ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
ಕಳೆದ ಐದು ವರ್ಷಗಳಲ್ಲಿ ಮಂಗಳೂರು ಸಾಕಷ್ಟು ಅಭಿವೃದ್ಧಿ ಆಗಿರುವುದರಲ್ಲಿ ಸಂಶಯವಿಲ್ಲ. ಹೆಚ್ಚಿನ ಕಡೆ ರಸ್ತೆಗಳು ಕಾಂಕ್ರೀಟಿಕರಣವಾಗಿವೆ. ಕೆರೆಗಳು ಅಭಿವೃದ್ಧಿಯಾಗಿವೆ. ಸರ್ಕಲ್ ಗಳು ಮೀರಿ ಮೀರಿ ಮಿಂಚುತ್ತಿವೆ. ಅದೆಲ್ಲವೂ ಓಕೆ. ಅದಕ್ಕೆ ನಾನು ವಿರೋಧ ಅಲ್ಲ. ಆದರೆ ಅಷ್ಟೇ ಅಭಿವೃದ್ಧಿ ಅಲ್ಲ. ಅಭಿವೃದ್ಧಿ ಎಂದರೆ ದೂರದೃಷ್ಟಿ. ಅಭಿವೃದ್ಧಿ ಎಂದರೆ ಶಾಶ್ವತ ಪರಿಹಾರ ಮತ್ತು ಅಭಿವೃದ್ಧಿ ಎಂದರೆ ಜನರಲ್ಲಿ ನೆಮ್ಮದಿ. ಇದು ಮೂರು ಕೂಡ ಸಾಧ್ಯವಾಗಿದೆಯಾ ಎನ್ನುವುದು ಪ್ರತಿ ಅಭಿವೃದ್ಧಿ ಕಾಮಗಾರಿಯ ಹಿಂದೆ ನಾವು ನೋಡಬೇಕಾಗಿರುವ ಸಂಗತಿ. ಈಗ ಕೆರೆ ಅಭಿವೃದ್ಧಿಯಿಂದ ಕೇವಲ ಅದರ ಸುತ್ತಮುತ್ತಲೂ ದಂಡೆ ಕಟ್ಟಿ ನಡೆದಾಡಲು ವಾಕ್ ಪಥ್ ಮಾಡಿದರೆ ಸಾಕಾಗುವುದಿಲ್ಲ. ಅದರಿಂದ ಪರಿಸರ ಚೆಂದ ಕಾಣಬಹುದು. ಜನರಿಗೆ ಒಂದಿಷ್ಟು ವಾಯುವಿಹಾರಕ್ಕೆ ಅನುಕೂಲವಾಗಬಹುದು. ಆದರೆ ಕೆರೆ ಅಭಿವೃದ್ಧಿಯಿಂದ ಅಲ್ಲಿ ಸಂಗ್ರಹವಾದ ನೀರು ಬೇಸಿಗೆಯಲ್ಲಿ ಜನರ ಕುಡಿಯುವ ಅವಶ್ಯಕತೆಗಳಿಗೆ ಪೂರೈಕೆಯಾಗುವಂತೆ ಕೂಡ ಇರಬೇಕು. ಹಿಂದೆ ಒಂದು ಕಾಲದಲ್ಲಿ ಬೈಕಾಡಿ ಕೆರೆ ಹಾಗೂ ಕಾವೂರು ಕೆರೆಯ ನೀರನ್ನು ಕುಡಿಯಬಹುದಾಗಿತ್ತು. ಆದರೆ ಕಾಲಕ್ರಮೇಣ ಪರಿಸ್ಥಿತಿ ಹೇಗೆ ಬದಲಾಯಿತು ಎಂದರೆ ಕುಡಿಯುವುದು ಬಿಡಿ, ಕೈಯಿಂದ ಮುಟ್ಟುವ ಪರಿಸ್ಥಿತಿ ಕೂಡ ಇಲ್ಲ. ಈಗ ದೇವರ ದಯೆಯಿಂದ ಸ್ಮಾರ್ಟ್ ಸಿಟಿ ಅನುದಾನದಿಂದ ಕೆಲವು ಕೆರೆಗಳನ್ನು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಅಭಿವೃದ್ಧಿ ಪಡಿಸಲಾಗಿದೆ. ಗುಜ್ಜರಕೆರೆ ಕೂಡ ಅಭಿವೃದ್ಧಿ ಕಂಡಿದೆ. ಆದರೆ ಈ ಕೆರೆಗಳ ಸುತ್ತಲೂ ಪರಿಸರ ಅಭಿವೃದ್ಧಿಯಾಗುವ ಜೊತೆಗೆ ಬೇಸಿಗೆ ಸಮಯದಲ್ಲಿ ಮಂಗಳೂರನ್ನು ಕಾಡುವ ಕುಡಿಯುವ ನೀರಿನ ರೇಶನಿಂಗ್ ಪದ್ಧತಿಗೆ ತಿಲಾಂಜಲಿ ಇಡಲು ಸಾಧ್ಯವಾ ಎಂದು ಯೋಚಿಸಬೇಕು.
