ಪಾಲಿಕೆ ಏದ್ದಾಗ ತಡವಾಗಿತ್ತು!
ಆಂಟೋನಿ ವೇಸ್ಟ್ ಮ್ಯಾನೇಜಮೆಂಟ್ ನವರಿಗೆ ಮಂಗಳೂರು ನಗರವನ್ನು ಸ್ವಚ್ಚ ಮಾಡಲು ಗುತ್ತಿಗೆ ಕೊಟ್ಟು ಎಂಟುವರೆ ವರ್ಷಗಳಾಗಿವೆ. ಅವರಿಗೂ ಮಂಗಳೂರಿನ ಮಾಜಿ, ಹಾಲಿ ಜನಪ್ರತಿನಿಧಿಗಳಿಗೆ, ಪಾಲಿಕೆಯ ಸದಸ್ಯರಿಗೆ, ಅಧಿಕಾರಿಗಳಿಗೆ ಒಂದು “ಮಧುರವಾದ ಭಾವನೆ” ಇರದೇ ಇದ್ದರೆ ಆಂಟೋನಿ ಸಂಸ್ಥೆ ಇಲ್ಲಿಗೆ ಬಂದ ಎರಡೇ ವರ್ಷಗಳಿಗೆ ಗಂಟು ಮೂಟೆ ಕಟ್ಟಿ ಹೊರಗೆ ನಡೆಯಬೇಕಿತ್ತು. ಆದರೆ ಹಾಗೆ ಆಗಲಿಲ್ಲ. ಪ್ರತಿ ತಿಂಗಳು ಕೋಟಿಗಳ ಲೆಕ್ಕದಲ್ಲಿ ಬಿಲ್ ಪಾವತಿಯಾಗುತ್ತಿದ್ದರೂ ಆಂಟೋನಿ ಸಂಸ್ಥೆಯ ನಡು ಬಗ್ಗದೇ ಇರುವುದರಿಂದ ಮಂಗಳೂರು ಹಿಂದೆ ಹೇಗೆ ಇತ್ತೋ ಹಾಗೆ ಇದೆ. ಆದರೆ ನಮ್ಮ ತೆರಿಗೆಯ ಹಣ ಮಾತ್ರ ಹಾಗೆ ಅವರ ತಿಜೋರಿ ಸೇರುತ್ತಾ ಇದೆ. ಆರಂಭದಲ್ಲಿ ಏಳು ವರ್ಷದ ಗುತ್ತಿಗೆ ಇದ್ದ ಕಾರಣ ಆಗ ಅವರು ಹೇಳಿದ ಹಾಗೆ ಮಾಜಿ ಶಾಸಕರು ಕೂಡ ಕೇಳುತ್ತಿದ್ದರು. ಆಂಟೋನಿ ವೇಸ್ಟ್ ಕೈಯಲ್ಲಿ ಬೆತ್ತ ಹಿಡಿದು ಹೆದರಿಸುವಂತೆ ಮಾಡುತ್ತಾ, ತಾನು ಮಾತ್ರ ಬೇಕಾದಷ್ಟು ಬಿಲ್ ಮಾಡುತ್ತಾ, ಯಾವುದೇ ನಿರ್ಭಂದವನ್ನು ಪಾಲಿಸದೇ ಕೊಬ್ಬಿದ ಗೂಳಿಯಂತೆ ಮುಂದುವರೆಯುತ್ತಿತ್ತು. ನಮ್ಮ ತೆರಿಗೆಯ ಹಣದ ಒಂದೊಂದು ರೂಪಾಯಿ ಕೂಡ ತುಂಬಾ ಪ್ರಮುಖವಾದದು. ಹೀಗಿರುವಾಗ ಎರಡು ಕೋಟಿ ಪ್ರತಿ ತಿಂಗಳು ಕೊಟ್ಟು ಅದಕ್ಕೆ ತಕ್ಕಂತೆ ಕೆಲಸ ಆಗದೇ ಇದ್ದರೆ ಜನಸಾಮಾನ್ಯರ ಹೊಟ್ಟೆಗೆ ಬೆಂಕಿ ಬಿದ್ದಂತೆ ಆಗುವುದಿಲ್ಲವೇ? ಆದರೆ ಜನಪ್ರತಿನಿಧಿಗಳು, ಅಧಿಕಾರಿಗಳು ಆಂಟೋನಿ ಪರ ಇರುವಾಗ ಜನಸಾಮಾನ್ಯರ ಬಗ್ಗೆ ಯಾರು ಚಿಂತಿಸುವುದು.
