ಅಖಿಲ ಭಾರತೀಯ ತೆರಿಗೆದಾರರ ಸಮಿತಿ ಶೀಘ್ರ!
ಸುಪ್ರೀಂ ಕೋರ್ಟ್ ಒಂದು ಅತೀ ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಕ್ಷಣಗಣನೆ ಆರಂಭವಾಗಿದೆ. ಸುಪ್ರೀಕೋರ್ಟ್ ನಿಂದ ಅಖಿಲ ಭಾರತೀಯ ತೆರಿಗೆ ಪಾವತಿದಾರರ ಅಸೋಸಿಯೇಶನ್ ಎಂಬ ಸಂಘಟನೆ ಜನ್ಮತಾಳಲಿದೆ. ಇದು ಪ್ರಪಂಚದ ಅತೀ ದೊಡ್ಡ ಸಂಘಟನೆ ಆಗಲಿದ್ದು, ದೇಶದ ಭವಿಷ್ಯದ ಯಾವುದೇ ಪ್ರಮುಖ ನಿರ್ಧಾರಗಳಲ್ಲಿ ಇದರ ಛಾಯೆ ಇನ್ನು ಕಾಣಲಿದೆ. ಇನ್ನು ಮುಂದೆ ಯಾವುದೇ ಪಕ್ಷದ ಯಾವುದೇ ಸರಕಾರ ಯಾವುದೇ ರಾಜ್ಯ ಅಥವಾ ಕೇಂದ್ರದಲ್ಲಿ ಇರಲಿ, ಉಚಿತ ಘೋಷಣೆ, ಗ್ಯಾರಂಟಿ ಹೆಸರಿನ ಸ್ಕೀಮ್ ಗಳನ್ನು ಘೋಷಿಸುವ ಮೊದಲು ಈ ಸಮಿತಿಯ ಅನುಮತಿಯನ್ನು ಲಿಖಿತವಾಗಿ ಪಡೆದುಕೊಳ್ಳಬೇಕು. ಇಲ್ಲಿಯ ತನಕ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರಲು ಬೇಕಾಬಿಟ್ಟಿ ಉಚಿತ ಘೋಷಣೆಗಳನ್ನು ಮಾಡುತ್ತಿದ್ದವು. ಅದರಲ್ಲಿ ಬಹುತೇಕ ಫ್ರೀ ಸ್ಕೀಮ್ ಗಳು ಅನುಷ್ಟಾನಕ್ಕೆ ಬರಲು ಸಾಧ್ಯವೇ ಇರಲಿಲ್ಲ. ಕೆಲವು ಉಚಿತ ಭಾಗ್ಯಗಳು ಜಾರಿಗೆ ಬಂದರೂ ಬೆರಳೆಣಿಕೆಯ ತಿಂಗಳುಗಳ ಬಳಿಕ ಮಕಾಡೆ ಮಲಗುತ್ತಿದ್ದವು. ಇನ್ನು ಕೆಲವು ಉಚಿತ ಭಾಗ್ಯಗಳನ್ನು ಯಾವುದೋ ಚುನಾವಣಾ ದೂರದೃಷ್ಟಿ ಇಟ್ಟು ಆಡಳಿತ ಪಕ್ಷಗಳು ನಡೆಸಿಕೊಂಡು ಹೋದರೆ ಅದರಿಂದ ರಾಜ್ಯದ ಆರ್ಥಿಕ ದೃಷ್ಟಿಯಿಂದ ಅದು ದೊಡ್ಡ ಹೊಡೆತ ನೀಡುತ್ತಿತ್ತು. ಇನ್ನು ತಮ್ಮ ಪಕ್ಷ ಎಲ್ಲಾ ಘೋಷಣೆಗಳನ್ನು ಅನುಷ್ಠಾನಕ್ಕೆ ತಂದಿದೆ ಎಂದು ಹೆಮ್ಮೆಯಿಂದ ಹೇಳಬೇಕಾದ ಅನಿವಾರ್ಯತೆ ಬರುವುದರಿಂದ ಅಷ್ಟು ಘೋಷಣೆಗಳನ್ನು ಈಡೇರಿಸಬೇಕಾದರೆ ರಾಜ್ಯ ಸರಕಾರ ಯಾವುದಾದರೂ ಮೂಲದಿಂದ ಸಾಲಗಳನ್ನು ಪಡೆಯಬೇಕಾಗುತ್ತದೆ. ಇದರಿಂದ ರಾಜ್ಯದ ಮೇಲೆ ಸಾಲದ ಹೊರೆ ಹೆಚ್ಚಾಗುತ್ತಾ ಹೋಗುತ್ತದೆ. ರಾಜ್ಯದ ಪ್ರತಿ ನಾಗರಿಕನ ಮೇಲೆ ಸಾಲದ ಮೊತ್ತ ಜಾಸ್ತಿಯಾಗುತ್ತೆ. ಇದು ಸ್ವಸ್ಥ ಆರ್ಥಿಕತೆಗೆ ದೊಡ್ಡ ಹೊಡೆತ.