ಈಗ ನೋಡಿ, ತುಂಬೆಯಲ್ಲಿ ಹೊಸ ಅಣೆಕಟ್ಟನ್ನು ಕಟ್ಟಲಾಯಿತು. ಅಣೆಕಟ್ಟು ನೋಡಲು ಏಳು ಮೀಟರ್ ಎತ್ತರ ಇದೆ. ಎತ್ತರ ಕಟ್ಟುವುದು ನೋಡಲು ಚೆಂದ ಕಾಣಬೇಕು ಎಂದು ಅಲ್ಲ. ಅದರಿಂದ ಏನಾದರೂ ಪ್ರಯೋಜನ ಇರಬೇಕು. ಅಣೆಕಟ್ಟಿನಿಂದ ಏನು ಪ್ರಯೋಜನ? ನೀರನ್ನು ನಿಲ್ಲಿಸಲು ಏಳು ಮೀಟರ್ ಬಳಸಿದ್ದರೆ ನಮಗೆ ಈ ದಿನಗಳಲ್ಲಿ ಪ್ರಯೋಜನಕ್ಕೆ ಬರುತ್ತಿತ್ತು. ಈಗ ತುಂಬೆಯ ನೀರಿನ ಮಟ್ಟ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇನ್ನು ಕೂಡ ಏಪ್ರಿಲ್ ಆರಂಭವಾಗಿಲ್ಲ. ಎಲ್ಲಿಯಾದರೂ ಏಪ್ರಿಲ್ ಕೊನೆಯ ವಾರ ನೀರು ಖಾಲಿಯಾದರೆ ನಂತರ ಬಂಟ್ವಾಳದ ಎಎಂಆರ್ ಡ್ಯಾಂನಿಂದ ನೀರು ತರಿಸಬೇಕು. ಅದು ಕೂಡ ಎಷ್ಟು ದಿನ? ಅದರ ಬದಲು ಸರಕಾರಗಳಿಂದ 120 ಕೋಟಿ ರೂ ಹಣ ಬಿಡುಗಡೆಗೊಳಿಸಿದ್ದರೆ ಅಲ್ಲಿ ಏಳು ಮೀಟರ್ ನೀರನ್ನು ನಿಲ್ಲಿಸಬಹುದಿತ್ತು. ನಾವು ನೆಮ್ಮದಿಯಿಂದ ಬೇಸಿಗೆಯನ್ನು ಕಳೆಯಬಹುದಿತ್ತು. ಇದೆಲ್ಲವೂ ರಾಜ್ಯ ಸರಕಾರಕ್ಕೆ ಇರಬೇಕಾದ ದೂರದೃಷ್ಟಿತ್ವ.
ಇನ್ನು ಕುಡಿಯುವ ನೀರಿನ ಸಮಸ್ಯೆಯೊಂದಿಗೆ ಮಂಗಳೂರನ್ನು ಕಾಡುತ್ತಿರುವ ಅತೀ ದೊಡ್ಡ ಸಮಸ್ಯೆ ಎಂದರೆ ಒಳಚರಂಡಿ. ಎಡಿಬಿ -1 ನಿಂದ ಅನುದಾನ ಬಂದರೂ ಈ ಸಮಸ್ಯೆ ಪರಿಹಾರ ಕಂಡಿಲ್ಲ. ಪ್ರತಿ ಮಳೆಗಾಲದಲ್ಲಿ ಮಂಗಳೂರಿನ ಮ್ಯಾನ್ ಹೋಲ್ ಗಳು ನೈಸರ್ಗಿಕ ಕಾರಂಜಿಗಳಾಗಿ ಬದಲಾಗುತ್ತವೆ. ಅದರಿಂದ ಪಾದಚಾರಿಗಳು, ದ್ವಿಚಕ್ರ ವಾಹನಗಳಲ್ಲಿ ಚಲಿಸುವವರಿಗೆ ಆಗುವ ತೊಂದರೆ ಅನುಭವಿಸಿದವರಿಗೆ ಮಾತ್ರ ಗೊತ್ತು. ಇದಕ್ಕೆ ಮುಖ್ಯ ಕಾರಣ. ನಮ್ಮಲ್ಲಿ ಒಳಚರಂಡಿಯ ಕಾಮಗಾರಿಗಳಲ್ಲಿ ಇರುವ ಲೋಪ. ಹೊಸದಾಗಿ ನಿರ್ಮಾಣಗೊಂಡಿರುವ ವಸತಿ ಸಮುಚ್ಚಯಗಳ ಶೌಚಾಲಯಗಳ ತ್ಯಾಜ್ಯವನ್ನು ಮಾತ್ರ ಒಳಚರಂಡಿಗೆ ಬಿಡಬೇಕು. ಯಾಕೆಂದರೆ ಒಳಚರಂಡಿಗಳು ಇರುವುದೇ ಶೌಚಾಲಯಗಳ ತ್ಯಾಜ್ಯಗಳಿಗಾಗಿ. ಆದರೆ ಈಗ ಏನಾಗುತ್ತಿದೆ ವಸತಿ ಸಮುಚ್ಚಯಗಳ ಬಾತ್ ರೂಂ ನೀರು, ಪಾತ್ರೆ ತೊಳೆದ ನೀರು, ಬಟ್ಟೆ ತೊಳೆದ ನೀರು ಕೂಡ ನೇರವಾಗಿ ಸಾರ್ವಜನಿಕ ಒಳಚರಂಡಿಗೆ ಹೋಗಿ ಸೇರುತ್ತದೆ. ಇದರಿಂದ ಏನಾಗುತ್ತದೆ ಎಂದರೆ ಅದು ಓವರ್ ಫ್ಲೋ ಆಗುತ್ತದೆ. ಈಗ ಇದನ್ನು ಸರಿ ಮಾಡುವ ಕೆಲಸದ ಕಡೆ ಗಮನ ನೀಡಬೇಕು. ಇದು ದೂರದೃಷ್ಟಿಯ ಯೋಜನೆ.
ಕುಡಿಯುವ ನೀರು, ಒಳಚರಂಡಿಯೊಂದಿಗೆ ಮೂರನೆಯ ಬಹುಮುಖ್ಯ ಅಗತ್ಯ ತ್ಯಾಜ್ಯ ವಿಲೇವಾರಿ. ಸದ್ಯ ಮಂಗಳೂರಿನಲ್ಲಿ 350 ಟನ್ ತ್ಯಾಜ್ಯ ಸಂಗ್ರಹವಾಗುತ್ತಿದೆ. ಈಗಾಗಲೇ ಪಚ್ಚನಾಡಿಯ ಡಂಪಿಂಗ್ ಯಾರ್ಡ್ ನಲ್ಲಿ 2 ಲಕ್ಷ ಟನ್ ತ್ಯಾಜ್ಯ ಬಂದು ಬಿದ್ದಿದೆ. ಮಳೆಗಾಲದಲ್ಲಿ ಮಳೆಯ ನೀರಿನ ರಭಸಕ್ಕೆ ತ್ಯಾಜ್ಯ ಜಾರಿ ಅಕ್ಕಪಕ್ಕದ ಪ್ರದೇಶಗಳಿಗೆ ತೊಂದರೆಯಾಗಿರುವುದನ್ನು ನಾವು ನೋಡಿದ್ದೇವೆ. ಅದೇ ಬೇಸಿಗೆಯಲ್ಲಿ ಬೆಂಕಿ ಹುಟ್ಟಿ ಮತ್ತೆ ಸಮಸ್ಯೆಯಾಗುತ್ತದೆ. ಅದರ ಬದಲು ಈ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಸ್ವಚ್ಛ ಭಾರತ್ ಮಿಶನ್ ಅಡಿಯಲ್ಲಿ ಬಂದಿರುವ ಕೋಟ್ಯಾಂತರ ರೂಪಾಯಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ದಿನಕ್ಕೆ 500 ಟನ್ ತ್ಯಾಜ್ಯವನ್ನು ಗೊಬ್ಬರ ಮಾಡಿದರೆ ಅದರಿಂದ ಭವಿಷ್ಯದಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ. ಅಲ್ಲಿರುವ ತ್ಯಾಜ್ಯದ ಸ್ಟಾಕ್ ಕೂಡ ಖಾಲಿಯಾಗುತ್ತದೆ. ಅದರೊಂದಿಗೆ ಆ ಪ್ರದೇಶದ ಸಮಸ್ಯೆ ಕೂಡ ಪರಿಹಾರವಾಗುತ್ತದೆ. ಹೀಗೆ ಮೂರು ಪ್ರಮುಖ ಕಾರ್ಯಗಳು ಮುಂದಿನ ಅವಧಿಯಲ್ಲಿ ಶಾಸಕರು ಮಾಡಬೇಕಿದೆ. ಈ ಬಾರಿ ರಸ್ತೆಗಳು, ಕೆರೆಗಳು, ಸರ್ಕಲ್ ಅಭಿವೃದ್ಧಿಯಾಗಿವೆ. ಮುಂದೆ ನೀರು, ಒಳಚರಂಡಿ, ತ್ಯಾಜ್ಯ!
Leave A Reply