ಪಾಲಿಕೆ ಏದ್ದಾಗ ತಡವಾಗಿತ್ತು!
ಒಕೆ. ಕೊನೆಗೆ ಏಳು ವರ್ಷ ಆಯಿತು. ಆಗಲಾದರೂ ಮಂಗಳೂರಿನ ಸ್ವಚ್ಚತೆಯ ಬಗ್ಗೆ ಏನಾದರೂ ಹೊಸ ವಿಕಲ್ಪವನ್ನು ಪಾಲಿಕೆ ಯೋಚಿಸುತ್ತದೆಯಾ ಎಂದು ಜನ ಕಾದರು. ಆದರೆ ಪಾಲಿಕೆಯ ಆಡಳಿತ ಮಲಗಿತ್ತಲ್ಲ. ಅದು ಏಳುವಾಗ ಆಂಟೋನಿಯ ಗುತ್ತಿಗೆ ಮುಗಿಯಲು ಕೆಲವೇ ದಿನಗಳಿದ್ದವು. ಅರ್ಜೆಂಟ್ ಆಗುವಾಗ ಟಾಯ್ಲೆಟ್ ಹುಡುಕಲು ಹೊರಟಂತೆ ಪಾಲಿಕೆ ವರ್ತಿಸಿತು. ಆಗ ಸಡನ್ ಒಂದು ನಿರ್ಧಾರವನ್ನು ತೆಗೆದುಕೊಂಡು ಒಂದು ವರ್ಷ ಆಂಟೋನಿ ವೇಸ್ಟಿಗೆ ಗುತ್ತಿಗೆಯನ್ನು ನವೀಕರಣ ಮಾಡಲಾಯಿತು. ಮತ್ತೆ ಜನರ ತೆರಿಗೆ ಹಣ ಪೋಲಾಗಲು ಮತ್ತು ತಾವು ಮಾತ್ರ ನೆಮ್ಮದಿಯಿಂದ ತ್ಯಾಜ್ಯ ಮುಕ್ಕಲು ಪಾಲಿಕೆ ತಯಾರಾಯಿತು. ಎಂಟು ವರ್ಷ ಆದ ಬಳಿಕವಾದರೂ ಪಾಲಿಕೆ ಮಂಗಳೂರಿನ ಸ್ವಚ್ಚತೆಯ ಬಗ್ಗೆ ಹೊಸ ದಾರಿ ಕಂಡುಹಿಡಿಯಿತಾ ಎಂದು ನೋಡಿದರೆ ಅದು ಕೂಡ ಇಲ್ಲ. ಮತ್ತೆ ಮೂರಾ, ಆರಾ ತಿಂಗಳು ಅದನ್ನು ಕೂಡ ವಿಸ್ತರಿಸಿತು. ಈಗ ಆ ಕಾಲಾವಧಿ ಕೂಡ ಮುಗಿದಿದೆ.
