ಜ್ವರದಿಂದ ನರಳಾಡುವುದನ್ನು ತಪ್ಪಿಸಬೇಕೇ ?ಹಾಗಿದ್ದರೆ ಇದನ್ನೊಮ್ಮೆ ಓದಿಬಿಡಿ
ಜ್ವರ ಸಾಮಾನ್ಯವಾಗಿ ಮಳೆಗಾಲದ ಅತಿಥಿ .ವಾತಾವರಣ ಶೀತಭರಿತವಾಗಿದ್ದಾಗ ಸೋಂಕು ಹರಡುವುದು ಸರ್ವೇ ಸಾಮಾನ್ಯ .ವರ್ಷದಲ್ಲಿ ಕೆಲವು ಬಾರಿಯಾದರೂ ಜ್ವರ ಬಂದೇ ಬರುತ್ತದೆ.ಜ್ವರದ ಬಗ್ಗೆ ಮೊದಲನೆಯದಾಗಿ ನಾವು ಅರ್ಥ ಮಾಡಿಕೊಳ್ಳಬೇಕಾದದ್ದು ಏನೆಂದರೆ ಜ್ವರ ಒಂದು ರೋಗವಲ್ಲ ಬದಲಾಗಿ ಇದು ರೋಗದ ಒಂದು ಲಕ್ಷಣ .ಸೋಂಕಿನ ವಿರುದ್ಧವಾಗಿ ನಮ್ಮ ದೇಹವು ಹೋರಾಡುವಾಗ ಜ್ವರ ಉಂಟಾಗುತ್ತದೆ.ಕೆಲವೊಮ್ಮೆ ಜ್ವರ ಚಿಕುನ್ ಗುನ್ಯಾ ,ಮಲೇರಿಯ ,ಹೀಗೆ ಕೆಲ ಗಂಭೀರವಾದ ಕಾಯಿಲೆಯ ಲಕ್ಷಣವೂ ಆಗಿರಬಹುದು ,ಆದರೆ ಹಲವೊಮ್ಮೆ ಇದು ಅತಿ ಸಾಮನ್ಯವಾಗಿ ಒಂದೆರಡು ದಿನ ದೇಹದ ತಾಪಮಾನವನ್ನು ಹೆಚ್ಚಿಸಿ ಹೋಗಬಲ್ಲ ಅನಪೇಕ್ಷಿತ ಅತಿಥಿಯೂ ಆಗಿರಬಹುದು .
ಸಾಮಾನ್ಯ ಜ್ವರವು ಲಸಿಕೆ ಹಾಕಿಸುವುದರಿಂದ ,ವಾತಾವರಣದ ಬದಲಾವಣೆಯಿಂದ ,ಗಾಳಿ ನೀರುಗಳಲ್ಲಿನ ವ್ಯತ್ಯಾಸದಿಂದ ,ವೈರಸ್ ಬ್ಯಾಕ್ಟೀರಿಯಾಗಳ ಸೋಂಕಿನಿಂದ ,ಉಂಟಾಗಬಹುದು .ಇದಕೆ ಮನೆಯಲ್ಲೇ ಪರಿಹಾರವನ್ನು ಸಹ ಕಂಡುಕೊಳ್ಳಬಹುದು .
೧.ಕೊತ್ತಂಬರಿ ಬೀಜಗಳ ಚಹಾ
ಕೊತ್ತಂಬರಿ ಬೀಜಗಳಲ್ಲಿ ವಿಟಮಿನ್ ಗಳು ಮತ್ತು ಹಲವು ಪೋಷಕತ್ವಗಳು ಇರುತ್ತವೆ ಮತ್ತು ಇವು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಕಾಪಾಡುತ್ತವೆ .ಇದರಲ್ಲಿ ಪ್ರತಿಜೀವಕಗಳು ಇರುವುದರಿಂದ ವೈರಸ್ ನಿಂದಾಗುವ ಸೋಂಕನ್ನು ತಡೆಯುತ್ತವೆ .ಒಂದು ಲೋಟ ನೀರಿಗೆ ಒಂದು ಚಮಚ ಕೊತ್ತಂಬರಿ ಬೀಜಗಳನ್ನು ಸೇರಿಸಿ ಕುಡಿಸಿ ಉಗುರು ಬೆಚ್ಚಗಾಗಲು ಬಿಟ್ಟು ನಂತರ ಸೋಸಿ .ಇದಕ್ಕೆ ಸ್ವಲ್ಪ ಹಾಲು ಮತ್ತು ಸಕ್ಕರೆಯನ್ನು ಸೇವಿಸಿ ಕುಡಿಯಿರಿ .ವೈರಸ್ ನಿಂದಾದ ಜ್ವರಕ್ಕೆ ಇದು ಒಳ್ಳೆಯ ಪರಿಹಾರವನ್ನು ನೀಡುತ್ತದೆ .
