯಾಸ ಕಾಮತ್ ಫೀಲ್ಡಿಗೆ ಇಳಿದುಬಿಟ್ಟಿದ್ದರು. ತಮ್ಮದೇ ವಾರ್ ರೂಂ ಆರಂಭಿಸಿಬಿಟ್ಟಿದ್ದರು. ಅದರ ದೂರವಾಣಿ ಸಂಖ್ಯೆಯನ್ನು ಎಲ್ಲೆಡೆ ಪ್ರಚಾರ ಮಾಡಿದ್ದರು. ಅದರಿಂದ ಜನರು ಆ ಸಂಖ್ಯೆಗಳಿಗೆ ಕರೆ ಮಾಡುತ್ತಿದ್ದರು. ಶಾಸಕರು ತಮ್ಮ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಕಾರ್ಪೋರೇಟರ್ ಗಳನ್ನು ಕೆಲಸಕ್ಕೆ ಹಚ್ಚಿದ್ದರು. ಡ್ರೈವರ್ ಆಯಾ ವಾರ್ಡಿನ ಕಾರ್ಪೋರೇಟರ್ ಗಳಿಂದ ನೇಮಕವಾಗಿ ವಾಹನ ಆಂಟೋನಿ ವೇಸ್ಟ್ ನವರು ನೀಡಿದ್ದ ಕಾರಣ ಆ ಸವಾಲು ಪರಿಹಾರವಾಗಿತ್ತು. ಇನ್ನು ಕಸ ತ್ಯಾಜ್ಯ ಮನೆಬಾಗಿಲು, ಹೋಟೇಲುಗಳ ಹೊರಗಿನಿಂದ ಎತ್ತಿ ವಾಹನಗಳಿಗೆ ಹಾಕಬೇಕಿತ್ತಲ್ಲ, ಅದನ್ನು ಈಗಾಗಲೇ ಪರ್ಮನೆಂಟ್ ಆಗಿರುವ 111 ಜನ ಕಾರ್ಮಿಕರು ತಯಾರಾಗಿದ್ದರು. ಅವರೊಂದಿಗೆ ಡಂಪಿಂಗ್ ಯಾರ್ಡಿನ 40 ಕ್ಕೂ ಹೆಚ್ಚಿನ ಸಿಬ್ಬಂದಿಗಳು ಕೈಜೋಡಿಸಿದ್ದರು. ಇದರಿಂದ ಕೆಲಸ ಸಲೀಸಾಗಿ ನಡೆಯುತ್ತಾ ಹೋಯಿತು.
ಇನ್ನು ಒಳಚರಂಡಿ, ದಾರಿದೀಪ ನಿರ್ವಹಣೆಯ ಕೆಲಸಗಾರರ ಸವಾಲು. ಒಳಚರಂಡಿಯ ಕೆಲಸದವರು ಒಳಚರಂಡಿಯ ಕೆಲಸಗಳಿಗೆ ಬಳಸುವ ಆಧುನಿಕ ತಂತ್ರಜ್ಞಾನದ ವಾಹನಗಳ ಕೀಲಿಕೈಯನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದರು. ಆ ಕೀ ಸಿಗದೇ ಕೆಲಸ ಮುಂದುವರೆಯುವ ಸಾಧ್ಯತೆ ಇರಲಿಲ್ಲ. ಕೀ ಇಲ್ಲದಿದ್ದರೆ ವಾಹನ ಸ್ಟಾರ್ಟ್ ಆಗಬೇಕಲ್ಲ.
ಇತ್ತೀಚೆಗೆ ನಾನು ಈ ವಿಷಯದ ಬಗ್ಗೆ ಸ್ಥಳೀಯ ವಾಹಿನಿ ನಮ್ಮ ಟಿವಿಯೊಂದಿಗೆ ಮಾತನಾಡುತ್ತಾ ವಾಹನಗಳ ಕೀಗಳನ್ನು ತರಿಸುವ ಸಾಮರ್ತ್ಯವನ್ನು ತಮ್ಮ ಅಧಿಕಾರ ಬಳಸಿ ಮೇಯರ್, ಪಾಲಿಕೆ ಆಯುಕ್ತರು ತೋರಿಸಬೇಕು. ಯಾಕೆ ತರಿಸಿಕೊಳ್ಳಲು ಸಾಧ್ಯವಿಲ್ಲವೇ? ಎಂದು ಪ್ರಶ್ನಿಸಿದ್ದೆ. ಕೊನೆಗೂ ಮೇಯರ್ ಧೈರ್ಯ ತೋರಿಸಿ ಪೊಲೀಸ್ ಕಮೀಷನರ್ ಅವರಿಗೆ ಈ ವಿಷಯದಲ್ಲಿ ದೂರು ಕೊಟ್ಟಿದ್ದಾರೆ. ಯಾವಾಗ ಪೊಲೀಸ್ ಕಮೀಷನರ್ ಕಚೇರಿಯಿಂದ ಫೋನ್ ಬಂತೋ ಕೀಗಳನ್ನು ತಂದು ಒಪ್ಪಿಸಲಾಗಿದೆ. ಕೀಗಳು ಮೇಯರ್ ಅವರ ಟೇಬಲ್ ಬಂದು ಕುಳಿತಿವೆ. ಇದು ಯಾವಾಗ ಬೆಂಗಳೂರಿನಲ್ಲಿ ಮುಷ್ಕರಕ್ಕೆ ಕುಳಿತಿರುವವರಿಗೆ ಗೊತ್ತಾಯಿತೋ ಅವರು ಜಾಗೃತರಾದರು. ನಾವು ಇನ್ನು ಇಲ್ಲಿ ಪ್ರತಿಭಟನೆಗೆ ಕುಳಿತರೆ ಕೊನೆಗೆ ಅದಕ್ಕೂ ಪರ್ಯಾಯ ವ್ಯವಸ್ಥೆಯನ್ನು ಶಾಸಕರು ಮಾಡಿ ಜನರನ್ನು ಕೆಲಸಕ್ಕೆ ನೇಮಿಸಿಬಿಡುತ್ತಾರೆ ಎಂದು ಗೊತ್ತಾಯಿತು. ತಕ್ಷಣ ಎಲ್ಲರೂ ಕೆಲಸಕ್ಕೆ ಮರಳಿದ್ದಾರೆ.
