ವರ್ಗಾವಣೆ ಮಾಸದಲ್ಲಿ ಸಚಿವರು ಬಿಝಿ!
ಐದು ವರ್ಷಗಳ ಅಧಿಕಾರದ ಹಸಿವು ಕಾಂಗ್ರೆಸ್ಸನ್ನು ರಾಜ್ಯದಲ್ಲಿ ಅಕ್ಷರಶ: ಹಬ್ಬದೂಟಕ್ಕೆ ಅಣಿಗೊಳಿಸಿದಂತೆ ಕಾಣುತ್ತಿದೆ. ವರ್ಗಾವಣೆ ಎನ್ನುವ ಬಿಸಿ ಅಡುಗೆಯ ಪಾತ್ರಕ್ಕೆ ಕೈ ಹಾಕಿದ ಸಿಎಂ ಕೈ ಸುಟ್ಟುಕೊಂಡಿರುವಂತೆ ಕಾಣುತ್ತಿದೆ. ಕರ್ನಾಟಕದ ಕಾಂಗ್ರೆಸ್ ಸರಕಾರದ ಮೊದಲ ಎರಡು ತಿಂಗಳುಗಳ ಅವಧಿಯಲ್ಲಿ ಯಾವುದೇ ಇಲಾಖೆಯನ್ನು ಬೇಕಾದರೆ ತೆಗೆದುಕೊಳ್ಳಿ. ಒಂದಲ್ಲ ಒಂದು ಹುದ್ದೆಗೆ ಒಬ್ಬರಿಗಿಂತ ಹೆಚ್ಚು ಅಧಿಕಾರಿಗಳನ್ನು ಸಿದ್ದು ಸರಕಾರ ನೇಮಿಸಿದೆ. ಇದರಿಂದ ಅಧಿಕಾರಿಗಳ ಮಧ್ಯೆ ಫೈಟ್ ಮಾತ್ರವಲ್ಲ, ವಿವಿಧ ಇಲಾಖೆಗಳಲ್ಲಿ ಕಾವೇರಿಯ ಶ್ಯಾಡೋ ಸಿಎಂ ಕೂಡ ತಮ್ಮ “ಯತಾ””ಇಂದ್ರಿಯಾ”ಗಳನ್ನು ಅಲ್ಲಾಡಿಸುತ್ತಿರುವುದು ಸೃಷ್ಟವಾಗಿದೆ. ಇನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆಯಲ್ಲಿಯೂ ಈಗ ಗೊಂದಲಗಳು ಎದ್ದು ಕಾಣುತ್ತಿವೆ. ಒಂದೇ ಪಂಚಾಯತಿಗೆ ಇಬ್ಬರು ಪಿಡಿಒಗಳನ್ನು ವರ್ಗಾಯಿಸುವ ಮೂಲಕ ಕೆಲವು ಪಂಚಾಯತಿಗೆ ಯಾವ ಪಿಡಿಒ ಅಧಿಕಾರ ವಹಿಸಿಕೊಳ್ಳಬೇಕು ಎಂಬ ಬಗ್ಗೆ ಪಿಡಿಒಗಳ ಬಗ್ಗೆ ಸ್ಪರ್ಧೆ ಏರ್ಪಟ್ಟಿದೆ. ಈ ನಡುವೆ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆ ನಡೆಸಲು ಜುಲೈ 3 ಕೊನೆ ದಿನಾಂಕ ಎಂದು ಹೊರಡಿಸಿದ್ದ ಸುತ್ತೋಲೆಯನ್ನು ಬದಿಗೊತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 2023 ರ ಜುಲೈ 5 ರಂದು ಒಟ್ಟು 208 ಪಿಡಿಒಗಳನ್ನು ವರ್ಗಾಯಿಸಿ ಆದೇಶಿಸಿದೆ. ಈ ಆದೇಶಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಸಹಿ ಹಾಕಿದ್ದಾರೆ. ಈ ಮೂಲಕ ತಮ್ಮದೇ ಸರಕಾರದ ನಿಯಮವನ್ನು ತಾವೇ ಗಾಳಿಗೆ ತೂರಿದ್ದಾರೆ.
ವರ್ಗಾವಣೆಯಲ್ಲಿ “ಕಾವೇರಿ”ಯೇ ಫೈನಲ್!