೨.ತುಳಸಿ ಎಲೆಗಳು
ತುಳಸಿ ಎಲೆಗಳು ಬಹೂಪಯೋಗಿ .ಶುದ್ಧ ಗಾಳಿಯನ್ನು ನೀಡುವುದರ ಜೊತೆಗೆ ಹಲವು ರೋಗಗಳಿಗೆ ಮನೆಮದ್ದಾಗಿದೆ .ಇದು ಜ್ವರದ ನಿವಾರಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ .ಒಂದು ಲೀಟರ್ ನೀರಿಗೆ ೨೦ ತುಳಸಿ ಎಲೆಗಳನ್ನು ಹಾಕಿ ಜೊತೆಗೆ ೪ ಲವಂಗವನ್ನೂ ಸಹ ಸೇರಿಸಿ ಚೆನ್ನಾಗಿ ಕುದಿಸಿ .ಈ ಮಿಶ್ರಣವು ಅರ್ಧಕ್ಕೆ ಇಳಿದಾಗ ಉರಿಯಿಂದ ಕೆಳಗಿಳಿಸಿ ದಿನದಲ್ಲಿ ೩ ಬಾರಿ ಸೇವಿಸಿ .
೩ .ಗಂಜಿ ನೀರು
ಪುರಾತನ ಕಾಲದಿಂದಲೂ ಗಂಜಿಗೆ ವಿಶೇಷವಾದ ಪ್ರಾಮುಖ್ಯತೆಯಿದೆ .ಇದು ಈಗ ಆಧುನಿಕ ಕಾಲದಲ್ಲಿ ಹೊಟ್ಟೆಗಿಲ್ಲದವರು ಮಾತ್ರ ತಿನ್ನುವ ಪದಾರ್ಥ ಎಂದು ಪರಿಗಣಿಸಲ್ಪಟ್ಟಿದೆ ,ಹಳ್ಳಿಗಳಲ್ಲಿ ಅನ್ನ ಬೇಯಿಸಿದ ಮೇಲೆ ಸಿಗುವ ಗಂಜಿ ನೀರನ್ನು ದನಕ್ಕೆ ಕುಡಿಯಲು ಕಲಗಚ್ಚಿನ ರೂಪದಲ್ಲಿ ನೀಡಲಾಗುತ್ತದೆ .ಆದರೆ ಈ ನೀರಿನಲ್ಲೇ ಪೌಷ್ಟಿಕಾಂಶಗಳು ಅಡಗಿವೆ . ಜ್ವರ ಬಂದಾಗ ಇದು ಅಮೃತವಾಗಿ ಪರಿಗಣಿಸಲ್ಪಡುತ್ತದೆ .ಅನ್ನಬೇಯಿಸಿ ಅದನ್ನು ಬಸಿದ ಗಂಜಿ ತಿಳಿಗೆ ಚಿಟಿಕೆ ಉಪ್ಪನ್ನು ಬೆರೆಸಿ ಕುಡಿಯಿರಿ .ಇದು ಪೌಷ್ಟಿಕವಾಗಿದ್ದು ಜ್ವರಕ್ಕೆ ಉತ್ತಮ ಔಷಧಿಯಾಗಿದೆ .ಗಂಜಿ ನೀರು ಕುಚ್ಚುಲಕ್ಕಿಯದ್ದಾಗಿದ್ದರೆ ಒಳ್ಳೆಯದು ,ಇದು ಸಿಗದೇ ಇದ್ದಲ್ಲಿ ಬಿಳಿಯಕ್ಕಿಯ ಗಂಜಿಯನ್ನು ಸಹ ಮಾಡಿಕೊಳ್ಳಬಹುದು .ಜ್ವರದಿಂದ ಬರಗೆಟ್ಟ ನಾಲಿಗೆ ರುಚಿ ಮರುಕಳಿಸಲು ಗಂಜಿಯ ನೀರಿಗೆ ಒಣ ಕೆಂಪು ಮೆಣಸನ್ನು ನುರಿದು ಇದಕ್ಕೆ ಸ್ವಲ್ಪ ಹುಣಿಸೆ ಹಣ್ಣನ್ನು ಕಿವುಚಿ ,ಕಲ್ಲುಪ್ಪು ಬೆರೆಸಿ ದಿಢೀರ್ “ಉಪ್ಪು ಮುಂಚಿ”ಮಾಡಿ ಊಟ ಮಾಡಿದರೆ ರುಚಿಯೋ ರುಚಿ .ಅಲ್ಲದೆ ಗಂಜಿಗೆ ಉಪ್ಪಿನಕಾಯಿಯನ್ನು ಸೇರಿಸಿ ಸಹ ತಿನ್ನಬಹುದು .
ಜ್ವರ ಸಾಮಾನ್ಯವಾದ ರೋಗ ಲಕ್ಷಣವಾಗಿದೆ .ಇದನ್ನು ಮನೆಯಲ್ಲೇ ಪರಿಹರಿಸಿಕೊಳ್ಳಬಹುದು .ಆದರೆ ತೀವ್ರ ತಲೆನೋವು ಇದ್ದಲ್ಲಿ ,ವಾಂತಿಯಾಗುತ್ತಿದ್ದಲ್ಲಿ ,ಮೂರು ನಾಲ್ಕು ದಿನಕ್ಕೂ ಮೀರಿ ಮಿತಿ ಮೀರಿದ ದೇಹ ಉಷ್ಣಾಂಶ ಇದ್ದರೆ ವೈದ್ಯರನ್ನು ಭೇಟಿ ಮಾಡಲೇ ಬೇಕು .ಇದು ನಮಗೆ ಅರಿವಾಗದ ರೋಗ ಲಕ್ಷಣವೂ ಆಗಿರಬಹುದು .
Leave A Reply