ಪಾಲಿಕೆಯಲ್ಲಿ ಮೇಯರ್ ಮತ್ತು ಸದಸ್ಯರು ಮತ್ತೆ ಕೆಲವು ತಿಂಗಳು ಆಂಟೋನಿಗೆ ಗುತ್ತಿಗೆ ವಿಸ್ತರಿಸಲು ತೀರ್ಮಾನಿಸಿದ್ದಾರೆ. ಅಷ್ಟಕ್ಕೂ ಮಂಗಳೂರಿನ ಸ್ವಚ್ಚತೆಯ ಬಗ್ಗೆ ಹೊಸ ದಾರಿ ಕಂಡು ಹಿಡಿಯುವುದು ಬಹಳ ಕಷ್ಟನಾ?
ಗುತ್ತಿಗೆ ಹೇಗೆ ನಡೆಯುತ್ತದೆ?
ಯಾವುದೇ ಗುತ್ತಿಗೆ ಮುಗಿಯಲು ಆರು ತಿಂಗಳು ಇರುವಾಗಲೇ ಮುಂದಿನ ಅವಧಿಯಲ್ಲಿ ಏನು ಮಾಡಬೇಕು ಎನ್ನುವ ದೂರದೃಷ್ಟಿ ಪಾಲಿಕೆಗೆ ಇರಬೇಕು. ಅದಕ್ಕಾಗಿ ಅವರು ಹೊಸ ಬಿಡ್ ಕರೆಯಬೇಕು. ಬಿಡ್ ಹಾಕುವಾಗ ಅದರಲ್ಲಿ ಎರಡು ವಿಧಗಳು ಇವೆ. ಒಂದು ಫೈನಾನ್ಸಿಯಲ್ ಬಿಡ್. ಇನ್ನೊಂದು ಟರ್ಮ್ ಅಂಡ್ ಕಂಡೀಶನ್ ಬಿಡ್. ಮೊದಲು ಫೈನಾನ್ಸಿಶಯಲ್ ಬಿಡ್ ಒಪನ್ ಮಾಡಲಾಗುತ್ತದೆ. ಅದರಲ್ಲಿ ಗುತ್ತಿಗೆದಾರರ ಆರ್ಥಿಕ ಸಾಮರ್ತ್ಯ, ಅವರ ಅನುಭವ ಮಟ್ಟ, ಆರ್ಥಿಕ ವ್ಯವಹಾರಗಳ ದಾಖಲೆ ಮತ್ತು ಅವರ ಕಂಪೆನಿಯ ಆರ್ಥಿಕ ಸಹನಾ ಶಕ್ತಿ ಎಲ್ಲವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಕಂಪೆನಿಗಳ ಆರ್ಥಿಕ ಬಿಡ್ ಪಾಲಿಕೆಗೆ ತೃಪ್ತಿಯಾದರೆ ನಂತರ ಎರಡನೇ ಬಿಡ್ ಒಪನ್ ಮಾಡಲಾಗುತ್ತದೆ. ಅದರಲ್ಲಿ ಮಾಡಲಗುವ ಕಾರ್ಯಗಳ ವಿವರ, ಎಷ್ಟು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕಸ ಸಂಗ್ರಹ, ಎಷ್ಟು ಕೆಲಸಗಾರರು, ವಾಹನಗಳು, ಇಂಧನ ಖರ್ಚು, ಕೆಲಸಗಾರರ ಸಂಬಳ, ಅವರಿಗೆ ನೀಡುವ ಸೌಲಭ್ಯಗಳು ಎಲ್ಲವನ್ನು ನಮೂದಿಸಿ, ಪಾಲಿಕೆ ನೀಡುವ ನಿರ್ಭಂದನೆಗಳನ್ನು ಪಾಲಿಸುತ್ತೇವೆ ಮತ್ತು ಅದಕ್ಕೆ ಶಕ್ತರಾಗಿದ್ದೇವೆ ಎಂದು