ಬೆಂಗಳೂರಿಗೆ ಹೇಳಿದ್ದು ಮಂಗಳೂರಿಗೂ ಅನ್ವಯಿಸುತ್ತದೆ!
ಕೆಲವು ವಿಷಯಗಳಲ್ಲಿ ಮತ್ತೆ ಮತ್ತೆ ಹೇಳಿಸಿಕೊಳ್ಳುವುದು ಒಳ್ಳೆಯ ಲಕ್ಷಣವಲ್ಲ. ಚಿಕ್ಕ ಮಕ್ಕಳಾದರೆ ಅದು ಬೇರೆ ವಿಷಯ. ಆದರೆ ಐಎಎಸ್, ಕೆಎಎಸ್ ಅಧಿಕಾರಿಗಳು ಇರುವ ರಾಜ್ಯ ಸರಕಾರಕ್ಕೂ ಕೂಡ ಆಗಾಗ ಬಾಯಿಗೆ ನೀರು ಬಿಟ್ಟು ಹೇಳುವಂತಹ ಪರಿಸ್ಥಿತಿ ಬರುವುದು ಇದೆಯಲ್ಲ, ಅದು ಸರಕಾರದ ಘನತೆಗೆ ತಕ್ಕುದ್ದಲ್ಲ. ಅದರಲ್ಲಿಯೂ ರಾಜ್ಯ ಉಚ್ಚನ್ಯಾಯಾಲಯ ಸರಕಾರಕ್ಕೆ ಆಗಾಗ ಚಾಟಿ ಏಟು ಬೀಸುವುದು ಇದೆಯಲ್ಲ, ಅದು ಸರಕಾರದ ಇಮೇಜಿಗೆ ಹೊಡೆಯುವ ಒಂದೊಂದು ಊಳಿ ಏಟು ಎಂದೇ ಪರಿಗಣಿಸಬಹುದು. ಅಷ್ಟಕ್ಕೂ ರಾಜ್ಯ ಉಚ್ಚ ನ್ಯಾಯಾಲಯ ಹೇಳುತ್ತಿರುವುದು ಏನು? ಬೆಂಗಳೂರಿನ ಅಂದ ಚೆಂದಕ್ಕೆ ಈಗ ಊರೆಲ್ಲಾ ಹರಡಿಕೊಂಡಿರುವ ಫ್ಲೆಕ್ಸ್, ಬ್ಯಾನರ್ಸ್ ಕಳಂಕವಾಗಿದೆ. ಅದನ್ನು ತೆಗೆಸಲು ಸರಕಾರ ಯಾಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನೆ ಮಾಡಿದೆ.
ಬಿಬಿಎಂಪಿ ಯಾಕೆ ತಲೆಕೆಡಿಸಿಕೊಳ್ಳುತ್ತಿಲ್ಲ!
ಒಂದು ನಗರ ಎಂದ ಮೇಲೆ ಮಹಾ ನಗರ ಪಾಲಿಕೆಯ ಜವಾಬ್ದಾರಿ ಬಹಳ ಪ್ರಮುಖವಾಗಿರುತ್ತದೆ. ಬೆಂಗಳೂರಿನ ಮಟ್ಟಿಗೆ ಅದನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಎಂದೇ ಕರೆಯಲಾಗುತ್ತದೆ. ಅಲ್ಲಿ ಎಲ್ಲಾ ಕಡೆ ಹಾಕಲಾಗಿರುವ ಅನಧಿಕೃತ ಫ್ಲೆಕ್ಸ್ ಗಳಿಂದ ಬೆಂಗಳೂರು ನಗರದ ಚೆಂದ ಹಾಳಾಗುತ್ತಿರುವುದರಿಂದ ಈ ಬಗ್ಗೆ ಸಮಾಮುಖಿ ವ್ಯಕ್ತಿಗಳು ಈಗಾಗಲೇ ಹಲವು ಬಾರಿ ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ. ಪ್ರತಿ ಬಾರಿ ನ್ಯಾಯಾಲಯ ಬಿಬಿಎಂಪಿಗೆ ಸೂಚನೆಗಳನ್ನು ನೀಡಿ ತೆಗೆಸುತ್ತದೆ. ಆದರೆ ಕೆಲವೇ ದಿನಗಳ ಒಳಗೆ ಅಲ್ಲಿ ಮತ್ತೊಮ್ಮೆ ಫ್ಲೆಕ್ಸ್, ಬಂಟಿಂಗ್, ಬ್ಯಾನರ್ಸ್ ಗಳು ತುಂಬಿ ಬೆಂಗಳೂರು ಕಸದ ಗೂಡಾಗುತ್ತಿದೆ. ಬೆಂಗಳೂರಿನ ಬಿಬಿಎಂಪಿಗೆ ಇದನ್ನು ತೆಗೆಸಲು ಹೇಳಿ ಸಮಯ ಕೊಟ್ಟು ಸಾಕಾಗಿರುವ ಉಚ್ಚ ನ್ಯಾಯಾಲಯ ಫ್ಲೆಕ್ಸ್, ಬ್ಯಾನರ್ ತೆರವುಗೊಳಿಸಲು ಶುಭ ಮುಹೂರ್ತಕ್ಕೆ ಕಾಯುತ್ತಿದ್ದೀರಾ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಯಾಕೆಂದರೆ ಎರಡ್ಮೂರು ತಿಂಗಳ ಮೊದಲು ನಡೆದ ವಿಧಾನಸಭಾ ಚುನಾವಣೆಯ ಮೇಲೆ ಬೆಂಗಳೂರಿನಲ್ಲಿ 60 ಸಾವಿರ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಅಳವಡಿಸಲಾಗಿದೆ. ಆದರೆ ಬಿಬಿಎಂಪಿ ಕೇವಲ 134 ದೂರು ಪರಿಗಣಿಸಿ, 40 ಎಫ್ ಐಆರ್ ದಾಖಲಿಸಲಾಗಿದೆ. ಫ್ಲೆಕ್ಸ್ ಅಳವಡಿಸಿದ ರಾಜಕೀಯ ಪಕ್ಷಗಳ ಪದಾಧಿಕಾರಿಗಳ ಮೇಲೆ ಕ್ರಮ ಏಕಿಲ್ಲ ಎಂದು ಹೈಕೋರ್ಟ್ ದ್ವಿಸದಸ್ಯ ಪೀಠ ಪ್ರಶ್ನಿಸಿದೆ.
ಮಂಗಳೂರಿನಲ್ಲಿಯೂ ಇದೇ ಕಥೆ!
ಬೆಂಗಳೂರು ಸುಂದರವಾಗಿ ಕಾಣಬೇಕು ಎಂಬುವುದು ಸರಕಾರಕ್ಕೆ ಬೇಕಿಲ್ಲವೇ? ಬ್ರ್ಯಾಂಡ್ ಬೆಂಗಳೂರಿಗೆ ಫ್ಲೆಕ್ಸ್, ಬ್ಯಾನರ್ ಗಳಿಂದ ಕಳಂಕ ಅಂಟುತ್ತಿದೆ. ನಗರದ ತುಂಬೆಲ್ಲಾ ಫ್ಲೆಕ್ಸ್, ಬ್ಯಾನರ್ ರಾರಾಜಿಸುತ್ತಲೇ ಇವೆ. ಬೆಂಗಳೂರನ್ನು ಹೇಳುವವರು, ಕೇಳುವವರು ಯಾರೂ ಇಲ್ಲವೇ? ಬಿಬಿಎಂಪಿ ಏನೂ ಕೈ ಎತ್ತಿದೆ. ನೀವೆನು ಕ್ರಮ ಕೈಗೊಂಡಿದ್ದೀರಿ ಎಂದು ರಾಜ್ಯ ಸರಕಾರವನ್ನು ಹೈಕೋರ್ಟ್ ಪ್ರಶ್ನಿಸಿದೆ. ಇನ್ನು ಮುಂದೆ ಒಂದು ಅನಧಿಕೃತ ಫ್ಲೆಕ್ಸ್ ಕಂಡರೂ ತಲಾ 50 ಸಾವಿರ ದಂಡ ವಿಧಿಸಿ ಎಂದು ಸೂಚನೆ ನೀಡಿದೆ. ರಾಜ್ಯ ಸರಕಾರ ತಲಾ 50 ಸಾವಿರ ಠೇವಣಿ ಇಡಬೇಕು. ಅನಧಿಕೃತ ಜಾಹೀರಾತು ಫಲಕ ಅಳವಡಿಸಲು ಅವಕಾಶ ನೀಡುವ ಕಟ್ಟಡಗಳ ಮಾಲೀಕರಿಗೂ ನೋಟಿಸ್ ಕಳುಹಿಸಬೇಕು. ಫ್ಲೆಕ್ಸ್ ಮೂಲಕ ಶುಭಾಶಯ ಕೋರುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧವೂ ಮೇಲಾಧಿಕಾರಿಗಳು ಇಲಾಖಾ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಬೇಕು. ಬೆಂಗಳೂರಿನ ಆಡಳಿತದ ಹೊಣೆ ಹೊತ್ತವರು ಈ ಬಗ್ಗೆ ಗಮನಹರಿಸಬೇಕು. ಮೂರು ವಾರಗಳಲ್ಲಿ ಕ್ರಮ ಕೈಗೊಂಡ ವರದಿ ಸಲ್ಲಿಕೆ ಮಾಡಬೇಕೆಂದು ಹೈಕೋರ್ಟ್ ಖಡಕ್ ಸೂಚನೆ ನೀಡಿದೆ.
ಸದ್ಯ ಕರ್ನಾಟಕ ಹೈಕೋರ್ಟ್ ಈ ವಿಷಯದಲ್ಲಿ ಬಿಬಿಎಂಪಿಯ ವೈಫಲ್ಯದ ಬಗ್ಗೆ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದ್ದರೂ ಇದು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿ ನೋಡಬೇಕಾಗಿರುವ ವಿಷಯ ಅಲ್ಲ. ಇದನ್ನು ಮಂಗಳೂರಿಗೂ ಅಳವಡಿಸಿಯೇ ನೋಡಬೇಕಾಗಿದೆ. ಮಂಗಳೂರಿನಲ್ಲಿಯೂ ಪಾಲಿಕೆ ಕಟ್ಟಡದ ಎದುರಿನಲ್ಲಿಯೇ ಉದ್ದುದ್ದ ಅನಧಿಕೃತ ಫ್ಲೆಕ್ಸ್ಗಳನ್ನು ಹಾಕಿದ್ದರೂ ಅದನ್ನು ತೆಗೆಸುವಷ್ಟು ನೈತಿಕತೆ ಪಾಲಿಕೆಯ ಆಡಳಿತಕ್ಕೆ ಇಲ್ಲ. ಶಾಲಾ-ಕಾಲೇಜು ಸೀಸನ್ ಆರಂಭವಾಗುತ್ತಿದ್ದಂತೆ ಎಲ್ಲಾ ಕಡೆ ಶಿಕ್ಷಣ ಸಂಸ್ಥೆಗಳ ಫ್ಲೆಕ್ಸ್ ಗಳು, ಸಿನೆಮಾ ಬಿಡುಗಡೆ, ಅಂಗಡಿಗಳ ಉದ್ಘಾಟನೆಯಿಂದ ಹಿಡಿದು ಶ್ರದ್ಧಾಂಜಲಿ ಬ್ಯಾನರ್ ಗಳ ತನಕ ಹೀಗೆ ಮಂಗಳೂರಿನಲ್ಲಿ ಎಲ್ಲಾ ಕಡೆ ಫ್ಲೆಕ್ಸ್, ಬ್ಯಾನರ್ ತುಂಬಿ ತುಳುಕಿದರೆ ಬ್ರ್ಯಾಂಡ್ ಮಂಗಳೂರು ಆಗುವುದು ಯಾವಾಗ? ಬಿಬಿಎಂಪಿಗೆ ಬೀಸಿದ ಚಾಟಿಯೇಟು ನಮ್ಮ ಪಾಲಿಕೆಗೆ ತಾಗುತ್ತಾ? ಇಲ್ಲ, ಅವರು ಎಂದಿನಂತೆ ಫ್ಲೆಕ್ಸ್ ಪ್ರಿಂಟರ್ ಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ದುಂಡಗಾಗುತ್ತಾ ಹೋಗುತ್ತಾರಾ?
Leave A Reply