ಒಳಚರಂಡಿ ಕೆಲಸದಲ್ಲಿ ನಿರತರಾಗಿರುವ ಹೊರಗುತ್ತಿಗೆ ಪೌರ ಕಾರ್ಮಿಕರಿಗೆ ಅನ್ಯಾಯವಾಗಿರುವುದು ಹೌದು. ಇಲ್ಲ ಎಂದು ಯಾರೂ ಹೇಳುತ್ತಿಲ್ಲ. ಯಾಕೆಂದರೆ ಯಾರನ್ನು ಈಗ 111 ಜನರಲ್ಲಿ ಪರ್ಮನೆಂಟ್ ಮಾಡಿದ್ದಾರೋ ಅವರಿಗಿಂತ ಎಷ್ಟೋ ವರ್ಷ ಮೊದಲು ಕೆಲಸಕ್ಕೆ ಸೇರಿದವರು ಇದ್ದಾರೆ. ಈ ಕೆಲಸದ ನೇಮಕದ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂದರೆ ಪ್ರತಿ ಬಾರಿ ಟೆಂಡರ್ ಕರೆಯುವಾಗ ಗುತ್ತಿಗೆದಾರರು ಬದಲಾಗಬಹುದು. ಆದರೆ ಅವರ ಕೆಳಗೆ ದುಡಿಯುವ ಕಾರ್ಮಿಕರು ಅವರೇ ಇರುತ್ತಾರೆ. ಆದ್ದರಿಂದ ಒಬ್ಬೊಬ್ಬ ಗುತ್ತಿಗೆದಾರನ ಕೈಗೆ ಕೆಲಸ ಮಾಡುವ ಕಾರ್ಮಿಕರಲ್ಲಿ ಕೆಲವರು ಎರಡು ದಶಕಗಳಿಂದ ಇದೇ ಕೆಲಸದಲ್ಲಿ ನಿರತರಾಗಿದ್ದಾರೆ. ಆದರೆ ನಾಲ್ಕು ತಿಂಗಳ ಹಿಂದೆ ಪರ್ಮನೆಂಟ್ ಆದವರಲ್ಲಿ ಅನೇಕರು ಈ ಉದ್ಯೋಗಕ್ಕೆ ಬಂದು ಏಳೆಂಟು ವರ್ಷಗಳಾಗಿವೆ. ಅದೇ ಈಗ ಪ್ರತಿಭಟನೆಯಲ್ಲಿ ನಿರತರಾಗಿರುವವರ ದೊಡ್ಡ ನೋವು. ಇವರಿಗೂ ಪಾಲಿಕೆಗೆ ನೇರ ಸಂಬಂಧ ಇಲ್ಲದಿದ್ದರೂ ಇವರು ಅನೇಕ ವರುಷಗಳಿಂದ ಪಾಲಿಕೆಗೆ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಪರ್ಮನೆಂಟ್ ಮಾಡುವಾಗ ಮೊದಲ ಪ್ರಾಶಸ್ತ್ಯ ನೀಡಬೇಕಿತ್ತು. ಈಗ ಏನೇ ಇರಲಿ, ಅನ್ಯಾಯವಾದವರಿಗೆ ನ್ಯಾಯ ಸಿಗಲಿ ಎನ್ನುವುದು ನಮ್ಮ ನಿರೀಕ್ಷೆ. ಅದರೊಂದಿಗೆ ಪಾಲಿಕೆ ವ್ಯಾಪ್ತಿಯ ಈ ತ್ಯಾಜ್ಯದ ಸಮಸ್ಯೆಯನ್ನು ಪರಿಹರಿಸುವಲ್ಲಿ ಅರ್ಹನಿಶಿ ಶ್ರಮಿಸಿದ ಶಾಸಕ ವೇದವ್ಯಾಸ ಕಾಮತ್ ಹಾಗೂ ಅವರ ಕಾರ್ಪೋರೇಟರ್ ತಂಡಕ್ಕೆ ಶ್ರೇಯ ಸಲ್ಲಬೇಕು.
Leave A Reply