ಪಾಲಿಕೆಗೆ ಮನವರಿಕೆ ಮಾಡಿದರೆ ಆಗ ಆ ಬಿಡ್ ಆ ಕಂಪೆನಿಯ ಪಾಲಾಗುತ್ತದೆ. ಇದೆಲ್ಲವೂ ಮೂರು ತಿಂಗಳೊಳಗೆ ಸಂಪೂರ್ಣಗೊಂಡರೆ ನಂತರ ಅದನ್ನು ಜಿಲ್ಲಾಧಿಕಾರಿಯವರಿಗೆ ಕಳುಹಿಸಿ ಅಲ್ಲಿಂದ ಸರಕಾರಕ್ಕೆ ಕಳುಹಿಸಿ ಅನುಮತಿಯನ್ನು ಪಡೆದುಕೊಂಡು ಹೊಸ ಕಂಪೆನಿಗೆ ವರ್ಕ್ ಆರ್ಡರ್ ನೀಡಿದರೆ ಅಲ್ಲಿಗೆ ಕೆಲಸ ಮುಗಿಯುತ್ತದೆ. ಆದರೆ ಇಷ್ಟೇ ಮಾಡಲು ಪಾಲಿಕೆಗೆ ಕಳೆದ ಎರಡು ವರ್ಷಗಳಲ್ಲಿ ಸಾಧ್ಯವಾಗಲಿಲ್ಲ ಎಂದರೆ ಇಚ್ಚಾಶಕ್ತಿಯ ಕೊರತೆಯೋ ಅಥವಾ ಆಂಟೋನಿಯವರು ಕೊಟ್ಟು ಕಳುಹಿಸುವ ತ್ಯಾಜ್ಯದ ಪರಿಮಳವೋ ಅವರೇ ಹೇಳಬೇಕು.
ಯಕಶ್ಚಿತ ಒಂದು ಸಂಸ್ಥೆ ಇಡೀ ಪಾಲಿಕೆಯನ್ನು ತುದಿಬೆರಳಿನ ಮೇಲೆ ನಿಲ್ಲಿಸಲು ಶಕ್ತವಾಗಿದೆ ಎಂದರೆ ಮಂಗಳೂರಿನವರ ಮೈ ಉರಿಯಲ್ವಾ? ಇನ್ನೊಂದು ವಿಷಯ ಏನೆಂದರೆ ಹೆಸರಿಗೆ ಆಂಟೋನಿ ವೇಸ್ಟ್ ದೊಡ್ಡ ಸಂಸ್ಥೆಯಾಗಿದ್ದರೂ ಅವರಲ್ಲಿ ಅವರದ್ದೇ ಆಗಿರುವ ಕಾರ್ಮಿಕರು ಇಲ್ಲ. ಅವರು ಈ ಹಿಂದೆ ಪಾಲಿಕೆಯಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದವರನ್ನೇ ಕೆಲಸಕ್ಕೆ ಇಟ್ಟುಕೊಂಡಿದ್ದರು. ಈಗ ಏನಾದರೂ ಹೊಸ ಗುತ್ತಿಗೆಯನ್ನು ಕೊಡುವ ಪ್ಲಾನ್ ಇದ್ದರೆ ಅದೇ ಹಿಂದಿನ ಗುತ್ತಿಗೆದಾರರಿಗೆ ಕೊಟ್ಟು ಅದರೊಂದಿಗೆ 35 ಕೋಟಿಯ ವಾಹನಗಳನ್ನು ಕೂಡ ಕೊಡುವ ರೂಪುರೇಶೆಗಳನ್ನು ಇಟ್ಟುಕೊಳ್ಳಲಾಗಿದೆ. ಇಷ್ಟೆಲ್ಲಾ ಆದರೂ ಪಾಲಿಕೆಯ ವಿಪಕ್ಷ ಕಾಂಗ್ರೆಸ್ ಮೌನವಾಗಿದೆ. ಯಾಕೆಂದರೆ ಆಂಟೋನಿಯವರ
ವಿಷಯದಲ್ಲಿ ಪಾಲಿಕೆಯ ಎಲ್ಲರೂ ಸಮಾನ “ಸುಖಿ”ಗಳು
Leave A Reply