ವರ್ಗಾವಣೆ ಪ್ರತಿಗಳು ಮಾಧ್ಯಮಗಳಿಗೆ ಲಭ್ಯವಾಗಿದ್ದು ಪ್ರತಿಭಾ ಎಂಬ ಪಿಡಿಒ ಅವರನ್ನು ಕೋಲಾರ ತಾಲೂಕಿನ ಮಾರ್ಜೆನಹಳ್ಳಿ ಗ್ರಾಮ ಪಂಚಾಯತ್ ನಿಂದ ಕುಣಿಗಲ್ ಗ್ರಾಮಾಂತರ ತಾಲೂಕಿನ ಕಿತ್ತಾಮಂಗಲ ಗ್ರಾಮ ಪಂಚಾಯತ್ ಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು. ಅದೇ ಆದೇಶದಲ್ಲಿ ಕೆ.ಎಂ ವೆಂಕಟೇಶ್ ಅವರನ್ನು ಚಿಕ್ಕನಾಯಕನಹಳ್ಳಿ ಹೊನ್ನೆಬಾಗಿ ಗ್ರಾಮ ಪಂಚಾಯತ್ ನಿಂದ ಕುಣಿಗಲ್ ತಾಲೂಕಿನ ಕಿತ್ನಾಮಂಗಲ ಗ್ರಾಮ ಪಂಚಾಯತಿಗೆ ಅಭಿವೃದ್ಧಿ ಅಧಿಕಾರಿಯನ್ನಾಗಿ ಆದೇಶ ಹೊರಡಿಸಲಾಗಿದೆ. ಇತ್ತೀಚೆಗೆ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಯ ಒಂದೇ ಹುದ್ದೆಗೆ ಇಬ್ಬರು ಅರಣ್ಯಾಧಿಕಾರಿಗಳಿಗೆ ಶಿಫಾರಸ್ಸು ಪತ್ರ ನೀಡುವ ಮೂಲಕ ಮತ್ತೊಮ್ಮೆ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದ್ದರು. ಇದು ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ವಿಶೇಷ ಭೂ ಸ್ವಾಧೀನ ಇಲಾಖೆ, ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಲ್ಲಿದ್ದ ಲೆಕ್ಕಪರಿಶೋಧನಾಧಿಕಾರಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರ ಹುದ್ದೆ ಹೀಗೆ ಹಲವು ಇಲಾಖೆಗಳಲ್ಲಿ ವರ್ಗಾವಣೆ ದಂಧೆ ನಿರಂತರವಾಗಿ ನಡೆಯುತ್ತಿದೆ. ತಮ್ಮ ಇಲಾಖೆಯಲ್ಲಿ ತಮ್ಮ ಅರಿವಿಗೆ ಬರುವ ಮೊದಲೇ ಸಿಎಂ ತಮ್ಮ ಅಧಿಕಾರ ಬಳಸಿ ವರ್ಗಾವಣೆ ಮಾಡುತ್ತಿರುವುದು ಕೂಡ ಸಚಿವರ ಕೋಪಕ್ಕೆ ಕಾರಣವಾಗುತ್ತಿದೆ. ಈ ನಡುವೆ ಸಚಿವರು ವರ್ಗಾವಣೆಯಲ್ಲಿ ಬಿಝಿಯಾಗಿರುವುದರಿಂದ ತಮ್ಮದೇ ಪಕ್ಷದ ಶಾಸಕರನ್ನು ಸರಿಯಾಗಿ ಗಮನಿಸಲು ಕೂಡ ಹೋಗುತ್ತಿಲ್ಲ. ತಮ್ಮದೇ ಹೊಟ್ಟೆ ತುಂಬಿಲ್ಲದಿರುವಾಗ ಶಾಸಕರ ಹಸಿವು ಕೇಳಲು ಆಗುತ್ತಾ?
ಕಾಂಗ್ರೆಸ್ ಶಾಸಕರೇ ಅನಾಥ!