ಇದು ಜನಪ್ರತಿನಿಧಿಗಳ ಸಂಬಳ, ಭತ್ಯೆಗೂ ಅನ್ವಯ!
ಅಷ್ಟಕ್ಕೂ ಯಾವುದೇ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರುವ ದೂರಾಲೋಚನೆಯಿಂದ ತಮ್ಮ ಮನಸ್ಸಿಗೆ ಬಂದಷ್ಟು ಉಚಿತಗಳನ್ನು ಘೋಷಿಸಲು ಹಣವೇನೂ ಆ ಪಕ್ಷ ತನ್ನ ಕಿಸೆಯಿಂದ ಹಾಕುವುದಿಲ್ಲ. ಇನ್ನು ಗೆದ್ದರೆ ಅವರ ಪಕ್ಷದ ರಾಜ್ಯಾಧ್ಯಕ್ಷರಾಗಲಿ, ಮುಖ್ಯಮಂತ್ರಿಯಾಗಲೀ ಫಂಡ್ ತಮ್ಮ ಮನೆಯಿಂದ ತಂದು ಗುಡ್ಡೆ ಹಾಕುವುದಿಲ್ಲ. ಏನಿದ್ದರೂ ಜನರ ತೆರಿಗೆಯ ಹಣದಿಂದ ಉಚಿತಗಳನ್ನು ನೀಡಬೇಕಾಗುತ್ತದೆ. ಹಾಗಿರುವಾಗ ತೆರಿಗೆ ಕಟ್ಟುವವರಿಗೆ ತಮ್ಮ ಹಣಕ್ಕೆ ಮರ್ಯಾದೆಯೇ ಇಲ್ಲವೇ ಎಂದು ಅನಿಸಬಹುದು. ಆದ್ದರಿಂದ ಹೇಗೆ ಒಂದು ಉದ್ಯೋಗದ ಸಂಸ್ಥೆಯಲ್ಲಿ ಮಾಲೀಕನ ಮಾತಿಗೆ ಹೆಚ್ಚಿನ ಬೆಲೆ ಇರುತ್ತದೆಯೋ ಹಾಗೆ ದೇಶದ ವಿಷಯ ಬಂದಾಗ ತೆರಿಗೆ ಕಟ್ಟುವವರ ಮಾತಿಗೆ ಅಂತಿಮ ಬೆಲೆ ನೀಡಬೇಕು ಎನ್ನುವ ಅಭಿಪ್ರಾಯವನ್ನು ಅನುಷ್ಟಾನಗೊಳಿಸಲು ಸುಪ್ರೀಂಕೋರ್ಟ್ ಮುಂದಾಗಿದೆ. ಅದೇ ರೀತಿಯಲ್ಲಿ ರಾಜ್ಯ, ಕೇಂದ್ರ ಸರಕಾರಗಳು ಯಾವುದೇ ಯೋಜನೆಗಳನ್ನು ಜಾರಿಗೆ ತರುವ ಮೊದಲು ಯೋಜನೆಯ ಬ್ಲೂಪ್ರಿಂಟ್ ಅಂದರೆ ರೂಪುರೇಶೆಗಳನ್ನು ತಯಾರಿಸಿ ಅದನ್ನು ಈ ಸಮಿತಿಯ ಮುಂದೆ ಮಂಡಿಸಬೇಕು. ಅಲ್ಲಿ ಅನುಮತಿ ಸಿಕ್ಕಿದರೆ ಮಾತ್ರ ಮುಂದಿನ ಹೆಜ್ಜೆ. ಇದು ಸಂಸದರ, ಶಾಸಕರ ಮತ್ತು ಇತರ ಜನಪ್ರತಿನಿಧಿಗಳ ಸಂಬಳ, ಭತ್ಯೆ, ಪಿಂಚಣಿ ಮತ್ತು ಇತರ ಸೌಲಭ್ಯಗಳಿಗೆ ಖರ್ಚಾಗುವ ಮೊತ್ತಕ್ಕೂ ಅನ್ವಯಿಸುತ್ತದೆ. ಒಬ್ಬ ವ್ಯಕ್ತಿ ನಿಜಕ್ಕೂ ಜನಸೇವೆ ಮಾಡಲು ಬಂದರೆ ಆತನ ಮೇಲೆ ವರ್ಷಕ್ಕೆ ಲಕ್ಷಾಂತರ ರೂಪಾಯಿ ಹಣವನ್ನು ಪರೋಕ್ಷವಾಗಿ, ಪ್ರತ್ಯಕ್ಷವಾಗಿ ವ್ಯಯಿಸುವ ಅಗತ್ಯ ಏನಿದೆ? ಅಷ್ಟಕ್ಕೂ ಜನಸಾಮಾನ್ಯರ ತೆರಿಗೆ ಹಣ ಎಂದರೆ ಹೇಳುವವರು, ಕೇಳುವವರು ಇಲ್ಲಾ ಎನ್ನುವ ವಾತಾವರಣ ಇಲ್ಲಿಯ ತನಕ ಇದೆ.
ಸೇವಕರು ಹಣ ಪೋಲು ಮಾಡುವುದು ಒಪ್ಪುವುದು ಹೇಗೆ?
ಇಲ್ಲಿಯ ತನಕ ಭಾರತದ ಪ್ರಜೆಗಳು ಪ್ರಜಾಪ್ರಭುತ್ವದಲ್ಲಿ ತಮ್ಮ ಹಕ್ಕನ್ನು ಕೇವಲ ಮತ ಚಲಾಯಿಸುವ ತನಕ ಮಾತ್ರ ಬಳಸಬೇಕಾಗುತ್ತಿತ್ತು. ಅದರ ನಂತರ ಗೆದ್ದವರದ್ದೇ ಕಾರುಬಾರು. ಸರಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳಲಿ, ನಾವು ಹೆಚ್ಚೆಂದರೆ ನಮ್ಮಲ್ಲಿಯೇ ಗೊಣಗುತ್ತಾ ಅದನ್ನು ಸಹಿಸಿಕೊಂಡು ಬರಬೇಕಾಗಿತ್ತು. ಬೇಕಾದರೆ ಐದು ವರ್ಷಗಳ ನಂತರ ಸರಕಾರವನ್ನು ಬದಲಾಯಿಸಬಹುದಿತ್ತು. ಅದು ಬಿಟ್ಟು ಬೇರೆ ಏನೂ ಮಾಡುವಂತಿರಲಿಲ್ಲ. ಆದರೆ ಇನ್ನು ಈ ತೆರಿಗೆದಾರರ ಸಮಿತಿಯ ಅನುಷ್ಟಾನವಾದರೆ ಸರಕಾರಕ್ಕೂ ಬಾಧ್ಯತೆ ಇರುತ್ತದೆ. ಸರಕಾರ ಬಳಸುವ ಅನುದಾನ ಹೇಗೆ ಬಳಕೆಯಾಗುತ್ತೆ ಎಂದು ಈ ಸಮಿತಿ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತದೆ. ಯಾವುದೇ ಅನುದಾನ ಸುಖಾಸುಮ್ಮನೆ ಪೋಲಾಗುವ ಚಾನ್ಸ್ ಇಲ್ಲ. ಏನಾದರೂ ಹೆಚ್ಚು ಕಡಿಮೆ ಆಗಿ, ಭ್ರಷ್ಟಾಚಾರದ ವಾಸನೆ, ಹಣ ಪೋಲಾದ ವಿಷಯಗಳು ಗಮನಕ್ಕೆ ಬಂದರೆ ಈ ಸಮಿತಿ ಅದರ ವಿರುದ್ಧ ಕ್ರಮ ಕೈಗೊಳ್ಳಲಿದೆ. ಯಾಕೆಂದರೆ ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳು ಎಂದರೆ ನಮ್ಮ ಜನಸೇವಕರೇ ವಿನ: ಪ್ರಭುಗಳು ಅಂದರೆ ದೊರೆಗಳು ಅಲ್ಲ. ಅವರು ಕೇವಲ ಜನಸೇವಕರು. ಇನ್ನು ಸೇವಕರಿಗೆ ಮನೆಯ ಹಣವನ್ನು ಪೋಲು ಮಾಡುವ ಅಧಿಕಾರವನ್ನು ತಲೆಯಿರುವ ಯಾವುದೇ ಮಾಲೀಕರು ನೀಡುವುದಿಲ್ಲ. ಹಾಗಿರುವಾಗ ದೇಶ ಚೆನ್ನಾಗಿ ಇರಬೇಕಾದರೆ ತೆರಿಗೆದಾರರಿಗೂ ಗೌರವ ಇರಬೇಕು. ಆ ಗೌರವ ಬರಬೇಕಾದರೆ ಅವರ ಮಾತು ಅಂತಿಮವಾಗಬೇಕು. ಆಗುತ್ತಾ? ಸಮಿತಿ ನಿಜಕ್ಕೂ ಅನುಷ್ಟಾನಕ್ಕೆ ಬರುತ್ತಾ? ಕುತೂಹಲ ಇದೆ!!
Leave A Reply