ಇನ್ನು ಸಚಿವರುಗಳು ತಮಗೆ ಬೇಕಾದ, ತಮ್ಮ ಜಾತಿ ಬಾಂಧವರನ್ನು ತಮ್ಮ ಇಲಾಖೆಯ ಆಯಕಟ್ಟಿನ ಜಾಗಗಳಿಗೆ ನೇಮಿಸುತ್ತಿರುವುದರಿಂದ ಅವರು ತಮಗೆ ಭಾಗ್ಯ ನೀಡಿದ ಸಚಿವರುಗಳಿಗೆ ಅಭಾರಿಯಾಗಿದ್ದಾರೆ ವಿನ: ಕಾಂಗ್ರೆಸ್ ಶಾಸಕರಿಗೆನೆ ಕವಡೆ ಕಿಮ್ಮತ್ತು ನೀಡುತ್ತಿಲ್ಲ. ಇನ್ನು ಅನುದಾನ ಬಿಡುಗಡೆಗೊಳಿಸಿ ಎಂದು ಕಾಂಗ್ರೆಸ್ ಶಾಸಕರೇ ಮನವಿ ಪತ್ರ ಹಿಡಿದು ಹೋದರೆ ಎಷ್ಟೋ ಸಂದರ್ಭದಲ್ಲಿ ಸಚಿವರು ಸಿಗುತ್ತಿಲ್ಲ. ಇನ್ನುಳಿದ ಸಂದರ್ಭದಲ್ಲಿ ಸಚಿವರುಗಳು ತಮ್ಮ ಮಧ್ಯವರ್ತಿಗಳ ಮೂಲಕ ಹಣದ ಬೇಡಿಕೆ ಇಟ್ಟು ಶಾಸಕರಿಗೆ ಬೇಸರವನ್ನುಂಟು ಮಾಡಿದ್ದಾರೆ. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೂ ತಾವು ಸಚಿವರಾಗದೇ ಇರುವ ನೋವಿನ ನಡುವೆ ಕೆಲವು ಹಿರಿಯ ಶಾಸಕರು ಈ ನೂತನ ಸಚಿವರ ನಡವಳಿಕೆಯಿಂದ ಮುಖಭಂಗಕ್ಕೆ ಒಳಗಾಗಿದ್ದಾರೆ. ಆದ್ದರಿಂದಲೇ 30 ಶಾಸಕರು ಪತ್ರ ಬರೆದು ಶಾಸಕಾಂಗ ಸಭೆಗೆ ಒತ್ತಾಯ ಮಾಡಿರುವುದು. ಸಾಮಾನ್ಯವಾಗಿ ಶಾಸಕಾಂಗ ಸಭೆಗಳು ಯಾವುದಾದರೂ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ, ರಣತಂತ್ರಗಳನ್ನು ರೂಪಿಸುವ ಮೊದಲು ನಡೆಯುತ್ತವೆ. ಆದರೆ ನಮ್ಮ ಮನವಿಯನ್ನು ಕೇಳದೆ ನಿರ್ಲಕ್ಷ್ಯಕ್ಕೆ ಒಳಪಡಿಸಲಾಗುತ್ತಿದೆ ಎಂದು ಹಿರಿಯ ಶಾಸಕರು ಸರಕಾರ ಬಂದ ಎರಡೇ ತಿಂಗಳಲ್ಲಿ ದೂರು ನೀಡುತ್ತಾರೆ ಎಂದರೆ ಸರಕಾರ ಸರಿಯಾಗಿ ಟೇಕಾಫ್ ಆಗಿಲ್ಲ ಎಂದೇ ಅರ್ಥ. ಒಟ್ಟಿನಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆದಿದೆ. ಕೆಲವು ತಳಮಟ್ಟದ ವರ್ಗಾವಣೆಯ ಸಮಯದಲ್ಲಿ ಕಾಂಗ್ರೆಸ್ ಶಾಸಕರ ಮಾತುಗಳನ್ನು ಕೇಳಲು ಸಿಎಂ ಸೂಚಿಸಿದ್ದಾರೆ. ಆದರೆ ಅಭಿವೃದ್ಧಿಗೆ ಅನುದಾನದ ಕೊರತೆ ಬಗ್ಗೆ ಡಿಸಿಎಂ ಸೃಷ್ಟವಾಗಿ ಕಡ್ಡಿಮುರಿದ ಹಾಗೆ ಹೇಳಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಶಾಸಕರಿಗೆ ಎದುರಿಗೆ ತಟ್ಟೆ ತುಂಬ ತಿಂಡಿ ಇದ್ದರೂ ತಿನ್ನಲು ಅವರ ಜನವೇ ಬಿಡದ ಪರಿಸ್ಥಿತಿ. ಕಾಂಗ್ರೆಸ್ ಪರಿಸ್ಥಿತಿಯೇ ಹೀಗಿರುವಾಗ ಇನ್ನು ಭಾರತೀಯ ಜನತಾ ಪಾರ್ಟಿಯ ಶಾಸಕರನ್ನು ಇವರು ಕೇಳಲು ಉಂಟಾ?
Leave A Reply